Story

ದೊಂದಿ

ಲೇಖಕ ಸಂತೋಷ್ ಅನಂತಪುರ ಅವರು ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರದವರು. ಪ್ರಸ್ತುತ ಬೆಂಗಳೂರಿನಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಥೆ-ಕವನ - ಲೇಖನಗಳು ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಅವರು ಬರೆದಿರುವ ‘ದೊಂದಿ’ ಕತೆ ನಿಮ್ಮ ಓದಿಗಾಗಿ...

'ರಾತ್ರಿ ಬೀಸುತ್ತಿದ್ದ ತಂಗಾಳಿಯಲ್ಲಿ ರಮ್ಯತೆಯೊಂದಿಗೆ ವಿಷಾದವೂ ಬೆರೆತಂತಿತ್ತು. ಅರ್ಧ ತೆರೆದಿದ್ದ ಕಿಟಕಿಗಳು ಗಾಳಿಗೆ ‘ದಫ್..ದಫ್’ ಎಂದು ಗೋಡೆಗೆ ಬಡಿಯುತ್ತಾ, ಬೇಕೋ ಬೇಡವೋ ಎನ್ನುವಂತೆ ಒಲ್ಲದ ಮನಸ್ಸಿನಿಂದ ಗಾಳಿಯನ್ನು ಅರೆಬರೆಯಾಗಿ ಒಳಕ್ಕೆ ಬಿಟ್ಟುಕೊಂಡಿತು.' -ಸರಭೇಶ ವಾರದ ಧಾರಾವಾಹಿಯನ್ನು ‘ಸಶೇಷ’ಗೊಳಿಸಿದ.

ಹಾಳೆಗಳಲ್ಲಿ ಅಕ್ಷರ ಭಾರವನ್ನು ಹೊತ್ತ ಭಾವನೆಗಳನ್ನು ಕವರಿನೊಳಕ್ಕೆ ತಳ್ಳಿ, ಪತ್ರಿಕೆಯ ವಿಳಾಸವನ್ನು ಬರೆದು, ಪಕ್ಕದಲ್ಲಿದ್ದ ಅಂಟಿನ ಬಾಟಲಿಗೆ ಬೆರಳದ್ದಿಸಿ, ಕವರಿನ ಬಾಯನ್ನು ಮುಚ್ಚಿ,ಗಾಂಧಿ ಚಿತ್ರದ ಅಂಚೆಚೀಟಿಗಾಗಿ ತಡಕಾಡಿದ. ಗಾಂಧಿ ಸಿಗದೆ ಪಟೇಲರು ಸಿಕ್ಕರೂ, ಗಾಂಧಿ ಭೇಟೆಯನ್ನು ಸರಭೇಶ ನಿಲ್ಲಿಸಲಿಲ್ಲ. ಮಿದು ಬೆಳಕೊಳಗಡೆ ಗಾಂಧಿ ದಕ್ಕಲಿಲ್ಲ. ಪಟೇಲರು ದಕ್ಕಿದ್ದೇ-ಕೈ ಬೆರಳಲ್ಲಿ ಹಸಿಯಾಗಿದ್ದ ಅಂಟನ್ನು ಅಂಚೆಚೀಟಿಗೆ ಹಚ್ಚಿ, ಕವರಿನ ಬಲಭಾಗದ ಮೇಲಕ್ಕೆ ಅಂಟಿಸಿದ.

‘ರಸ್ತೆಯ ತಿರುವಿನಲ್ಲಿ ಸಿಗುವ ಅಂಚೆ ಡಬ್ಬದೊಳಕ್ಕೆ ನಾಳೆ ಹಾಕಿದರಾಯಿತು’ ಅಂದುಕೊಂಡು ಹೆಗಲಲ್ಲಿ ನಿತ್ಯ ಜೋಗುಳ ತೂಗುವ ಜೋಳಿಗೆಯೊಳಕ್ಕೆ ಕವರನ್ನಿಳಿಸಿದ.

ಡಿಪ್ರೆಶನ್ ತಂದಿತ್ತ ನಶ್ವರ ಭಾವನೆಯು ಕ್ರಮೇಣ ಬದುಕಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವಂತೆ ಮಾಡಿದ್ದಲ್ಲದೆ, ’ಪ್ರಕಾಶ್ ಬೀಡಿ’ಯನ್ನೂ ಸರಭೇಶನಿಗೆ ಅತ್ಯಾಪ್ತವನ್ನಾಗಿಸಿಬಿಟ್ಟಿತ್ತು. ಥಂಡಿಗೆ ಪಸೆ ಹಿಡಿದು ಸರಿಯಾಗಿ ಉರಿಯದ ಬೀಡಿಯದ್ದು ಬೇರೆನೇ ಘಾಟು. ಕೋಣೆ ತುಂಬಾ ಬೀಡಿಯ ಹೊಗೆಯು ತೇಲುತ್ತಾ.. ವಾಲುತ್ತಾ..ಗಾಳಿಯಲ್ಲಿ ಲೀನವಾಗಲು ಬಳಕಾಡುತ್ತಿತ್ತು.

ಅಟ್ಟದ ಕೋಣೆಯ ಅರೆತೆರೆದ ಕಿಟಕಿಗಳ ಸಂದಿನಿಂದ ಕ್ಷೀಣವಾದ ಬೆಳಕು ಹೊರ ಚೆಲ್ಲಲು ಪ್ರಯತ್ನಿಸುತ್ತಿತ್ತು. ಮಾಳಿಗೆಯ ಕಿಟಕಿಯವರೆಗೂ ಚಾಚಿಕೊಂಡ ಪಾರಿಜಾತವು ಸೂಸುವ ಪರಿಮಳಕ್ಕೆ ಸರಭೇಶನ ಬೀಡಿಯ ಹೊಗೆ ಅಡ್ಡಿಯಾಯಿತೇನೋ ಎನ್ನುವಂತೆ ಜೋರಾಗಿ ಗಾಳಿಯು ಬೀಸಲು ತೊಡಗಿತು.

ಟೇಬಲಿನ ಮೇಲಿದ್ದ ಹಾಳೆಗಳು, ಪುಸ್ತಕಗಳೆಲ್ಲಾ ಹರಡಿ ಚೆಲ್ಲಿಕೊಂಡು ಬಿದ್ದಿದ್ದವು. ಬೂದಿ ಮೆತ್ತಿಕೊಂಡ ವಸ್ತುಗಳೆಲ್ಲಾ ಸೇರಿ, ವ್ಯಸ್ತವೆಂದುಕೊಂಡಿದ್ದ ಕೋಣೆಯು ಅಸ್ತವ್ಯಸ್ತಗೊಂಡಿತ್ತು. ಕೋಣೆ ತುಂಬಾ ಸಾಮ್ರಾಣಿ ಧೂಪದಂತೆ ಬೀಡಿಯ ಹೊಗೆಯು ಘಮ್ಮೆಂದು ಆವರಿಸಿಕೊಂಡಿತ್ತು.

ನಶ್ವರವೆಂದು ಭಾವಿಸಿದ್ದ ಬದುಕು ರಂಗೀಲವೂ ಹೌದೆಂಬ ಅರಿವು ಸರಭೇಶನಿಗಾಗಲು,ಬದುಕಿನ ಕೋಣೆಯೊಳಗೆ ಪ್ರವೇಶಿಸಿದವನಿಗೆ ನಿರ್ಗಮಿಸುವ ದಾರಿ ಯಾವುದೆಂದು ತೋಚಲಿಲ್ಲ.

***
ಖಿನ್ನತೆ ಎಂಬ ಭಾಗ್ಯವು ತೋರಿದ ನಿರ್ಗಮನದ ಹಾದಿಯ ಮೂಲಕ ಸರಭೇಶ ಕಥಾವಲಯಕ್ಕೆ ಪರಿಚಿತನಾದ.ಕತೆ ಬರೆಯಲೆಂದೇ ಕೂತವನಲ್ಲ ಆತ. ಹುದುಗಿದ್ದ-ಮಲಗಿದ್ದ, ಬಲಿತಿರದ-ಮಾಗಿರದ, ಬಿಡಿ ಬಿಡಿಯಾಗಿದ್ದ-ಹರಡಿದ್ದ ಎಳೆಗಳೆಲ್ಲವೂ ಸೇರಿ, ಸೆಳೆತಗಳೆದ್ದು ಕತೆಯಾದವನು ಸರಭೇಶ. ಹೊರಕ್ಕೆ ದಬ್ಬಲ್ಪಟ್ಟ ಎಲ್ಲವನ್ನೂ ಹಾಳೆಗಳ ಮೇಲೆ ಕಕ್ಕುತ್ತಲೇ ನಡೆದ. ಒಳಗಿನ ಒತ್ತಡವು ಬರೆಯುವಂತೆ ಪ್ರೇರೇಪಿಸಿ ಹೊಸ ದಿಶೆಯತ್ತ ಅವನನ್ನು ಚಲಿಸುವಂತೆ ಮಾಡಿದ್ದೇ-ಆವೇಶ ಬಂದವನಂತೆ ಬರೆದ, ಬರೆಯುತ್ತಲೇ ಹೋದ.

ಬರೆದ ಕತೆಯನ್ನು ಪತ್ರಿಕೆಗೆ ಕಳುಹಿಸಿದರೆ,

“ಕತೆ ಚೆನ್ನಾಗಿದೆ. ಇದನ್ನು ಧಾರಾವಾಹಿಯನ್ನಾಗಿ ಯಾಕೆ ಮಾಡಬಾರದು? ಈ ನಿಟ್ಟಿನಲ್ಲಿ ತುರ್ತಾಗಿ ಯೋಚಿಸಿ ಉತ್ತರಿಸಿರಿ” -ಸರಭೇಶನನ್ನು ಪತ್ರಿಕೆಯು ಕೇಳಿಕೊಂಡದ್ದು ಖುಷಿಯ ಜೊತೆಗೆ ಸಣ್ಣಮಟ್ಟಿನ ಆತಂಕವನ್ನೂ ಅವನಿಗೆ ತಂದಿಕ್ಕಿತು.

