Story

ಅಮ್ಮಾ, ಇಲ್ಲೇ ಇದ್ದೀವಮ್ಮಾ! 

2009ನೇ ಇಸವಿ, ಜನವರಿ ತಿಂಗಳ ಮೊದಲ ವಾರದ ಕೊನೆಯ ದಿನ:

ವಿಶ್ವದ ಎಲ್ಲಾ ದಿನ ಪತ್ರಿಕೆಗಳಲ್ಲೂ ಒಂದೇ ಸುದ್ದಿ: ಸತ್ಯದ ಹೆಸರಿನಲ್ಲಿ ನಡೆಯುತ್ತಿದ್ದ ಭಾರತೀಯ ಕಂಪೆನಿಯೊಂದು 1.5 ಬಿಲಿಯನ್ ಅಮೇರಿಕನ್ ಡಾಲರ್ಸ್‍ಗಿಂತಲೂ ಹೆಚ್ಚು ವಹಿವಾಟಿನ ಲೆಕ್ಕವನ್ನು ಸುಳ್ಳು ಸುಳ್ಳೇ ತೋರಿಸಿ, ಅದರ ಲಾಭವನ್ನು ಕಂಪೆನಿಯ ಮಾಲಿಕನೊಬ್ಬನೇ ನುಂಗಿಬಿಟ್ಟಿದ್ದಾನೆ! ಕಂಪೆನಿಯಲ್ಲಿ ವಾಸ್ತವವಾಗಿ ಕೆಲಸಮಾಡುತ್ತಿದ್ದವರು 40 ಸಾವಿರ ನೌಕರರು; ಆದರೆ ಆ ಮಹಾನುಭಾವ 50 ಸಾವಿರಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆಂದು ಲೆಕ್ಕ ತೋರಿಸಿ, ಆ ಹೆಚ್ಚುವರಿ 10 ಸಾವಿರ ನೌಕರರ ಪುಕ್ಕಟೆ ಸಂಬಳವನ್ನು ತನ್ನ ಕಿಸೆಗೆ ಸೇರಿಸಿಕೊಳ್ಳುತ್ತಿದ್ದ-ಪ್ರತಿ ತಿಂಗಳೂ!

ಕೊನೆಗೂ ಸಿಕ್ಕಿಬಿದ್ದ; ತಪ್ಪೊಪ್ಪಿಕೊಂಡು ಜೈಲು ಸೇರಿದ...

ಉಪ್ಪು ತಿಂದವ ನೀರು ಕುಡಿದಾನು, ಬಿಡಿ; ಆದರೆ, ಶ್ರಮ ಮೇವ ಜಯತೆ ಎಂದು ಮೂಗಿಗೆ ಕವಡೆ ಕಟ್ಟಿಕೊಂಡು ಹಗಲೂ ಇರುಳೂ ಏಸೀ ರೂಮಿನಲ್ಲಿ ಬೆವರುತ್ತಾ, ನೀರು ಕುಡಿಯುತ್ತಾ ದುಡಿಯುತ್ತಿದ್ದವರ ಹಾಡು ಯಾರು ಕೇಳಬೇಕು?

ಆದರೂ, ಅಂದು ಎದೆ ತುಂಬಿ ಹಾಡಿದ ಯುಗಳ ಗೀತೆಯೊಂದು ಇಲ್ಲಿದೆ:

ಹೊಳೆಯೊಂದು ನದಿಯಾಗುವ ಮೊದಲು ಇವಳ ಮನೆಯ ಮುಂದೆಯೇ ಹರಿಯುತ್ತದೆ; ಪಚ್ಚೆ ಗುಡ್ಡದ ಅಂಚಿನಲ್ಲಿರುವ ಹವಳದ ಹೆಂಚಿನ ಮನೆಯ ಅಂಗಳದಲ್ಲಿ ಆಡಿ ಬೆಳೆದವರಲ್ಲಿ ಇವಳೆ ದೊಡ್ಡವಳು; ಇವಳೆ ಚಿಕ್ಕವಳು. ಮುದ್ದಿಗೆ ಮುದ್ದು ಗುದ್ದಿಗೆ ಗುದ್ದು ಎಂದು ಬೆಳೆಸಿದ ಮಗಳು. ಶಾಲೆಯಿಂದ ಕಾಲೇಜಿಗೆ, ಕಾಲೇಜಿನಿಂದ ಕಡಲಿನಂತಹ ಮಹಾನಗರವನ್ನು ಹೊಕ್ಕಳು.

