Poem

ಬದಲಾದದ್ದೇನು..?

ಬುದ್ಧ, ಬಸವ, ಭೀಮರ
ಕನಸುಗಳು ನಾವು
ಶತಮಾನಗಳಿಂದಲೂ
ನೊಂದ ಕುಸುಮಗಳು

ಅಕ್ಕರೆಯಲಿ ಅಕ್ಷರದ ತುತ್ತನಿತ್ತು
ಆರ್ಥಿಕ ಸಬಲೀಕರಣದ
ಸ್ವಾಭಿಮಾನದ ಹಾದಿಯಲಿ
ನಿತ್ಯ ಜೊತೆ ನಿಂತರು

ಇಷ್ಟಾದರೂ ಬದಲಾದದ್ದೇನು?
ಇಷ್ಟಾದರೂ ಬದಲಾದದ್ದೇನು? 
ಮನುವಿನ ಸಂದೇಶಗಳಂಗಿಯ
ಬಣ್ಣವಿರಬೇಕು;ಛದ್ಮವೇಶಗಳ
ಬಿಂಬವಿರಬೇಕು! 

ಬದುಕು ನಮ್ಮದು
ರೀತಿ ನಿಮ್ಮದು
ತಪ್ಪಿ ನಡೆದರೆ ತಲೆದಂಡ
ವಿಧಿಯ ಹಣೆಬರಹದಡಿ
ಕೊಳೆಯುತ್ತಿರುವ ಬದುಕ

ಪ್ರಶ್ನಿಸಿದ, ಅದೆಷ್ಟು ಹೆಣ್ಣುಗಳ
ಎದೆ ಸೀಳಿದಿಯೋ ಈ ನೆಲ
ಗುಲಾಬಿಯ ಕೆಂಪು 
ರಂಗೇರುತ್ತಿದೆ  

ಕಿಚ್ಚು ಹತ್ತಿ ಉರಿಯುತ್ತಿದ್ದರೂ 
ಹೆಪ್ಪುಗಟ್ಟಿದ ಸೂರ್ಯನೊಡಲು
ಕಪ್ಪಿಟ್ಟ ಚಂದ್ರ, ತಲ್ಲಣಗಳ ಜೊತೆ 
ಕುದಿವ ಜ್ವಾಲಾಮುಖಿ

ನಮ್ಮ ಬದುಕಿನ ಸಖಿ
ಸಮಾನತೆಯ ಸೋಗಿನಲ್ಲಿ
ಅಸಮತೆಯ ಬ್ರಹ್ಮರಾಕ್ಷಸ
ಧುತ್ತನೆದ್ದು ಬರುತಿರಲು
ಬೆಚ್ಚಿಬೀಳುತ್ತೇವೆ

ಬಯಲ ನಾಟಕದಂತೆ
ಬೀದಿಗಿಳಿಯದೆ ವಿಧಿಯಿಲ್ಲ
ಬಯಲಲ್ಲಿ ಬಯಲಾದ
ವಿರಾಗಿಣಿಯಂತೆ

ಅಕ್ಕನಾಗಿದ್ದಿದ್ದರೆ ನಾವೆಲ್ಲ??? 
ಬದುಕು ಜಡವಾದೀತು
ಈ ಜಗದ ಆಟ ಸೋತು
ತಣ್ಣಗೆ ಕೈ ಚೆಲ್ಲೀತು!. 

ಆಡಿಯೋ
ವಿಡಿಯೋ

ಲತಾ ರಮೇಶ ವಾಲಿ

ಲತಾ ರಮೇಶ ವಾಲಿ ಅವರು ಮೂಲತಃ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಗುಂಡೂರಿನವರು. ತಂದೆ- ಮಹದೇವಗೌಡರು ತಾಯಿ- ಪುಷ್ಪಾ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಸವಣೂರಿನ ಬಿ.ಇ.ಎಸ್. ಗರ್ಲ್ಸ್ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ ಅವರು ಸವಣೂರಿನ ಸರಕಾರಿ ಪದವಿ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಸಾಹಿತ್ಯದತ್ತ ಹೆಚ್ಚಿನ ಒಲವಿರುವ ಲತಾ ಅವರು 2017ರಲ್ಲಿ ‘ಪರಿಮಳ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಹಲವು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವ ಅವರು ಕವಿತೆಯನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮನ್ನಾಗಿಸಿಕೊಂಡಿದ್ದಾರೆ.

More About Author