Story

ಬಾರು ಹುಣಿಸೇಮರ

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ `ಬಾರು ಹುಣಿಸೇಮರ' ಕತೆ ನಿಮ್ಮ ಓದಿಗಾಗಿ...

ಗವ್ ಎನ್ನುವ ಕತ್ತಲರಾತ್ರಿಯಲ್ಲಿ, ದೂರದಿಂದ ನೋಡಿದರೆ ಆಕಾಶದುದ್ದಕ್ಕೆ ನಿಂತ, ಜೋರಾಗಿ ಗಾಳಿ ಬೀಸಿದಾಗ ತೂಗಿ ನೆಲಕ್ಕೆ ಅಪ್ಪಳಿಸುವಂತೆ ಕಾಣುವ, ಇಳೀಬಿದ್ದಿರುವ, ಹರಡಿಕೊಂಡಿರುವ ಕೊಂಬೆಗಳ ನಡುವೆ ದೆವ್ವಗಳು ಸಭೆ ನಡೆಸುತ್ತಿವೆಯೋ ಎಂಬಂತೆ ಕಾಣುವ ಬಾರು ಹುಣಿಸೇಮರಗಳು ಭಯ ಹುಟ್ಟಿಸುವ ಪರಿ ಒಂದು ರೀತಿಯಲಿ ಸುಖವೂ ಅನಿಸುತ್ತದೆ. ಹಗಲಲ್ಲೂ ಯಾರೂ ಅವುಗಳ ಹತ್ತಿರಕ್ಕೂ ಸುಳಿಯುವುದಿಲ್ಲ. ಆ ಕಡೆ ಯಾರೂ ಮನೆಗಳನ್ನು ಕಟ್ಟಿದ್ದಿಲ್ಲ.

ಬಾರು ಹುಣಿಸೇಮರಗಳು ಮಸರಗ್ರಾಮಕ್ಕೆ, ಲ್ಯಾಂಡ್ ಮಾರ್ಕ್. ಊರನ್ನು ಗುರುತಿಸುವುದು ಅವುಗಳಿಂದಲೇ. ನ್ಯೂಯಾರ್ಕಿಗೆ ಲಿಬರ್ಟಿ ಪ್ರತಿಮೆ ಇದ್ದಂತೆ, ಕೊಲಲಾಂಪುರಕ್ಕೆ ಜೋಡಿ ಟವರ್ ಗಳಿರುವಂತೆ ಮಸರಕ್ಕೆ ಜೋಡಿ ಹುಣಿಸೇಮರಗಳು, ಅವು ಬಾರು ಹುಣಿಸೇಮರ ಎಂದು ಪ್ರಸಿದ್ದಿ. ಅವು ಇರುವುದು ಸರ್ಕಾರಿ ಜಾಗದಲ್ಲಿ ಅದು ಊರಿನ ಸ್ವಲ್ಪ ಹೊರಗೆ, ಕೊಡಿಗೇನಹಳ್ಳಿ ಕಡೆಯಿಂದ ಬರುವವರಿಗೆ ಮೊದಲು ದರ್ಶನ ಕೊಡುತ್ತವೆ. ಉದ್ದಕ್ಕೆ ನಿಂತು, ತಲೆ ಎತ್ತಿ ನೋಡಿದರೆ ಆಕಾಶವೆಲ್ಲಾ ಆವರಿಸಿಕೊಂಡಂತೆ, ಪ್ರಜ್ಞಾಪೂರಕವಾಗಿ, ತಾವೇ ಬೆಳೆದು ನಿಂತಂತೆ, ಬೇರಿನಿಂದ ನೀರೆಳೆಯದೆ, ಮೋಡಗಳಿಂದ ನೀರನ್ನು ಅಪೋಸಿಸಿ ಬೆಳೆದುಕೊಂಡಂತೆ ಕಾಣುತ್ತವೆ. ಸಾಮಾನ್ಯ ಜನಕ್ಕೆ ದೆವ್ವದ ಮರಗಳೂ, ತಾಂತ್ರಿಕರಿಗೆ ಅಸಾಮಾನ್ಯ ಆಯುಧಗಳೆಂಬಂತೆ ಕಾಣುತ್ತವೆ.

ಆ ಜೋಡಿಮರಗಳಲ್ಲಿ ದೆವ್ವಗಳಿವೆ ಎಂದು ಮಸರದ ಎಲ್ಲರಿಗೂ ಗೊತ್ತಿರುವ ಸಂಗತಿ. ಹಗಲಲ್ಲಿ ಮಲಗಿರುವ ದೆವ್ವಗಳು ರಾತ್ರಿ ಎದ್ದು ಕೀಚಲು ದನಿಯಲ್ಲಿ ರಾಗ ತೆಗೆದೊಡನೆ, ಊರ ನಾಯಿಗಳು ಊಳಿಡತೊಡಗುತ್ತವೆ. ರಾತ್ರಿ ಎಂತಹ ಗಟ್ಟಿ ಎದೆಯವರು ಆ ಜೋಡಿಮರಗಳ ಹತ್ತಿರ ಹೋಗಲು ಭಯಪಡುತ್ತಾರೆ. ಒಂದು ದಿನ ರಾತ್ರಿ ಎರಡಕ್ಕೆ ಎಂದು ಎದ್ದು ಹೊರಟಿದ್ದ ಬೇವಿನ ಮನೆ ಮುತ್ತಜ್ಜ, ಜೋಡಿ ಮರದಲ್ಲಿ ಏನೋ ಬೆಂಕಿ ಕಂಡಂತಾಗಿ ಮತ್ತೆ ವಾಪಸ್ ಬಂದು ಹಾಗೆ ಮಲಗಿದ್ದ. ಬೆಳೆಗ್ಗೆ ಹಾಸಿಗೆ ತೊಳೆಯಲಾರದೆ ಅದನ್ನು ಮನೆಯವರು ಬಿಸಾಡಬೇಕಾಯಿತು.

ಆ ಮರಗಳ ಹುಣಿಸೆಯನ್ನು ಯಾರೂ ಕೀಳುವುದಿಲ್ಲ, ಹುಣಿಸೇಕಾಯಿ ಅದೇ ಉದುರಿ, ಕೆಲವು ಕೊಳೆತರೆ, ಕೆಲವು ಹಕ್ಕಿಗಳ ಪಾಲಾಗುತ್ತವೆ. ಯಾರಾದರೂ ಕಿತ್ತು ಮಾರಿದರೆ ಒಳ್ಳೆಯ ಹಣ ಬರುತ್ತದೆ. ಆದರೆ ಯಾರಿಗೂ ಧೈರ್ಯ ಸಾಕಾಗುವುದಿಲ್ಲ.

ಇಂತಹ ಮರಗಳಿಗೆ ಪುರಾಣದಂತಹ ಇತಿಹಾಸವೇ ಇದೆ.

