Poem

ಅಂಬಿಕಾತನಯದತ್ತ

ದತ್ತ ಮುತ್ತ ಮಾಲೆ ಹೆತ್ತ ನತ್ತ
ಹುತ್ತದಾ ವಳಗೆ ಮಣಿಗಳನಿತ್ತ
ನಾಕುತಂತಿ ಕರುಳು ಮಿಡಿದು
ಮೀಟೀದಲ್ಲಿ ಹಾಡನ್ನು ಹೆತ್ತ ॥ಪ॥

ಪದಗಳ ರಾಶಿಯ ಸುರಿದಳು ಶಾರದೆ
ವರಕವಿ ತವನಿಧಿ ಪದನಿಧಿಧಾತ
ಹದಗೊಂಡವು ಪದ ಮುದಗೊಂಡವು ನವ
ನವೋತ್ಪತ್ತಿಯು ಶ್ರೀನಿಧಿ ದತ್ತ
ಬಂಗಾರದಂತೆಯೆ ಬೆಂದರು
ಅಪ್ಪಟ ಅಪರಂಜಿ ಬೆಂದ್ರೆಯರು

ಸಾಧನಕೇರಿಯ ಸಾಧಕನೀತನು
ಮಗ್ಗಲು ಮರಾಠಿ ಸಂಗ ವಿಧಾತ
ಅಜ್ಜಿಯ ಹೆಜ್ಜೆಯು ಕಕ್ಕನ ಕಕ್ಕುಲ
ಕನ್ನಡದೊಳಗಿವ ಕವಿ ಪ್ರಖ್ಯಾತ
ಎತ್ತಿ ಕಟ್ಟಿದರು ಜನಭಾಷೆ
ಹಾಡಿ ಕುಣಿದರೊ ಜನ ಪರಿಶೆ

ಬೆನ್ ರಾಮ್ಸನ್ ಉಕ್ತಿಯ ಹುಡುಕುತ
ಹುಡುಕಿದ ಕವಿಯನು ಗುರುಗಳು
ಪದೋತ್ಪತ್ತಿಗೆ ರೂಪನಿಷ್ಪತ್ತಿಗೆ
ಪಾತಾಳ ಗರಡಿಯ ಗಾಳಗಳು
ಮುತ್ತಿನ ತೆರದೊಲು ಪದಗಳು
ಹಾಡಿದ ಮೋಡಿಯ ಹಾಡುಗಳು

ಕರಡಿಯ ಕುಣಿಸಿದ ಕಾಂಚಾಣ ಚುಚ್ಚಿದ
ಮುಗಿಲು ಮಾರಿಗೆ ಕೆಂಪಚ್ಚಿದವ
ಮುಂದೆ ಮುಂದ ಹೋದ ಹಿಂದಽ ನೋಡದ
ಘಮಘಮ ಮಲ್ಲಿಗೆ ಘಮಾಡಿಸಿದವ
ವಾರ್ದಾಗ ಮೂರ ಸರ್ತಿ ಬಂದು ಹೋದಾಂವ
ಪದಹಾರ ಕೊರಳಿಗಿಟ್ಟು ಕುಣದಾಂವ

ಜೀವರಾಜ ಹ ಛತ್ರದ

 

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು)

More About Author