‘ಅಮ್ಮಾ, ನಾನು ಕುಶಲ; ನೀನೂ ಕುಶಲವಷ್ಟೆ. ಅಪ್ಪಯ್ಯನಿಗೆ ಎಲೆ-ಅಡಕೆ ಕಡಿಮೆ ತಿನ್ನಲು ಹೇಳು; (ಹೊಗೆ ಸೊಪ್ಪಿನ ಕಟ್ಟನ್ನು ಮುಚ್ಚಿಡು) ಬುಳ್ಳಿ ಮತ್ತು ಟೀಪುವಿಗೆ ನನ್ನ ಮುದ್ದು ಮುತ್ತುಗಳು.’

‘ಪೀಜಿ ಸರಿಯಾಗಲಿಲ್ಲ; ಮನೆ ಮಾಡಿದ್ದೇನೆ; ಆದರೂ ಹಣ ಉಳಿಯುತ್ತಿದೆ- ಬೇಕಾದರೆ ತಿಳಿಸಿ-ಕಳಿಸುತ್ತೇನೆ.’

ಕಂಪೆನಿಯಲ್ಲಿ ರಜೆ ಸಿಕ್ಕ ಕೂಡಲೇ, ಅಪ್ಪ-ಅಮ್ಮನನ್ನು ನೆನೆದುಕೊಂಡು ಬಂದಳು; ಸೂಟ್‍ಕೇಸಿನ ತುಂಬ ಏನೇನೊ ತಂದಳು. ಬೇಡ ಬೇಡವೆಂದರೂ ಕಾಸಿನ ಕಂತೆಯೊಂದನ್ನು ಕೈಯೊಳಗಿಟ್ಟು ಕಣ್ಣೀರಾದಳು.

ಮತ್ತೆ ಬಂದಳು; ತವರಿಗೆ ತಂಪೆರೆದು ಮತ್ತೆ ಹೋದಳು...

ಹೀಗೆ ಮೊಗದೊಮ್ಮೆ ಬಂದಾಗ, ಅವಳ ಅಪ್ಪ-ಅಮ್ಮ, ತಮ್ಮ ಮಗಳ ಮೈಗೆ ಮೈ ತಾಗಿಸಿಕೊಂಡು ಮೆದುವಾಗಿ ಹೇಳಿದರು: (ಮೆಲುಕು ಹಾಕುವುದನ್ನು ನಿಲ್ಲಿಸಿ, ಕಿವಿಯಗಲಿಸಿ ನಿಂತ ಬುಳ್ಳಿಗೆ ಕೇಳದ ಹಾಗೆ; ಜಗುಲಿಯ ಹೊರಗೆ ಮೈಚಾಚಿಕೊಂಡು, ಒಳಮನೆಯ ಹೊಸಿಲಿಗೆ ಮುಖವಿಟ್ಟು ಮಲಗಿದ್ದ ಟೀಪುವಿಗೂ ಕೇಳದ ಹಾಗೆ)

‘ಕಂದಾ, ನಮ್ಮ ಸಂಸಾರ ಇಷ್ಟು ವರ್ಷಗಳಿಂದ ಆರಕ್ಕೆ ಏರಲಿಲ್ಲ; ಮೂರಕ್ಕೆ ಇಳಿಯಲಿಲ್ಲ-ಆದರೆ ಏನೂ ಬೇಸರವಿಲ್ಲ; ನಮಗೆ ವರ್ಷ ಇಳಿಯುತ್ತಿದೆ; ಇನ್ನು ಮುಂದೆ ಈ ಮನೆಯಲ್ಲಿ ವೃದ್ಧಿ ಆಗಬೇಕು..’

‘ಅಪ್ಪಯ್ಯಾ, ಅಂತಹ ಕಾಲ ಬಂದಾಗ ನಾನೇ ಹೇಳುತ್ತೇನೆ; ಸದ್ಯ ಸುಮ್ಮನಿರಿ, ಸುಖವಾಗಿರಿ ಸಾಕು.’

ವರುಷ ಉರುಳಿತು ಹೀಗೆ ಕಂಡು ಕಾಣದ ಹಾಗೆ.

‘ಅಮ್ಮಾ, ಅವನ ಜೊತೆ ಸ್ವಲ್ಪ ಹೊತ್ತು ಮಾತಾಡು ಸಾಕು, ನಿಂಗೆ ಗೊತ್ತಾಗುತ್ತೆ-ಅವ ಎಂಥವ ಅಂತ!’

‘ಮಗಳೆ, ಜಾತಿ ಹಾಳಾಗಲಿ, ಧರ್ಮಾನೂ ಬೇರೆ ಅಂತೀಯಲ್ಲೆ? ನಂಗೊತ್ತಾಗೋಲ್ಲ, ಅಪ್ಪಯ್ಯಂಗೆ ಹೇಳು’

ಅಪ್ಪಯ್ಯನ ಜೊತೆ ಉಸಿರೆತ್ತಲಿಲ್ಲ-ಅದೇನೋ ಭಯ ಅವಳಿಗೆ. ಹಾಗೆ ಹೋಗಿ ಹೀಗೆ ಮತ್ತೆ ಬಂದಳು.