ಮಸರಕ್ಕೆ ಹತ್ತು ಮೈಲಿ ದೂರದ ತುಳಿಸೀಪುರಕ್ಕೆ ದೊಡ್ಡಪ್ಪ ನಾಯಕ ಎನ್ನುವ ಊರ ನಾಯಕನೊಬ್ಬನಿದ್ದ . ಆ ನಾಯಕನಿಗೆ ಒಬ್ಬಳೇ ಮಗಳು. ಆಕೆಯ ಹೆಸರು ಮೈತ್ರೇಯಿ. ಅವಳು ವಯಸ್ಸಿಗೆ ಬಂದಾಗ ತುಳಿಸೀಪುರದ ಸೈನಿಕನೊಬ್ಬನನ್ನು ಪ್ರೀತಿಸುತ್ತಾಳೆ. ಅವಳ ಪ್ರೀತಿಯ ವಿಷಯ ನಾಯಕನಿಗೆ ತಿಳಿಯುತ್ತದೆ. ಸೈನಿಕನನ್ನು ಮುಗಿಸುವಂತೆ ತನ್ನ ಬಂಟರಿಗೆ ಹೇಳುತ್ತಾನೆ. ಅದಕ್ಕೂ ಮೊದಲೇ ಮೈತ್ರೇಯಿ ಮತ್ತು ಸೈನಿಕ ರಾಜ್ಯದಿಂದ ಓಡಿ ಹೋಗುತ್ತಾರೆ. ಅವರನ್ನು ಹುಡುಕುತ್ತಾ ಬಂದ ಸೈನಿಕರಿಗೆ ಅವರು ಮಸರದ ಹತ್ತಿರ ಇರುವುದು ತಿಳಿಯುತ್ತದೆ. ಮಸರದ ಹೊರಗೆ ಮೈತ್ರೇಯಿ ಮತ್ತು ಸೈನಿಕ ಸುಧಾರಿಸಿಕೊಳ್ಳುತ್ತ ಕುಳಿತಿರಬೇಕಾದರೆ, ನಾಯಕ ಕಳಿಸಿದ ಬಂಟರು ಅವರ ಮೇಲೆ ಮುಗಿಬಿದ್ದು, ಕೊಂದುಬಿಡುತ್ತಾರೆ. ಕೊಂದು ಅಲ್ಲಿಯೇ ಗುಂಡಿತೋಡಿ ದೇಹಗಳನ್ನು ಮುಚ್ಚಿ ಬಿಡುತ್ತಾರೆ. ಅಲ್ಲೇ ಮರೆಯಲ್ಲಿ ಇದನ್ನು ನೋಡುತ್ತಿದ್ದ ಮಸರದ ರಾಮಕ್ಕ, ಎರಡು ಹುಣಿಸೆ ಗಿಡ ತಂದು ಅಲ್ಲಿ ನೆಟ್ಟು ನೀರೆರೆದು ಪೋಷಿಸುತ್ತಾಳೆ. ಇದನ್ನು ಊರಿನ ಜನಕ್ಕೆ ತಿಳಿಸುತ್ತಾಳೆ. ಕ್ರಮೇಣ ಗಿಡ, ಮರವಾಗಿ ಉದ್ದವಾಗಿ ಬಲು ಎತ್ತರಕ್ಕೆ ಬೆಳೆಯುತ್ತವೆ. ಉದ್ದಕ್ಕೆ ನಿಂತ ಮರಗಳು ರಾತ್ರಿ ಗಾಳಿಗೆ ಕಿರ್ ಎಂದು ಶಬ್ದ ಮಾಡಿದಾಗ, ಅಲ್ಲೇ ಹೂತಿದ್ದ ಮೈತ್ರೇಯಿ ಮತ್ತು ಸೈನಿಕರೇ ದೆವ್ವಗಳಾಗಿ ರಾತ್ರಿ ಹೊತ್ತು ಶಬ್ದ ಮಾಡುತ್ತಿದ್ದಾರೆ ಎಂದು ಮಸರದ ಜನ ಭಯಪಟುಕೊಳ್ಳುತ್ತಾರೆ. ಅದೇ ಭಯ ತಲ ತಲಾಂತರವಾಗಿ ಹರಿದುಬರುತ್ತದೆ. ಇದೆಲ್ಲ ಕಟ್ಟು ಕತೆ ದೆವ್ವ ಭೂತ ಎಲ್ಲಾ ಸುಳ್ಳು ಎಂದು ಕೆಲವು ಓದಿದ ಹುಡುಗರು ಅಂದುಕೊಂಡರೂ , ಭಯ ಅವರ ರಕ್ತದಲ್ಲಿ ಬೆರೆತು ಹೋಗಿರುವುದರಿಂದ ಬಾರು ಹುಣಿಸೇಮರಗಳ ಹತ್ತಿರ ಸುಳಿಯುವುದಿಲ್ಲ.

ಒಂದು ಸಲ, ಐಸ್ಕ್ಯಾಂಡಿ ಕೊಳ್ಳಲು ದುಡ್ಡಿಲ್ಲ ಎಂದು, ಬಾರು ಹುಣಿಸೇ ಮರಗಳ ಕೆಳಗೆ ಬಿದ್ದಿದ್ದ ಹುಣಿಸೆ ಆಯ್ದು, ಮನೆಯದೇ ಎಂದು ಸುಳ್ಳುಹೇಳಿ, ಐಸ್ಕ್ಯಾಂಡಿ ಕೊಂಡು ತಿಂದಿದ್ದ ಬಾವಿ ಮನೆ ರಮೇಶ. ಅದನ್ನು ನೋಡಿದ್ದ ಕೇಶವ, ರಮೇಶನ ಮನೆಯವರಿಗೆ ಹೇಳಿದ್ದ. ರಮೇಶನ ಮನೆಯವರು ರಮೇಶನಿಗೆ ಬಯ್ದು, ಹುಣಿಸೇಮರಗಲ್ಲಿರುವ ದೆವ್ವಗಳು ಕಾಟಕೊಡುತ್ತವೆ ಎಂದು, ಊರಿನ ರಾಮಾಚಾರಿ ಹತ್ತಿರ ತಾಯಿತ ಕಟ್ಟಿಸಿದ್ದರು. ರಮೇಶನಿಗೆ ರಾತ್ರಿಯಲ್ಲಾ ಚಳಿ ಜ್ವರ ಬಂದಿತ್ತು. ಬೆಳಿಗ್ಗೆ ವಾಂತಿ, ಬೇಧಿ ಶುರುವಾಗಿ, ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಬೇಕಾಯಿತು. ಗುಣವಾಗಿ ಬಂದಮೇಲೂ ಅಲ್ಲಿ ದೆವ್ವ ಕಂಡೆ, ಇಲ್ಲಿ ಮರ ಕಂಡೆ ಎಂದು ಆಗಾಗ ಕನವರಿಸುತ್ತಿರುತ್ತಾನೆ.

