Poem

ಭ್ರಷ್ಟ ನಾಯಕ

ಕಾಂಚಾಣ ಕರಿಮಾಯಿ ಬೆಂಬತ್ತಿ ನರಿನಾಯಿ
ಏನಾದರಾಗಲಿ ಏನೆಂದರೆನ್ನಲಿ
ಪುಗಸೆಟ್ಟೆ ರೊಕ್ಕವು ಹರಿದು ಬರಲಿ ॥ಪ॥

ದುಡಿಯೋದು ಬದಿಗಿಟ್ಟು ಮಣ್ಣನ್ನು ಮರೆತಿಟ್ಟು
ಕುಲಕಸುಬು ಮರೆತಿವರು ಮಂಗಾಟ ನಡೆಸಿದರು
ಚುನಾವಣೆ ಪಂಚಾಯ್ತಿ ಎಂಎಲ್ಎ ಎಲೆಕ್ಷನ್ನು
ಕುಡುಕರನು ಹೆಚ್ಚಿಸಿದ ಅಪಕೀರ್ತಿ ಕೊಡುಗೆಯಿದು ೧

ಕೋಳಿಗಳ ತೂರಿದರು ಬಾಟಲಿಯ ಹಂಚಿದರು
ಜಾತಿಗಳ ಮುಂದಿಟ್ಟು ಮತಭೇಟೆಯಾಡಿದಿರಿ
ತಲವಾರು ಬಡಿಗೆಯಲಿ ತಲೆದೆಗೆದು ನಡುಬೀದಿ
ಬಿಸಿರಕ್ತ ರಂಗೋಲಿ ಚಿತ್ತಾರ ಬಿಡಿಸಿದಿರಿ ೨

ಮನಸುಗಳ ಒಡೆದವರು ಕನಸುಗಳ ಕೊಂದವರು
ಭರಪೂರ ಭರವಸೆಯ ಮಿಥ್ಯೆಯನು ಹಡೆದವರು
ಹತ್ತಾರು ಅಪರಾಧ ನೂರೆಂಟು ಆರೋಪ
ನಾಯಕನ ಅರ್ಹತೆಗೆ ಇವಿರದವ ಅಪರೂಪ ೩

ಹಣಬಲಕೆ ನೆಣಹೆಚ್ಚಿ ಮದ್ದಾನೆ ಘೀಳಿಡುತ
ಚುನಾವಣೆಯಂಕುಶವು ಸೊಕ್ಕಿಳಿಸಿ ಪೊರೆಕಳಚಿ
ಗಾಯಗಳ ನೆಕ್ಕುತ್ತ ಗವಿಯೊಳಗೆ ಮಲಗಿತ್ತು
ಆಗಾಗ ಬೀದಿಯಲಿ ನಾಟಕದಿ ಮೈಪರಚಿ ೪

ಅಧಿಕಾರ ಹೋದಾಗ ನೀರ್ದೆಗೆದ ಮೀನಂತೆ
ವಿಲವಿಲನೆ ವದ್ದಾಡಿ ಹರಿದಪ್ಪಿ ಮಾತಾಡಿ
ಕುದುರೆಯನು ನಡೆಸದವ ಕತ್ತೆಯನು ಬಯಸುತ್ತ
ಮರುಳತನ ದೊರಕೊಂಬು ಬಡಬಡಿಸಿ ಜಾಲಾಡಿ ೫

-ಜೀವರಾಜ ಹ ಛತ್ರದ

 

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು)

More About Author