ಅವಳು ಮೆಸೇಜಿನಲ್ಲಿ ಅಪ್ಪನಿಗೆ ಸ್ಪಷ್ಟಪಡಿಸಿದ್ದಾಳೆ-ತಾನು ಮದುವೆಯಾಗುವುದಾದರೆ, ಅವನನ್ನೆ. ಮೊದಲು ಅವನೊಬ್ಬನದೆ ಫೋಟೋಗಳು; ಆಮೇಲೆ ಅವರಿಬ್ಬರದ್ದೂ ಜೊತೆಜೊತೆಯಾಗಿ ತೆಗೆದ ಸೆಲ್ಫಿಗಳು…

ತಮ್ಮ ಮಗಳಿಗೆ ತಾವು ಕಲಿಸಿದ ಭಾಷೆಯಲ್ಲಿ ಕೇಳಿಕೊಂಡರು:

ಮಗಳೆ, ನಮಗೆ ಅವನ ದೇಶ ತಿಳಿಯದು; ಭಾಷೆ ತಿಳಿಯದು; ಸಂಸ್ಕೃತಿ ತಿಳಿಯದು.. ಹಟ ಮಾಡಬೇಡ ಮಗಳೆ, ದಯವಿಟ್ಟು.ʼ

‘ಅಪ್ಪಯ್ಯ, ನಿಮ್ಮ ಮಗಳ ಭಾಷೆ ಅವನ ಭಾಷೆ; ನಮ್ಮ ದೇಶವೂ ಅವನ ದೇಶವೇ... ಹಟ ಮಾಡದೆ ಹರಸಿ ನಮ್ಮನ್ನು ಪ್ಲೀಸ್.’

ಆಮೇಲೆ ಇವರ ಮೊಬೈಲಿನಲ್ಲಿ ಅವಳ ಹೆಸರು ಅಳಿಸಿಹೋಯಿತು.

ಆದರೂ, ಮಗಳ ವಿಚಾರ ಇವರ ಕಿವಿಗೂ ಕಣ್ಣಿಗೂ ದಕ್ಕದೇ ಹೋಗುತ್ತಿರಲಿಲ್ಲ: ಇಲ್ಲಿ ನೋಡಿ! ಇವರ ಹಿತೈಷಿಯೊಬ್ಬರು, ತಮ್ಮ ಮೊಬೈಲಿನಲ್ಲಿ ಮೆತ್ತಿಸಿಕೊಂಡು ಬಂದು ತೋರಿಸುತ್ತಿರುವ ಈ ಸುದ್ದಿಯನ್ನು: 2009ನೆ ಇಸವಿ ಜನವರಿ ತಿಂಗಳ ಮೊದಲ ವಾರದ ಕೊನೆಯ ದಿನ ಅವರಿಬ್ಬರದೂ ಮದುವೆಯಂತೆ! ಸ್ಥಳ: ಅವರು ಕೆಲಸ ಮಾಡುತ್ತಿರುವ ಕಂಪೆನಿಯ ಒಳಸಭಾಂಗಣ; ಸತ್ಕಾರ: ಮಧ್ಯಾಹ್ನ 12 ರಿಂದ 2. ವಿ.ಸೂ. ಆಹ್ವಾನಿತರಿಗೆ ಮಾತ್ರ ಪ್ರವೇಶ.

ಆದರೆ, ಇಡೀ ವಿಶ್ವವೇ ಬಲ್ಲಂತೆ, ಆ ದಿನ, ಆ ಕಂಪೆನಿಯ 40 ಸಾವಿರ ನೌಕರರಲ್ಲಿ ಒಬ್ಬನಿಗೂ ತನ್ನ ಕಂಪೆನಿಯ ಗೇಟನ್ನೂ ಸಹ ತಲುಪುವುದು ಸಾಧ್ಯವಾಗಲಿಲ್ಲ. ಇನ್ನು, ಮದುವೆಯ ಸಭಾಂಗಣಕ್ಕೆ, ಆಹ್ವಾನಿತರು ಬರುವ ಮಾತೆಲ್ಲಿಯದು?

