Poem

ಬಾಳ ಹಾದಿಯ ಪಯಣ-

ಇಲ್ಲಿ ಈ……
ಗಡಿಯಾರದಂಗಡಿಯ ಮುಂದೆ ಸದಾ
ಗಿಜಿಗುಟ್ಟುವ ಜನಜಾತ್ರೆ
ಅವರವರ ದಿಕ್ಕಿನಲ್ಲಿ ದೃಷ್ಟಿ ನೆಟ್ಟು ನಡೆದಿದೆ
ನಿತ್ಯ ನಿರಂತರ ಯಾತ್ರೆ

ಕಾಲದ ಹಳಿಗಳ ಮೇಲೆ ಕೂಗುತ್ತ ಸಾಗಿದೆ
ಬಾಳ ಪಯಣದ ಬಂಡಿ
ನಡು ನಡುವೆ ನೂರಾರು ನಿಲುಗಡೆಯ ತಾಣಗಳು
ಹತ್ತುವುದಲ್ಲೋ ಇಳಿಯುವುದೆಲ್ಲೋ
ಹೊತ್ತು ಗೊತ್ತಿಲ್ಲದೇ ಸಾಗಿದ ಹತ್ತಿ ಇಳಿಯುವ ಆಟ

ಹತ್ತುವವರೆಷ್ಟೋ ಇಳಿಯುವವರೆಷ್ಟೋ ಬರಿದೆ ಹತ್ತಿದಂತೆ
ಮಾಡಿ ಇಳಿಯುವರಿನ್ನೆಷ್ಟೋ!
ಸುಮ್ಮನೆ ಒಳಬಂದು ಒಳಗೆ ಬರಲಾರದವರು
ಸನಿಹವೇ ನಿಂತರೂ ಸನಿಹಕ್ಕೆ ಬರಲಾರದವರು
ಒಂದಿಷ್ಟೂ ನೆನಪಿನ ಬುತ್ತಿ ಬಿಟ್ಟು ಹೋಗದವರು
ಜೊತೆಯಲ್ಲಿದ್ದೂ ಜೊತೆಯಾಗದ ಸಹ ಪಯಣಿಗರು
ಕುಂತಲ್ಲಿ ಕೂರದೇ ನಿಂತಲ್ಲಿ ನಿಲ್ಲದೆ ಬರಿಯ
ಧಾವಂತವನೆ ಹೊತ್ತು ನಿಂತವರು
ಇನ್ನೂ…..ಎಂತೆಂಥವರೋ

ಅಪರೂಪಕ್ಕೆ ಕೆಲವೊಮ್ಮೆ
ಪೂರ್ವ ಜನ್ಮಾಂ
ತರದ ಪುಣ್ಯ ಫಲ

ಮಾಗಿ ಬಂದಂತೆ
ಮರುಭೂಮಿಗೆ ಮಳೆ ಬಂದಂತೆ
ಎಲ್ಲಿಯೋ ಯಾವುದೋ ನಿಲ್ದಾಣದಲ್ಲಿ ಹತ್ತುವರು
“ನಿಮ್ಮಂಥವರು”
ಸುಗ್ಗಿ ಸಂಭ್ರಮದ ಬೀಜ ತಂದು ಬಿತ್ತು ವರು
ಪಯಣದ ಹಾದಿಯ ಮರೆಯದ ಕತೆಯಾಗುವರು

ಜೀವ ವೀಣೆಯ ಮಿಡಿದು
ಭಾವ ಗೀತೆ ಹಾಡುವರು
ಪಯಣ ಹಾದಿಯ ಬೇಗೆ ಬವಣೆಯ ಕಳೆದು
ಇನ್ನೂ ಇನ್ನೂ ಬೇಕೆನಿಸುವರು
ಮಿಗಿಲಾಗಿ ಮುಗಿಲ ಮೇಲೇರಿ ಮೋಡ
ಕೊಡಗಳ ಹೊತ್ತು ತಂದು ಮಳೆಯಾಗಿ ಸುರಿಯುವರು
ಕಾಣದ ಕಡಲೆಡೆಗೆ ಕಾತರಿಸಿ ಒಡನೊಡನೆ
ಹೊಳೆಯಾಗಿ ಹರಿಯುವರು

ಹಾದಿಯುದ್ದಕೂ ಸಾಲು ಮರಗಳ ನೆಟ್ಟು
ಹೊಂದಳಿರು ತೊಡಿಸುವರು
ಕೊಂಬೆ ಕೊಂಬೆಗೂ ದಂಡೆ ಹೂ ಮುಡಿಸುವರು
ಕಣ್ಣ ಬೆಳಕಿನ ಪ್ರಭೆಗೆ ಎದೆಯ ಗೂಡೊಳಗೆ
ತಣ್ಣನೆಯ ದೀಪ ಹಚ್ಚಿಡುವರು

“ನಿಮ್ಮಂಥವರು”
ಹೀಗೇನೇ…….
ಯಾವುದೋ ಒಳಸುಳಿಯ
ಎಳೆ ಹಿಡಿದು ಬಂದವರು
ಕಣ್ಣಿನಾಳಕೆ ಬೆಳದಿಂಗಳಾಗಿ ಇಳಿಯುವರು
ಮಣ್ಣಿನಾಳಕೆ ಬಲವಾಗಿ ಬೇರೂರಿ ಉಳಿಯುವರು.

ಎಂ. ಕೆಂಪರಾಜ್

ವಿಡಿಯೋ
ವಿಡಿಯೋ

ಎಂ. ಕೆಂಪರಾಜ್

ಎಂ. ಕೆಂಪರಾಜ್ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯದ ಕುರಿತು ಅಪಾರ ಆಸಕ್ತಿ ಹೊಂದಿರುವ ಅವರು ಕವನ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ.

More About Author