Poem

ಬಾ ಬೆಳಕೆ ಬಾಳಿಗೆ

ಕೆಂಡದ ಕೇರಿ ನಮ್ಮ
ಕರುಳ ಕಿತ್ತು ಸುಡುತಿರಲು
ತಮದ ತಮಟೆ ಸದ್ದು
ನಿತ್ಯ ತೆರ್ಪ ಬಿಡುತಿರಲು
ಆರ್ತನಾದ ಅಳುತಲಿದೆ
ಬಾ ಬೆಳಕೆ ಬಾಳಿಗೆ

ಗಂಜಲುಗಳ ಗೋಡೆ ನಮ್ಮ
ಅಂಗಳಗಳ ಕೆಡುವುತಿರಲು
ಬೂದಿ ಹೊದ್ದ ಭವದ ಸೊಕ್ಕು
ಉಸಿರನಗಿದು ಮುಚ್ಚುತಿರಲು
ಆತ್ಮ ಕೂಗಿ ಕರೆಯುತಿದೆ
ಬಾ ಬೆಳಕೆ ಬಾಳಿಗೆ

ಎಂಜಲುಗಳ ಎಡೆ ನಮ್ಮ
ಗಂಗಳಗಳ ಒದೆಯುತಿರಲು
ಬೋಳು ಬಿದ್ದ ಬುರುಡೆ ಮೂಳೆ
ಕನಸುಗಳ ಕುಟ್ಟುತಿರಲು
ನೋವನಾಲೆ ತೊಟ್ಟಿಕ್ಕುತಿದೆ
ಬಾ ಬೆಳಕೆ ಬಾಳಿಗೆ

ದಂಡುಕೋರ ದವಡೆ ನಮ್ಮ
ಕೊರಳುಗಳ ಕಡಿಯುತಿರಲು
ಮಂಕುಕೊಳದ ಕೆಂಪು ಕೊಕ್ಕು
ನೆಲದನಿಯ ಕುಕ್ಕುತಿರಲು
ಬಂಧಿಕೋಣೆ ಬುಸುಗುಟ್ಟುತಿದೆ
ಬಾ ಬೆಳಕೆ ಬಾಳಿಗೆ

- ಕ.ಗಂ.ಶಶಿಕುಮಾರ್(ಕವಿವರ್ಮ)

ಕ.ಗಂ.ಶಶಿಕುಮಾರ್

ಕ.ಗಂ.ಶಶಿಕುಮಾರ್(ಕವಿವರ್ಮ) ಮೂಲತಃ ರಾಮನಗರ ಜಿಲ್ಲೆಯ ಕರೇಹನುಮಯ್ಯನ ಪಾಳ್ಯದವರು. ಕವಿ ಹಾಗೂ ಕನ್ನಾಡ ಉಪನ್ಯಾಸಕರಾಗಿದ್ದಾರೆ.

More About Author