Poem

ಭೀಮನ ನಿರೀಕ್ಷೆಯಲಿ 

ಅಂಟು ಮೈಲಿಗೆಯ
ಸೂತಕದ ಕೇರಿಯ
ಪಾಪದ ಕೆಸರು ಕಾಯ
ಹೊತ್ತ ದಲಿತ ಹಣೆಪಟ್ಟಿಯ
ಧ್ರುವ ತಾರೆಯ ಉದಯ

ಬಯಸದೆ ಜನ್ಮ ತಳೆದ ಜಾತಿಯಲಿ
ಕಿತ್ತು ತಿನ್ನುವ ಬಡತನದ ಕೂಪದಲಿ
ಮಡಿವಂತಿಕೆ ಮತಾಂಧತೆಯಲಿ
ಮನುಷ್ಯತ್ವಕ್ಕೆ ಕೊಳ್ಳಿ ಇಟ್ಟವರ ಮಧ್ಯದಲಿ
ನಲುಗಿತೊಂದು ಪುಣ್ಯ ಜೀವ ಕಣ್ಣೀರಲಿ

ಸಮಾಜವಿತ್ತ ಎಷ್ಟೆಲ್ಲ ಉಳಿ ಪೆಟ್ಟು
ಸಹಿಸಿ ದಹಿಸಿ ರೋಧಿಸಿ ಕಂಗೆಟ್ಟು
ಆಯ್ತು ಮಾನವತೆ ಮೂರ್ತಿಯ ಹುಟ್ಟು
ಅವ ಬಿಡಲಿಲ್ಲ ಬದುಕುವ ಹಕ್ಕಿನ ಪಟ್ಟು
ಕೇಡು ಮಾಡಿದವರಿಗೂ ಬದುಕು ಕೊಟ್ಟು

ಬೆಳೆದನವ ಜ್ಞಾನ ಸಂಪನ್ನ ಭೀಮನಾಗಿ
ಕಂದೀಲು ಬೆಳಕಿನಲಿ ಮಾಣಿಕ್ಯವಾಗಿ
ದಲಿತರ ಪಾಲಿನ ಆಶಾಕಿರಣವಾಗಿ
ಸಮಾನತೆಯ ಸಾರುವ ಹರಿಕಾರನಾಗಿ
ಭಾರತ ಬೆಳಗಿದ ಸಂವಿಧಾನ ಶಿಲ್ಪಿಯಾಗಿ

ಸಮಾಜ ಭೀಮಗೆ ಕೊಟ್ಟಿದ್ದು ಬರೀ ನೋವು
ಜ್ಞಾನ ಭೀಮ ಹಂಚಿದ್ದು ನಲಿವು
ನೊಂದ ಜೀವಕೆ ಬೋಧಿ ತತ್ವದ ಒಲವು
ಮೇಣದಂತೆ ಕರಗಿ ಬೆಳಕಾಯ್ತು ಜೀವವು
ಭೀಮನಿತ್ತ ಸಂವಿಧಾನ ಬದುಕಿಗಾಧಾರವು

ಮತ್ತೆ ಆಗಲಿ ಈ ಮಣ್ಣಲಿ ಭೀಮಾಂಕುರ
ತಡೆಯಲು ಸಂವಿಧಾನ ರಂಗೋಲಿ ಚೋರರ
ಜನಿಸಲಿ ಮನೆ ಮನೆಯಲೊಬ್ಬ ಕ್ರಾಂತಿಕಾರ
ಬದುಕಿಸಲಿ ಜೀವಿಸುವ ಭ್ರಮೆಯಲಿಹ ಸತ್ತವರ
ಮತ್ತೆ ಬನ್ನಿ, ಬರುತ್ತಲೇ ಇರಿ ಓ ಅಂಬೇಡ್ಕರ

✍️ ರವಿನಾಗ್ ತಾಳ್ಯ

ರವಿನಾಗ್‌ ತಾಳ್ಯ

ರವಿನಾಗ್‌ ತಾಳ್ಯ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಗ್ರಾಮದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಹೊಳಲ್ಕೆರೆ ಪುರಸಭಾ ಕಾರ್ಯಾಲಯದಲ್ಲಿ ಜೂನಿಯರ್ ಪ್ರೋಗ್ರಾಮರ್ ಆಗಿ ಗುತ್ತಿಗೆ ಆಧಾರದ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಆನ್ ಲೈನ್ ಕವಿಗೋಷ್ಠಿಗಳಲ್ಲಿ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳು ಆಯೋಜಿಸುವ ಸಾಹಿತ್ಯಕ ಗೋಷ್ಠಿಗಳನ್ನು ಪಾಲ್ಗೊಳ್ಳುವುದು ಅವರ ಹವ್ಯಾಸ. ಅವರ ಕವನಗಳು  ನಾಡಿನ ವಿವಿಧ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಪ್ರಕಟಗೊಂಡಿವೆ. 

More About Author