Poem

ಅಪ್ಪನಿಗೆ  

ಅಪ್ಪ ನಿನ್ನನ್ನು ನೋಡಿದಾಗಲೆಲ್ಲ ಅಂದುಕೊಳ್ಳುತ್ತೇನೆ
ಎಷ್ಟು ಕಠಿಣ ನೀ ಕಲ್ಲೆದೆಯವನು!

ನಡೆಯಲು ಬರದೆ ನಾ ಅಡಿಗಡಿಗೆ ಬೀಳುತಿದ್ದಾಗ
ಕಣ್ಣೀರು ಕೆನ್ನೆಮೇಲುರುಳಿ ಕೆಳಗಿಳಿಯುವಾಗ
ಅಮ್ಮ ಬಂದು ನನ್ನನೆತ್ತಿ ಮುದ್ದಾಡಿ ರಮಿಸಿರಲು
ಮಡಿಲಿಂದ ನನ್ನ ಬಿಡಿಸಿಬಿಟ್ಟು ಕೆಳಗಿಟ್ಟು
ನೀ ಹೇಳುತ್ತಿದ್ದೆ ಗಟ್ಟಿಯಾಗಬೇಕು ನೀನು !

ಶಾಲೆಯಲ್ಲಿ ಮೊದಲದಿನ ಅಪರಿಚಿತರೆಲ್ಲ
ಅಮ್ಮನೂ ಬಳಿಯಲ್ಲಿಲ್ಲ,ನನ್ನನರಿತವರಾರೂ ಇಲ್ಲ
ಒಬ್ಬಂಟಿ ನಾನು ಹೆದರಿಕೆಯಲಿ ಅಳಲು
ಮುದ್ದಿಸಲಿಲ್ಲ , ಸಂತೈಸಲಿಲ್ಲ ಬದಲಾಗಿ
ನೀ ಹೇಳುತ್ತಿದ್ದೆ ಗಟ್ಟಿಯಾಗಬೇಕು ನೀನು!

ಆಟವಾಡುವ ನಡುವೆ ನಾ ಬಿದ್ದು ಪೆಟ್ಟ ತಿಂದು
ಮಂಡಿ ತರಚಿರಲು , ಸಹಿಸಲಾರದ ನೋವಿರಲು
ಗೆಳೆಯರೆನ್ನನು ಛೇಡಿಸುತ್ತ ನಗುತ್ತಿದ್ದರೆ
ಬಳಿಬಂದು ನೀವುತಲಿ ಮಂಡಿಯನು
ನೀಹೇಳುತ್ತಿದ್ದೆ ,ಗಟ್ಟಿಯಾಗಬೇಕು ನೀನು!

ಕ್ಲಾಸಿನಲಿ ಟೀಚರಿಂದ ಏಟು ತಿಂದುದನು
ಅಮ್ಮನಿಗೆ ಹೇಳಿ ಅಳುತಿದ್ದರೆ ಅವಮಾನದಲಿ
ಎಲ್ಲಿಂದಲೋ ಬಂದು ಬಳಿ ನಿಲ್ಲುತ್ತಿದ್ದೆ
ಬಂದುದನು ಎದುರಿಸಬೇಕು, ಅಳದಿರಬೇಕು
ನೀ ಹೇಳುತ್ತಿದ್ದೆ ,ಗಟ್ಟಿಯಾಗಬೇಕು ನೀನು!

ಎಲ್ಲದಕು ಯಾವುದಕು ಒಂದೆ ಮಂತ್ರವು ನಿನ್ನದು
ನೀ ಗಟ್ಟಿಯಾಗಬೇಕು , ನೀ ಗಟ್ಟಿಯಾಗಬೇಕು.
ಈಗ
ನನ್ನದೊಂದೇ ಮಾತಿದೆ ನೀನೀಗ ಕೇಳಬೇಕು
ನಾ ಕಣ್ಣೆದುರು ಇರುವವರೆಗೆ ಮುಚ್ಚಬಾರದು ನೀ ಕಣ್ಣು
ನಿನ್ನನ್ನಗಲಿ ಬದುಕಿರುವಷ್ಟು ಗಟ್ಟಿಯಾಗಿಲ್ಲ ನಾನಿನ್ನೂ!!

- ಸತ್ಯವತಿ ಮೂರ್ತಿ

ವಿಡಿಯೋ
ವಿಡಿಯೋ

ಸತ್ಯವತಿ ಮೂರ್ತಿ

ಸತ್ಯವತಿ ಮೂರ್ತಿ ಅವರು ಬಿಎಸ್ಸಿ, ಬಿ.ಎ, ಎಮ್.ಎ, ಬಿ.ಎಡ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಶಾಂತಿರಾಜ ಶಾಸ್ತ್ರಿಗಳು ಜೀವನ ಮತ್ತು ಅವರ ಕೃತಿಗಳು ಒಂದು ಅಧ್ಯಯನಕ್ಕಾಗಿ ಪಿ.ಎಚ್.ಡಿ  ಶಿಕ್ಷಣ ಪೂರೈಸಿದ್ದಾರೆ. ಪ್ರಜಾವಾಣಿ , ಸುಧಾ, ಮಯೂರ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ ಕಥೆ, ಕವನ , ಅನುವಾದ, ಪ್ರವಾಸ ಕಥನ, ವ್ಯಕ್ತಿ ಚಿತ್ರ ಹಾಗೂ ನಗೆಬರಹಗಳನ್ನು ಪ್ರಕಟಿಸಿದ್ದಾರೆ.

ಕೃತಿಗಳು: ಸಿಟಿಬಸ್ಸು ಹಾಗೂ ತೆಳ್ಳಗಿರಬಾರದಯ್ಯ ಲೋಕದೊಳಗೆ, ಗಿನ್ನೀಸ್ ರೆಕಾರ್ಡ್ ಮತ್ತು ಇತರ ನಾಟಕಗಳು, ಸಿಟಿಬಸ್ಸು.

More About Author