ಅಲ್ಲಿಂದ ತುಸು ದೂರದಲ್ಲಿ ಮೈಗೆಲ್ಲಾ ಗುಲಾಬಿ ಹೂವನ್ನು ಅಂಟಿಸಿಕೊಂಡ ಕಾರೊಂದು, ತನ್ನ ಹಿಂಬದಿಯ ಸೀಟಿನಲ್ಲಿ ಮದು ಮಕ್ಕಳನ್ನಷ್ಟೆ ಕೂರಿಸಿಕೊಂಡು ಇನ್ನೇನು ಹಿಂದಕ್ಕೆ ಹೊರಡಬೇಕು ಅನ್ನುವಷ್ಟರಲ್ಲಿ ಅದರ ಹಿಂಬದಿಯ ಕಿಟಕಿಯನ್ನು ತೆರೆದು ಮದು ಮಗಳು ಕೂಗಿದಳು:

‘ಅಮ್ಮಾ! ಇಲ್ಲೇ ಇದ್ದೀವಮ್ಮಾ!’

ಅವರ ಕಾರು, ಪೋಲೀಸರು, ಪ್ರತಿಭಟನಾಕಾರರು, ಅಧಿಕಾರಿಗಳು ಮುಂತಾದ ಜನ ಜಂಗುಳಿಯನ್ನು ದಾಟಿ ತನ್ನ ವೇಗವನ್ನು ನಿಧಾನಕ್ಕೆ ಹೆಚ್ಚಿಸಿಕೊಂಡಿತು. ಹೀಗೆ ಸಾಗುತ್ತಾ ಸಾಗುತ್ತಾ ಕಡಲಿನಂತಹ ಮಹಾ ನಗರವನ್ನು ದಾಟಿ, ಪುಟ್ಟ ಹೊಳೆಯೊಂದು ಹುಟ್ಟುವ, ಪಚ್ಚೆ ಗುಡ್ಡದ ಅಂಚಿನ, ಹವಳದ ಮನೆಯೊಂದರ ಮುಂದೆ, ಉದ್ದ ಉಣುಗೋಲಿನ ಎದುರು ನಸು ನಗುತ್ತಾ ನಿಂತಿತು.

ಹಿರಿಯರಿಬ್ಬರು ಕಾರಿನಿಂದಿಳಿದು ಅವಸರ ಅವಸರದಲ್ಲಿ ಉಣುಗೋಲನ್ನು ತೆಗೆದು ಕಿರಿಯರಿಬ್ಬರನ್ನೂ ಬರಮಾಡಿಕೊಂಡರು.

ಟೀಪುವು ಮೈಮೇಲೆ ನೆಗೆದು ಇನ್ನೇನು ತನ್ನ ರೇಶಿಮೆ ಸೀರೆಯನ್ನು ಕೆಸರು ಮಾಡುತ್ತದೆ ಎಂದು ಮೊದಲೇ ಊಹಿಸಿದ ಮಗಳು, ತನ್ನ ಹುಡುಗನ ಕೈ ಜಗ್ಗಿ ಹಿಡಿದುಕೊಂಡು, ಮನೆಯ ಒಳಸೇರಿಕೊಂಡಳು.

ಚಿತ್ರ : ಕಂದನ್‌

ಅಲಕ ತೀರ್ಥಹಳ್ಳಿ 

ಈ ಕತೆಗಳ ಸಹವಾಸವೇ ಸಾಕು- ಸಂಕಲನದ ಮೂಲಕ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದ ಅಲಕ ತೀರ್ಥಹಳ್ಳಿ ಅವರು ಸಾಗರ (ಶಿವಮೊಗ್ಗ ಜಿಲ್ಲೆ) ಸಮೀಪದ ಹೂಗೊಪ್ಪಲಿನವರು. ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿರುವ ಅಲಕ ಅವರು, ಛಂದ ಪುಸ್ತಕ ಪ್ರಶಸ್ತಿ(2005) ಕಥಾರಂಗಂ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

'ಅಲಕ ತೀರ್ಥಹಳ್ಳಿ' ಎಂಬ ಹೆಸರಿನಲ್ಲಿ ಲಕ್ಷ್ಮೀನಾರಾಯಣ ಬರೆದಿದ್ದಾರೆ. ಆ ಕಥೆಗಳಲ್ಲದೆ ಕವನ, ಹನಿಗವನ ಮತ್ತು ನಾಟಕಗಳನ್ನೂ ಬರೆದಿರುವ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ಈ ಕಥೆಗಳ ಸಹವಾಸವೇ ಸಾಕು, ನವಿಲೆಸರ (ಕಥಾ ಸಂಕಲನಗಳು), ಶಾಲಾ ಮಕ್ಕಳ ನಾಟಕಗಳು (ಆರು ನಾಟಕಗಳ ಸಂಕಲನ) ಅವರ ಪ್ರಕಟಿತ ಕೃತಿಗಳು.

More About Author