Poem

ಧ್ಯಾನ 

ಇಳಿಸಂಜೆಯಲಿ ನವಿರಾಗಿ ಮೈಸೋಕಿದ
ನಿನ್ನ ನೆನಪಿನ ತಂಗಾಳಿ
ಪುಳಕಗೊಂಡ ಮನಕೀಗ
ನಿನ್ನದೇ ಧ್ಯಾನ

ಭೋರ್ಗರೆಯುವ ನನ್ನ ಭಾವನದಿ
ನಿನ್ನೆದೆಯ ಹರವಿನಲಿ
ಶಾಂತವಾಗುವುದು ಕಂಡು
ಸೋಜಿಗಗೊಂಡಿದೆ ಮನ..!!

ಕತ್ತಲಿನ ಏಕಾಂತಕೆ
ನಿನ್ನೊಲವಿನ ದೀಪ
ಹಚ್ಚಿಬಿಡು ಕತ್ತಲಿಗೊಂದು
ಜೊತೆಯಾದರೂ ಸಿಕ್ಕೀತು....

ನಿನ್ನ ಕಣ್ಣಲಿ ನಾನು
ನನ್ನ ಕಣ್ಣಲಿ ನೀನು
ಕಳೆದು ಹೋಗುವ ಗಳಿಗೆಗೆ
ಸಾಕ್ಷಿಯಾದರೂ ಆದೀತು....

- ಗೀತಾ ಶ್ರೀಧರ ಯಾಳಗಿ

ಗೀತಾ ಶ್ರೀಧರ ಯಾಳಗಿ

ಗೀತಾ ಶ್ರೀಧರ ಯಾಳಗಿ ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡದವರು. 1979ರ ಮಾರ್ಚ್ 25 ರಂದು ಜನನ. ಗಜೇಂದ್ರಗಡದ ಎಸ್.ಎಂ.ಭೂಮರಡ್ಡಿ ಕಾಲೇಜಿನಿಂದ ಬಿಎ ಪದವಿ ಪಡೆದರು.  ಪ್ರವೃತ್ತಿಯಿಂದ ಕವಯತ್ರಿ, ಇವರ ಕಾವ್ಯ ಕಸೂತಿಗೆ ಸದಭಿರುಚಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘ ಧಾರವಾಡ ಆಯೋಜಿಸಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದಕ್ಕಿದೆ.

ಕರ್ನಾಟಕ, ಮುಂಬೈ ಸೇರಿದಂತೆ ಅನೇಕ ಹೊರರಾಜ್ಯಗಳಲ್ಲಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪ್ರಾದೇಶಿಕ ವಿವಿಧ ಸಂಘ-ಸಂಸ್ಥೆಗಳಿಂದ ಸಾಹಿತ್ಯ ಕೃಷಿ ನಿಮಿತ್ಯ ಗೌರವಗಳು ಸಂದಿವೆ. ಅವರ ಕವನ ಸಂಕಲನ ಸುಖಿಗೀತ ಪ್ರಕಟಗೊಂಡಿದೆ. ಓದು, ಬರವಣಿಗೆ, ಪ್ರವಾಸ, ಹೊಲಿಗೆ, ಕಸೂತಿ ಇವರ ಹವ್ಯಾಸಗಳು.

More About Author