Story

ಭಾವ-ನೆ ನಾನು ಅಂದುಕೊಂಡಂತೆಯೇ

ಕಾ.ವಿ. ರಮೇಶ್ ಕುಮಾರ್ ಅವರು ಬೆಂಗಳೂರಿನವರು. ಪದವಿ ಶಿಕ್ಷಣವನ್ನು ಪಡೆದಿರುತ್ತಾರೆ. ಬೆಂಗಳೂರಿನ ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ನಲ್ಲಿ ಚೀಫ್ ಆಫೀಸ್ ಸುಪೆರಿಂಟೆಂಡಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಪ್ರಸ್ತುತ ಅವರು ಬರೆದಿರುವ ‘ಭಾವ’ ಕತೆ ನಿಮ್ಮ ಓದಿಗಾಗಿ...

ಹೌದು ನಿಜ ಮನಸ್ಸಿನಲ್ಲಿರೋದು ಗೆಳೆಯನೊಂದಿಗೆ ಹೇಳಬೇಕೆನಿಸಿದರೂ ಹೇಳಲಾಗುತಿಲ್ಲ ಮನಸಿನಲ್ಲಿ ದುಗುಡತೆ ಹೋಗಲಿ ಬಿಡಿ ಮುಂದೊಂದು ದಿನ ಹೇಳಿದರಾಯಿತು ಎಂದೆನಿಸಿತಾದರೂ ಮನಸ್ಸಿನತುಡಿತ ತಡೆಯಲಿಲ್ಲ ಗೆಳೆಯನ ಮುಖವನ್ನೊಮ್ಮೆ ನೋಡಿದೆ ಹೇಳಿಬಿಡಲೇ ಎಂಬಂತೆ :

"ನಿನ್ನ ನೋವಿಗೆ ನನ್ನ ಬಳಿ ಉತ್ತರವಿಲ್ಲದಿರಬುದು ಆದರೆ ನಾನು ನಿನ್ನ ಜೊತೆಯಿರುವುದೇ ನಿನಗೆ ಮುಲಾಮು, ಸಾದ್ಯವಾದರೆ ದಾರಿ ತೋರಿಸುತ್ತೇನೆ ಇಲ್ಲವಾದಲ್ಲಿ ನಿನ್ನ ಜೊತೆಯಲ್ಲಿ ಮೌನವಾಗಿ ಹೆಜ್ಜೆ ಹಾಕುತ್ತಿರುತ್ತೇನೆ, ನೀನು ನಿಲ್ಲುವವರೆವಿಗೂ" ಗೆಳೆಯನಾಡಿದ ಮಾತಿಗೆ ಕೊಂಚ ಉತ್ಸಾಹ ತುಂಬಿಕೊಂಡಿತು ಮೆಲ್ಲಗೆ ಸಾವರಿಸಿಕೊಂಡು ಅರಳಿಕಟ್ಟೆಯ ಮರದ ಕೆಳಗೆ ಗೆಳೆಯನೊಟ್ಟಿಗೆ ಕುಳಿತು ಮನದೊಳಗಿನ ಮಾತನ್ನು ಹೇಳತೊಡಗಿದೆ.

ನನ್ನದು ಈಗ ಕರುಣಾಜನಕದ ಪರಿಸ್ಥಿತಿ, ನನ್ನವರು ಪ್ರತಿಸಲವೂ ನನಗೆ ಎಚ್ಚರಿಸುತ್ತಿದ್ದರು ನಾಳೆ ಎಂಬುವುದು ನಮ್ಮದಲ್ಲ ಎಂದು ಇಂದಿನ ನಿರ್ಧಾರಗಳು ನಾಳೆಯ ಸುಭದ್ರವಾದ ಬದುಕಿಗೆ ಬುನಾದಿಯಾಗಿರಬೇಕೆಂದು. ಆದರೆ ನನ್ನ ಮಂದ ಬುದ್ದಿಗೆ ಅದರ ಪರಿವೆಯೇ ಇರಲಿಲ್ಲ. ಆ ದಿನದ ಸುಖ ಸಂತೋಷಕ್ಕಷ್ಟೇ ಸೀಮಿತಗೊಂಡೇ " ಯಾವ ಕಾರಣಗಳಿಗಾಗಿ ? " ಗೆಳೆಯನ ಪ್ರಶ್ನೆಗೆ ಮತ್ತೆ ನನ್ನ ಮಾತು ಮುಂದುವರೆಯಿತು.

