Poem

ಅಂತಃಪುರ ಗೀತೆ

ಓಹ್! ಅಂತೂ ಬಂದಿರಲ್ಲಾ , ಬನ್ನಿ
ಬಡಪಾಯಿಯ ನೆನಪಾಯಿತಲ್ಲಾ ಪುಣ್ಯ!

ಬನ್ನಿ ಬನ್ನಿ ಬನ್ನಿ ದೊರೆ ಒಳಗೆ
ನೀವು ಬರುವ ಹೆಜ್ಜೆ ಸಪ್ಪಳಕ್ಕೆ
ನೆಲಹಾಸು ಕಂಪಿಸಿದವಲ್ಲಾ
ಹೊರಬಾಗಿಲಿನ ತೋರಣದ ಎಲೆಗಳು,
ಕಮಾನಿಗೆ ಹಬ್ಬಿಕೊಂಡ ಬಳ್ಳಿಗಳು,
ಕೊಳದ ತಾವರೆಗಳು ಮೊಗವರಳಿಸಿಕೊಂಡು
ಸಣ್ಣಗೆ ತೊನೆದಾಡಿದವಲ್ಲಾ...
ನಿಮ್ಮ ಬರುವ ಹೇಳುವಂತೆ.

ಬನ್ನಿ ಬನ್ನಿ ದೊರೆ ಒಳಗೆ
ಕ್ಷಣ ನಿಲ್ಲಿ...ಹಾವುಗೆಗಳ ಕಳಚಿಡುವೆ
ಪಾದಗಳ ತೊಳೆವೆ ಎದೆಯಮೃತದಲ್ಲಿ
ತೊಳೆದ ಪಾದ ಒರೆಸಲೇ ಸೆರಗಿನಲ್ಲಿ?

ಬಿಲ್ಲು ಬಾಣ ಬತ್ತಳಿಕೆ ಮೂಲೆಗಿಡಿ ಅಲ್ಲೇ
ಖಡ್ಗ ಭುಜಕೀರ್ತಿಗಳನ್ನು ನೇತು ಹಾಕಿ
ಗೋಡೆಯೊಂದಿಗೆ ಅವು ಮಾತಾಡಿಕೊಳ್ಳಲಿ
ದೇಶಾಂತರ ಸುತ್ತಿ ಬಂದ
ಬೆವರ ವಸ್ತ್ರಗಳನ್ನು ವೇಷಗಳನ್ನು
ತೆಗೆದಿರಿಸುವಿರಾ?

ಆಯಾಸಗೊಂಡಿದ್ದೀರಿ
ಮುಖಮೈ ತೊಳೆದುಕೊಳ್ಳಿ.
ಹಸಿವೆಯೇ?
ಬೆಳ್ಳಿಗಿಂಡಿಯ ತುಂಬಾ ಬಿಸಿಹಾಲಿದೆ
ಕಳಿತಹಣ್ಣು ಕಮ್ಮನೆ ಘಮ್ಮೆನುತಿದೆ
ಇದೀಗ ಆರಾಮವಲ್ಲವೇ?

ಓಹ್! ಎದೆಗವಚ ಇನ್ನು ಯಾಕೆ?
ನಾನಿಲ್ಲವೇ?
ನಿಮ್ಮ ತುಂಟನಗು ಆಸೆಗಣ್ಣು
ಅರ್ಥವಾಗುವುದೆನಗೆ
ಅದಕ್ಕೂ ...ಮೊದಲು...
ನಿಮ್ಮ ರತ್ನಖಚಿತ ' ಕಿರೀಟ '
ಕೊಂಚ...ತೆಗೆದಿರಿಸಿ ದೂರ...
ನನ್ನ ದೊರೆ
ನಂತರ ಸಗ್ಗ ಸೆರೆ.

- ಡಾ.ಕೆ.ಎನ್.ಲಾವಣ್ಯ ಪ್ರಭಾ

 

 

 

 

ಕೆ.ಎನ್. ಲಾವಣ್ಯ ಪ್ರಭಾ

ಕವಿ ಕೆ. ಎನ್. ಲಾವಣ್ಯ ಪ್ರಭ ಅವರು ಮೂಲತಃ ಮೈಸೂರಿನವರು. ಅವರು 1971 ನವೆಂಬರ್‌ 02ರಂದು ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಡಾ. ಆರ್‌. ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಅವರು ‘ಎಂ. ವಿ. ಸೀತಾರಾಮಯ್ಯನವರ ಸಾಹಿತ್ಯ’ ಪ್ರಬಂಧಕ್ಕೆ ಮೈಸೂರು ವಿವಿಯಿಂದ ಪಿಎಚ್‌.ಡಿ ಪದವಿ ಗಳಿಸಿದ್ದಾರೆ. ಇವರ ಹಲವಾರು ಕವಿತೆಗಳು ಕನ್ನಡದ ದಿನ ಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

‘ನದಿ ಧ್ಯಾನದಲ್ಲಿದೆ’, ‘ಹುಟ್ಟಲಿರುವ ನಾಳೆಗಾಗಿ’, ‘ಗೋಡೆಗಿಡ’ ಅವರ ಕವನ ಸಂಕಲನಗಳು. ಸಂಶೋಧನಾ ಪ್ರಬಂಧ ಅವರ ಕವನ ಸಂಕಲನ. ತಮ್ಮದೇ ಯುಟ್ಯೂಬ್‌ ಚಾನೆಲ್‌ ಮೂಲಕ ಕಾವ್ಯ ವಾಚನ ಮಾಡಿ ಆಸಕ್ತರಿಗೆ ತಲುಪಿಸುತ್ತಿದ್ದಾರೆ. 

More About Author