Poem

ಬಿಡುಗಡೆಗೊಳಿಸು ಗುರುದೇವ

ನನ್ನನೊಮ್ಮೆ ಬಿಡುಗಡೆಗೊಳಿಸು ಗುರುದೇವ
ತೊಟ್ಟಿಕೊಂಡ ಬಟ್ಟೆ
ನೀರಿಗಿಳಿಯುವ ಮುನ್ನ ಕಳಚುವಂತೆ
ಕೆಟ್ಟುನಿಂತ ಗಡಿಮುಳ್ಳು
ಹೊಸ ಸೇಲ್ ನಿಂದ ಅಂಕಿ ಬಿಟ್ಟು
ಮುಂದೆ ಹೋಗುವಂತೆ
ರಾತ್ರಿಯಲಿ ಬಿಡುಬಿಟ್ಟ ಕನಸುಗಳು
ಬೆಳಕು ಕಂಡು ಹೊರಡುವಂತೆ
ಬಂಧನದಲ್ಲಿದ್ದ ಹಕ್ಕಿಯೊಂದು
ಮುಕ್ತಿ ಪಡೆದು ಬಯಲಿನಡಿಗೆ ಹಾರುವಂತೆ
ಚತುರ್ಮುಖಗಾಳಿಗೆ ಸಿಕ್ಕು ಹುಡಿ ಮಣ್ಣು
ಗಾಳಿಯೊಂದಿಗೆ ಲೀನವಾಗುವಂತೆ
ಮೋಡ ಹೊತ್ತ ಮುಗಿಲು ಗಾಳಿಗದುರಿ
ಮಳೆಹನಿಗಳನ್ನು ಬಿತ್ತುವಂತೆ
ಅಡಗಿ ಕುಳಿತ ಪ್ರಾಣವೊಂದು
ಅಪ್ಪಣೆ ಇಲ್ಲದೇ ಥಟ್ಟನೆ ಹೊರಡುವಂತೆ
ಮಂಜು ಕರಗಿ ನೀರಾಗಿ
ನೀರು ನದಿಯಾಗುವಂತೆ,
ನದಿಯು ಸಾಗರವನು
ಸೇರುವ ಚೈತನ್ಯಶಕ್ತಿಯಂತೆ
ಬಿಡುಗಡೆಗೊಳಿಸು ಗುರುದೇವ

ನೇತ್ರದಿಂದ ನೋಟವನು
ಶ್ರೋತೃಗಳಿಂದ ಸ್ವರ ಮೋಹವನು
ಚರ್ಮದಿಂದ ಸ್ಪರ್ಶಕಾಂತಿಯನು
ಕಾಲುಗಳಿಂದ ನೆಲದ ತುಣುಕನು
ಕೈಗಳಿಂದ ಬೃಹತ್ ಅಪ್ಪುಗೆಯನು
ಕಾಯದಿಂದ ವಾಯುವನು
ಆತ್ಮದಿಂದ ಪರಮಾತ್ಮನನು
ಅರಿಷಟ್ವರ್ಗಗಳಿಂದ ನಿಮ್ಮ ಸ್ಮರಣಿಕೆಯನು
ಬಿಡುಗಡೆಗೊಳಿಸು ಗುರುದೇವ....

ಸೆಳೆದುಬಿಡು ನನ್ನದಲ್ಲದ ನನ್ನನ್ನು
ಆದಿ-ಅಂತ್ಯವಿರದ ನಿಮ್ಮ ಪಾದದಡಿಗೆ
ಮೈಲಿಗೆಯನ್ನೇ ಮಡಿಯನ್ನುವ
ಭಾವಬಂಧನದಿಂದ ಬಯಲಕಡೆಗೆ
ಹಳ್ಳ-ಕೊಳ್ಳ,ಗಾಳಿ-ಬೆಳಕು
ಬೆನ್ನುಬಿದ್ದ ಬಟಾಬಯಲ ಕಡೆಗೆ
ಭಾವ ಪರಾಧೀನ ಜಗತ್ತಿನಿಂದ ನಶ್ವರದಡಿಗೆ
ಅಂತೆ-ಕಂತೆಗಳ ಸಂತೆಯಿಂದ ಸತ್ಯದಡಿಗೆ

ಬಿಡುಗಡೆಗೊಳಿಸಿ ಗುರುದೇವ
ಆದಿ-ಅಂತ್ಯವಿರದ ನಿಮ್ಮ ಪಾದದಡಿಗೆ
ನಿಮ್ಮ ಪಾದದಡಿಗೆ

 

ರಾಯಸಾಬ ಎನ್ ದರ್ಗಾದವರ

ರಾಯಸಾಬ ಎನ್ ದರ್ಗಾದವರ ಅವರು ಮೂಲತಃ ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾಮದವರು. ವೃತ್ತಿಯಿಂದ ಹುಬ್ಬಳ್ಳಿ ಶಹರದ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಪೇದೆಯಾಗಿ 2012 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿ ನೆಹರು ಕಾಲೇಜಿನಿಂದ ಪದವೀಧರರು. ಕತೆ, ಕವಿತೆ ಬರೆಯುವ ಮೂಲಕ ಸಾಹಿತ್ಯಿಕವಾಗಿ ತಮ್ಮನ್ನುಗುರುತಿಸಿಕೊಂಡಿದ್ದಾರೆ. ದಿನಪತ್ರಿಕೆ, ವೆಬ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಅವರ ಕವಿತೆಗಳು "ಕಾವ್ಯದ ಹುಳು"ತಂಡದವರು ನಡೆಸಿಕೊಡುವ 'ಚಿತ್ರ ನೋಡಿ ಕವಿತೆ ಬರೆಯಿರಿ' ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ಕನ್ನಡ ಕಲರವ ಮತ್ತು ಅವ್ವ ಪುಸ್ತಕಾಲಯದವರು ನಡೆಸಿದ ಕಾವ್ಯ ಸ್ಪರ್ಧೆಯಲ್ಲಿ ಟಾಪ್ 5 ಸರಣಿಯಲ್ಲಿ ಬಹುಮಾನ ಪಡೆದಿವೆ.

More About Author