ಕತೆಯನ್ನು ಧಾರಾವಾಹಿಯನ್ನಾಗಿಸಲು ಕುಳಿತವನ ತಲೆಯೊಳಗೆ ಹಲವು ಪಾತ್ರಗಳು ವಿವಿಧ ವೇಷಗಳನ್ನು ಧರಿಸಲು ಸಜ್ಜಾದವು. ಪುಂಡುವೇಷದಿಂದ ಹಿಡಿದು ಬಣ್ಣದ ವೇಷಗಳ ತನಕ ಹಸಿರು, ಬಿಳಿ, ಕಪ್ಪಿನಲ್ಲಿ ಪಾತ್ರಗಳರಳಿ ಬೆಳಗಿದವು. ಕೀಚಕನನ್ನು ತಲೆಯ ಮೇಲೆ ಹೊತ್ತು,ಭೀಮನ ಮಣಭಾರವನ್ನು ಇಳಿಸಲು ಯತ್ನಿಸಿದ.ರಾವಣನನ್ನು ಹೊಸ ರೂಪದಲ್ಲಿ ಹೆತ್ತು,ರಾಮನ ರೂಪವನ್ನು ವಿರೂಪಗೊಳಿಸಲು ನೋಡಿದ. ತಬ್ಬಲಿಯು ನೀನಾದೆ ಮಗನೆ ಎಂದು ಹುಲಿಯ ಬಾಯಿಯಿಂದ ಹಾಡಿಸಿದ. ಹಸಿರು, ಬಿಳಿ ಬಣ್ಣಗಳು ಕಪ್ಪು ಬಣ್ಣಕ್ಕಿಂತ ಉತ್ಕೃಷ್ಟವಾದುದೇನಲ್ಲ ಎನ್ನುತ್ತಾ,ತನ್ನ ಚಿಂತನೆಗೆ ತಕ್ಕಂತೆ ಪಾತ್ರಗಳನ್ನು ಸೃಷ್ಟಿಸಿ, ಪೋಷಿಸುತ್ತಾ ನಡೆದ.

ತಾನು ಚಿತ್ರಿಸಿದ ಪಾತ್ರಗಳು ಎಬ್ಬಿಸಿದ ಭೀಕರ ಅಲೆಗಳು ತನ್ನ ಬುಡವನ್ನೇ ಅಲುಗಾಡಿಸಿದಂತಹ ಕ್ಷಣಗಳಲ್ಲೂ ವಿಚಲಿತನಾಗದೆ, ಅದರ ಉನ್ಮಾದದಲ್ಲಿ ತೇಲಿ ಮುಳುಗಿದ.ಭಿನ್ನ ಚಿಂತನೆಯ ಪಾತ್ರಗಳನ್ನು ಬಿತ್ತಿದ್ದಲ್ಲದೆ, ಅವುಗಳ ಹಾವ-ಭಾವಗಳನ್ನೆಲ್ಲಾ ಮೈಮೇಲೆ ಸುರಿದುಕೊಂಡು ಅನುಭಾವಿಸಿ ಅಭಿವ್ಯಕ್ತಿಸಿದ. ಹಠಕ್ಕೆ ಬಿದ್ದವರಂತೆ ಪ್ರವಾಹದ ವಿರುದ್ಧ ಈಜುತ್ತಲೇ ಹೋದ. ಬಹುತೇಕ ಕಣ್ಣೆದುರಿನ ವಿಚಾರಗಳನ್ನು ಪಾತ್ರಗಳ ಮೂಲಕ ಜರಿದು, ಕೆಲವೊಂದು ವಿಷಯ-ಪಾತ್ರವನ್ನು ವಿಜೃಂಭಿಸಿದ.ಇನ್ನು ಕೆಲವನ್ನು ಸಾಕಿ ಸಲಹಿದರೆ, ಮಿಕ್ಕ ಕೆಲವುಗಳನ್ನು ಪಟ್ಟನೆ ಕೊಂದು ಹಾಕಿ, ಅಳಿದುಳಿದವುಗಳನ್ನು ಆತ್ಮಹತ್ಯೆಗೆ ಪ್ರಚೋದಿಸಿದ.

ಝುಳುಝುಳು ನಿನಾದವನ್ನು ಕೇಳುತ್ತಿದ್ದ ಕಿವಿಗೆ ಅಬ್ಬರವು ಇಷ್ಟವಾಗಲು ಹೆಚ್ಚಿನ ಹೊತ್ತೇನೂ ಬೇಕಾಗಲಿಲ್ಲ.‘ಕೋಮಲ ರಿಷಭ ಅಸಾವರಿ’ಯಲ್ಲಿನ ಕೋಮಲವು ಕಳೆದೇ ಹೋಗಿಬಿಟ್ಟಿತು. ದೀಪವನ್ನು ಬೆಳಗಿಸಬೇಕಾದ ಕೈಗಳಿಗೆ ಬೆಂಕಿಯಿಂದ ಸುಡಲು ಹೆಚ್ಚಿನ ಸಮಯ ಹಿಡಿಯಲಿಲ್ಲ. ಅನ್ನವನ್ನು ಬೇಯಿಸುತ್ತಾ, ದೇವರ ಗೂಡನ್ನು ಬೆಳಗಿಸುತ್ತಲೇ,ಮನೆ-ಮನವೆರಡನ್ನೂ ಬೆಂಕಿಯು ಸುಟ್ಟು ಬೂದಿ ಮಾಡಿಬಿಟ್ಟಿತು. ಬೆಂಕಿಯನ್ನು ಹಿಡಿಯುವ ಕೈಗೆ ಸದ್ಬುದ್ಧಿ ಸಿಗಲೆಂದು ಪಾತ್ರಗಳ ಮೂಲಕ ಸರಭೇಶ ಹೇಳಿಸಿದರೂ, ತಾನು ಹಚ್ಚುತ್ತಿರುವ ಕಿಚ್ಚಿನ ಅರಿವು ಅವನಿಗೆ ತಿಳಿಯಲೇ ಇಲ್ಲ.

ದುಃಖದ ಕೈಯಲ್ಲಿ ಸುಖವನ್ನಿಟ್ಟ.ಸುಖದ ಕೈಯಲ್ಲಿ ದುಃಖವನ್ನೀಯುತ್ತಲೇ ಅವೆರಡನ್ನೂ ಕಿತ್ತು ವೈರಾಗ್ಯವನ್ನು ಕೊಟ್ಟು ನೋಡಿದ. ರಂಗಸ್ಥಳದಲ್ಲಿ ಪಾತ್ರಗಳು ಹುಚ್ಛೆದ್ದು ಕುಣಿಯಲು ತೊಡಗಿದವು. ಪಾತ್ರಗಳು ತನ್ನ ಕೈ ತಪ್ಪಿ ಹೋಗುತ್ತಿರುವುದನ್ನು ಕಂಡೂ ಸುಮ್ಮನಾದ.ನಡು ಬೀದಿಯಲ್ಲಿ ತಾನೂ ಒಂದು ದಿನ ಬೆತ್ತಲಾಗುತ್ತೇನೆಂಬ ಕಲ್ಪನೆಯೂ ಇಲ್ಲದೆ, ಇನ್ನೊಬ್ಬರ ತೆವಲನ್ನು ಬೆತ್ತಲು ಮಾಡುತ್ತಲೇ ಹೊರಟ. ಅಲ್ಲಿದ್ದದ್ದನ್ನು ಇಲ್ಲಿಗೆ,ಇಲ್ಲಿದ್ದದ್ದನ್ನು ಅಲ್ಲಿಗೆ ತಂದಿಟ್ಟು ಮಜವನ್ನು ಅನುಭವಿಸಿ, ತಾನು ಏನೂ ಆಗದೆ.. ಏನೇನೋ ಆಗಲು ಪ್ರಯತ್ನಪಟ್ಟ.

ಈ ನಡುವೆ ಸರಭೇಶನಿಗೆ ವಿಸ್ತಾರವಾದ ಓದುಗ ವರ್ಗವೊಂದು ಸೃಷ್ಟಿಯಾಯಿತು. ಪರಿಣಾಮ ತಾನೂ ವಿಸ್ತಾರಗೊಂಡಿದ್ದಲ್ಲದೆ ತನ್ನ ಬಳಗವನ್ನೂ ವಿಸ್ತರಿಸಿಕೊಂಡ. ಧಾರಾವಾಹಿಯ ಬಗ್ಗೆ ರಾಗ-ವೈರಾಗ್ಯದ ಅಭಿಪ್ರಾಯಗಳು ಅಂಚೆ ಕಾರ್ಡಲ್ಲಿ ವಿನಿಮಯಗೊಂಡದ್ದೇ-ಸರಭೇಶನ ಮನೆಗೆ ಅಂಚೆಯಣ್ಣನ ಭೇಟಿ ಖಾಯಂ ಆಯಿತು.

