Poem

ಬಿಕ್ಕಳಿಕೆ ಝರಿ

ಪ್ರೀತಿಯೋ ಕಾಳಜಿಯೋ
ಮಮತೆಯೋ ಕಿಟಕಿಟಿಯೋ
ಅವ್ವ ಮಾತ್ರ ಶುದ್ಧ ಜೇನು
ಮಾತುಗಳು ಕೆಲಸಗಳು
ಆಗಲೇಬೇಕು ಇನ್ಸ್ಟಂಟ್ ತಿಂಡಿಯಂತೆ
ಒಂದೇ ಒಂದು ಅರಸನ ಆಜ್ಞೆಯಂತೆ
ಹಿಟ್ಲರ್ ಮುಸೊಲಿನಿ ಲೆನಿನ್ ಯಾವ ಲೆಕ್ಕ

ಕೆಲಸದ ನಿರಂತರ ಒತ್ತಡದಲ್ಲಿ ರೈಲುಹಳಿ
ಹೋರಾಟ ಇರುವೆ ನಾನು ಲುಟುಪುಟು
ಕೆಲ ಕೆಲಸ ಮಾತು ಕಡೆಗಣಿಸಿ
ಕಿವಿಯಲ್ಲಿ ಹೊಕ್ಕದೇ ಬೆನ್ನ ಹಿಂದೆ ಅವ್ವನ
ಮಾತುಗಳು ಬೇತಾಳ ತಾಂಡವ

ಗಾಳಿಯ ಪಾದ ಹೊಸ್ತಿಲಲ್ಲಿ ದೂಡಿ
ಅವಸರದಲ್ಲಿ ಹೊರಗೆ ಹೋಗುವ
ಮೋಡಗಳ ನಿಲ್ಲಿಸುವ ಶಿಖರದಂತೆ
ನನ್ನ ತಡುವಿ ಅದೇನೋ
ತಿನ್ನು ಅಂದಳು ಮಮತೆಯ
ಸಾಗರದಲಿ ಅಕ್ಷಯ ಪಾತ್ರೆ ಹಿಡಿದು
ಒಂದು ಕ್ಷಣವೂ ಮುಖ್ಯ ಮುಖ್ಯ
ಭೂಮಿಯಿಂದ ಕಕ್ಷೆಗೆ ಬಿಟ್ಟ ರಾಕೆಟ್
ಹೊರಟೆ ಹಾಗೆ ತಿನ್ನದೇ

ಉದ್ದ ಉದ್ದ ಉಸಿರು ಬಿಡುತ್ತ
ತಲುಪಿ ಬಸ್ ಸ್ಟ್ಯಾಂಡ್
ಇಪ್ಪತ್ತು ನಿಮಿಷ ಕಳೆದರೂ
ಬರುತ್ತಿಲ್ಲ ಒಂದೂ ಬಸ್ ತೇಕುತ್ತ
ಅವ್ವ ಕೊಟ್ಟಿದ್ದು ತಿಂದಿದ್ದರೆ
ಆಗುತ್ತಿತ್ತೇನೋ ಜಾಸ್ತಿ ಎರಡು ನಿಮಿಷ
ಅಷ್ಟೇ ಏನೋ ಸಾಧಿಸಿದಂತೆ
ಬಂದು ನಿಂತರೆ ಸಂಪೂರ್ಣ ಕಾಲಹರಣ

ಕ್ಷಣದಲ್ಲಿ ಕಣ್ಣೀರ ಮೆರವಣಿಗೆ
ಓಲಾಡಿ ಅಕ್ಷ ತುಂಬಿ ಸುರಿದು
ಪಶ್ಚಾತಾಪ ತಿನ್ನದ್ದಕ್ಕೆ,
ಮಾತು ಕೇಳದ್ದಕ್ಕೆ, ಅವ್ವನ ನೋಯಿಸಿದ್ದಕ್ಕೆ
ಮತ್ತೆ ಮತ್ತೆ ಬಿಕ್ಕಳಿಕೆ ಝರಿ
ನನ್ನ ಹೊಟ್ಟೆ ತುಂಬಿಸುವಲ್ಲಿ
ನೀರು ತುಂಬಿದ ಹರಿವಾಣ
ಅವ್ವನದೆನು ಸ್ವಾರ್ಥ?
ಗುರುತಿಸಬೇಕು ಅಮೃತ ಸಿಂಚನ

- ಮಾಲಾ.ಮ.ಅಕ್ಕಿಶೆಟ್ಟಿ, ಬೆಳಗಾವಿ.

ಮಾಲಾ ಮ. ಅಕ್ಕಿಶೆಟ್ಟಿ

ಕವಯತ್ರಿ ಮಾಲಾ ಮ. ಅಕ್ಕಿಶೆಟ್ಟಿ ಮೂಲತಃ ಬೆಳಗಾವಿಯವರು. ವೃತ್ತಿಯಿಂದ ಉಪನ್ಯಾಸಕಿ. ಅವರ ಹಲವಾರು ಕವಿತೆ, ಕತೆ, ಲೇಖನ, ಮಕ್ಕಳ ಕತೆ, ಲಲಿತ ಪ್ರಬಂಧಗ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

More About Author