Poem

ಬಾರಾ ಕಮಾನು

 

ನಿನ್ನ ಭಗ್ನಾವಶೇಷಗಳ ನಡುವೆಯೇ
ನನ್ನ ಸಂಜೆಗಳು ರಂಗೇರುತ್ತಿದ್ದವು
ಹೇ ದೊರೆಯ ಕನಸಿನ ಸಿರಿಯೇ
ನೀನೊಂದು ಅಪೂರ್ಣ ಕವಿತೆಯಂತೆ
ತುಂತುರು ಹನಿಸಿದ ಮಳೆಯಂತೆ
ವಿರಹಿ ಹಕ್ಕಿಯ ಹಾಡಿನ ದನಿಯಂತೆ
ಛೋಟಾ ಖಯಾಲ್ ನಲ್ಲಿಯೇ
ಸಂಪನ್ನವಾದ ರಾಗದಂತೆ

ನಿನ್ನ ಹನ್ನೆರಡು ಕಮಾನುಗಳ ಒಳಗಿಂದ
ಸುರಿಯುವ ಸಂಜೆ ಹೊನ್ನ ಬಿಸಿಲು
ಎದೆಯ ತಂಪಾಗಿಸಿ
ಬೆಳದಿಂಗಳಿಗೆ ನನ್ನ ಸಜ್ಜು ಮಾಡುತ್ತಿತ್ತು
ಇಷ್ಟೆಲ್ಲ ಕಮಾನುಗಳ ನಡುವೆ
ದೊರೆ -
ನಿನ್ನಾಸೆ ಹೂತು ಹೋಗಿದ್ದ ನಾ ಬಲ್ಲೆ
ನಿನ್ನ ಹುಟ್ಟಿಸಿದಾತನೆ ನಿನ್ನ ಕೊನೆಗಾಣಿಸಿದ್ದು
ಈಗ ಇತಿಹಾಸ

"ಗೋಲ್ ಗುಂಬಜ್ ಕ್ಕೊಂದು ಪ್ರತಿಸ್ಪರ್ಧಿ!"
ಸಾಕಾಯಿತೆ ಇಷ್ಟು ಸಣ್ಣ ಕಾರಣ
ಮತ್ಸರದ ಬೆಂಕಿಯಲ್ಲಿ
ಬೂದಿಯಾಯಿತು ಎಲ್ಲ
ನಿನ್ನ ರಾಣಿಯರ ಕನಸಲ್ಲಿ ದೊರೆ
ಹನ್ನೆರಡು ಕಂಬಗಳೆದ್ದರೂ
ಕೇಳುತ್ತಲೆ ಇತ್ತು
ಗೋಡೆಗಳ ಆರ್ತನಾದ
ಒಂದೊಂದು ಕಲ್ಲಿನ ಗೋಳು
ಕೇಳದಾಯಿತೆ ನಿನ್ನಪ್ಪನಿಗೆ
ಪುತ್ರ ವ್ಯಾಮೋಹದಲ್ಲಿ
ಸಿಂಹಾಸನಗಳು ಉರುಳಿರುವ ಕತೆ ಗೊತ್ತು
ಆದರಿಲ್ಲಿ ನಡೆದದ್ದು
ದೊರೆ-
ಎಂಥ ವಿಪರ್ಯಾಸ

ಅರೆ ಬಿರಿದ ಮೊಗ್ಗಿನಂತೆ ನಿಂತಿರುವ
ಹೇ ಬಾರಾ ಕಮಾನು
ನಿನ್ನ ಚದುರಿದ ಚಿತ್ರದಲ್ಲೆ
ನೀನಿಂದು ಅಪೂರ್ವ
ನಿನಗೆ ನೀನೇ ಸಾಟಿ!

ವೀಣಾ ನಿರಂಜನ

ಕವಿ ಮನಸ್ಸಿನ ವೀಣಾ ನಿರಂಜನ ಅವರು ಮೂಲತಃ ಉತ್ತರ ಕರ್ನಾಟಕದವರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಇವರ ಆಸಕ್ತಿ. ಒಮ್ಮೆಮ್ಮೆ ಲೇಖನ ಬರವಣಿಗೆಗೂ ಎಡತಾಕುವ ಇವರಿಗೆ ಕಾವ್ಯದತ್ತ ಹೆಚ್ಚು ಒಲವು.

More About Author