***
ಹೊಸತನದಿಂದ ಕೂಡಿರುತ್ತಿದ್ದ ಸರಭೇಶನ ಕತೆಗಳು ಸಿದ್ಧಸೂತ್ರಗಳ ಹೊರಕ್ಕೆ ಚಾಚಿಕೊಂಡವುಗಳಾಗಿದ್ದುವು. ಹೀಗೇ ಇರಬೇಕೆಂಬ ಕತೆಯ ಚೌಕಟ್ಟಿನ ಕಟ್ಟನ್ನು ಕೆಡಹುವಲ್ಲಿ ತಕ್ಕಮಟ್ಟಿಗೆ

ಆತ ಯಶಸ್ವಿಯೂ ಆದ. ವರ್ತಮಾನದ ಅತಿರೇಖಗಳನ್ನು ಬಿಂಬಿಸಿ ರಂಜಿಸಿ, ಗತಕ್ಕೆ ಗಂಟು ಬಿದ್ದು ಒಂದೊಂದನ್ನೇ ಹೆಕ್ಕಿ ರಸವತ್ತಾಗಿ ಉಣಿಸಿದ. ಇತಿಹಾಸಕ್ಕೆ ಹೊಸ ಭಾಷ್ಯೆ ಬರೆದ.ಭವಿಷ್ಯದ ಬಗ್ಗೆ ಟೊಳ್ಳು ಆಸೆಗಳ ಬೀಜವನ್ನು ಬಿತ್ತಿ, ಸುಂದರ ಬದುಕನ್ನು ಕುರೂಪಿಯನ್ನಾಗಿಸಿ ಹೇಳಬಾರದ್ದನ್ನು ಹೇಳಿದ. ಅನುಭವಿಸಲಾಗದ್ದನ್ನು ಅನುಭವಿಸಿ, ಅನುಭವಿಸಬೇಕೆಂದುಕೊಂಡದ್ದನ್ನು ಅನುಭಾವಿಸಿ ಬರೆದ. ಸಂಪ್ರದಾಯವನ್ನು ಮುರಿಯುತ್ತಲೇ, ಪರಂಪರೆಯನ್ನು ಎತ್ತಿ ಹಿಡಿದು ಗ್ರಹಿಕೆಗಳನ್ನು ಬದಲಿಸಿ, ನೋಟಗಳನ್ನು ತೀಕ್ಷ್ಣಗೊಳಿಸಿದ. ತಪ್ಪುಗಳನ್ನು ಸರಿ ಎನ್ನುತ್ತಲೇ ಸರಿಯನ್ನು ತಪ್ಪೆಂದ. ಯಾರಿಗೂ ಹೊಳೆಯದ ಒಳನೋಟಗಳಿಗೆ ಸಾಕ್ಷಿಯಾದದ್ದೇ-ವಿತಂಡವಾದವೇ ಶ್ರೇಷ್ಠವಾದುದು ಎಂದು ರುಜು ಹಾಕಿದ.

ಎಡಬಿಡಂಗಿಯೂ ಆಗಿ, ಗೋಸುಂಬೆಯೆಂದು ಜರಿಯುವವರ ಬಾಯಲ್ಲಿ ಜರಿಯಲ್ಪಟ್ಟರೂ, ತನಗನಿಸಿದ್ದನ್ನು ಸರಭೇಶ ಬರೆಯುತ್ತಲೇ ಹೋದ. ಕೆಲವು ಸಿದ್ಧಾಂತಗಳನ್ನು ಅಪ್ಪಿಕೊಂಡರೆ ಇನ್ನು ಕೆಲವನ್ನು ತೆಗಳಿ,ತನ್ನದೇ ಅದ ಕೋಠಿಯನ್ನು ಕಟ್ಟಿಕೊಂಡು ತನ್ನಿಷ್ಟಗಳನ್ನೂ ಪೂರೈಸಿಕೊಂಡ. ಕೆಲವೊಂದು ಕತ್ತಲ ಬದುಕಿಗೆ ಬೆಳಕನ್ನು ಹರಿಸಿದರೆ,ಬೆಳಕಿರುವ ಇನ್ನೊಂದಿಷ್ಟು ಬಾಳನ್ನು ಕತ್ತಲಾಗಿಸಿದ. ಚಿವುಟಿ, ಅಮುಕಿ, ಕುಟುಕಿ, ನಡೆಸಿ, ಮುದ್ದಿಸಿ, ಅತ್ತು, ನಕ್ಕು, ಅಳಿಸಿ, ಉಳಿಸಿ…ಹೀಗೆ ಒಂದೊಂದೇ ಸೂತ್ರಗಳನ್ನು ಕಟ್ಟಿ, ಒಂದೊಂದಾಗಿ ಅವುಗಳನ್ನೆಲ್ಲಾ ಒಡೆಯುತ್ತಾ ಸಾಗಿದ ಸರಭೇಶನ ಅಕ್ಷರಯಾತ್ರೆ ಎಗ್ಗಿಲ್ಲದೆ ಮುನ್ನುಗ್ಗಿತು. ದೈನಂದಿನ ಆಗು ಹೋಗುಗಳ ಭಾವ-ರೂಪಗಳನ್ನು ವೇಷಾಂತರಿಸಿ ಧಾಟಿಸಿದ.ಹೊಸ ಪಾತ್ರಗಳನ್ನು ಸೃಜಿಸುವ ನಿಟ್ಟಿನಲ್ಲಿ ಹಳೆಯ ಪಾತ್ರಗಳನ್ನು ಕೊಂದರೆ, ಇನ್ನು ಕೆಲವನ್ನು ನಾಪತ್ತೆಯಾಗಿಸಿದ.

ಕತೆಯು ಧಾರಾವಾಹಿಯ ರೂಪದಲ್ಲಿ ಅದ್ಭುತ ಪ್ರದರ್ಶನವನ್ನು ಕಂಡಿತು. ಕತೆಯನ್ನು ಸರಭೇಷ ಮುಗಿಸುತ್ತೇನೆಂದರೂ, ಪತ್ರಿಕೆ ಮತ್ತು ಓದುಗರು ಬಿಡಲಿಲ್ಲ.

“ಕತೆಯನ್ನು ಮುಂದುವರಿಸಿ”ಎಂದು ಸರಭೇಶನನ್ನು ಪತ್ರಿಕೆಯು ಕೇಳಿಕೊಂಡಿತು.

“ಕತೆ ಮುಗಿದಿದೆ. ಮುಂದುವರಿಸುವುದರಲ್ಲಿ ಅರ್ಥವಿಲ್ಲ”ಎಂದು ಸರಭೇಶ ಕೇಳಿಕೊಂಡರೂ, ಪತ್ರಿಕೆಯು ಒಪ್ಪಲಿಲ್ಲ.

“ನಿಮ್ಮ ಕತೆಯು ಓದುಗರ ಪ್ರೀತಿಗೆ ಪಾತ್ರವಾಗಿದೆ. ವಾರದಿಂದ ವಾರಕ್ಕೆ ಓದುಗರ ಸಂಖ್ಯೆ ಏರುತ್ತಲೇ ಇದ್ದು ಉತ್ತಮ ಪ್ರತಿಕ್ರಿಯೆ, ಅಭಿಪ್ರಾಯಗಳು ಬರುತ್ತಲೇ ಇವೆ. ನಿಮ್ಮ ಕತೆಯಿಂದಾಗಿ ಪತ್ರಿಕೆಯ ಮಾರಾಟವೂ ಹೆಚ್ಚಾಗಿದೆ ಮತ್ತು ನಿಮ್ಮ ಮಾರ್ಕೆಟ್ ವಾಲ್ಯೂ ಕೂಡ ಹೆಚ್ಚಿದೆ" -ಸರಭೇಶನಿಗೆ ಪತ್ರಿಕೆಯು ಮನವರಿಕೆ ಮಾಡಿಕೊಟ್ಟಿತು.

ಪತ್ರಿಕೆಯ ಮಾತುಗಳಿಂದ ಉತ್ಸಾಹಗೊಂಡ ಸರಭೇಶ, ಕತೆಯಲ್ಲಿ ಹೊಸಹೊಸ ತಿರುವುಗಳನ್ನು ತಂದು ಪಾತ್ರಗಳನ್ನು ಹಿಗ್ಗಿಸಿ, ಕುಗ್ಗಿಸಿ, ವಿಸ್ತರಿಸಿ, ಮುಗ್ಗರಿಸಿ ಪತ್ರಿಕೆಯ ಪ್ರಸಾರವನ್ನು ಇನ್ನೂ ಹೆಚ್ಚಾಗುವಂತೆ ಮಾಡಿದ. ಧಾರಾವಾಹಿಯು ಸರಭೇಶನನ್ನು ಪ್ರಚಾರದಲ್ಲಿರಿಸಿತು. ಹೆಚ್ಚೆಚ್ಚು ಓದುಗ ಅಭಿಮಾನಿಗಳು ಹುಟ್ಟಿದ ರೀತಿಗೆ ಅವನು ಬೆರಗಾಗಿ ಹೋದ. ಪತ್ರಿಕೆ ಮತ್ತು ಧಾರಾವಾಹಿಯು ಮಾರುಕಟ್ಟೆಯಲ್ಲಿ ಬೆಳೆದು ಬೆಳಗಿತು.

***
ಪತ್ರಿಕೆಯ ಏರುಗತಿಗೆ ತಕ್ಕಂತೆ ಕತೆಯನ್ನು ಹೆಣೆದ ಸರಭೇಶನಿಗೆ ತನಗೆ ಬರೆಯಬೇಕೆನಿಸಿದ್ದನ್ನು ಮಾತ್ರ ಅಷ್ಟರವರೆಗೂ ಬರೆಯಲಾಗಿರಲಿಲ್ಲ. ಸಮಯಾನುಸಮಯಕ್ಕೆ ಪತ್ರಿಕೆಯು ನೀಡುತ್ತಿದ್ದ ಸಲಹೆ, ಸೂಚನೆಗಳನ್ನು ಹಠಕ್ಕೆ ಬಿದ್ದು ಬದಿಗೊತ್ತಿ ತನ್ನ ಭಾವಕೋಶಗಳನ್ನು ತೆರೆದಿರಿಸಿದ.