ಇಂತಹ ಸಂದರ್ಭದಲ್ಲಿ, ಬೇರೆ ಊರಿನಿಂದ ಬಂದು ಮಸರದಲ್ಲಿ ಒಂದು ಸಣ್ಣ ಹೋಟೆಲ್ ಶುರುಮಾಡಿದ ಶಂಕರಪ್ಪನ ಕಣ್ಣು ಬಾರು ಹುಣಿಸೇಮರದ ಕಾಯಿಯ ಮೇಲೆ ಬಿತ್ತು. ಎರಡು ಮರಗಳೂ ಹುಣಿಸೆ ಕಾಯಿ ತುಂಬಿ ತುಳುಕುತ್ತಿದ್ದವು. ಅಷ್ಟೂ ಹುಣಿಸೆಯನ್ನು ಕೀಲಿಸಿ ಮಾರಿದರೆ ಒಳ್ಳೆ ಹಣ ಸಿಗುತ್ತದೆ ಎಂದು ಲೆಕ್ಕ ಹಾಕಿದ. ಅದಲ್ಲದೆ ಕೆಳಗೆ ಬಿದ್ದಿದ್ದ ಎರಡು ಹುಣಿಸೇಹಣ್ಣು ತಂದು ಚೀಪಿ ನೋಡಿದ್ದ, ಬಹಳ ರುಚಿಕರವಾಗಿತ್ತು. ಇದನ್ನು ಪಟ್ಟಣಕ್ಕೆ ಕೊಂಡು ಮಾರಿದರೆ ಒಳ್ಳೆಯ ಬೆಲೆ ಬರುವುದು ಖಚಿತ ಎಂದು ಅರ್ಥಮಾಡಿಕೊಂಡ. ಆದರೆ ಹುಣಿಸೆ ಕೀಳಲು ಊರಲ್ಲಿ ಯಾರೂ ಸಿಗುವುದಿಲ್ಲ ಎಂದು ಗೊತ್ತಿತ್ತು. ಆದ್ದರಿಂದ ತನ್ನ ಊರಿನಿಂದ ನಂಜ ಎಂಬುವನನ್ನು ಕರೆಸಿದ. ಊರಲ್ಲಿ ಎಲ್ಲರೂ ಹೇಳಿದರು. ಕಾಯಿ ಕೀಳುವುದು ಬೇಡ ಎಂದು. ಕೆಲವರು ಜಗಳಕ್ಕೆ ಬಂದರು. ಜಗಳಕ್ಕೆ ಬಂದವರನ್ನು ತನ್ನ ಹೋಟೆಲಿನ ರುಚಿ ರುಚಿ ತಿಂಡಿಗಳ ರುಚಿ ತೋರಿಸಿ, ಸ್ವಲ್ಪ ಹಣ ತಳ್ಳಿ ತನ್ನ ಕಡೆ ಮಾಡಿಕೊಂಡ.

ಒಂದು ದಿನ ಎಲ್ಲರೂ ನೋಡುತ್ತಿರುವಂತೆಯೇ ನಂಜ ಹೀರೋನಂತೆ ಮರ ಹತ್ತಿ, ದೋಟಿಯಿಂದ ಕಾಯಿ ಬೀಳಿಸಲಾರಂಭಿಸಿದ. ಕಾಯಿ ಬೀಳಿಸಲು ಪ್ರಾರಂಭ ಮಾಡಿ ಅರ್ಧಗಂಟೆ ಆದಮೇಲೆ ಇದ್ದಕ್ಕಿಂದ್ದಂತೆ ಜಾರಿ ಕೆಳಗೆ ದೊಪ್ಪನೆ ಬಿದ್ದ. ಎಲ್ಲರೂ ಓಡಿಕೊಂಡು ಬಂದರು. ಅಷ್ಟರಲ್ಲಿ ನಂಜನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಬೇಡ ಬೇಡ ಎಂದರೂ ನೀನು ಕಾಯಿ ಕೀಳಿಸಲು ಹೋಗಬಾರದಿತ್ತು ಎಂದು ಜನ ಶಂಕರಪ್ಪನನ್ನು ತರಾಟೆಗೆ ತೆಗೆದುಕೊಂಡರು.

ಶಂಕರಪ್ಪ ಪಶ್ಚಾತ್ತಾಪ ಪಟ್ಟಿಕೊಂಡು, ಜನರ ಮರುಕ ಹುಟ್ಟಿಸಿಕೊಳ್ಳಲು ಗೊಳೋ ಎಂದು ಅಳತೊಡಗಿದ. ಪೋಲಿಸಿಗೆ ತಿಳಿಸಬೇಡಿ ಎಂದು ಪರಿ ಪರಿಯಾಗಿ ಊರಿನ ಜನರನ್ನು ಕೇಳಿಕೊಂಡ. ಜನ ಮರುಕ ತೋರಿ ಸುಮ್ಮನಾದರು. ಒಂದು ವಾರದಲ್ಲಿ, ಶಂಕರಪ್ಪ ಮಸರವನ್ನು ಬಿಟ್ಟು ತಾನು ಬಂದ ಊರಿಗೆ ಹೊರಟುಹೋದ.

ನಂಜನ ಸಾವನ್ನು ಕಂಡ ಮಸರದ ಜನಕ್ಕೆ ಬಾರು ಹುಣಿಸೆಮರದಲ್ಲಿ ದೆವ್ವಗಳಿವೆ ಎಂದು ಖಚಿತವಾಗಿ ಹೋಯಿತು. ಊರಿನ ಮುಖಂಡರು ಸೇರಿ ಈ ಹುಣಿಸೇಮರಗಳ ತಂಟೆಗೆ ಹೋಗಬಾರದು ಎಂದು ಊರಿನ ಜನರಿಗೆ ಎಚ್ಚರಿಕೆ ಕೊಟ್ಟರು.

