Poem

ಗಂಜಿಗೆ ನಂಜು

ಪಾಪದ ಕೂಪಕೆ ನೆಪದ ಚಾಪೆ
ಸಾಕುವ ಕಾಲಿಗೆ ರಾತ್ರಿಯ ಪಾಳಿ
ಸಾಕ್ಷಿಗೆ ಬೇಕಿದೆ ದಾಖಲೆ ಮೊತ್ತ

ಸೊಗಸಿನಾಟಕ್ಕೆ ಸಾವಿರ ಜನ
ಸೂತಕದ ಊಟಕ್ಕೆ ಮೂರೇ ಜನ
ಆಟ-ಕೂಟಗಳಿಗೆ ನಿರ್ಬಂಧದ ಗೂಟ

ಮುಟ್ಟಿದರೆ ತಟ್ಟಿತು
ಅಪ್ಪಿದರೆ ಆಪತ್ತು
ಬೆಪ್ಪನಂತೆ ನಿಂತವನಿಗೆ ಆಯಸ್ಸು

ಅಂತರ ನಿರಂತರ
ಹಿಂದೊಂದಿತ್ತು ಮುಂದೊಂದಾಗಿ ಬಂತೂ,
ಭಯ ಅಭಯಗಳ ಮಧ್ಯ ಪದಗಳಿಗೆ ಕುತ್ತು ಬಂತು.

ಅತ್ತ ಇತ್ತ ಎತ್ತ ನೋಡಿದರೂ ಅದರದೇ ಚಿತ್ತ
ಗಂಜಿಗೆ ನಂಜು ಬತ್ತು
ತಂದವರು ಮನೆಯಲ್ಲಿ ತರದವರು ಬೀದಿಯಲ್ಲಿ

ಗಂಗಾ ದಡದಲ್ಲಿ ಬಂಗಿಯ ಪಡೆ
ವಾರಸು ಇಲ್ಲದ ಸಾವಿರ ಸಮಾಧಿ
ಆರತಿ ಹೊತ್ತಿಗೆ ಸೂತಕದ ಒತ್ತಿಗೆ

ಪಿ. ನಂದಕುಮಾರ್

ಪಿ. ನಂದಕುಮಾರ್ ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದವರು. ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಕಾವ್ಯ, ಕಥೆ, ವಿಮರ್ಶೆ, ಸಂಶೋಧನೆಗಳಲ್ಲಿ ಆಸಕ್ತಿ ಹೊಂದಿರುವ ಅವರ ಲೇಖನ, ವಿಮರ್ಶೆ, ಕವಿತೆಗಳು ಬುಕ್ ಬ್ರಹ್ಮ ಸೇರಿದಂತೆ ಹಲವು ಸಾಹಿತ್ಯಿಕ ವೆಬ್ ಸೈಟ್, ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

More About Author