ತಾನೇನು ಮಾಡಬೇಕೆಂದು ಮನದಲ್ಲೇ ಲೆಕ್ಕಾಚಾರಕ್ಕಿಳಿದವನು, 'ಬಾಲ್ಯವನ್ನು ವರ್ತಮಾನಕ್ಕೆ ತಂದು, ಯೌವ್ವನವನ್ನು ರಂಜಿಸಿ ಕಾಮನೆಗಳನ್ನು ಹಿಗ್ಗಿಸಬೇಕು. ಕಳೆದುದ್ದನ್ನು ಅರಸಬೇಕು. ನನ್ನ ಈ ಯಾತ್ರೆಯಲ್ಲಿ ಉಂಡ ಪ್ರೇಮಗಳನ್ನು ಹೆಕ್ಕಿಕೊಳ್ಳಬೇಕು’ ಅಂದುಕೊಂಡು, ಅವುಗಳೆಲ್ಲವನ್ನೂ ಪಟ್ಟಿ ಮಾಡಿದ.

ಅರಸಿ ಹೊರಟ ಯಾತ್ರೆಯಲ್ಲಿ ತಾನು ಪ್ರೇಮಿಸುತ್ತಿದ್ದ ಕಮಲ ನಯನೆಯನ್ನು ಕಂಡು ಮುಟ್ಟಿದ. ಅವಳಿಗರಿವಿಲ್ಲದೆಯೇ ಅವಳನ್ನು ಕಾಮಿಸುತ್ತಿದ್ದ ಬಗೆಗೆ ಅಕ್ಷರ ರೂಪವನ್ನು ಕೊಟ್ಟ. ಪಡೆದುಕೊಂಡದ್ದನ್ನು ಕ್ರಮೇಣವಾಗಿ ಕಳೆದುಕೊಳ್ಳುವ ಹಾದಿಯಲ್ಲಿರುವ ನಡುವಯಸ್ಸಿನ ಓದುಗರ ನಾಡಿ ಮಿಡಿತವನ್ನು ಹಿಡಿದದ್ದೇ, ಯುವ ಓದುಗರ ಸಂಖ್ಯೆ ಕಡಿಮೆಯಾಯಿತು. ಅಷ್ಟರಲ್ಲಿ ಪಡ್ಡೆಗಳ ಹೃದಯಕ್ಕೆ ಕಚುಗುಳಿಯಿಟ್ಟ. ರಾತ್ರಿಗಾಗಿಯೇ ಒಂದಷ್ಟು ಕನಸುಗಳನ್ನು ಹೊಸೆದುದರ ಪರಿಣಾಮ; ಧಾರಾವಾಹಿ ಹಿಗ್ಗುತ್ತಾ, ಜಗ್ಗುತ್ತಾ ಸಾಗಿ ಐವತ್ತರ ಸಂಭ್ರಮವನ್ನೂ ಆಚರಿಸಿ ನೂರರತ್ತ ದೃಷ್ಟಿ ನೆಟ್ಟಿತು.

ಕತೆಯಲ್ಲಿ ಪರಮ ಕುತೂಹಲವನ್ನು ಸೃಷ್ಟಿಸಿ ಓದುಗ ಮಹಾಶಯರನ್ನು ಸರಭೇಶ ತುದಿಗಾಲಲ್ಲಿ ನಿಲ್ಲಿಸಿದ. ಇತರರ ಬದುಕಿನ ಎಳೆಗಳನ್ನು ಹೆಕ್ಕಿಕೊಂಡು ಬರೆಯುತ್ತಿದ್ದ ಕತೆಯ ಪಾತ್ರಗಳಲ್ಲಿ ಜೀವಂತಿಕೆಯು ಸತ್ತು ಮಲಗಿತು. ಕತೆಯನ್ನು ವಿಸ್ತರಿಸಿದರೂ ಓದುಗರ ಅನುಭವಕ್ಕೆ ಯಾವುದೇ ಭಾವವು ನಾಟದೆ ಪತ್ರಿಕೆಯ ಪ್ರಸಾರ ಸಂಖ್ಯೆ ದಿಢೀರನೆ ಕುಸಿಯಿತು.

“ಹೊಸ ಕತೆಗಾರರು ಬರೆಯುತ್ತಿದ್ದಾರೆ. ಚೆನ್ನಾಗಿಯೂ ಇವೆ. ನೀವೂ ಹಾಗೆಯೇ ಬರೆಯಿರಿ” ಪತ್ರಿಕೆಯು ಸರಭೇಶನನ್ನು ಎಚ್ಚರಿಸಿತು.

‘ಎಲ್ಲರಂತೆ ನಾನಾದರೆ ನನ್ನಂತೆ ನಾನಾಗುವುದು ಯಾವಾಗ?’ಎಂಬ ಪ್ರಶ್ನೆಯು ಸಂಕಟವಾಗಿ ಕಾಡಿತು.

ಸರಭೇಶ ಕಲ್ಪನೆಗೆ ಮೊರೆಹೋದ.

ತಕ್ಕಮಟ್ಟಿಗೆ ಅದು ಯಶಸ್ಸನ್ನು ನೀಡಿತಾದರೂ,ಧಾರಾವಾಹಿ ಮತ್ತೆ ಮುಗ್ಗರಿಸಿತು. ವಿವಿಧ ಬಣ್ಣದ ದಾರಗಳಿಂದ ತನ್ನ ಒಂದೊಂದೇ ಅನುಭವಗಳನ್ನು ಹೊಲಿಯಲು ಕೂತ. ಕತೆ ಚಿಗುರಿ ರಂಗೇರಿಸಿಕೊಂಡಿತು. ತನ್ನನ್ನು ಮುತ್ತಿಕೊಳ್ಳುವ ಓದುಗರ ಸಂಖ್ಯೆ ಹೆಚ್ಚಾಗಿ, ನಿರೀಕ್ಷೆಯ ಮಟ್ಟ ಏರಿದ್ದನ್ನು ಕಂಡು ಸರಭೇಶ ದಿಗಿಲುಪಟ್ಟ.

ಬರೆಯುವ ಅವನ ಕೈ ಬಸವಳಿಯಿತು. ಒರೆಗೆ ಹಚ್ಚುವ ಬುದ್ದಿ ಮಂಕಾಗುವ ಸೂಚನೆ ಕಾಣಿಸಿತು. ಫಲವಾಗಿ ಹೊಸ ಹೊಳಹುಗಳು ಹೊಳೆಯುತ್ತಿರಲಿಲ್ಲ. ಸರಕು ಬರಿದಾದವೇನೋ ಎಂದವನಿಗನಿಸತೊಡಗಿತು. ಹಾಗಿದ್ದೂ ಜನಪ್ರಿಯತೆಯ ನಶೆಯಿಂದ ಹೊರಬರಲು ಅವನಿಂದ ಸಾಧ್ಯವಾಗಲಿಲ್ಲ.

ಒಂದೋ ಕತೆಯನ್ನು ಮುಗಿಸಬೇಕು. ಇಲ್ಲ ತನ್ನನ್ನು ತಾನು ಮುಗಿಸಿಬಿಡಬೇಕೆಂದು ಸರಭೇಶ ತೀರ್ಮಾನಿಸಿದ.

***
ಗತವನ್ನು ಬೆನ್ನಲ್ಲಿ ಕಟ್ಟಿಕೊಂಡು,ವರ್ತಮಾನದಲ್ಲಿ ಜೀವವನ್ನು ಅದ್ದಿಸಿ ಅನುಭವಿಸುತ್ತಾ,ಭವಿಷ್ಯದ ನಿರ್ಧಾರಗಳಿಗೆ ಸರಭೇಶ ಕಾಯುತ್ತಲಿದ್ದ.

‘ಕಟ್ಟಿಕೊಂಡ ಹೆಂಡತಿ ಇನ್ನೊಬ್ಬನ ಜೊತೆ ಓಡಿ ಹೋದಾಗಲೂ ನಾನು ವಿಹ್ವಲಗೊಳ್ಳಲಿಲ್ಲ. ಓಡಿ ಹೋದವಳನ್ನು ಮರೆಯಲು ಪ್ರಯತ್ನಿಸಿ ಸೋತೂ ಹೋಗಿದ್ದೆ. ಮರೆಯಲು ಯತ್ನಿಸಿದಷ್ಟೂ ಮತ್ತೆಮತ್ತೆ ವಿಧವಿಧವಾಗಿ ಹಲವು ರೂಪ-ಭಾವಗಳಲ್ಲಿ ಆಕೆ ಬಂದು ಇರಿದಳು’ ಎಂದು ಮನದಲ್ಲೇ ಅಂದುಕೊಂಡ.

ಕಾಡಿದವಳ ನೆನಪಿನ ಜೊತೆಗೊಂದು ಬಾರಿ ತೇಲಿ ಹೋದ. ಅವಳಿಂದ ಪಡೆದ ಸುಖವನ್ನು,ಹಡೆದು ಕೊಟ್ಟ ಮಗನನ್ನು ನೆನೆದು ಆಕೆಯನ್ನು ಕತೆಯಾಗಿಸದೆ ಸುಮ್ಮನುಳಿದುಬಿಟ್ಟ.

ಭಾವ ಒಡೆದು ಮನಸ್ಸು ಅಳುತ್ತಿತ್ತು.ಹೃದಯ ಕಂಗೆಟ್ಟು ಚೀರುತ್ತಿತ್ತು. ಎಂದಿನಂತೆ ಅವನ ಜಿಜ್ಞಾಸೆ ಮುಂದುವರಿದಿತ್ತು. ತಿರುಗಿ ನೋಡಿದಷ್ಟೂ ಚಾಚಿಕೊಳ್ಳುತ್ತಲೇ ಸಾಗುವ ನೆನಪುಗಳನ್ನು ಕಂಡು ಸರಭೇಶನ ಕೈಕಾಲುಗಳು ಬಸವಳಿಯಲು ತೊಡಗಿದವು.ಒಳಗೊಳಗೇ ಕುಂದುತ್ತಾ ಹೋದ ಅನುಭವವಾಗಲು, ಕತೆಗೆ ಅಂತ್ಯ ಕಾಣಿಸುವ ನಿರ್ಧಾರವು ಮನಸ್ಸಲ್ಲಿ ಮೂಡಿತು.