ಹೀಗೆ ದಿನ ಸಾಗುತ್ತಿದ್ದಾಗ, ಸ್ಕೂಲಿನ ಹತ್ತಿರವಿದ್ದ ಅಂಗನವಾಡಿ ಕಟ್ಟಡ ಒಂದು ದಿನ ಗೋಡೆ ಬಿರುಕುಬಿಟ್ಟುಕೊಂಡಿತು. ಅಂಗನವಾಡಿ ಟೀಚರ್ ಶಾರದಮ್ಮ ಊರಿನ ಗ್ರಾಮ ಪಂಚಾಯಿತಿ ಮುಖಂಡ ಸುಬ್ಬಯ್ಯನನ್ನು ಶಾಲೆಯ ಹತ್ತಿರ ಕರೆಸಿ ಶಾಲೆಯ ಸ್ಥಿತಿಯನ್ನು ತೋರಿಸಿ ಮಕ್ಕಳನ್ನು ಇಲ್ಲಿ ಇರಿಸುವುದು ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಬೇರೆ ವ್ಯವಸ್ಥೆ ಮಾಡುವುದಕ್ಕೆ ಕೇಳಿಕೊಂಡರು. ಸುಬ್ಬಯ್ಯ "ಸದ್ಯಕ್ಕೆ ಊರಿನ ಸಮುದಾಯ ಭವನದಲ್ಲಿ ಅಂಗನವಾಡಿ ನಡೆಸಿ, ಬೇರೆಕಡೆ ಕಟ್ಟಡ ಕಟ್ಟೋಣ ಎಂದರು. ಸಮುದಾಯಭವನದಲ್ಲಿ ಅಂಗನವಾಡಿ ನಡೆಯುತ್ತಿದ್ದಾಗ ಗ್ರಾಮ ಪಂಚಾಯಿತಿ ಸದಸ್ಯರು ಕಟ್ಟಡಕ್ಕಾಗಿ ಜಾಗ ಹುಡುಕತೊಡಗಿದರು. ಸರ್ಕಾರಿ ಜಾಗ ಸಿಕ್ಕಿದ್ದು ಸ್ವಲ್ಪ ಬಾರು ಹುಣಿಸೇಮರಗಳ ಹತ್ತಿರ. ಅಲ್ಲಿ ಕಟ್ಟಡ ಕಟ್ಟಲು ಜನರಿಗೆ ಇಷ್ಟವಾಗಲಿಲ್ಲ. ಸರಿ ಎಂದು ಸ್ವಲ್ಪ ದೂರದಲ್ಲಿ ಕಟ್ಟಡ ಕಟ್ಟಲು ಪ್ರಾರಂಬಿಸಿ ಆರು ತಿಂಗಳಲ್ಲಿ ಮುಗಿಸಿದರು. ಶಾರದಮ್ಮನಿಗೆ ಹೊಸ ಶಾಲೆಯ ಕಟ್ಟಡ ನೋಡಿ ಖುಷಿಯಾಯಿತು. ಮೊತ್ತೊಂದು ವಾರದಲ್ಲಿ ಅಂಗನವಾಡಿ ಹೊಸ ಕಟ್ಟಡದಲ್ಲಿ ಪ್ರಾರಂಭವಾಯಿತು.

ಹೊಸ ಕಟ್ಟದಲ್ಲಿ ಶಾಲೆ ಪ್ರಾರಂಭಗೊಂಡ ಹುಮ್ಮಸ್ಸಿನಲ್ಲಿದ್ದ ಶಾರದಮ್ಮನಿಗೆ ದಿನಗಳು ಸರಿದಿದ್ದು ತಿಳಿಯಲಿಲ್ಲ. ಒಂದು ದಿನ ಮಕ್ಕಳಿಗೆ ಹಾಡನ್ನು ಹೇಳಿಕೊಡುತ್ತಾ ಕೋಣೆಯ ಮದ್ಯದಲ್ಲಿದ್ದ ಕಿಟಿಕಿಯಿಂದ ನೋಡಿದರು. ನೋಡಿ ಬೆಚ್ಚಿ ಬಿದ್ದರು. ಆ ಕಿಟಕಿಯ ಎದುರಿಗೆ ನೇರವಾಗಿ ಬಾರು ಹುಣಿಸೇಮರಗಳು ಕಾಣುತ್ತಿದ್ದವು. ಅಷ್ಟು ದೂರದಲ್ಲಿದ್ದರೂ ಮರಗಳು ಹತ್ತಿರ ಇರುವಂತೆ ಭಾಸವಾಯಿತು. ಏನೋ ತಿಳಿಯದ ಭಯ ಆವರಿಸಿತು. ಅಂದಿನಿಂದ ಆ ಕಿಟಕಿ ತೆರೆಯಲಿಲ್ಲ, ಆದರೂ ಕಿಟಕಿಯ ಹಿಂದೆ ಬಾರು ಹುಣಿಸೇಮರಗಳಿವೆ ಎಂಬ ಭಾವನೆಯಿಂದ ಸ್ವಲ್ಪ ಆಳುಕಾಗುತ್ತಿತ್ತು. ಒಂದು ದಿನ ಅಂಗನವಾಡಿಗೆ ಬಂದಾಗ ಕಿಟಿಕಿ ತೆರೆದುಕೊಂಡಿತ್ತು. ಸಹಾಯಕಿ ರಂಗಮ್ಮನನ್ನು ಕೇಳಿದಾಗ ನಾನು ತೆರೆದಿಲ್ಲ ಎಂದಳು. ಶಾರದಮ್ಮ ಕಿಟಿಕಿ ಮುಚ್ಚಿ ಎಂದಿನಂತೆ ಕೆಲಸದಲ್ಲಿ ತೊಡಗಿದಳು. ಮರುದಿನ ಬಂದಾಗ ಮತ್ತೆ ಕಿಟಕಿ ತೆರೆದಿತ್ತು. ಹೀಗೆ ದಿನಾ ಶಾರದಮ್ಮ ಅಂಗನವಾಡಿಯಿಂದ ಹೊರಟಾಗ ಕಿಟಕಿ ಮುಚ್ಚುವುದು, ಬೆಳಿಗ್ಗೆ ಬಂದಾಗ ಕಿಟಕಿ ತೆರೆದುಕೊಂಡಿರುವುದು ಮುಂದುವರೆಯಿತು. ಶಾರದಮ್ಮನಿಗೆ ಭಯವಾಗಲು ಶುರುವಾಯಿತು. ಆದರೆ ಯಾರಲ್ಲೂ ಹೇಳಲಿಲ್ಲ, ಹೇಳಿದರೆ ಅಂಗನವಾಡಿ ನಡೆಸಲು ಬೇರೆ ಕಟ್ಟಡವೂ ಇರಲಿಲ್ಲ, ಹಾಗೆಯೇ ಮಕ್ಕಳ ತಂದೆ-ತಾಯಿಗೆ ತಿಳಿದರೆ ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳಿಸುವುದೂ ಇಲ್ಲ, ಹಾಗೇನಾದರೂ ಆದರೆ ತನ್ನ ಕೆಲಸಕ್ಕೆ ಕಂಟಕವಾಗುತ್ತದೆ ಎಂದುಕೊಂಡು ಸುಮ್ಮನಾದಳು.

