Poem

ದೀಪದನಲ

ಬಾನಿನ ನೊಸಲಲಿ ಚಿತ್ರ ಬಿಡಿಸದಿರಿ ಹಕ್ಕಿಗಳೆ
ಸಾಲ್ಮರದ ಗೂಡುಗಳಲಿ ಕೂಡಿದ ನೆನಪಿನಲಿ
ಸೃಷ್ಟಿ ಕಾವ್ಯದ ಕಣ್ಹನಿ ಸಾಲ್ಗಳನು ಬರಿದೇ ಹಾಡಲೆ
ಅನುರಾಗ ಮರೆತ ನೀಲಿ ಕೊರಳಲಿ

ನೀಲಿ ಹಕ್ಕಿಗಳು ಬಾನಿಗೇರಿ ತುಂಬಿದ ಕಂಬನಿಗಳಲಿ
ಮೈಪಡೆದ ಮುಗಿಲಲಿ ಸಿಂಗರಿಸಿವೆ ಕಪ್ಪು ಮೋಡ
ಎದೆ ಇರಿದ ಮೊನಚಾದ ನಗೆ ಮುಳ್ಳಿನಲಿ
ಹೃದಯ ಹಿಸುಕಿದ ಹನಿ ಮನ ನಿಗೂಢ

ಮಂದ ಬಿಳುಪಿನಲಿ ಬಿರಿದ ಸಂಜೆ ಮಲ್ಲಿಗೆ ಹೂವು
ಮಧು ಸುರಿಸಿದೆ ಅವಳ ನೆನಪಿನ ಧಾರೆಯಲಿ
ಎಂದೂ ಉರಿಯದ ಸಂಜೆಯ ಬೆಳಕಿನ ಕಾವು
ಕಣ್ಗಳ ನಗುವ ಅಳಿಸಿದೆ ಆಳ ಪ್ರಪಾತದಲಿ

ಬಾರದಿರಿ ಭಾವಗಳೆ ಅವಳ ನೆನಪುಗಳನಾಯ್ದು
ನೇಯದಿರಿ ಕರಿತೆರೆ ಅರುಣೋದಯದ ಹೊಸ್ತಿಲಲಿ
ಕಾಡದಿರಿ ನನ್ನ ಮನವ ಅವಳ ನಿಶೆ ಹೊಯ್ದು
ಬಿತ್ತದಿರಿ ಹೊಸ ಸಂಚಿನ ಕನಸ ಬತ್ತಿದೆದೆಯಲಿ

ಹಸುಗೂಸ ಕಣ್ಣ ಭಾವಗಳ ಸಾಲಿರಿಸಿ
ಹೊತ್ತಿಸಿದೆ ಸುಡುವ ದೀಪದನಲ
ಎದೆ ಮುಟ್ಟಿದ ಆಸೆಗಳು ತೀರಿದವು ಹಠ ಹಿಡಿದು
ಸಾಕಿನ್ನು ಮ‌ತ್ತೆ ಬೆಳಕು ಹೊತ್ತುತ್ತಿರೆ ಹಾಸದಿರು ಕತ್ತಲ ಪತ್ತಲ

 

ವಿಡಿಯೋ
ವಿಡಿಯೋ

ಶ್ರೀರಾಜ್ ಎಸ್. ಆಚಾರ್ಯ

ಶ್ರೀರಾಜ್ ಎಸ್. ಆಚಾರ್ಯ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿಯವರು. 1997 ಆಗಸ್ಟ್ 17 ರಂದು ಜನನ. `ಕಾವ್ಯ ಬೈರಾಗಿ' ಎನ್ನುವ ಕಾವ್ಯ ನಾಮದಿಂದ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ವಕ್ವಾಡಿಯಲ್ಲಿ, ಪದವಿ ಪೂರ್ವ ಶಿಕ್ಷಣ ಮತ್ತು ಪದವಿ ಶಿಕ್ಷಣವನ್ನು ಭಂಡಾರ್ ಕಾರ್‍ಸ್ ಕಾಲೇಜು ಕುಂದಾಪುರ ಹಾಗೂ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ನಿರ್ವಹಿಸಿರುವ ಅವರು ಉಡುಪಿಯ ಸ್ಥಳಿಯ ದೃಶ್ಯ ಮಾಧ್ಯಮ “ಪ್ರೈಮ್ ಟಿವಿ”ಯಲ್ಲಿ ಮೂರು ವರ್ಷಗಳ ಕಾಲ ಸುದ್ದಿ ವಾಚಕರಾಗಿ, ಸುದ್ದಿ ವಿಶ್ಲೇಶಕರಾಗಿ, ಸಂದರ್ಶಕರಾಗಿ, ಕಾರ್ಯಕ್ರಮ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಹಲವಾರು ಲೇಖನಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಹಾಗೂ ವಾರಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕೃತಿಗಳು: ರಿಕ್ತ ನಕ್ಷತ್ರ(ಕವನ ಸಂಕಲನ), ಚಲಿಸುವ ಮೋಡಗಳ ಮಧ್ಯದಿ(ಕವನ ಸಂಕಲನ), ಕತ್ತಲೆಯ ಬೆತ್ತಲು(ಕಥಾ ಸಂಕಲನ), ಕೆಂಪು ಕೊರಳ ಹಕ್ಕಿ(ಕವನ ಸಂಕಲನ)

More About Author