ಇಳೆಗೆ ಮುತ್ತಿಕ್ಕಿದ ಮಳೆಯ ಮೊದಲ ಸಿಂಚನದ ಅನುಭವ ಅವನಿಗಾಗಲು-ಟೇಬಲಿನ ಮೂಲೆಯಲ್ಲಿ ಬಿದ್ದಿದ್ದ ಅಷ್ಟೂ ಖಾಲಿ ಹಾಳೆಗಳನ್ನು ಕೈಗೆತ್ತಿ ಗಾಂಧಿ ಪಟದ ಪಕ್ಕದಲ್ಲಿಟ್ಟಿದ್ದ ಪೆನ್ನನ್ನು ಎತ್ತಿಕೊಂಡವನು ಬರೆಯಲು ಕೂತ.

ಸಂದರ್ಭ, ಸನ್ನಿವೇಶಗಳು ಮಥಿಸಿ ಕೆನೆಗಟ್ಟಿದವು. ಮುಂದೆ ನಡೆಯಲಿರುವುದನ್ನು ಇಂದೇ ಕಂಡುಕೊಳ್ಳಲು ಶಕ್ತವಾಗುವಂತಹ ಪಾತ್ರಗಳು ತಾವಾಗಿಯೇ ಅವನ ಬಳಿ ಬಂದು ಮಾತನಾಡ ತೊಡಗಿದವು-
"ಸ್ವಾತಿ..."ಎಂದು ಕರೆದ.
"ಹ್ಮ್..ಹೇಳು. ಹೇಳಿ ಬರಿದಾಗು, ಚಿರು..."ಎಂದಳು.
"ಎಲ್ಲಿಂದ ತೊಡಗಲಿ ಸ್ವಾತಿ?" ದನಿಯನ್ನು ತಗ್ಗಿಸಿ ಕೇಳಿದ.
ಸ್ವಾತಿ ಆಶ್ವಾಸನೆಯನ್ನು ನೀಡುತ್ತಾ, "ಆರಂಭ ಇಲ್ಲದ ಬದಿಯಿಂದ, ಕೊನೆ ಕಾಣದ ಅಂಚಿನಿಂದ ತೊಡಗಿಕೋ,ಚಿರು"-ಹೇಳಿದಳು.
ಜಿಗಿತುಕೊಂಡ ‘ಚಿರು’ವಿನ ಮನಸ್ಸು, ಹೇಳಿ ಬರಿದಾಗಲು ಅಣಿಗೊಂಡಿತು.

“ನನ್ನೊಳಗಿನ ಪ್ರಜ್ಞೆಯನ್ನು ಕತ್ತಲೆಯ ರಾತ್ರಿಯಲ್ಲಿ ಭೇಟಿಯಾದಾಗ ಅದಿನ್ನೂ ಉಸಿರಾಡುತ್ತಿತ್ತು. ಕಂಡು ಆಶ್ಚರ್ಯಗೊಂಡೆ. ಅದನ್ನು ಇಂಚು ಇಂಚಾಗಿ ಸ್ವಂತ ಕೈಗಳಿಂದ ಕೊಂದು, ಯಾವುದೇ ಉದ್ವೇಗವಿಲ್ಲದೆ ಸಣ್ಣಸಣ್ಣ ತುಂಡುಗಳನ್ನಾಗಿಸಿ ಹೂತು ಹಾಕಿದೆ. ಇನಿತೂ ಮುಜುಗರವಿಲ್ಲದೆ ಮರುದಿನ ಪುನಃ ಪ್ರಜ್ಞೆಯನ್ನು ಭೇಟಿಯಾದೆ” ಹೇಳುತ್ತಾ, ಭಾರವಾದ ಉಸಿರನ್ನೆಳೆದುಕೊಂಡ.

ತನ್ನ ಎದೆಗೂಡೊಳಗಿನ ಬೆಂಕಿಯನ್ನು ನಂದಿಸಲು ‘ಚಿರು’ ಪ್ರಯತ್ನಿಸಿದ.
"ನಿನ್ನೊಳಗನ್ನು ನೀನೇ ಕೈಯಾರೆ ಕೊಲ್ಲುತ್ತಿದ್ದೆಯಾ, ಚಿರು?" ಸ್ವಾತಿ ಕೇಳಿದಳು.

"ಹೌದು, ಕೊಲ್ಲುತ್ತಿದ್ದಂತೆಯೇ ಆಂತರ್ಯದಲ್ಲಿ ಹೊಸಬನೊಬ್ಬ ಹುಟ್ಟಿ ಬರುತ್ತಿದ್ದ. ವರ್ಣಿಸಲಾಗದ ಸೊಬಗು ಹಾಗು ಶ್ರೇಷ್ಠವಾದ ಗಂಧವಿರುವ ಆಕಾರವದು. ವಿಕಾರಗಳಿಲ್ಲದ ಅತಿಥಿ ಅವನು. ಹೊಸ ವಿಷಯಕ್ಕಾಗಿ ಅವನನ್ನು ಅಂಗಾಲಾಚುತ್ತಿದ್ದೆ. ದೊರಕುತ್ತಲೇ ಮತ್ತೆ ಅವನನ್ನು ಕೊಲ್ಲುತ್ತಿದ್ದೆ...”-ತನ್ನ ಮನೋವಿಕಾರಗಳನ್ನು ಸೀಳುತ್ತಾ ಹೋಗುತ್ತಿರುವವನ ಮಾತಿನ ಓಘವನ್ನು ಸ್ವಾತಿ ತುಂಡರಿಸಿದಳು.

“ಸುಖಾಸುಮ್ಮನೆ ಭಾಗ್ಯಗಳು ಒಲಿದು ಬಂದಿರುವುದಿಲ್ಲವಲ್ಲ, ಚಿರು. ಅದರ ಹಿಂದಿನ ಕತೆ ಬಹು ರೋಚಕವೂ, ಅನೂಹ್ಯವೂ ಆಗಿರುತ್ತದೆ. ಹಲವಾರು ಕನವರಿಕೆಗಳ ನಡುವೆಯೂ ನಮ್ಮನ್ನು ನಾವಾಗಿರಲು ಬಿಡದ ಶಕ್ತಿಗಳು ಈಗಲೂ ನಮ್ಮ ಸುತ್ತಲೇ ಇವೆ.ಗೋಡೆ ಕಟ್ಟಿ, ತೊಡೆ ತಟ್ಟುವವರೇ ಅಧಿಕ” -ಹೇಳಿದಳು ಸ್ವಾತಿ.

ಫೋನಿನ ಬ್ಯಾಟರಿಯ ಆಯಸ್ಸನ್ನು ಆಕೆ ಒಮ್ಮೆ ನೋಡಿಕೊಂಡಾಗ ದೊರಕಿದ ಸಣ್ಣ ಎಡೆಯಲ್ಲಿ ಚಿರು ನುಗ್ಗಿದ- “ಸ್ವಾತಿ, ತಾನು ಶ್ರೇಷ್ಠವೆನ್ನುತ್ತಲೇ ಇನ್ನೊಬ್ಬರನ್ನು ಹೀಯಾಳಿಸಿ ತುಳಿಯುವ, ಎತ್ತಿ ಕಟ್ಟುವುದು ತಟ್ಟುವವರಲ್ಲಿರುವ ಏಕೈಕ ತವಕ. ಪ್ರಭಾವಳಿಯ ಪ್ರಭೆಗೆ ಬೆಚ್ಚಿ ಬಿಳಚಿಕೊಳ್ಳುವ ನಡುಕವೂ ಜೊತೆಗೆ. ಇವು ಬದುಕಿನ ಲಂಬರೇಖೆಯನ್ನು ಗಿಡ್ಡವಾಗಿಸುತ್ತವೆ, ಡಿಯರ್. ನಿಂಗೊತ್ತಾ?” ಕೇಳಿ, ಬೀಸುತ್ತಿದ್ದ ಸಂಜೆಯ ಗಾಳಿಗೆ ಮುಖವೊಡ್ಡಿದ.

ಸಂಜೆಬಾನಲ್ಲಿ ಅದಾಗಲೇ ರಕ್ತಬಣ್ಣದ ಹರಿವಾಣವು ರಂಗನ್ನು ಹೊತ್ತು ತಂದಿತ್ತು. ಕಡಲೂ ರಕ್ತವನ್ನು ಅದ್ದಿಸಿಕೊಂಡಿತ್ತು. ತನ್ನ ಕಿವಿಗೆ ಸಿಕ್ಕಿಸಿದ ಏರ್ ಪೋಡ್ ಅನ್ನು ತೆಗೆದು, ಕಿವಿಯನ್ನೊಮ್ಮೆ ಚಿರು ತುರಿಸಿಕೊಂಡ.