ಶಾರದಮ್ಮ ಮಧುಗಿರಿಯಿಂದ ದಿನಾ ಬೆಳಿಗ್ಗೆ ಬಸ್ ಹಿಡಿದು ಮಸರಕ್ಕೆ ಬಂದು, ಸಾಯಂಕಾಲ ಅದೇ ಬಸ್ಸಿನಲ್ಲಿ ಮಧುಗಿರಿಗೆ ಹಿಂತಿರುಗುತ್ತಿದ್ದರು. ಶಾಲೆಯಲ್ಲಿ ಮಕ್ಕಳಿಗೆ ಆಟ-ಪಾಠ ಹೇಳಿಕೊಡುತ್ತಾ, ಊರಿನ ಹೆಂಗಸರಿಗೆ ಸರ್ಕಾರದ ಸವಲತ್ತುಗಳನ್ನು ಸರಿಯಾದ ಸಮಯಕ್ಕೆ ತಲುಪಿಸಿ ಊರಿನಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದರು. ಕೋವಿಡ್ ಸಮಯದಲ್ಲಿ ಊರಿನ ಜನಕ್ಕೆ ಲಸಿಕೆ ತೆಗೆದುಕೊಳ್ಳಲು ಮನ ಒಲಿಸಿ ಜನರ ಪ್ರಾಣ ಉಳಿಸಿದ್ದರು. ಎಷ್ಟೋ ಸಲ ಸರ್ಕಾರದಿಂದ ಮೊಟ್ಟೆ, ಹಾಲು ಬರದಿದ್ದರೆ ತನಗೆ ಬರುವ ಅಲ್ಪ ಸಂಬಳದಿಂದಲೇ ಮೊಟ್ಟೆ, ಹಾಲು ತಂದು ಮಕ್ಕಳಿಗೆ ಕೊಟ್ಟಿದುಂಟು.

ಒಂದು ದಿನ ಸಾಯಂಕಾಲ ಬಸ್ ಬರಲಿಲ್ಲ, ಎಲ್ಲೋ ಕೆಟ್ಟು ನಿಂತಿದೆ ಎಂದು ಯಾರೋ ಹೇಳಿದರು. ಶಾರದಮ್ಮ ಊರಿನಲ್ಲಿ ಉಳಿದು ಕೊಳ್ಳುವಂತೆ ಆಯಿತು. ಬಸ್ ಬರದಿದ್ದ ದಿವಸ ಅಂಗನವಾಡಿಯಲ್ಲೇ ಶಾರದಮ್ಮ ರಾತ್ರಿ ಉಳಿಯುತ್ತಾರೆ. ಹಳೇ ಅಂಗನವಾಡಿ ಮತ್ತು ಸಮುದಾಯ ಭವನದಲ್ಲಿ ಮಲಗಲು ಶಾರದಮ್ಮನಿಗೆ ಭಯವೇನೂ ಇರಲಿಲ್ಲ. ಹೊಸ ಅಂಗನವಾಡಿಯಲ್ಲಿ ಮಲಗಿಕೊಳ್ಳಲು ಸ್ವಲ್ಪ ಭಯ ಆಗಿದ್ದು ನಿಜ. ಆಗಿದ್ದು ಆಗಲಿ ಎಂದು ಮಸರದ ಆಂಜನೇಯ ನೀನೇ ಕಾಪಾಡಬೇಕು ಎಂದು ರಾತ್ರಿ ಅಂಗನವಾಡಿಯಲ್ಲೇ ಉಳಿದುಕೊಡರು. ರಾತ್ರಿ ಹತ್ತರ ಸಮಯಕ್ಕೆ ಜೋರಾಗಿ ಮಿಂಚು ಗುಡುಗಿನಿಂದ ಕೂಡಿದ ಮಳೆ ಮಳೆ ಶುರುವಾಯಿತು. ಗಾಳಿಗೆ ಕಿಟಕಿ, ಬಾಗಿಲುಗಳು ಕಿರ್ ಎಂದವು. ಜೋರಾದ ಗಾಳಿಗೆ ಬಾರು ಹುಣಿಸೇಮರಗಳು ಕಾಣುತ್ತಿದ್ದ ಕಿಟಕಿ ರಪ್ಪೆಂದು ತೆರೆದುಕೊಂಡಿತು. ಶಾರದಮ್ಮ ಭಯದಿಂದ ಕಿಟಕಿ ಮುಚ್ಚಲು ಕಿಟಕಿಯ ಹತ್ತಿರ ಹೋದಾಗ, ಕಣ್ಣಿನ ನೋಟ ಬಾರು ಹುಣಿಸೇಮರಗಳ ಕಡೆ ತಿರುಗಿತು. ಮಿಂಚಿನ ಬೆಳಕಿನಲಿ ಹುಣಿಸೇ ಮರಗಳು ಮೋಡಕ್ಕೆ ತಾಗಿದಂತೆ ಉದ್ದಕ್ಕೆಕಾಣಿಸಿದವು, ಗಾಳಿಗೆ ತೂರಾಡುತ್ತಿದ್ದವು, ಇದ್ದಕಿದ್ದಂತೆ ಸಿಡಿಲು ಹೊಡೆಯಿತು. ಬಗ್ ಎಂದು ಹುಣಿಸೇಮರಗಳಿಗೆ ಬೆಂಕಿ ಹತ್ತಿ ಜೋಡಿದೊಂದುಗಳಂತೆ ಉರಿಯ ತೊಡಗಿದವು. ಬೆಂಕಿ ದೊಡ್ಡದಾಗಿ ವ್ಯಾಪಿಸಿಕೊಂಡಂತಾಗಿ,ಮರಗಳೆರಡೂ ಉರಿದು ಭಸ್ಮವಾದವು. ಶಾರದಮ್ಮನ ಉಸಿರೇ ನಿಂತಂತಾಗಿ ಭಯದಿಂದ, ಮುಖದ ತುಂಬಾ ರಗ್ಗನ್ನು ಹೊದ್ದುಕೊಂಡು ಮಲಗಿ ಬಿಟ್ಟರು. ರಾತ್ರಿಯೆಲ್ಲಾ ನಿದ್ದೆಯಿಲ್ಲ. ಬೆಳಿಗ್ಗೆ ಸಹಾಯಕಿ ರಂಗಮ್ಮ ಬಾಗಿಲು ಬಡಿದಾಗ ಶಾರದಮ್ಮನಿಗೆ ಎಚ್ಚರವಾಯಿತು. ಎದ್ದು ಬಾಗಿಲು ತೆರೆದಾಗ, ಆಗಲೇ ಬಿಸಿಲೇರಿತ್ತು. ಮಳೆಗೆ ಹಳ್ಳಿಯಲ್ಲಾ ತೊಳೆದಂತೆ ಶುಭ್ರವಾಗಿತ್ತು. ಶಾರದಮ್ಮ ಕಿಟಿಕಿಯ ಹತ್ತಿರ ಬಂದು ನೋಡಿದಾಗ ಜೋಡಿ ಹುಣಿಸೇಮರಗಳು ಉದ್ದಕ್ಕೆ ನಿಂತಿದ್ದವು.

