Poem

ಬದುಕು ಭೂಮಿಗೆ ಬಂತು

 

ಕತ್ತಲಿಗೆ ಮೈ ಹಾಸಿ ಉದ್ದುದ್ದನೆ ಮಲಗಿದ
ಖಾಲಿ ರಸ್ತೆ ಅದರ ಆ ತುದಿಯಲ್ಲಿನ
ಒಂದು ತಿರುವು ಮತ್ತು ಈ ತುದಿಯಲ್ಲಿ
ಬರೀ ನಾನು..!

ಇದ್ದ ಒಂದೇ ಒಂದು ದಾರಿ ದೀಪದ ಕಂಬದ
ಮೇಲಿನ ಹಳೆಯ ದೀಪ ಈ ದಿನವೇ
ಆರಿದೆ. ರಸ್ತೆ ತುಂಬಿದ ಕತ್ತಲಲ್ಲಿ
ಹುಟ್ಟಿನಿಂದಲೇ ನನ್ನ ಬೆನ್ನಿನ ಬೇತಾಳವಾದ
ನನ್ನ ನೆರಳೂ ಸಹಾ ಈಗ ನನ್ನ ಹಂಗಿನಲ್ಲಿಲ್ಲ

ಈ ರಸ್ತೆಯ ಬೀದಿನಾಯಿಗಳೂ ಕೂಡಾ ಇಲ್ಲಿಲ್ಲ ಈಗ
ಪಕ್ಕದ ರಸ್ತೆಯಲ್ಲಿ ಮೊನ್ನೆ ತಾನೇ ಸತ್ತ ಬುದ್ದಿಜೀವಿಯ
ತಿಥಿಯೂಟ. ಮಾಂಸ ಕಳೆದ ಕುರಿ
ಬರೀ ಮೂಳೆ ನಾಯಿಯ ಬಾಯಿಯಲ್ಲಿ

ಮಣ್ಣೆತ್ತಿನ ಅಮವಾಸ್ಯೆಯ ವೈಭವದ ರಾತ್ರಿ ಮೆರವಣಿಗೆ
ಪಂಜಿನ ಬೆಳಕಿನಲ್ಲಿ ಮರಗಳೆಲ್ಲಾ ದೇವರ
ಹಾಗೆ ಬೆಳಗಿ ಮತ್ತೆ ಧುತ್ತನೆ ನಿಲ್ಲುತ್ತವೆ ದೆವ್ವದಂತೆ
ಕರ್ರಗಿನ ಕತ್ತಲಿನ ತೆಕ್ಕೆಯಲ್ಲಿ ಒಡಲಿನ ನಡುಕವನ್ನು
ಮಣ್ಣಿನಾಳದ ಬೇರಿಗಿಳಿಸಿ ಮರ ಕೊಂಬೆ ತುಂಬಾ
ಹೊದ್ದ ಬದುಕಿನ ಭಂಡ ಧೈರ್ಯ.

ಕರಾಳ ರಾತ್ರಿಯ ನೀರವತೆಯನ್ನು ಭೀಕರತೆಯ ತೊಟ್ಟಿಲಲ್ಲಿ
ತೂಗುವ ಜೀರುಂಡೆಯ ಹಾಡಿನ ಜೋಗುಳಕ್ಕೆ
ಥಟ್.. ಎಂಬ ತಾಳದ ಸದ್ದು.. ಅಗೋ..
ಗಿಡುಗದ ರಾತ್ರಿಯೂಟಕ್ಕೆ ಬಂಧಿಯಾಗಿದ್ದ
ಕೋಳಿಮರಿ ನೆಲಕ್ಕೆ ಬಿತ್ತು..
ಅದೂ ಜೀವಂತವಾಗಿ..!

ಕಲೆ : ಮಹಾಂತೇಶ ದೊಡ್ಡಮನಿ

ಮಂಜುನಾಥ ನಾಯ್ಕ್

ಲೇಖಕ ಮಂಜುನಾಥ ನಾಯ್ಕ್ ಅವರು ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನ ಪಡುವರಿಯವರು. ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ. ಪ್ರವೃತ್ತಿಯಿಂದ ಸಾಹಿತ್ಯಪ್ರೇಮಿ. ಇವರ 25 ಕಥೆಗಳು ನಾಡಿನ ವಿವಿಧ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. 'ಮೌನದೊಡಲಿನ ಮಾತು' ಮತ್ತು 'ಅನ್ನ ಕದ್ದವನು' ಕಥಾಸಂಕಲನಗಳು.

More About Author