Poem

 ಚದುರಿದ ಕನಸು

ದಿನಂಪ್ರತಿ ಬರುವ ಈ ಹಾಳು ಕನಸುಗಳೇ ಹೀಗೆ,
ಅನುಕ್ಷಣ ವಿಶ್ವಾಮಿತ್ರ ನೇಮಿಸಿದ ನಕ್ಷತ್ರಿಕನ ಹಾಗೆ!

ಒಮ್ಮೊಮ್ಮೆ ಅತಿಕ್ರಮ ಪ್ರವೇಶದಿ ನಮ್ಮೊಳನುಸುಳಿ,
ನಡೆಸಿ ಬಿಡುವವು ಅನಿರೀಕ್ಷಿತ ಬಂಡುಕೋರ ದಾಳಿ!

ಸಮಯಾಸಮಯವಿಲ್ಲದೆ ಸಂದರ್ಭದ ಹಂಗಿಲ್ಲದೆ,
ಯುಗಾದಿ ಆಚರಿಸಿ ಬಿಡುವವು ಬೇವು-ಬೆಲ್ಲ ತಿನ್ನದೆ!

ಆದರೂ ಕನಸುಗಳಲ್ಲವೇ ಸುಪ್ತ ಮನಸಿನ ಗುಪ್ತಗಾಮಿನಿ,
ಮುನ್ಸೂಚನೆಯಿಲ್ಲದೆ ಭಾವಸಾಗರದಲ್ಲೇಳುವ ಸುನಾಮಿ!

ನಿರಂತರವಾಗಿ ಕಾಣುವ ಕನಸೆಲ್ಲವನ್ನೂ ನನಸಾಗಿಸಲು,
ಆಗಸದಿ ನಿಲ್ಲಲೇಬೇಕು ಮುಕ್ಕೋಟಿ ದೇವತೆಗಳ ಸಾಲು!

ಛಲಬಿಡದೆ ಬೇತಾಳನಂತೆ ಬೆನ್ನಟ್ಟಿ ಕಾಡಿಸುವ ಕನಸಿಗೆ,
ಅಲ್ಪಾಯುಷ್ಯ ನೀಡುವ ಆ ವಿಧಿಗೆ; ಯಾವುದೋ ಹಗೆ!

ಕೂಡಿಟ್ಟಮೊತ್ತ ಕಳೆದಾಗ ಚಿಲ್ಲರೆ ಆಯುವ ಗೋಳು,
ಬಾಳಲ್ಲಿ ಬಂದು ಚದುರಿ ಹೋಗುವ ಆ ಕನಸುಗಳು!

ಧಾರಾಕಾರ ಮಳೆಯ ನಿರೀಕ್ಷೆಯಿತ್ತ ಕಾರ್ಮೋಡಗಳು,
ಸರಿದು ಭಗ್ನವಾದ ನಂಬಿಕೆ ಈ ಚದುರಿದ ಕನಸುಗಳು!

ಮಂಜುಳಾ ಪ್ರಸಾದ್

 

ವಿಡಿಯೋ
ವಿಡಿಯೋ

ಮಂಜುಳಾ ಪ್ರಸಾದ್

ಮಂಜುಳಾ ಪ್ರಸಾದ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯವರು. ಪ್ರಸ್ತುತ ಬೆಂಗಳೂರಿನ ಯಲಹಂಕ ವಾಸ್ತವ್ಯ. ವೃತ್ತಿಯಲ್ಲಿ ಶಿಕ್ಷಕಿ. ಪ್ರವೃತ್ತಿಯಲ್ಲಿ ಬರಹಗಾರ್ತಿ. ಚಿಕ್ಕಬಳ್ಳಾಪುರ ತಾಲ್ಲೂಕಿನ ಯಲುವ ಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಬರೆದಿರುವ ಕತೆ, ಕವನ, ಲೇಖನ ಹಾಗೂ ಧಾರವಾಹಿ ಸಂಚಿಕೆಗಳು ಪತ್ರಿಕೆ ಹಾಗೂ ಆನ್ ಲೈನ್ ವೇದಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.

More About Author