ರಂಗಮ್ಮ" ರಾತ್ರಿ ಬಾರು ಹುಣಿಸೇಮರಗಳ ಹತ್ತಿರ ಸಿಡಿಲು ಬಡೀತಂತೆ, ಆದರೆ ಅವುಗಳಿಗೆ ಏನು ಆಗ್ಲಿಲ್ಲ, ಪಕ್ಕದಲ್ಲಿ ಇದ್ದ ಬೇರೆ ಮರಗಳು ಸುಟ್ಟುಹೋಗಿವೆ" ಎಂದಳು. "ಆ ದೆವ್ವಗಳೇ ಕಾಪಾಡಿರಬೇಕು" ಎಂದು ಬೇರೆ ಸೇರಿಸಿದಳು.

ಶಾರದಮ್ಮ ತಾನು ರಾತ್ರಿ ನೋಡಿದ್ದನ್ನು ಹೇಳಲಿಲ್ಲ.

ದಿನಗಳು ಉರುಳಿದವು. ಸರ್ಕಾರ ಮಸರ ಪಕ್ಕದಿಂದ ಒಂದು ದೊಡ್ಡ ರಸ್ತೆ ಬರುತ್ತದೆ ಎಂದೂ, ಅದು ಮಧುಗಿರಿ-ಹಿಂದೂಪುರಕ್ಕೆ ಬೈಪಾಸ್ ಎಂದೂ, ಕೆಲವರು ಜಮೀನು ರಸ್ತೆಗೆ ಬಿಟ್ಟುಕೊಡಬೇಕೆಂದೂ, ರಸ್ತೆಗಾಗಿ ಬಾರು ಹುಣಿಸೇಮರಗಳನ್ನು ಉರುಳಿಸಬೇಕಾಗುತ್ತದೆ ಎಂದೂ ಹೇಳಿತು. ಇಷ್ಟುದಿನ ಭಯ ಹುಟ್ಟಿಸುತ್ತಿದ್ದ ಮರಗಳು, ಊರಿನಿಂದ ಕಾಣೆಯಾಗುತ್ತವೆ ಎಂದೊಡನೆ ಮಸರದ ಜನಕ್ಕೆ ದುಃಖ ಉಕ್ಕಿಬಂತು. ಏನಾದರೂ ಕಳೆದುಕೊಳ್ಳುವಾಗಲೇ ಅದರ ಬೆಲೆ ಗೊತ್ತಾಗುವುದು ಎನ್ನುವಂತೆ, ಬಾರು ಹುಣಿಸೇಮರಗಳನ್ನು ಕಳೆದುಕೊಳ್ಳಲು ಯಾರಿಗೂ ಇಷ್ಟವಾಗಲಿಲ್ಲ. ಅವು ಮಸರದ ಅಸ್ಮಿತೆ ಅನಿಸಿತು. ಊರನ್ನು ಗುರುತಿಸುವುದೇ ಅವುಗಳಿಂದ, ಬಾರು ಹುಣಿಸೇಮರಗಳಿಲ್ಲದ ಮಸರವನ್ನು ಕಲ್ಪಿಸಿಕೊಳ್ಳಲೂ ಜನರಿಗೆ ಆಗಲಿಲ್ಲ.ಊರಿಗೆ ಊರೇ ಇದು ಆಗಬಾರದು ಎಂದುಕೊಂಡಿತು. ಸರ್ಕಾರದ ವಿರುದ್ಧ ಪ್ರತಿಭಟಿಸಬೇಕು, ಹುಣಿಸೇಮರಗಳನ್ನು ಕಾಪಾಡಿಕೊಳ್ಳಬೇಕು, ಊರಿಗೆ ಊರೇ ಭಯಗೊಂಡಿದ್ದರೂ , ಊರಿನ ಯಾರಿಗೂ ಮರಗಳು ಹಾನಿ ಮಾಡಿರಲಿಲ್ಲ. ಬೇರೆ ಊರಿನ ನಂಜನ ಸಾವು, ಕಾಕತಾಳೀಯ ಆಗಿರಬೇಕು. ದೆವ್ವಗಳಿವೆ ಎನ್ನುವುದು ಒಂದು ನಂಬಿಕೆ ಅಷ್ಟೇ ಅನಿಸಿತು. ಇದ್ದಕಿದ್ದಂತೆ ಹುಣಿಸೇಮರಗಳು ಜನರಿಗೆ ಆತ್ಮೀಯ ಅನಿಸಿತು.

ಮಾನವ ಜನಾಂಗಕ್ಕೆ ಒಂದು ವರ ಏನೆಂದರೆ, ತನ್ನ ಶತ್ರು ಸತ್ತರೂ ಮರುಕ ಉಂಟಾಗುತ್ತದೆ. ಕಣ್ಮರೆಯಾದ ಮನುಷ್ಯ ಮತ್ತೆ ಕಾಣಿಸಲು ಸಾಧ್ಯವೇ ಇಲ್ಲದಿರುವುದರಿಂದ, ಮಾನವತ್ವ ತಿಳಿಹೇಳುತ್ತದೆ. ಇದು ರಾವಣ ಕೊಂದಾಗ ಶ್ರೀರಾಮ ಅವನ ಮೃತ ದೇಹಕ್ಕೆ ಕೊಟ್ಟ ಗೌರವ, ಅವನ ಸಾವಿಗೆ ಕೊಟ್ಟ ಗೌರವ. ಯುದ್ಧದಲ್ಲಿ ಶತ್ರು ಸೈನಿಕನನ್ನು ಸಾಯಿಸಿದರೂ ಶವಕ್ಕೆ ಗೌರವದಿಂದ ದಹನ ಸಂಸ್ಕಾರ ಮಾಡಲಾಗುತ್ತದೆ. ಇದೇ ಮಾನವತ್ವ. ಮಾನವತ್ವ ಸರಿಯಾದ ಸಮಯಕ್ಕೆ ಜಾಗೃತಗೊಳ್ಳುತ್ತದೆ. ದಿನಾ ಜಗಳವಾಡಿಕೊಂಡ ನೆರೆಮನೆಯವರು ಸತ್ತರೆ ದುಃಖವಾಗುತ್ತದೆ. ಮನೆಯಲ್ಲಿ ಅತ್ತೆ-ಸೊಸೆ ಬಡಿದಾಡಿಕೊಂಡರೂ ಸಾಮಾನ್ಯವಾಗಿ ಯಾರೂ ಪರಸ್ಪರರ ಸಾವು ಬಯಸುವುದಿಲ್ಲ. ನಮ್ಮ ಜೊತೆಯಲ್ಲಿ ಸದಾ ಇರುವ ವಸ್ತು ಅದು ನಮಗೆ ಬೇಕಿಲ್ಲದಿದ್ದರೂ ಕಳೆದು ಕೊಳ್ಳಲು ಇಷ್ಟವಾಗುವುದಿಲ್ಲ. ಆದ್ದರಿಂದಲೇ ತಂದೆ ತಾಯಿ ಎಷ್ಟೇ ಕಷ್ಟವಾದರೂ ತಮ್ಮ ಜಮೀನು ಮಾರುವುದಿಲ್ಲ, ತಮ್ಮ ಮಕ್ಕಳಿಗಾಗಿಯೋ, ಮುಂದೆ ನೋಡೋಣ ಎಂದೋ ಹಾಗೆ ಇರಿಸಿಕೊಳ್ಳುತ್ತಾರೆ.

