Poem

ಅಸಂಗತಾಕರ್ಷ 

ನೀರಿನದ್ದೇ ಹಾಳೆ ಸುತ್ತಲೂ.
ಕಿನಾರೆಯಿಂದ ಅದೆಷ್ಟೋ ದೂರದಲ್ಲಿ
ತೇಲುತ್ತಿದೆ ಈ ತುಂಡು ಭೂಮಿ
ಶಾಂತಸಾಗರದಲ್ಲಿ.

ಯಾವುದೇ ಲೋಹದ ಹಕ್ಕಿಯ ಕಣ್ಣಿಗೆ
ಬಿದ್ದಂತ್ತಿಲ್ಲ,
ಅಲ್ಲದು ಇಳಿದ ಕುರುಹಿಲ್ಲ,
ಒಂದೇ ಒಂದು ಕಟ್ಟಡ ತಲೆ ಎತ್ತಿಲ್ಲ.
ಎಲ್ಲೆಲ್ಲೂ ಸಮೃದ್ಧ ವನರಾಜಿ
ಅದರದ್ದೇ ಸಾಮ್ರಾಜ್ಯ.
ಸರ್ವ ತಂತ್ರ ಸ್ವತಂತ್ರ
ನಿಸರ್ಗದ ನಿಲಯವದು.
ಮನುಷ್ಯ ಇಟ್ಟ ಹೆಸರು ದ್ವೀಪ.

ಇಲ್ಲಿ ಬುದ್ದಿಯ ಬೆಳಕು,
ಭಾವದ ತಂಗಾಳಿ,
ಶಾಂತಿಯ ಮಳೆ,
ನೆಮ್ಮದಿಯ ಇಳೆ ಇದೆ
ಎಂದು ಬಣ್ಣಿಸಿತು
ಆ ಕಿರು ಧರಿತ್ರಿ.
ಬಾ ನನ್ನೊಂದಿಗಿರೆಂದು ಕರೆಯಿತದು.
ಏಕೋ ಗೊತ್ತಿಲ್ಲ
ಆಗಬಹುದು ಅಂತ ನನಗನಿಸಿತು.

- ಬಿ. ಪುರಂದರ ಭಟ್

ವಿಡಿಯೋ
ವಿಡಿಯೋ

ಬಿ. ಪುರಂದರ ಭಟ್

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತಾಲೂಕಿನ ಬರೆಪ್ಪಾಡಿಯಲ್ಲಿ 07-03-1936 ರಂದು ಬಿ. ಪುರಂದರಭಟ್ಟರು ಹುಟ್ಟಿದರು. ತಂದೆ ಬರೆಪ್ಪಾಡಿ ಸೀತಾರಾಮ ಭಟ್ ಮತ್ತು ತಾಯಿ ಕಾವೇರಿ. ವಿಟ್ಲದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ,  ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ ಪ್ರೌಢಶಾಲೆ ಶಿಕ್ಷಣ. . ಮಂಗಳೂರಿನ ಸರಕಾರಿ ಕಾಲೇಜಿನಿಂದ ಬಿ.ಎ. ಪದವೀಧರರು. ಉಡುಪಿಯ ವೈಕುಂಠ ಬಾಳಿಗ ಕಾಲೇಜಿನಲ್ಲಿ ಎಲ್.ಎಲ್.ಬಿ, ಮಣಿಪಾಲ ಕಾಲೇಜಿನಿಂದ ಬಿ.ಎಡ್. ಪದವಿ ಪೂರ್ಣಗೊಳಿಸಿ, ಅಂಚೆ ಕಚೇರಿಯಲ್ಲಿ ಹಾಗೂ ಕೆಲ ಕಾಲ  ಜೀವವಿಮಾ ನಿಗಮದಲ್ಲಿ ಕೆಲಸ ಮಾಡಿದರು. ಕಾನೂನು ಪದವಿಯ ನಂತರ ವಕೀಲಿ ವೃತ್ತಿ. ನಂತರ ಅಧ್ಯಾಪಕ ವೃತ್ತಿಯಲ್ಲಿ ಆಸಕ್ತಿ ತೋರಿದರು. ಉಡುಪಿಯ ಪರ್ಕಳ ಹೈಸ್ಕೂಲು, ಪೂರ್ಣಪ್ರಜ್ಞ ಕಾಲೇಜು, ಪುತ್ತೂರಿನ ವಿವೇಕಾನಂದ ಕಾಲೇಜು-ಹಲವಾರು ಕಡೆ ಅಧ್ಯಾಪಕರಾಗಿ, 1994ರಲ್ಲಿ ನಿವೃತ್ತರಾದರು.

ಹೈಸ್ಕೂಲಿನಲ್ಲಿದ್ದಾಗಲೇ ಕೈ ಬರಹದ ಪತ್ರಿಕೆಯ ಉಪಸಂಪಾದಕರು. ಮೊದಲ ಕವಿತೆ ಉಡುಪಿಯ ನವಯುಗ ಪತ್ರಿಕೆ, ಮೊದಲ ಕಥೆ ನವಭಾರತ ಪತ್ರಿಕೆಗಳಲ್ಲಿ ಪ್ರಕಟವಾಯಿತು.  ಕೇಮ ದ್ರುಮ, ಸಾಗರ್, ಕಲ್ಪದ್ರುಮ, ಪುರಂದರ ಇವರ ಗುಪ್ತನಾಮಗಳಿಂದ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು.

ಕೃತಿಗಳು-ಅನಾದಿಯ ಮಗು, ಸಾಂಪ್ರತ (ಕವನ ಸಂಕಲನ). ಹರಾಮರಾಜ್ಯ, ಧರ್ಮ ಹಾಳಾಯ್ತು (ಹರಟೆಗಳ ಸಂಕಲನ). ಹೀಗೊಬ್ಬ ಚಾರ್ವಾಕ (ವೈಚಾರಿಕ ನಾಟಕ). ತುಣುಕು (ಕಿರುಗವನಗಳು). ಗೂಳಿ-ಗತಿ (ಕಥಾಸಂಕಲನ). ನಾಟಕ ರಚನೆ, ನಿರ್ದೇಶನ ಇವರ ಮತ್ತೊಂದು ಆಸಕ್ತಿಯ ಕ್ಷೇತ್ರ. ಸ್ತ್ರೀವೇಷ ತೊಟ್ಟು ನಟಿಸುತ್ತಿದ್ದರು. ಸಾಹಿತ್ಯ ವಿವೇಚನೆ, ವಿಮರ್ಶೆ, ವ್ಯಾಖ್ಯಾನ, ಭಾಗವತ ಪ್ರವಚನಗಳಿಗೆ ತಮ್ಮ ಮನೆಯನ್ನೇ ‘ಅನುರಾಗ ವಠಾರ’ ಎಂದು ಪರಿವರ್ತಿಸಿದ್ದರು. 

ಪುತ್ತೂರಿನ 6ನೇ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಮತ್ತು ರಂಗಭೂಮಿ ಸೇವೆಗಾಗಿ, ಪುತ್ತೂರಿನ ರೋಟರಿ ಕ್ಲಬ್, ಪತ್ರಕರ್ತರ ಸಂಘದಿಂದ ಸನ್ಮಾನಗಳು ಸಂದಿವೆ..

More About Author