Poem

ಅವ್ವ ಅವ್ವ

ತಟ್ಟಿದ ರೊಟ್ಟಿಯ ಮೇಲೆಲ್ಲಾ
ಅವ್ವನದೇ ಬೆರಳುಗಳು
ಹೆಂಚಿನಲಿ ಕಾಯಿಸಿ ತಿರುವಿ ಹಾಕಿ
ನಿಗಿನಿಗಿ ಕೆಂಡದಲ್ಲಿ ಸುಟ್ಟ ರೊಟ್ಟಿ
ಥೇಟ್ ಅವ್ವನ ಹಾಗೆ

ವರುಷ ಹನ್ನೆರಡಕೆ ಮದುವೆ
ಹುಚ್ಚೆದ್ದು ಊರು ತಿರುಗುವ ಅತ್ತೆ
ಪಾಳು ಬಿದ್ದ ಅಜ್ಜನ ಕಾಲದ ಮನೆ
ಹಸಿವು ಸುರುಳಿ ಸುತ್ತಿದ ಕ್ಷಣ
ಊರೆಲ್ಲಾ ಮುಳುಗಡೆ ಸೂತಕ

ಅವ್ವ ಅಪ್ಪನ ವಿವೇಕದ ಹಾದಿ
ಉತ್ತಿದಳು ಬಿತ್ತಿದಳು ಜತೆಯಾಗಿ
ಹಕ್ಕೆಮನೆಯಲಿ ಗದ್ದೆ ಕಾದಳು
ತೂರಿದಳು ಬೀಸುಗಾಳಿಗೆ ಒಡ್ಡಿ
ಒಂಟಿಯಾದಾಗಲ್ಲೆಲ್ಲ ಒಬ್ಬಳೇ ಬಿಕ್ಕಿದಳು
ಬುಟ್ಟಿ ಹೆಣೆದಳು ಸೊಲೊಪ್ಪಿಕೊಳ್ಳದೆ
ನೋವನ್ನೆಲ್ಲ ಗುನುಗಿದಳು
ಅವಳ ಸೊಲ್ಲೋಳಗೆ ಅವಳದೆ ಪಾಡು
ಹೆತ್ತಳು ಹೊತ್ತಳು ಮಕ್ಕಳೆಂಟು
ಹಾದಿ ನಡೆಸಿದಳು ವಿವೇಕ ತುಂಬಿ

ಈ ನಡುವೆ
ಮನೆ ವಾಜಾವಗತನ ಅವ್ವನದೇ
ಅಪ್ಪ ದುಡ್ಡಿದ್ದರೆ ಒಮ್ಮೊಮ್ಮೆ ದರಬಾರಿ
ಅಮ್ಮ ಅದೆಂಥ ಪಕ್ವ ಲೆಕ್ಕಾಚಾರಿ
ತಪ್ಪಬಹುದು ಅಪ್ಪ ಲೆಕ್ಕ ಅವ್ವನದಲ್ಲ
ಮಡಚಿಟ್ಟ ಸೀರೆ ಅಡಿಯಲ್ಲಿ
ನೂರರಿಂದ ಸಾವಿರ ಉಳಿತಾಯ
ಇಷ್ಟಿದ್ದರೂ ಅವ್ವ ಒಬ್ಬಜ್ಜಿ ಮಾಡಲಿಲ್ಲ
ಅದು ಇದು ಚಿನ್ನ ಮತ್ತೊಂದಕೆ ಜಗಳವಿಲ್ಲ
ಸಮಚಿತ್ತವ ಕಂಡಿದ್ದೆ ಅವ್ವನಲ್ಲಿ
ಈ ಡಿಗ್ರಿ ಓದು ಎಲ್ಲವೂ
ಹೆಬ್ಬೆಟ್ಟಿನ ಅವ್ವನೆದುರು ಮಂಡಿಯೂರಿವೆ
ಅವ್ವನಂತಾಗಲಾರದೆ ಸೋತಿವೆ

ಅವ್ವ
ವಾಟೆಹುಳಿ ಆರಿಸಿ ಇಡುವುದ ಮರೆಯಲ್ಲ
ಮೀನು ಸಾರಲ್ಲಿ ಅವ್ವನೆ ನೆಚ್ಚು
ಬೀಸುಗಲ್ಲಲಿ ತಿರುವಿ ತಂಬಿಟ್ಟು
ಅವ್ವ ಅವಳ ರೊಟ್ಟಿಯಂತೆ
ಹಿಟ್ಟು ನುಪ್ಪಿದಂತೆ ಗಟ್ಟಿಯಾಗಿ
ಮಾಗಿ ಹದವಾದಳು
ಬೆಂದಳು ಬದುಕಿನ ಹೆಂಚಿನಲಿ
ಸುಟ್ಟುಕೊಂಡಳು ಉರಿಯಲಿ
ಇಳಿವಯದ ಅವ್ವನೀಗ ಬದುಕಿಗೆ ಬುತ್ತಿ
ಮೊಣಕಾಲು ನೋವಲ್ಲೂ
ಆಗಾಗ ರೊಟ್ಟಿ ಸುಟ್ಟು ಬಡಿಸಿ
ಮುಖವನ್ನೇ ದಿಟ್ಟಿಸುತ್ತ ದೂರ ನಿಲ್ಲುತಾಳೆ
ಎನೋ ಮಾತು ಉಳಿಸಿಕೊಂಡಂತೆ

- ಜಿ. ಟಿ ತುಮರಿ

ವಿಡಿಯೋ
ವಿಡಿಯೋ

ಸತ್ಯನಾರಾಯಣ ಜಿ.ಟಿ

ಜಿ.ಟಿ ಸತ್ಯನಾರಾಯಣ ಅವರು ಮೂಲತಃ ಸಾಗರದವರು. ಜಿ.ಟಿ. ತುಮರಿ ಅವರ ಕಾವ್ಯ ನಾಮ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಕವನ, ಲೇಖನ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

 

More About Author