ಮಸರದ ಜನಕ್ಕೆ ಬಾರು ಹುಣಿಸೇಮರಗಳು ಜೀವವಿರುವ, ತಮ್ಮನೊಡನೆ ಇರುವ, ಊರಿನ ಜನರಂತೆ ಕಂಡಿದ್ದು, ಆಶ್ಚರ್ಯ ಪಡುವ ವಿಷಯವೇನೂ ಅಲ್ಲ ಹುಣಿಸೇಮರಗಳು ಊರಿನ ಅಂಗದಂತೆ ಕಂಡಿದ್ದು, ತನ್ನ ಅಂಗವನ್ನು ಊನ ಮಾಡಿಕೊಳ್ಳಲು ಊರು ಅನೈಚಿಕ್ಕವಾಗಿಯೂ ಸಿದ್ಧವಿರಲಿಲ್ಲ.

ಸರ್ಕಾರದ ಜನ ಮರ ಕತ್ತರಿಸಲು ಬಂದಾಗ ಊರಿಗೆ ಊರೇ ಮರಗಳ ಹತ್ತಿರ ಸೇರಿತ್ತು. ಕೆಲಜನ ಮರಗಳ ಸುತ್ತ ವೃತ್ತ ರಚಿಸಿ ಮರಗಳ ಹತ್ತಿರ ಯಾರೂ ಸುಳಿಯದಂತೆ ನೋಡಿಕೊಳುತ್ತಿದ್ದರು. ಬೇವಿನ ಮನೆ ಮುತ್ತಜ್ಜ ಇನ್ನೂ ಒಂದಿ ಹೆಜ್ಜೆ ಮುಂದೆಹೋಗಿ, ಮರವನ್ನು ತಬ್ಬಿಕೊಂಡು ನಿಂತಿದ್ದ. ತಾತ, ಮುತ್ತಾತ ರಿಂದ, ಅಜ್ಜಿ ಮುತ್ತಜ್ಜಿಯರಿಂದ ಬಾರು ಹುಣಸೇಮರಗಳ ಕಥೆ ಕೇಳುತ್ತಾ, ಅವಗಳನ್ನು ದೂರದಿಂದ ನೋಡುತ್ತಾ ಬೆಳೆದಿದ್ದ ಜನಗಳಿಗೆ, ತಮ್ಮ ಊರಿನಿಂದ ಆ ಮರಗಳು ಕಣ್ಮರೆಯಾಗುವುದು ಸಹಿಸಲಸಾದ್ಯ ಸಂಗತಿಯಾಗಿತ್ತು. ಮಕ್ಕಳಂತೋ ದೋರು ಹುಣಿಸೇಕಾಯಿಗಳನ್ನು ಚೀಪುತ್ತಾ ಅದರ ರುಚಿಗೆ ಮಾರುಹೋಗಿ, ಮತ್ತೊಂದು ಮಗುದೊಂದು ಎಂದು ಚೀಪುತ್ತಲೇ ಇದ್ದರು. ಇಷ್ಟುಜನ ಸುಮ್ಮನಿರದಿದ್ದ ಜನ, ಈಗ ಹುಣಸೆಹಣ್ಣನ್ನು ತಿನ್ನಲು ಅಡ್ಡಿಮಾಡಲಿಲ್ಲ. ದೊಡ್ಡವರು ದೋಟಿಯಿಂದ ಉದಿರಿಸಿ ತಿನ್ನತೊಡಗಿದರು. ಇಷ್ಟು ರುಚಿಯಾದ ಹುಣಿಸೆಯನ್ನು ಊರಲ್ಲೇ ಇಟ್ಟುಕೊಂಡು ಗುರುತಿಸಲೂ ಇಲ್ಲ, ಉಪಯೋಗಿಸಲೂ ಇಲ್ಲ ಎಂದು ಎಲ್ಲರೂ ಬೇಸರ ಪಟ್ಟುಕೊಂಡರು.

ಸರ್ಕಾರದ ಜನ ಪರಿ ಪರಿ ಯಾಗಿ ಹೇಳಿದರೂ, ಹುಣಿಸೇಮರಗಳು ಇದ್ದರೆ ರಸ್ತೆಗೆ ದೊಡ್ಡ ಅಡ್ಡಿ ಎಂದರೂ ಜನ ಕೇಳಲಿಲ್ಲ. ನಮ್ಮ ಜಮೀನು ತೆಗೆದುಕೊಳ್ಳಿ ಆದರೆ ಮರಕಡಿಯಲು ಬಿಡುವುದಿಲ್ಲ. ರಸ್ತೆ ಬೇರೆ ಕಡೆ ಮಾಡಿ,ಇಲ್ಲ ಸ್ವಲ್ಪ ತಿರುಚಿ ಹುಣಿಸೇಮರಗಳಿಂದ ಸ್ವಲ್ಪ ದೂರ ತೆಗದುಕೊಂಡಿ ಹೋಗಿ ಎಂದು ಕಿರುಚತೊಡಗಿದರು. ಪಕ್ಕದ ಊರಿನ ಜನಗಳಿಗಂತೂ ಇದೊಂದು ಸೋಜಿಗ ಸಂಗತಿ ಆಯಿತು,ಮರಗಳಿಗೆ ಭಯ ಪಡುತಿದ್ದವರು ಈಗ ಅವುಗಳನ್ನು ಇಷ್ಟ ಪಡುವ ರೀತಿ ನೋಡಿ ಆಶ್ಚರ್ಯವಾಯಿತು. ಸರ್ಕಾರದ ಜನರಿಗೆ ರಸ್ತೆ ಸ್ವಲ್ಪ ತಿರುಚುವ ಸಾಧ್ಯತೆ ಇದ್ದರೂ ಈ ಹಳ್ಳಿ ಜನಕ್ಕೆ ಹೆದರಬೇಕೇ ಎಂದು ಪ್ರತಿಷ್ಠೆಯಾಗಿ ತೆಗೆದುಕೊಂಡರು. ಜನರ ಹೆಚ್ಚಾದ ರೋಷ ಕಂಡು,ಪೋಲೀಸಿನವರೊಡನೆ ಬರುತ್ತವೆ ಎಂದು ಅಧಿಕಾರಿಗಳು ಹಿಂತುರಿಗಿ ಹೋದರು.

