Poem

ಗಾಂಧೀಜಿ ನೆಲೆ

ಕಂಡ ಕನಸುಗಳ ಬಗೆಗೆ ಚರ್ಚೆ ನಡೆಯುತಿರುವಾಗ
ಗಾಂಧೀಜಿ ಬಂದರು ಆ ಒಂದು ದಿನ
ಅಧಿಕ ವರ್ಷದಲಿ ಸುಮಾರು ಮಾಹೆಗಳು ಕೊನೆಗೊಳ್ಳುತಿರುವಾಗ||ಪ||

ವಲಸೆ ಬಂದಿಹರೆಲ್ಲ ಸತ್ಯದ ಉಪವಾಸದಲಿ
ಕೂಡಿ ಬಾಳುವರಿಲ್ಲ! ಇಲ್ಲಿ ಎಲ್ಲ ಮಾನವರು!
ಮನದ ದೀವಿಗೆಯೊಂದು ಒತ್ತಿ ಪಸರಿಸುತಿದೆ ಆಂತರ್ಯದಲಿ
ವಲಸೆಯಾಗಿಹ ಮನವೇ ಸತ್ಯ ನೀನಾಗೆಂದು
ಸತ್ಯವನ್ನೇ ಆಗ್ರಹ ಮಾಡುತಿರುವಾಗ
ಗಾಂಧೀಜಿ ಬಂದರು ಆ ಒಂದು ದಿನ
ಗಾಂಧೀಜಿ ಬಂದರು ಆ ದಿನ ||೧||

ಸಮಾನತೆಯ ಸೃಷ್ಠಿಗೆಂದೆ ಜಗವು
ಮನವೇ ಅಸ್ಪೃಶ್ಯವಾಗಿದೆ ಇಂದು
ದೇವರಿಗೂ ಆಧಾರವಿದೆಯೇ ? ಈ ಮನದ ಬಿಡಾರದಲಿ !
ಇಲ್ಲಿ ಅಸತ್ಯಕೆ ಆಗ್ರಹವಿದೆ ಎಂದಾದಾಗ
ಗಾಂಧೀಜಿ ಬಂದರು ಆ ಒಂದು ದಿನ
ಗಾಂಧೀಜಿ ಬಂದರು ಆ ಮರುದಿನ||೨||

ಹಸಿವೆಂಬುದಿಲ್ಲಿ ಮಾರಾಣಾಂತಿಕ ದಯಿಸದ ಹಲ್ಲೆ !
ದಿವಿಜರಿರುವರೆಂಬುದ ನಂಬಿಕೆಗೆ ಕಾರಾಣಾಂತಿಕ ಬಗೆಹರಿಯದ ಕಲ್ಲೆ!
ನಂಬಿಕೆ ,ಸತ್ಯತೆಗೆ ನ್ಯಾಯವ ತೂಗಿ ಹಾಕಿಹರಿಲ್ಲಿ
ಮನದ ಧಾರುಣ ಸ್ಥಿತಿಗೆ ತನ್ನರಿವು ಇಲ್ಲದಿರುವಾಗ
ಗಾಂಧೀಜಿ ಬಂದರು ಆ ಒಂದು ದಿನ
ಗಾಂಧೀಜಿ ಬಂದರು ಮನದ ಸತ್ಯಾಗ್ರಹದಲಿ||೩||

ಮನದ ಗೋಡೆಯಲಿ
ಸತ್ಯಾನ್ವೇಷಣೆಯ ನಂಬಿಕೆ ಅಂಟಿಕೊಂಡಿರುವಾಗ
ಕೂಡಿ ಬಾಳುವವರಿಲ್ಲ !ಇಲ್ಲಿ ಎಲ್ಲ ಸಮರ್ಥರೇ?
ಮನದಂತರಂಗದ ದೀವಿಗೆ ಒತ್ತಿ ಪಸರಿಸಿ
ಸತ್ಯವ ಹುಡುಕುತಿರುವಾಗ
ಗಾಂಧೀಜಿ ನಡೆದರು ಮುಂದೆ ಬಾಲಕನಾಗಿ
ಗಾಂಧೀಜಿ ಮತ್ತೆ ಬಂದರು ಈ ಮನದ ಸತ್ಯಾಗ್ರಹದಲಿ ವಿಶ್ವಮಾನವದೆಡೆಗೆ ||೪||

~ಶ್ರೀಧರ ಜಿ.ಯರವರಹಳ್ಳಿ

ಶ್ರೀಧರ ಜಿ ಯರವರಹಳ್ಳಿ

ಶ್ರೀಧರ ಜಿ ಯರವರಹಳ್ಳಿ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನವರು. ಬಿ ಎಸ್ ಸಿ ಪದವೀಧರರಾಗಿರುವ ಅವರು ಈಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಒಲವಿರುವ ಅವರಿಗೆ ಬರವಣಿಗೆ, ಓದುವುದು ಹವ್ಯಾಸವಾಗಿದೆ. ಅವರ ಕೆಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ.

More About Author