ತನ್ನೆರಡೂ ಕೈಗಳನ್ನು ಮೇಲಕ್ಕೆತ್ತಿ ದೀರ್ಘವಾದ ಶ್ವಾಸವನ್ನು ಒಳಕ್ಕೆಳೆದು ಹೊರಬಿಟ್ಟವನ ಉಸಿರನ್ನು ಫೋನಿನಲ್ಲಿ ಕೇಳಿಸಿಕೊಂಡ ಸ್ವಾತಿ, “ಸಂಧ್ಯಾಕಾಲದ ಹೆತ್ತವರು ಅಳಿದುಳಿದ ತಮ್ಮ ಆಯಸ್ಸನ್ನು ಮಕ್ಕಳಿಗಾಗಿ ಮೀಸಲಿಟ್ಟು ಅವರೊಂದಿಗೆ ಬೆರೆತು ಕಲೆಯಲು ಬಯಸುತ್ತಾರೆ ನೋಡು.. ಆದರೆ ಮಕ್ಕಳು ಅವರನ್ನು ಅವರ ಪಾಡಿಗೆ ಬಿಟ್ಟುಬಿಡುತ್ತಾರೆ. ಇಳಿಸಂಜೆಯ ಹೆತ್ತವರಂತೇ ನಾವೂ ಎಂದೆನಿಸುವುದಿಲ್ಲವೇ ನಿನಗೆ, ಚಿರು?“ಸ್ವಾತಿ ಕೇಳಿದಳು.

"ಬಹಳ ಚೆನ್ನಾಗಿ ಹೇಳಿದಿ ನೀನು"ಎಂದು ಚಿರು ನಕ್ಕ.
“ಬಾಳಲ್ಲಿ ಪಾತ್ರಗಳು ಹುಟ್ಟಿ ಕತೆಯಾಗಿ ಜೀವಿಸಿ, ಅಂತ್ಯಕಾಲದಲ್ಲಿ ಪೊರೆಯಲಿ ಎಂಬ ಹಂಬಲ ತಪ್ಪೇನಲ್ಲ. ಆದರೆ ಹಂಬಲಗಳೇ ತಪ್ಪೆನ್ನುವವರ ನಡುವೆ ಜೀವಿಸುವುದು ಬಲು ದುಸ್ತರ, ಸ್ವಾತಿ”-ಹೇಳಿದ.

ರಕ್ತವನ್ನು ಬಳಿದುಕೊಂಡ ಸಾಗರದಲ್ಲಿ ತನ್ನ ಪಾದಗಳನ್ನು ಅದ್ದಿಸಿದ. ಏರಿ ಬಂದ ಅಲೆಯು ಪಾದವನ್ನು ಮುಳುಗಿಸಿ ಕುಳುಕುಳು ಎನ್ನುತ್ತಾ ಕ್ಷಣ ಮಾತ್ರದಲ್ಲಿ ಇಳಿದು ಹೋಯಿತು. ಮೆದುಗೊಂಡ ಮರಳು ಪಾದಗಳಿಗೆ ಗೋರಿ ತೊಡುತ್ತಿತ್ತು.

***
ತಲೆಯನ್ನು ಕೆರೆದುಕೊಳ್ಳುತ್ತಾ, ಬೀಡಿಗಾಗಿ ಮೇಜನ್ನು ಸರಭೇಶ ತಡಕಾಡಿದ. ಸಿಕ್ಕ ಒಂದೇ ಒಂದು ಬೀಡಿಯನ್ನು ಉರಿಸಿದ. ಮೂಗಿನ ಹೊಳ್ಳೆಗಳಿಂದ ಹೊಗೆಯನ್ನು ಬಿಟ್ಟ. ಮನಸ್ಸನ್ನು ಗಟ್ಟಿ ಮಾಡಿಕೊಂಡವನು ಧಾರವಾಹಿಗೆ ಅಂತ್ಯ ಬರೆಯಲು ಕುಳಿತ.

“ಚಿರಂತನ್, ನಿನಗೆ ಗೊತ್ತಿಲ್ಲದ್ದಲ್ಲ ಈಗ ನಾನು ಹೇಳಲು ಹೊರಟಿರುವ ವಿಚಾರ. ಆದರೂ...”ಎಂದು ಹೇಳಲು ಹೊರಟ ಸ್ವಾತಿಯ ಮಾತನ್ನು ಚಿರು ಕತ್ತರಿಸಿದ.
“ಆದರೂ…ಏನು ಸ್ವಾತಿ? ಎಷ್ಟು ಅಂತಾ ಹೀಗೆ?” ಕೇಳಿದ ಚಿರುವಿನ ಧ್ವನಿಯಲ್ಲಿ ಅಸಮಾಧಾನವು ಹೊದ್ದುಕೊಂಡಿತ್ತು.
“ನೋಡು ಚಿರು, ಕಾಯುವಿಕೆಯು ಹೊತ್ತು ತರುವ ಫಲವು ದುಃಖದಲ್ಲಿ ಅಂತ್ಯಗೊಳ್ಳುತ್ತದೆಂಬ ಭೀತಿ ಸದಾ ಜೊತೆಯಲ್ಲಿರುತ್ತದೆ” ವಿಷಾದದಿಂದ ಸ್ವಾತಿ ಹೇಳಿದಳು.

ಮಣಭಾರದ ಸ್ವರವನ್ನು ಹೊತ್ತು,“ಆದರೆ ಕಾಯುವಿಕೆಯು ಕೊಡುವ ಸುಖವನ್ನೂ ಅನುಭವಿಸುತ್ತೇವಲ್ಲ, ಸ್ವಾತಿ ?”ಎಂದು ಚಿರು ಕೇಳಿದ.

"ಹೌದು. ದೂರವಾದ ಸ್ನೇಹದ ಚಹರೆಯು ಅಚಾನಕ್ಕಾಗಿ ನಮ್ಮೊಳಗೆ ಪ್ರವೇಶಿಸುವ ಭಾವವನ್ನು ನೆನೆಯುತ್ತಿರಬೇಕು. ನೆನೆಯುವಿಕೆಯು ಸುರಿಸುವ ಪ್ರೀತಿಯನ್ನು ಮೈಮೇಲೆ ಸುರುವಿಕೊಳ್ಳುತ್ತಲೇ ಪ್ರೀತಿಯನ್ನು ನಿರಾಕರಿಸಿ ನಿರ್ವಿಕಾರಗೊಳ್ಳಬೇಕು” -ಒಂದೇ ಉಸಿರಿಗೆ ಹೇಳಿ ಮಾತನ್ನು ನಿಲ್ಲಿಸಿದಳು.

‘ಅದಷ್ಟು ಸುಲಭವೇ?’- ತನ್ನನ್ನು ತಾನೇ ಪ್ರಶ್ನಿಸಿಕೊಂಡವಳಿಗೆ ಅದಷ್ಟು ಸುಲಭದ್ದಲ್ಲವೆನ್ನುವುದು ಅರಿವಾಯಿತು.

"ಆದರೆ ಚಿರು, ಇರುತ್ತಲೇ ಇಲ್ಲವಾಗಿ, ಇಲ್ಲವಾಗುತ್ತಲೇ ಇರುವಂತಾಗುವುದು. ಇರು..ಇರು..ಎನ್ನುವವರ ನಡುವೆ ಇರುವೆಯಾಗುವುದು. ಇರುವೆ..ಇರುವೆ..ಎಂದು ಕೂಗಿಕೊಳ್ಳುವವರ ಮಧ್ಯದಲ್ಲಿ ಅವನಿರುವಡೆಯ ದಾರಿ ಹುಡುಕುವುದೆಲ್ಲಾ ನಮಗೆ ನಾವೇ ಕಂಡುಕೊಳ್ಳುವ ದರ್ಶನಗಳಾಗಬೇಕು”- ಕಠಿಣ ದನಿಯಲ್ಲಿ ಸ್ವಾತಿ ಹೇಳಿದಳು.

"ಅದಕ್ಕೂ ಮೊದಲು ಹಚ್ಚಿಕೊಂಡಿರುವುದರಿಂದ ಬಿಚ್ಚಿಸಿಕೊಳ್ಳಬೇಕು, ಸ್ವಾತಿ. ಅನೇಕ ಗಂಟುಗಳಿಂದ ಬಿಡಿಸಿಕೊಂಡರೂ ಮತ್ತೂ ಉಳಿವ ಗಂಟುಗಳನ್ನು ಬಿಡಿಸುತ್ತಾ ನಿರಾಳವಾಗಬೇಕಿರುವುದು ಅನೇಕರಿಗೆ ಬೇಕಿಲ್ಲ. ಹಾಯೆನಿಸಿಕೊಳ್ಳಲು ಕಂಡುಕೊಳ್ಳುವ ಬಗೆಗಳು ಬೇರೆಯದ್ದೇ. ಹಾಗಿದ್ದೂ ಹೊತ್ತು ಸಾಗುವ ಹೊತ್ತಲ್ಲಿ, ಹೊತ್ತು ಸಾಗಿದವರ ಚಿತ್ತವ ಬಿಡಿಸಿಡಲು,ಹುತ್ತವ ಕೆಡಹುವುದನ್ನು ಕಾಣುತ್ತೇವೆ” ಹೇಳಿ ಸುದೀರ್ಘ ಉಸಿರನ್ನೆಳೆದುಕೊಂಡ.

“ಆದರೂ ನಮ್ಮನ್ನು ನಾವು ಅರಿಯದೆಯೇ ಹೋಗಿ ಬಿಡುತ್ತೇವೆ, ಚಿರು. ಅರಿವಿನ ಹೊತ್ತು ನಮ್ಮೊಳಗೆ ಬೆಳಕನ್ನು ಚೆಲ್ಲುತ್ತದೆ ಕಣೋ. ಮನಸ್ಸನ್ನು ಹೊಂದಿಸಿಕೊಂಡರೆ ಬದುಕು ತಾನಾಗಿಯೇ ಒಲಿದು ಬರುತ್ತದೆ. ಇಲ್ಲದಿದ್ದಲ್ಲಿ ಬದುಕನ್ನು ಕಟ್ಟುವುದೇ ಒಂದು ದುಸ್ತರವೆನಿಸಿ ಬಿಡುತ್ತದೆ. ಕೇಳಿಸಿಕೊಳ್ಳುತ್ತಾ ಇದ್ದೀಯ, ಚಿರು?” ಕೇಳಿದಳು.
‘ಹಲೋ ಹಲೋ’ ಎಂದು ಎರಡು ಬಾರಿ ಕೂಗಿದಳು.