ಮಸರದ ಜನ ಆ ರಾತ್ರಿ ಪಂಚಾಯಿತಿ ಸೇರಿದರು. ಈಗ ಹಿಂತಿರುಗಿದ ಸರ್ಕಾರದ ಜನ ಮತ್ತೆ ಅಧಿಕಾರಿಯುತವಾಗಿ ಬಂದರೆ ಏನು ಮಾಡುವುದು. ಪೊಲೀಸರನ್ನು ಕರೆತಂದರೆ, ತಮ್ಮನ್ನು ಜೈಲಿಗೆ ಕರೆದುಕೊಂಡುಹೋದರೆ ಏನು ಗತಿ?. ತಮ್ಮ ಬಾರು ಹುಣಿಸೇಮರಗಳನ್ನು ಉಳಿಸಿಕೊಳ್ಳುವುದು ಹೇಗೆ. ಯಾರಿಗೂ ಏನು ಮಾಡುವುದೋ ಹೊಳೆಯಲಿಲ್ಲ. ಈ ಸಂಭ್ರಮದಲ್ಲಿ ಇನ್ನು ಮೂರುದಿನಕ್ಕೆ ದೀಪಾವಳಿ ಹಬ್ಬ ಎಂಬುದನ್ನೂ ಜನ ಮರೆತುಬಿಟ್ಟರು. ಯಾರ ಮುಖದಲ್ಲಿಯೂ ಸಂಭ್ರಮ ಇರಲಿಲ್ಲ. ಆ ರಾತ್ರಿ ಮಧಿಗಿರಿಯಿಂದ ಊರಿಗೆ ಬಂದ ಕೆಲವರು, ಹಬ್ಬ ಮುಗಿಯುವವರಿಗೂ ರಸ್ತೆ ಕೆಲಸ ನಿಲ್ಲಿಸಲಾಗುತ್ತದೆ ಎಂದರು. ಅಂದರೆ ತಮಗೆ ಏನಾದರು ಮಾಡಲು ಮೂರುದಿನ ಸಮಯವಿದೆ.

ಹಬ್ಬ ಮುಗಿದ ಮರುದಿನ, ಸರ್ಕಾರದ ಅಧಿಕಾರಿಗಳು, ಪೊಲೀಸರ ಜೊತೆ ಮಸರದಲ್ಲಿ ಬಂದು ಇಳಿದರು. ಅಧಿಕಾರಿಗಳು, ಪೊಲೀಸರು ಬಂದರೂ ಮಸರದ ಯಾರೂ ಹಚ್ಚಿಕೊಳ್ಳದೆ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದರು. ಅಧಿಕಾರಿಗಳಿಗೆ ಸೋಜಿಗವಾಯಿತು, ಬಹುಶ ಜನ ಹೆದರಿರಬೇಕು. ಇನ್ನು ತಮ್ಮ ಕೆಲಸ ಸುಗಮವಾಯಿತು ಎಂದುಕೊಂಡು ಬಾರು ಹುಣಸೇಮರಗಳ ಹತ್ತಿರ ಹೊರಟರು. ಹುಣಿಸೇಮರಗಳ ಹತ್ತಿರ ಬಂದು ನೋಡಿದ ಅಧಿಕಾರಿಗಳ, ಪೋಲೀಸಿನವರ, ಕೆಲಸಗಾರರ ಬಾಯಿಂದ ಮಾತೇ ಹೊರಡಲಿಲ್ಲ, ಗರ ಬಡಿದವರಂತೆ ನಿಂತು ಬಿಟ್ಟರು.

ಅಲ್ಲಿ ಹುಣಿಸೇಮರಗಳ ಸುತ್ತಾ ಆಯತಾಕಾರದಲ್ಲಿ ದೊಟ್ಟ ಕಟ್ಟೆ ಕಟ್ಟಲಾಗಿತ್ತು. ಕಟ್ಟೆಯ ಮದ್ಯದಲ್ಲಿ ದೊಡ್ಡ ದೊಡ್ಡ ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿತ್ತು . ಕಟ್ಟಡದ ಒಂದು ಕೊನೆಯಲ್ಲಿ ರಾಮ ಪರಿವಾರದ ವಿಗ್ರಹಗಳೂ, ಇನ್ನೊಂದು ಕೊನೆಯಲ್ಲಿ ಶಿವ ಪಾರ್ವತಿ ವಿಗ್ರಹಗಳೂ ಪ್ರತಿಷ್ಠಾಪನೆ ಗೊಂಡಿದ್ದವು. ಕಟ್ಟೆಯ ಹಿಂದೆ ನವಗ್ರಹಗಳ ಮೂರ್ತಿಗಳು ಪ್ರತಿಷ್ಠಾಪನೆ ಗೊಂಡಿದ್ದವು. ಎಲ್ಲಾ ದೇವರಿಗೆ ಅರಿಸಿನ, ಕುಂಕುಮ , ಹೂವು ಇರಿಸಲಾಗಿತ್ತು. ಅಲ್ಲಿಯೇ ಪೂಜಾರಿಯೊಬ್ಬರು ಮಂತ್ರ ಹೇಳುತ್ತಾ ದೇವರ ಪೂಜೆ ಮಾಡುತ್ತಿದ್ದರೆ, ಕೆಲ ಜನ ಭಕ್ತಿಯಿಂದ ದೇವರಿಗೆ ನಮಸ್ಕರಿಸಿ ನಿಂತಿದ್ದರು. ಅಲ್ಲಿಯೇ ಈಡುಗಾಯಿ ಹೊಡೆದ ತೆಂಗಿನ ಕಾಯಿಯ ಚಿಪ್ಪುಗಳು ಬಿದ್ದಿದ್ದವು. ಅಲ್ಲಿ ಸುತ್ತಲೂ ಸ್ವಚ್ಛ ಮಾಡಿ, ತಳಿರುತೋರಣ ಕಟ್ಟಲಾಗಿತ್ತು. ಅಲ್ಲಿಯೇ ಇದ್ದ ಬೋರ್ಡಿನಲ್ಲಿ ಹೀಗೆ ಬರೆಯಲಾಗಿತ್ತು. "ಮುಂದಿನ ಸೋಮವಾರ ಇಲ್ಲಿ ಒಂದು ವಾರದ ಜಾತ್ರೆ ಶುರುವಾಗುತ್ತದೆ, ಭಕ್ತಾದಿಗಳು ಸಾವಿರ ಸಂಖ್ಯೆಯಲ್ಲಿ ಬಂದು ದೇವರ ಕಾರ್ಯದಲ್ಲಿ ಬಾಗಿಯಾಗಬೇಕು" ಎಂದು.

 

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.

ಕೃತಿಗಳು:  ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,

More About Author