Poem

ಭ್ರೂಣ ಹತ್ಯೆ

ಕೊಲೆಮಾಡಿ ತಲೆಯೆತ್ತಿ ಬದುಕಿರುವ ಬಂಧುಗಳೆ
ಖಿನ್ನತೆಗೆ ಸತ್ತುಬಿಡಿ ನೆಲಖಾಲಿಯು
ಭಂಡಮನ ಕಲ್ಲೆದೆಯು ಜನಸಾಲಿಯು ॥ಪ॥

ನಾನೊಬ್ಬ ಕೊಲೆಗಾರ ಕೊಂದಿದ್ದು ಜೋಡಿಕೊಲೆ
ಬೆಂಬಿಡದ ಬೇತಾಳ ಪಾಪಪ್ರಜ್ಞೆ
ಮುಖನೋಡೆ ಕೈಕಾಲು ದೇಹ ಮೂಡುವ ಮೊದಲೆ
ಹೊರಬಿದ್ದು ಹೆಣವಾಗಿ ದುಃಷ್ಟ ಆಜ್ಞೆ

ಫಲಹೊತ್ತ ಭೂಮಿಗದೊ ಕಡಲಾಳ ದುಃಖಹೊಳೆ
ಹೊರಗೆಳೆದು ಹಾಕಿದ್ದು ವೈದ್ಯ ಮದ್ದು
ಬೆಳಗದಿರು ಚಂದ್ರಾರ್ಕ ಮಿನುಗದಿರಿ ತಾರೆಗಳೆ
ಮೊಳಕೆಯಲಿ ಚಿವುಟಿದ್ದು ಭಾರಿಗುದ್ದು

ಪಿಂಡಾಂಡ ಮಾಂಸಗಳು ಚಹರೆ ಮೂಡುವ ಮುನ್ನ
ಆಲಯವ ತೊರೆದಾಯ್ತು ಜೋಡಿಮೂರ್ತಿ
ಒಂದಿರಲಿ ಎರಡಿರಲಿ ಮೂರು ಬೇಡೆಂದವರು
ಗರ್ಭಗುಡಿ ಕದಮುಚ್ಚಿ ಬೀಗಪೂರ್ತಿ

ಶೂನ್ಯದಲಿ ಬಿಡುಗಣ್ಣು ಬರಿಹೊಟ್ಟೆ ನೊಂದಿತ್ತು
ಸಿಡುಕುವಳು ಆಗಾಗ ನೆನಪು ತೆಗೆದು
ಶತಕೋಟಿ ಭಾರತಕೆ ಅನಿವಾರ್ಯ ಕ್ರಮವೆಂದು
ಸಂತೈಕೆ ತಲೆಸವರಿ ಕಲೆಮಾಯದು

ಹುಟ್ಟುವುದು ತಡೆಯದಿರೆ ಕಷ್ಟವಿದೆ ಜಗದಲ್ಲಿ
ನಿದ್ರಿಸಲು ಸ್ಥಳವಿಲ್ಲ ಮುಂಜಾಗ್ರತೆ
ಹಡೆಯುವದು ನೆಪಮಾತ್ರ ಕಾಲಗತಿ ತಿರುಗುತಿದೆ
ಪ್ರಕೃತಿಯಿದ ಬಯಸಿತ್ತು ನಿಷ್ಪನ್ನತೆ

ಹಡೆದಷ್ಟು ಹುಟ್ಟಿದರೆ ಈನೆಲದ ಗತಿಯೇನು?
ತಡೆರಹಿತ ಖಗಮಿಗವು ಬದುಕಿಲ್ಲವೆ?
ಮಾನವನ ಕಪಿಮುಷ್ಠಿ ತನ್ನಕುಲ ರಕ್ಷಿಸಲು
ಉಳಿದೆಲ್ಲ ಜೀವಿಗಳ ಕೊಂದಿಲ್ಲವೆ?

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು)

More About Author