“ಹಾಂ..ಹಾಂ.. ಕೇಳಿಸಿಕೊಳ್ತಾ ಇದ್ದೇನೆ, ಸ್ವಾತಿ. ನಿಜ. ಬಿತ್ತಿದ ಬೀಜ ಮೊಳಕೆ ಒಡೆದು, ಚಿಗುರಿ ಫಲವನ್ನೂ ನೀಡಿ, ಪೂರ್ಣ ಪ್ರಮಾಣದಲ್ಲಿ ದಕ್ಕದೆ ಹೋದದ್ದಕ್ಕೆ ಚಿಂತಿಸದೆ ಮತ್ತೆ ಚಿಗುರಿಸುವ,ಅರಳುವ ಹಂಬಲಗಳಿಗೆ ಅರೆಬರೆ ತೆರೆದುಕೊಳ್ಳದೆ, ಪೂರ್ಣವಾಗಿ ತೆರೆದುಕೊಂಡು ಆ ಕ್ಷಣಕ್ಕಾಗಿ ಕಾಯುತ್ತಿರಬೇಕು”ಎಂದು ಹೇಳಿದ.

“ಸಾವಿನಲ್ಲೂ ಹೂವು ತನ್ನ ಸೌಂದರ್ಯ ಹಾಗೂ ಸುವಾಸನೆಯನ್ನು ಬಿರುವಂತೆ"- ಸ್ವಾತಿ ಹೇಳಿದಳು.
“ಎಗ್ಸ್ಯಾಕ್ಟ್ಲಿ, ಸ್ವಾತಿ...”ಎಂದ ಚಿರಂತನ್.
ಸಮುದ್ರದಲೆಗಳ ಸದ್ದು ಭೀಕರವಾಗಿ ಹಿನ್ನಲೆಯಲ್ಲಿ ಸ್ವಾತಿಗೆ ಕೇಳತೊಡಗಿತು.
“ಹಲೋ...ಹಲೋ..." ಎಂದು ನಾಲ್ಕು ಬಾರಿ ಸ್ವಾತಿ ಕೂಗಿದಳು.

ಆದರೆ ಆಡು ಆಡುತ್ತಲೇ ನಿರಾಯಾಸವಾಗಿ ಕರೆಯನ್ನು ಚಿರಂತನ್ ಅದಾಗಲೇ ಕತ್ತರಿಸಿಬಿಟ್ಟಿದ್ದ. ಕಾರಣವಿಲ್ಲದೆ, ಕಾರಣ ನೀಡದೆ ತುಂಡಾದ ಕರೆಯು ಸ್ವಾತಿಯನ್ನು ಇನ್ನಷ್ಟು ಗಾಬರಿಗೊಳಿಸಿತು.

ಸ್ಪೀಡ್ ಡಯಲಿನಲ್ಲಿರುವ ಚಿರಂತನ್ ಸಂಖ್ಯೆಗೆ ಕರೆಯ ಮೇಲೆ ಕರೆ ಮಾಡಿದರೆ; ’ನೆಟವರ್ಕ್ ಕ್ಷೇತ್ರದಿಂದ ಹೊರಗಿದ್ದಾರೆ...’ಎಂಬ ಮುದ್ರಿತ ಧ್ವನಿಯು ಕೇಳಿ ಬರುತ್ತಿತ್ತು.

ವಾತಾವರಣವು ಉಸಿರುಗಟ್ಟಿಸುತ್ತಿತ್ತು. ಮೋಡ ಕಟ್ಟಿದ ಬಾನು ಗಾಳಿಯ ಸ್ಪರ್ಶಕ್ಕಾಗಿ ಹಂಬಲಿಸುತ್ತಿರಲು- ಸ್ವಾತಿಯ ಕತ್ತು ಬಿಗಿಗೊಳ್ಳತೊಡಗಿತು.

'ಸಶೇಷ'ದ ಜಾಗದಲ್ಲಿ'ಮುಗಿಯಿತು' ಪದವನ್ನು ಸರಭೇಶ ಪ್ರತಿಷ್ಠಾಪಿಸಿದ.

***
ಕಪ್ಪು ಬಣ್ಣಕ್ಕೆ ತಿರುಗಿದ ತನ್ನ ದಪ್ಪ ತುಟಿಗಳಿಗೆ ನಾಲಗೆಯಿಂದ ಪಸೆಯನ್ನು ಲೇಪಿಸಿಕೊಂಡವನು ತುಂಡು ಬೀಡಿಯನ್ನು ತುಟಿಯ ಅಂಚಲ್ಲಿ ಕುಳ್ಳಿರಿಸಿ,“ಫೂ..”ಎಂದು ಹೊಗೆಯನ್ನು ಎದೆಯಾಳದವರೆಗೆ ಕೊಂಡೊಯ್ದ.
ಬೆರಳನ್ನೂ,ತುಟಿಯನ್ನೂ ಸುಡುತ್ತಿದ್ದ ಬೀಡಿಯನ್ನು ಕರಂಡಕಕ್ಕೆ ಚುಚ್ಚಿ ಮುಕ್ತಿ ನೀಡಿ, ಸರಭೇಶ ಕುರ್ಚಿಗೊರಗಿದ.
ಎದೆಯಲ್ಲಿ ಒಂದಷ್ಟು ಹೊಗೆಯನ್ನು ಕುಳ್ಳಿರಿಸಿ, ಉಳಿದ ಹೊಗೆಯನ್ನು ಉರುಟುರುಟಾಗಿ ಹೊರಕ್ಕೆ ಬಿಡುತ್ತಾ, ಬಿಡುಗಡೆಯ ಭಾವವನ್ನು ಅನುಭವಿಸಿದವನಿಗೆ- ಗಾಢ ನಿದ್ರೆಯು ಅಮರಿಕೊಂಡಿತು.

***
ಗಾಳಿ ಬೀಸದ ದಟ್ಟ ಕತ್ತಲೆಯ ಹೊತ್ತು. ವಾತಾವರಣದಲ್ಲಿ ಹುಲ್ಲಗರಿಯೂ, ಪುಟ್ಟ ಹುಳವೂ ಮಿಸುಕಾಡದಷ್ಟು ನೀರವತೆ. ಬಯಲು ದಾಟಿ ಸಿಗುವ ಗುಡ್ಡದ ಬದಿಯಿಂದ ನಾಯಿಯೊಂದು ಒಂದೇ ಸಮ ನಿರ್ದಿಷ್ಟ ದಿಕ್ಕಿನತ್ತ ಮುಖ ಮಾಡಿ ಊಳಿಡುತ್ತಿತ್ತು. ಕೆಲ ಹೊತ್ತಿನ ಬಳಿಕ ಊಳಿಡುವುದನ್ನು ನಿಲ್ಲಿಸಿದ ನಾಯಿ ಒಂದೊಂದೇ ಹೆಜ್ಜೆಯನ್ನು ಹಿಂದಕ್ಕೆ ಹಾಕತೊಡಗಿತು.

ಗುಡ್ಡದ ಬದಿಯಿಂದ ಸಣ್ಣದಾಗಿ ಬೆಂಕಿಯೊಂದು ಕಾಣಿಸಿತು. ಪುಟ್ಟದಾಗಿ ಎದ್ದ ಬೆಂಕಿಯ ಕಿಡಿ ಏರುತ್ತೇರುತ್ತಾ ಬೆಳೆದು ದೊಂದಿಯಾಯಿತು. ಗುಡ್ಡದ ತುದಿಯಲ್ಲಿ ಕಪ್ಪುಬಣ್ಣದ ವ್ಯಕ್ತಿಯೊಬ್ಬ ದೊಂದಿಯನ್ನು ಹಿಡಿದು ನಿಂತು ವಿಚಿತ್ರ ಶಬ್ದವನ್ನು ಹೊರಡಿಸಿದ. ಅಷ್ಟಕ್ಕೇ, ಹಲವು ಮೂಲೆಗಳಿಂದ ಒಂದೊಂದೇ ದೊಂದಿಗಳು ಎದ್ದು ಬಂದವು. ಎಲ್ಲಾ ದೊಂದಿಗಳು ಜೊತೆಯಾಗಿ ಸರಭೇಶನ ಅಂಗಳದತ್ತ ಹೋಗುವುದಾಗಿ ತೀರ್ಮಾನಿಸಿ, ಅಂಗಳಕ್ಕೆ ಬಂದಿಳಿದವು.

ತಮ್ಮೊಳಗಿನ ಕಿಚ್ಚು ಕಾರಲು ಅಂಗಳದಲ್ಲಿ ದೊಂದಿಗಳಷ್ಟೂ ಸರದಿಯಲ್ಲಿ ಕಾದು ನಿಂತವು. ಒಂದೊಂದೇ ದೊಂದಿಯು ಅಟ್ಟವನ್ನೇರಿ ಸರಭೇಷನಿಗೆ ಮುಖಾಮುಖಿಯಾದವು.

“ಹೊಟ್ಟೆಪಾಡಿಗಾಗಿ ಅನ್ಯರ ಹೊಟ್ಟೆ ಒಡೆದೆ, ಹೃದಯ ಬಗೆದೆ. ಅನ್ಯರ ಮನಸ್ಸನ್ನು ಹೊಕ್ಕಲು ನಿನಗೆ ಅಪ್ಪಣೆ ಕೊಟ್ಟವರ್ಯಾರು? ಮನಸ್ಸನ್ನು ಬೆದಕಿ, ಕಲಕಿ ಕತೆ ಯಾಕೆ ಬರೆದೆ?” -ದೊಂದಿಗಳ ಪ್ರಶ್ನಾರ್ಭಟ ಹೆಚ್ಚುತ್ತಲೇ ಹೋಯಿತು.