"ಇಂದು ಅಥವಾ ನಾಳೆ " ಎಂಬ ಭರವಸೆಗಳೊಂದಿಗೆ ಮದುವೆಯ ನಂತರ ಹತ್ತುವರ್ಷಗಳೇ ಕನಸಿನೊಂದಿಗೆ ಬದುಕಲಾರಂಭಿಸಿದೆವು ಆದರೆ ನಮ್ಮಿರ್ವರ ಬದುಕಿಗೆ ಹೊಸ ಚೈತನ್ಯ ಬರಲೇ ಇಲ್ಲ. ಇದೇ ಇರಿಸು ಮುರಿಸಿನಲ್ಲಿ ಮತ್ತೆ ಐದು ವರ್ಷಗಳನ್ನು ಕಳೆದುಬಿಟ್ಟಿವಿ.

ಅದೊಂದು ದಿನ ರಾತ್ರಿ ನಮ್ಮಿಬ್ಬರ ನಡುವೆ ಸುದೀರ್ಘವಾದ ಚರ್ಚೆ ನಡೆಯಿತು. ನನ್ನ ತಂಗಿಯ ಮಗನ್ನನ್ನು ದತ್ತು ತೆಗೆದುಕೊಳ್ಳಬೇಕೆಂಬ ಹಠದಲ್ಲಿ ನಾನು ಮತ್ತು ಅವರ ತಂಗಿಯ ಮಗನನ್ನು ದತ್ತು ತೆಗೆದುಕೊಳ್ಳಬೇಕೆಂಬ ಹಠದಲ್ಲಿ ಅವರು, ಕಡೆಗೆ ಯಾರಲ್ಲೂ ಒಮ್ಮತ ಮೂಡಿ ಬರಲಿಲ್ಲ . ಇದಾದ ಹತ್ತು ದಿನಗಳ ನಂತರ ಅವರು ಅವರ ತಂಗಿಯ ಮಗನನ್ನು ಕರೆದುಕೊಂಡು ಬಂದೇ ಬಿಟ್ಟರು. ಆ ಕ್ಷಣದಿಂದ ನನ್ನ ಮನಸ್ಸು ಕುದಿಯಲಾರಂಬಿಸಿತು ಸಹಿಸಿಕೊಳ್ಳಲಾಗಿತ್ತಿರಲಿಲ್ಲ, ಕಿರುಕುಳ ಕೊಡಲು ನನ್ನ ಬುದ್ದಿ ಉತ್ತೇಜಿಸುತಿತ್ತು, ಅವರು ಭವಿಷ್ಯವನ್ನು ಅರ್ಥೈಸಿ ಹೇಳುತ್ತಿದ್ದರೂ ಅರಿತುಕೊಳ್ಳದಾದೆ. ಇದೆಲ್ಲವನ್ನು ಗಮನಿಸುತ್ತಿದ್ದ ಅವರ ತಂಗಿಯ ಮಗ ಅದೊಂದು ದಿನ ಮನೆ ಬಿಟ್ಟು ಅವನ ತಂದೆ ತಾಯಿಯ ಬಳಿಗೆ ಹೊರಟುಹೋದ..

ನಾನು ಆನಂದಮರವಶಳಾದೆ, ಗೆದ್ದೆನೆಂಬ ಹಮ್ಮು ತುಂಬಿಕೊಂಡಿತು ಆದರೆ ಅವರು ಮೌನವಾದರು ಮಾತು ಕಡಿಮೆಯಾಯಿತು ಎಲ್ಲದರಲ್ಲೂ ಆಸಕ್ತಿಯಿಲ್ಲದಂತಾದರು ಆಗಲೂ ನಾನು ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಪರಿವೆಗೇ ಹೋಗಲಿಲ್ಲ ನನ್ನ ತಂಗಿಯ ಮಗನನ್ನು ಕರೆದುಕೊಂಡು ಬರುವೆ ಎಂದು ಕೇಳುವ ದೈರ್ಯವೂ ನನಗೆ ಬರಲಿಲ್ಲ. "ಒಟ್ಟಾರೆಯಾಗಿ ಬಾವನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲಿಲ್ಲ ಅಲ್ಲವೇ ಕನಕಕ್ಕ".

" ಒಂದೊಂದು ಗಳಿಗೆ ಹಾಗೆಯೇ ಕನಕಕ್ಕ, ಪರಿಸ್ಥಿತಿಗಳು ನಮ್ಮ ಮನೋಸ್ಥಿತಿಯನ್ನ ಕಾದಾಡಿಬಿಡುತ್ತವೆ. ಏಕೆ ಹೀಗೆಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಸಮಯ ಜಾರಿಹೋಗಿರುತ್ತದೆ. ಗೆಳೆಯನ ಪ್ರೆಶ್ನೆಗೆ ನಾನು ಉತ್ತರಿಸದಾದೆ, ನಾನು ಮೌನಿಯಾದೆ.

