Poem

ಈಗ ಬುದ್ಧನಿರಬೇಕಿತ್ತು

ಓ ಬುದ್ಧ! ನೀನಿರಬೇಕಿತ್ತು ಈಗ
'ಧರ್ಮಗ್ರಂಥ'ಗಳ ತುಂಬಾ ಹಬ್ಬಿ
ಇಂಚಿಂಚನ್ನೂ ಮುಕ್ಕಿ
ಮುಂದಿನ ತಲೆಮಾರುಗಳಿಗೆ
ರವಷ್ಟೂ ಉಳಿಸದಿರುವ
ಗೆದ್ದಲುಗಳ
ಹೃದಯದಲ್ಲಿ ಜ್ಞಾನಜಲ
ಹರಿಸಲು

ನೀನಿದ್ದರೆ ಚೆನ್ನಿತ್ತು ಬುದ್ಧ
ಪಾರಿವಾಳದ ಕತ್ತು ಹಿಸುಕಿ,
ರೆಕ್ಕೆಗಳ ಕತ್ತರಿಸಿ,
ಸಿಂಹಾಸನದ ಅತಿದುರ್ಬಲ
ಬುನಾದಿಗೆ ಕಟ್ಟಿರುವ
ನಪುಂಸಕ ನರಿಗಳ
ತಲೆಯನ್ನು ಬಲವಾಗಿ
ಸವರಲು

ಕರುಣೆಯ ದೊರೆಯೇ! ನೀನೇ ಆಗಬೇಕಿತ್ತು
ಅದೋ ಅವರಿಗೆ....
ನೆತ್ತರನ್ನೇ ಕುಡಿದು ಬದುಕುತ್ತಿರುವವರಿಗೆ
ಕರುಣೆ ನೀರು ಕುಡಿಸಲು

ಹೌದು! ಹೌದು ಬುದ್ಧ!
ನಿನ್ನೊಬ್ಬನಿಂದಷ್ಟೇ ಸಾಧ್ಯ
ಮರುಳು ನಗೆಯಿಂದ
ಏಕಲವ್ಯೆಯರ ಬೆರಳು ಕತ್ತರಿಸಿ
ಅವರನ್ನು ಕತ್ತಲೆಯಲ್ಲಿಡಲು
ಹುಕುಂ ಹೊರಡಿಸಿರುವ
ನವ ಅಂಗುಲಿಮಾಲರ
ಮಾಲೆಯನ್ನು ಕಿತ್ತುಹಾಕಲು

- ವಿಶ್ವನಾಥ ಎನ್ ನೇರಳಕಟ್ಟೆ

 

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ.

ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ನೀಡುವ ಸಾಹಿತ್ಯ ರತ್ನ ಪ್ರಶಸ್ತಿ ಸಂದಿವೆ.

More About Author