Poem

ಬೆತ್ತಲಾದ ಕತ್ತಲು

ಬೆಳದಿಂಗಳ ಬಯಕೆಗೆ ಬೆತ್ತಲಾದ
ಕತ್ತಲು
ಸಾವಿನ ಮನೆಯ ಸುತ್ತಲೂ
ಮೌನವಾಗಿ ಸಾಸಿವೆ ಹುಡುಕುತ್ತಿದೆ
ನಸುಕಿನ ಇಬ್ಬನಿಯಲ್ಲಿ ಕನಸು
ನನಸಿಗೆ ನಯವಾಗಿ ನೇಣು
ಬಿಗಿಯುತ್ತಿತ್ತು,
ತಾರೆಗಳ ಮೋಹದಲ್ಲಿ ಹಸಿ ಹಸಿವು
ಮಸಿ ಬಳಿದು ಹುಸಿಯಾಗಿತ್ತು.

ಮಧು ತುಂಬಿದ ಮಲ್ಲಿಗೆ
ಮೆಲ್ಲಗೆ ಉಸಿರುಗಟ್ಟಿಸುತ್ತಿದೆ
ತುಂಬು ಚಂದ್ರನ ಅಂಗಳದಲ್ಲೂ
ಈಗ
ತುಂಬೆ ಹೂವೂ ಇಲ್ಲ,
ಸೇಡು ತುಂಬಿದ
ಸೂರ್ಯನಲ್ಲಾದರೂ
ಒಂದು ಪಾರಿಜಾತ ಅರಳಲಿ.

ಉಸಿರಿಗೆ ಉಸಿರಾಗುವ
ಜೀವಪರತೆಗಳು
ಪತರಗುಟ್ಟಿ ಪಾತರಗಿತ್ತಿಯ
ಹೆಗಲೇರಿವೆ,
ಹೆಪ್ಪುಗಟ್ಟಿ ತುಂಬಿಕೊಂಡಿದ
ಮೇಘದಲ್ಲಿ
ತುಲಿಕೆರಬೇಕಾಗಿರುವರು.

ತುಂಬಿಕೊಳ್ಳಬೇಕಾಗಿರುವುದು
ಎಳ್ಳಷ್ಟೂ ಕಾಣಲಿಲ್ಲ
ತುಂಬಿಕೊಂಡಿವೆ ಎಲ್ಲೆಲ್ಲೂ ಮೋಹ,
ಮತ್ಸರ, ಕ್ರೌರ್ಯ, ಜಿದ್ದು, ಗದ್ದುಗೆಗಳ
ಬಿಸಿ ಮಳೆಯ ತುಂತುರು ಹನಿ.

ಪಾದ ಊರಲು ಬಿಡದ
ಕಾದ ನೆಲವೂ ಸೌಮ್ಯವಾಗಿ
ಸ್ವಾಮ್ಯತೆ ಪಡೆದಿದೆ.
ಕತ್ತಲು ಬತ್ತಿ ಬೆಳದಿಂಗಳ ಬೆಳಕಿಗೆ ನೆಪವಾಗಲು
ಗುಡುಗು, ಸಿಡಿಲು, ಮಿಂಚುಗಳು
ಮೌನವಾಗಬೇಕಿದೆ
ದುತ್ತನೆ ಮೌನವಾಗಬೇಕಿದೆ...

- ನಾಗೊಂಡಹಳ್ಳಿ ಸುನೀಲ್

ವಿಡಿಯೋ

ನಾಗೊಂಡಹಳ್ಳಿ ಸುನಿಲ್

ನಾಗೊಂಡಹಳ್ಳಿ ಸುನಿಲ್ ಅವರು ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆಯ ನಾಗೊಂಡಹಳ್ಳಿ ಗ್ರಾಮದಲ್ಲಿ ಚನ್ನಪ್ಪ ಮತ್ತು ಶಾಂತಮ್ಮ ಅವರ ದಂಪತಿಗಳ ಮಗನಾಗಿ ಕೃಷಿಕ ಕುಟುಂಬದಲ್ಲಿ 30/07/1992 ರಂದು ಜನಿಸಿದರು. ಎಂ.ಎ, ಡಿ.ಪಿಜಿ ಬಿ.ಇಡಿ, ಪದವೀಧರರಾದ ಇವರು ಪ್ರಸ್ತುತ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಡಲೊಳಗಿನ ಕಡಲು, ಕ್ರಷ್ ಕವಿತೆಗಳು ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಮಾಲೂರು, ಕೋಲಾರ, ಬಂಗಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳು ಮತ್ತು ರಾಜ್ಯಾದ್ಯಂತ ಅನೇಕ ಕವಿಗೋಷ್ಠಿಗಳು ಹಾಗೂ ಹಲವಾರು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುತ್ತಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಚಕೋರ ಕೋಲಾರ ಬಳಗದಲ್ಲಿ ಆರಿದ ಹಣತೆ ಎಂಬ ಭಾವಗೀತೆ ಧ್ವನಿಸುರಳಿಯಾಗಿದೆ. ಕಾಡುವ ಕಿ.ರಂ ಹೊಸ ಕಾವ್ಯ, ಹೂ ಬುಟ್ಟಿ, ಕೃತಿಗಳಲ್ಲಿ ಇವರ ಕವಿತೆಗಳು ಮತ್ತು ಸಾಹಿತ್ಯದ ಬಹುತ್ವದ ನೆಲೆಗಳು, ಸಾಹಿತ್ಯ ಅನುಸಂಧಾನ ಬ್ಲಾಗ್, ಸಾಹಿತ್ಯ ಸುರಭಿ, ಮುಂತಾದವುಗಳಲ್ಲಿ ಲೇಖನಗಳು ಪ್ರಕಟಗೊಂಡಿರುತ್ತವೆ.

More About Author