Poem

ಭವಚಕ್ರ

ಭವಚಕ್ರ ಪ್ರವರ್ತಿನೀ
ಪಾದಪದ್ಮಗಳ ಮೇಲೆ
ಪೀಠವೇರಿ ಮಾಟವಾಗಿ ಕುಳಿತು
ರಂಗೋಲಿ ಬಿಡಿಸುತ್ತಾಳೆ ಅವಳು
ಅಂಗಳದ ಬೆಳಕಿಗೆ
ಸಗಣ ಸಾರಿಸಿ ಕತ್ತಲ ಬಳಿದು
ಚೆಲ್ಲಾಪಿಲ್ಲಿ ಚುಕ್ಕೆಯೂರಿದ್ದಾಳೆ;
ನೋಟಕ್ಕೆ ಬೆರಗು ಬೆರೆಸಿದ್ದಾಳೆ.

ನೋಡನೋಡುತ್ತ
ಬಿಂದುಗಳು ಕೂಡುತ್ತ
ಚಲಿಸುತ್ತಿವೆ ಚಕ್ರವಾಗಿ
ಚಕ್ರಗರ್ಭದ ಒಳಗೆ ತ್ರಿಕೋನ
ವಿನ್ಯಾಸಗಳು ಮೂಡಿ
ನೋಟದ ದಿಕ್ಕು ತಪ್ಪಿಸಿ
ಅಖಂಡಮಂಡಲದ ಮಧ್ಯ
ಬಿಂದುವಿನ ಶೂನ್ಯದಲಿ
ಕರಗಿದಂತಿವೆ ಏನೇನೋ......
ರಂಗೋಲಿಯೊಳಗೆ ಲೋಕ
ಲೋಕದೊಳಗೆ ರಂಗೋಲಿ
ಬೆರೆತುಹೋದಂಥ ತಂತ್ರಯೋನಿ!

ನಿರಾಕಾರದಿಂದಾಕಾರ ಮೂಡಿಸುವ
ನಿಪುಣೆ....ತ್ರಿಕೋಣಾಂತರ ದೀಪಿಕಾ....
ಬೆರಳ ತುದಿಯಿಂದಲೆ
ಬ್ರಹ್ಮಾಂಡಗಳ ಉದುರಿಸುತ್ತಾಳೆ
ಎಷ್ಟು ಚುಕ್ಕಿ ಎಷ್ಟು ಸಾಲು
ಯಾವಕ್ರಮ, ಎಂಥ ಗಣತ
ಯಾವುದಾರಂಭ? ಯಾವುದಂತ್ಯ?
ಪ್ರಶ್ನೆದಾಹವ ಕಂಡು
ಸುಮ್ಮನೆ ನಗುತ್ತಾಳೆ ನೀರೆ.

- ಗೀತಾ ವಸಂತ

ಗೀತಾ ವಸಂತ

ಗೀತಾ ವಸಂತ- ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಗೀತಾ ಅವರು ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ 1976 ಏಪ್ರಿಲ್ 20 ರಂದು  . ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ’ಹೊಸಿಲಾಚೆ ಹೊಸ ಬದುಕು , ಪರಿಮಳದ ಬೀಜ’ ಗೀತಾ ವಸಂತ ಅವರ ಕವನಸಂಕಲನಗಳು. ಬೆಳಕಿನ ಬೀಜ, ಬೇಂದ್ರೆ ಕಾವ್ಯ - ಅವಧೂತ ಪ್ರಜ್ಞೆ, ಹೊಸ ದಿಗಂತದ ಹೊಸದಾರಿ ಇವರ ಪ್ರಮುಖ ವಿಮರ್ಶಾ ಕೃತಿಗಳು, ಸ್ವಾತಂತ್ರ್ಯೋತ್ತರ ಕಥನ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಗಳು ಅವರ ಮಹಾಪ್ರಬಂಧ. ಪಾಟೀಲಪುಟ್ಟಪ್ಪ ಕಥಾ ಪ್ರಶಸ್ತಿ, ದೇವಾಂಗನಾ ಶಾಸ್ತ್ರಿ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ರತ್ನಮ್ಮ ಹೆಗಡೆ ಪ್ರಶಸ್ತಿಗಳು ದೊರೆತಿವೆ.

More About Author