ದೊಂದಿಯ ಬೆಳಕಲ್ಲಿ ಪ್ರಶ್ನೆಗಳು ಇನ್ನೂ ಹೆಚ್ಚು ಕರ್ಕಶಗೊಂಡವು.

“ಕತೆ ಬರೆಯುವಾಗ ಬೆವರದ ನೀನು, ನಮ್ಮನ್ನು ನೋಡಿ ಯಾಕೀಗ ಬೆವರುತ್ತಿದ್ದಿ?”ಎಂದು ಮೂದಲಿಸಿದ ದೊಂದಿಗಳು ಗಹಗಹಿಸಿ ನಕ್ಕಾಗ- ಸರಭೇಶನ ಕೋಣೆಯಲ್ಲಿರುವ ವಸ್ತುಗಳಷ್ಟೂ ನಗಲು ತೊಡಗಿದವು.

ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸರಭೇಶ ಬೆವೆತು ಹೋದ. ದಟ್ಟಹೊಗೆ ಕಪ್ಪುಗಟ್ಟಿ ಶಾಖ ಹೆಚ್ಚಲು ಅವನ ದೇಹವು ಬೇಯ ತೊಡಗಿತು. ಉರಿಯ ವೇದನೆ, ದೊಂದಿಗಳ ಪ್ರಶ್ನೆ. ಎರಡನ್ನೂ ಸಹಿಸಲಾಗದೆ ಸರಭೇಶ ಸುಟ್ಟು ಕರಕಲಾಗುತ್ತಾ ಹೋದ. ಸುಡುತ್ತಲಿದ್ದ ಅವನ ದೇಹದ ವಾಸನೆಯು ದಟ್ಟವಾಗಿ ಹಬ್ಬಿ ಅವನಿಗೇ ಉಸಿರುಗಟ್ಟಿಸಿತು.

ಒಂದೊಂದೇ ದೊಂದಿಗಳು ಕಿರುಚುತ್ತಾ ಅವನ ಸುತ್ತಲೂ ಕುಣಿಯಲು ತೊಡಗಿದವು. ಕೆಲವೊಂದು ಮುಖ ಮೂತಿ ನೋಡದೆ ಬಡಿದವು. ಕೈಯಿಂದ ತಲೆಯನ್ನೊಮ್ಮೆ,ಮುಖವನ್ನು ಮತ್ತೊಮ್ಮೆ ರಕ್ಷಿಸುತ್ತಾ, ಸರಭೇಶ ನಿದ್ದೆಯಲ್ಲೇ ಏದುಸಿರು ಬಿಡುತ್ತಿದ್ದ.

'ಧಡ್...ಧಡ್...'ಎಂದು ಸಿಕ್ಕಿದ್ದಕ್ಕೆಲ್ಲ ದೊಂದಿಗಳು ಬಡಿಯುವ ಸದ್ದು ಹೆಚ್ಚುತ್ತಲೇ ಹೋಗಿ ಕಿವಿಯ ತಮಟೆ ಹರಿದ ಅನುಭವವಾಗಲು,“ಅಮ್ಮಾ...”ಎಂದು ಕಿಟಾರನೆ ಕಿರುಚಿ ಏದುಸಿರು ಬಿಡುತ್ತ ಸರಭೇಶ ಎದ್ದು ಕುಳಿತ.

ಅವನೆದ್ದ ರಭಸಕ್ಕೆ ಕೈಯಲ್ಲಿ ಭದ್ರವಾಗಿ ಕುಳಿತಿದ್ದ ಲೇಖನಿಯು ಫಟಾರನೆ ಕೆಳಕ್ಕೆ ಬಿದ್ದು ಒಡೆಯಿತು. ಅವನ ಕಾಲುಗಳು ನಡುಗುತ್ತಿದ್ದವು. ಆಸರೆಯಿಲ್ಲದೆ ನಿಂತುಕೊಳ್ಳುವುದೇ ಕಷ್ಟವಾಯಿತು.

‘ಹೊ...ಹೊ...’ಎಂದು ಮೂಗು,ಬಾಯಲ್ಲಿ ಉಸಿರು ಬಿಡುತ್ತಾ,ಸುತ್ತಲೂ ಕತ್ತನ್ನು ತಿರುಗಿಸಿದ. ದೀಪದ ಬೆಳಕನ್ನು ಹಿಗ್ಗಿಸಿ, ಮಾಸಿದ ಕನ್ನಡಿಯಲ್ಲಿ ಸಾಧ್ಯವಿರುವಷ್ಟನ್ನು ನೋಡಿ ಸಮಾಧಾನಪಟ್ಟ.

ಅಡಿಯಿಂದ ಮುಡಿಯವರೆಗೆ ಬೆವೆತು ಒದ್ದೆಯಾಗಿ ಹೋಗಿದ್ದವನ ಎದೆಯ ಢವಗುಟ್ಟುವಿಕೆಯು ಇನ್ನೂ ನಿಂತಿರಲಿಲ್ಲ.

'ಹ್ಮಾ,ಕನಸು..ಓ!ಕ..ನ..ಸು...'ಎಂದು ಮೆತ್ತಗೆ ತನಗೆ ತಾನೇ ಹೇಳಿಕೊಂಡು, ಸರಭೇಶ ಸಮಾಧಾನಿಸಿಕೊಂಡ.

ಅರೆತೆರೆದ ಕಿಟಕಿಯನ್ನು ಪೂರ್ಣ ತೆರೆದಿಟ್ಟು, ವಾತಾವರಣಕ್ಕೆ ಮುಖವೊಡ್ಡಿ ಹೊರಕ್ಕೆ ನೋಡಿದರೆ; ಮೂಲೆ ಹೆಂಚಿನಲ್ಲಿ ಕುಳಿತ ಗೂಬೆಯೊಂದು ಸರಭೇಶನನ್ನೇ ನೋಡುತ್ತಿತ್ತು.

ಕುರ್ಚಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಧಾನಕ್ಕೆ ಕಡು ಕತ್ತಲೆಗೆ ಮುಖಾ ಮುಖಿಯಾದ.

ಹೊತ್ತಲ್ಲದ ಹೊತ್ತಲ್ಲಿ ಮನೆಯಂಗಳದ ಗೇಟು 'ಕಿರ್..ಕಿರ್..ಕುಟ್'ಎಂದು ತೆರೆದುಕೊಂಡ ಸದ್ದು ಕೇಳಿ ಬರಲು- ಕುಳಿತಲ್ಲಿಂದ ತುಸು ಮುಂದಕ್ಕೆ ಸರಭೇಶ ವಾಲಿದ.

ಗೇಟು ತೆರೆದ ಸದ್ದಿಗೆ ಬರಬರನೆ ರೆಕ್ಕೆಯನ್ನು ಬಡಿಯುತ್ತಾ ಗೂಬೆಯು ಸರಭೇಶನ ಕಣ್ಣೆದುರೇ ಹಾರಿ ಹೋಯಿತು.

ಮಬ್ಬಿಗಿಂತಲೂ ಮಂದವಾದ ಬೆಳಕಿನಲ್ಲಿ ಕುಳಿತಿದ್ದ ಸರಭೇಶ ಕಿಟಕಿಯ ಮೂಲಕ ಅಂಗಳದ ಗೇಟಿನತ್ತ ಬಗ್ಗಿ ನೋಡಿದರೆ; ಬ್ಯಾಗ್ ಅನ್ನು ಹಿಡಿದುಕೊಂಡ ಉದ್ದ ಜಡೆಯ ಹೆಂಗಸೊಬ್ಬಳು, 'ಕುರ್..ಕಿರ್..ಕುರ್..ಟಕ್ ' ಸದ್ದಿನೊಂದಿಗೆ ತೆರೆದ ಅಂಗಳದ ಗೇಟನ್ನು ಮುಚ್ಚಿ, ಮನೆಯತ್ತ ಹೆಜ್ಜೆ ಹಾಕುತ್ತಿದ್ದಳು.

-ಸಂತೋಷ್ ಅನಂತಪುರ

ಸಂತೋಷ್ ಅನಂತಪುರ

ಲೇಖಕ ಸಂತೋಷ್ ಅನಂತಪುರ ಅವರು ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರದವರು. ಕೇರಳ ರಾಜ್ಯದಲ್ಲೇ ಪದವಿಪೂರ್ವ ಶಿಕ್ಷಣ ಪೂರೈಸಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಹಾಗೂ ಮಂಗಳೂರು ವಿ.ವಿ.ಯಿಂದ ಪತ್ರಿಕೋದ್ಯಮದಲ್ಲಿ  ಸ್ನಾತಕೋತ್ತರ ಪದವಿ ಪಡೆದರು. ವಿದ್ಯಾ ಸಂಸ್ಥೆ ಹಾಗೂ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಸದ್ಯ, ಬೆಂಗಳೂರಿನಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಥೆ-ಕವನ - ಲೇಖನಗಳು ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳು ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಜಿಡ್ಡು ಕೃಷ್ಣಮೂರ್ತಿ ಅವರ ಒಂದು ಆಂಗ್ಲ ಕೃತಿ ಹಾಗೂ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಕೃತಿಗಳು: ಕಾಗೆ ಮತ್ತು ಕಡ್ಲೆ ಬೇಳೆ ಪಾಯಸ (ಕತಾ ಸಂಕಲನ), ಸವಾರಿ ಗಿರಿ ಗಿರಿ (ಪ್ರವಾಸ ಕಥನ) 

 

More About Author