Poem

ಬಿದಿರ ಕಬ್ಬಿಣದ ದೇಹ

ಬುಡದಿಂದ ಹಸಿರಾಗಿ ಮೇಲೆದ್ದಿದ್ದಾಯಿತು ಕೊಳವೆ
ಅಲ್ಲಲ್ಲಿ ಕೊಳವೆಯ ಮುಚ್ಚಿಕೊಂಡು
ತನ್ನನ್ನು ತಾನೇ ಮೆಚ್ಚಿಸಿಕೊಂಡು
ಆಕಾಶದೆತ್ತರಕೂ ಬೆಳೆಯುವಾಸೆ ಇದೆ
ತನ್ನ ನೇತಾಡುವ ಗುಣ,,ಕೊಳವೆಯಾಗಿ
ಇದರ ಸಾಮರ್ಥ್ಯವೇ ಸರಿ!

ಹಸಿರಿನ ಕೊಳವೆಗಳ ಮಧ್ಯದಲಿ
ಒಣಗಿತ್ತೊಂದು ಕೊಳವೆಯಾಗಿ,,
ಕೊಳವೆ ಮುಚ್ಚಿತ್ತು ಅಲ್ಲಲ್ಲಿ ತೆರೆದ ತುಟಿ
ಗಾಳಿ ಸರ್ರನೆ ಬೀಸಿತು ಅದರೆಡೆಗೆ ಮುತ್ತಿಕ್ಕುವಂತೆ
ಪ್ರತಿಬಾರಿ ಮುತ್ತಿಕ್ಕುವಾಗಲು ಕೊಳಲ ಧ್ವನಿ
ಅದರೆಲೆಗಳಿಂದಲೇ ಗೂಡು ಕಟ್ಟಿದ್ದವು ಹಕ್ಕಿಗಳು ಈ ನಾದವ ಕೇಳಿಸಿಕೊಳ್ಳಲು
ಇದರ ಔದಾರ್ಯವೇ ಸರಿ!

ಮನದಲ್ಲಿಯು ತುಮುಲ ಶುರುವಾಗಿದೆ
ಕೊಳಲ ಹುಟ್ಟಿನ ಗುಟ್ಟೇನೆಂದರಿಯಲು
ಮನೆಯ ಮಾಳಿಗೆಯ ಹತ್ತಲು ಅಪ್ಪನ ಏಣಿಯಾಯಿತೊಮ್ಮೆ
ಇದು ಮನದಾಸೆಗಳಿಗೆ ಶಕ್ತಿಯ ಏಣಿಯಾಗುವುದಾ?
ನನ್ನೆಲ್ಲಾ ಕನಸುಗಳಿಗೆ ಇದು ಅಣಿಯಾಗಿ ಮನಸ ಜೋಡಿಸುವುದಾ? ಎಂದು
ಇದರ ಆತ್ಮಶಕ್ತಿಯೇ ಸರಿ!

ಮನದಲ್ಲೊಮ್ಮೆ ಕೇಳಿದ್ದು ಆಯಿತು
ನಾ ವಿಜೇತನಾಗಬಹುದಾ?
ನಿನ್ನ ಕೊಳಲ ನುಡಿಯಲಿ
ನಿನ್ನ ಮನದಾಸೆ-ಕ್ಲೇಶಗಳ ಕವನದಲೇಳಿ
ನನ್ನಲ್ಲಿನ ಸ್ವಾರ್ಥಿಗೆ ನಿವೃತ್ತಿ ನೀಡಬಹುದಾ?
ನಿನ್ನ ಕಾಯಕ ಸೇವೆಯ ನೋಡಿ
ನಾ ಮೊದಲು ಮಾನವನಾಗುವಿನಾ?
ನಿನ್ನ ಕಾರ್ಯದ ಮಾನವೀಯತೆಯ ಕೇಳಿ
ಇದರ ನಿಸ್ವಾರ್ಥ ಕಾಯಕವೇ ಸರಿ!

ಹಸಿರು ಕೊಳವೆ ಮುಚ್ಚಿಕೊಂಡು ತುಟಿ ತೆರೆದಿತ್ತು ಬಿದಿರಿನ ವಂಶದಲಿ
ಹಾಡಾಯಿತು, ಜಾನಪದರ ದನಿಯಾಗಿ
ಅಂಟಿಕೊಂಡಿತು ಮನದಲ್ಲಿ ಹಸಿರಾಗಿ
ಬಂತೊಂದು ಪಟ್ಟಣಕೆ ಕಬ್ಬಿಣದ ತುಕ್ಕಿನ ಏಣಿ
ಮನಸ ಕಬ್ಬಿಣವಾಗಿಸಿತು ಶ್ವಾಸದಲಿ ಉಸಿರುಗಟ್ಟಿಸಿ
ಇದರ ಉದಾರವೇ ಸರಿ!

- ಶ್ರೀಧರ ಜಿ (ಯಗೋಶ್ರೀ) ಯರವರಹಳ್ಳಿ .

ಶ್ರೀಧರ ಜಿ ಯರವರಹಳ್ಳಿ

ಶ್ರೀಧರ ಜಿ ಯರವರಹಳ್ಳಿ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನವರು. ಬಿ ಎಸ್ ಸಿ ಪದವೀಧರರಾಗಿರುವ ಅವರು ಈಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಒಲವಿರುವ ಅವರಿಗೆ ಬರವಣಿಗೆ, ಓದುವುದು ಹವ್ಯಾಸವಾಗಿದೆ. ಅವರ ಕೆಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ.

More About Author