Poem

ದೇವರ ಹೆಸರಿನಲ್ಲಿ ಭೂತವನ್ನು ಕುಣಿಸಬಹುದು !

ಕನ್ನಡಿ ಸಹ ಸುಳ್ಳಾಗುವ ಸಂಭವ
ಇದದ್ದು ಇದ್ದಂತೆ ತೋರದೆ
ಸಣ್ಣದುದು ದಪ್ಪವಾಗಿ
ದಪ್ಪವಾಗಿರುವುದು ಸಣ್ಣದಾಗಿ
ಕುಬ್ಜ ಎತ್ತರಿಸಿ ಎತ್ತರ ಕುಬ್ಜವಾಗಿಸಿ
ತನ್ನ ದ್ವಂದ್ವನಿಲುವಿನ ಕಾರಣ
ಅಪಹಾಸ್ಯಕ್ಕೀಡಾದರೂ ಪವಾಡ-
ಸದೃಶಮಾಯಗನ್ನಡಿಯಾಗುವ ವೈಚಿತ್ರ್ಯ

ಭಾವಚಿತ್ರಗಳಲೊ ವ್ಯಕ್ತಿ ಬಣ್ಣಬದಲಾಗಿ
ಗೋವು ವ್ಯಾಘ್ರವಾಗಿ
ವ್ಯಾಘ್ರ ಗೋವಾಗಿ ಕಾಮಣಿ ಕಣ್ಣಿಗೆ
ಜಗ ಹಳದಿ ಹಳದಿಯಾಗಿ ಗೋಚರಿಸುವುದು

ಈಗಂತೂ ಎಡಿಟ್ ಕಾಲ ಇದದ್ದು
ಡಿಲೀಟ್ ಕೂಡ ಮಾಡಬಹುದು
ನಡೆದು ಹೋದ ಘಟನಾವಳಿಗಳನ್ನು
ಮನಬಂದಂತೆ ಮರುಸ್ಥಾಪಿಸಿಕೊಳ್ಳಬಹುದು
ಮನುಷ್ಯಮುಖದ ಕುರೂಪವನ್ನು ಮನದ ಕರಾಳ ಸ್ವರೂಪವನ್ನು ಸ್ವರ್ಗೀಯವಾಗಿ ಬಿಂಬಿಸಬಹುದು

ಇತಿಹಾಸದ ಬುಡಕೆ ಕೊಳ್ಳಿಇಟ್ಟು ಪುಸ್ತಕದ
ಪುಟಗಳಲಿ ಬೆಂಕಿಹಚ್ಚುವುದು ಸುಲಭವೀಗ
ಅವಶೇಷಗಳಡಿ ಹೆಣವಾದ ಮನುಷ್ಯ
ಮಾರಕಘನಘೋರದುರಂತಗಳನ್ನು ಹೆಕ್ಕಿತೆಗೆದು
ದೇವರ ಹೆಸರಿನಲ್ಲಿ ಭೂತವನ್ನು ಕುಣಿಸಬಹುದು

ಏನೂ ಅರಿಯದ ಮುಗ್ಧಪವಿತ್ರ
ಶ್ವೇತಶುಭ್ರಹೃದಯಹಾಳೆಯ ಮೇಲೆ
ಇಲ್ಲಸಲ್ಲದ್ದು ಗೀಚಿ
ನಾಳಿನ ನಾಗರೀಕರನ್ನು
ದ್ವೇಷದ ಪ್ರತಿನಿಧಿಗಳಾಗಿ ರೂಪಿಸಬಹುದು!

- ಅಶ್ಫಾಕ್ ಪೀರಜಾದೆ.

ಅಶ್ಫಾಕ್ ಪೀರಜಾದೆ

ಕವಿ ಅಶ್ಫಾಕ್ ಪೀರಜಾದೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಸದ್ಯ, ಧಾರವಾಡದಲ್ಲಿ ನೆಲೆಸಿದ್ದು, ವೃತ್ತಿಯಿಂದ, ಪಶು ಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು. 

ಕೃತಿಗಳು: ಪ್ರೇಮವೆಂದರೆ, ಜನ್ನತ್ ಮತ್ತು ಇತರ ಕಥೆಗಳು (ಕಥಾಸಂಕಲನಗಳು), ಮನೋಲೋಕ, ಒಂದು ಜೋಡಿ ಕಣ್ಣು, ನನ್ನೊಳಗಿನ ಕವಿತೆ (ಕವನ ಸಂಕಲನಗಳು)  

More About Author