ಈಗ ಅವರು ನನ್ನೊಂದಿಗಿಲ್ಲ ನಮ್ಮನ್ನಗಲಿ ಬಾರದ ಲೋಕಕ್ಕೆ ಹೊರಟುಹೋಗಿದ್ದಾರೆ. ನಾನು ಒಬ್ಬಂಟಿಯಾಗಿದ್ದೇನೆ, ಒಮೊಮ್ಮೆ ಅನಾಥಳಾಗಿಬಿಟ್ಟೆ ಎಂದೆನಿಸುತ್ತದೆ ಗೆಳೆಯ ಇಲ್ಲ. ಕನಕಕ್ಕ ಈ ಜಗತ್ತಿನಲ್ಲಿ ಯಾರೂ ಒಬ್ಬಂಟಿಯಲ್ಲ, ದೇವರು ಯಾವುದಾದರೊಂದು ದಾರಿಯನ್ನು ನಮಗಾಗಿ ತೆರೆದಿಟ್ಟಿರುತ್ತಾನೆ. ತಾಳ್ಮೆಯಿಂದ ಹುಡಕಬೇಕಷ್ಟೆ, ನಂಬಿಕೆಯನ್ನ ಯಾವತ್ತೂ ಕಳೆದುಕೊಳ್ಳಬಾರದು.

ನಿನ್ನ ಮಾತು ನಿಜ ಗೆಳೆಯ. ನಿನ್ನ ಮಾತಿಗೆ ನನ್ನ ಕೈಯಲ್ಲಿರೋ ಈ ಪತ್ರವೇ ಸಾಕ್ಷಿ. ಅವರ ತಂಗಿಯ ಮಗ ನನಗೆ ಬರೆದಿದ್ದ ಪತ್ರವನ್ನು ಗೆಳೆಯನ ಕೈಲಿಟ್ಟೆ, ಅದನ್ನು ಆತ ಓದಿದ ಅದರಲ್ಲಿದ್ದುದು ಕೇವಲ ಎರಡೇ ಸಾಲುಗಳು.

"ಪ್ರೀತಿಯ ಕನಕ ಅತ್ತೆ, ನಾವು ನಮ್ಮ ಮಾವನವರನ್ನು ಕಳೆದುಕೊಂಡು ಇಂದಿಗೆ ಐದು ವರ್ಷಗಳೇ ಕಳೆದುಹೋಯಿತು. ನಿಮಗೂ ವಯಸ್ಸಾಗುತ್ತಿದೆ ಅನ್ಯತಾ ಭಾವಿಸದೆ ನಮ್ಮೊಟ್ಟಿಗೆ ಬಂದುಬಿಡಿ. ನಾವೆಂದು ನಿಮ್ಮವರೇ ಸಿದ್ಧವಾಗಿರಿ ಅತೀ ಶೀಘ್ರದಲ್ಲಿ ನಾನು ಬಂದು ನಿಮ್ಮನ್ನು ಕರೆದುಕೊಂಡು ಬರುತ್ತೇನೆ".

ನೋಡಿದೆಯಾ ಗೆಳೆಯ ಅವರ ಮಾನವೀಯತೆ ಅವನೂ ಅವರಂತೆಯೇ ದೊಡ್ಡ ಮನುಷ್ಯ ಎನಿಸಿಬಿಟ್ಟ. ಅಂದಿನ ನನ್ನ ನಡುವಳಿಕೆಯ ಬಗ್ಗೆ ಇಂದು ನನಗೆ ಅಸಹ್ಯವಾಗುತ್ತಿದೆ. ನಾಚಿಕೆಯಾಗುತ್ತಿದೆ . ನಾನು ಅವರಿಬ್ಬರ ಮುಂದೆ ತುಂಬ ಚಿಕ್ಕವಳಾಗಿಬಿಟ್ಟೆ ಗೆಳೆಯ.

ನನ್ನಲ್ಲಿ ಮಾತನಾಡಲು ಮಾತೇ ಇಲ್ಲವಾಯಿತು ಮೌನವಾಗಿ ಕುಳಿತುಬಿಟ್ಟೆ.

- ಕಾ. ವಿ ರಮೇಶ್ ಕುಮಾರ್

ಕಾ.ವಿ. ರಮೇಶ್ ಕುಮಾರ್

ಕಾ.ವಿ. ರಮೇಶ್ ಕುಮಾರ್ ಅವರು ಬೆಂಗಳೂರಿನವರು. ತಂದೆ ಕೆ ಎಸ್ ವಿಶ್ವೇಶ್ವರಯ್ಯ ಶಾಸ್ತ್ರಿ, ತಾಯಿ ವಿಜಯಲಕ್ಷ್ಮಮ್ಮ. 1970 ಜುಲೈ 21 ರಂದು ಜನನ. ಪದವಿ ಶಿಕ್ಷಣವನ್ನು ಪಡೆದಿರುತ್ತಾರೆ. ಬೆಂಗಳೂರಿನ ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ನಲ್ಲಿ ಚೀಫ್ ಆಫೀಸ್ ಸುಪೆರಿಂಟೆಂಡಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More About Author