Story

ಗಟಿವಾಣಿ

ಕತೆಗಾರ್ತಿ ರೇಣುಕಾ ಕೋಡಗುಂಟಿ ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಇಜಬೂಪನ ಪದ, ಶವಸಂಸ್ಕಾರ, ಕಂದೀಲಿನ ಕುಡಿ, ನಿಲುಗನ್ನಡಿ, ಬಳಪದ ಚೂರು ಸೇರಿದಂತೆ ಹಲವು ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರ ಗಟಿವಾಣಿ ಕತೆ ನಿಮ್ಮ ಓದಿಗಾಗಿ.

ಕತ್ತಲಂಬಾದು ಗಂವ್‍ಗುಡಾಕತ್ತಿತ್ತು, ಸುತ್ತ ಅರ್ದಾರಿ ಸಾಬವ್ವನ ಗುಡಸ್ಲಿ ಬಿಟ್ಟರ, ಯಾ ಮನಿನು ಇದ್ದಿಲ್ಲ. ಕಂದೀಲದ ಬತ್ತಿನ್ನ ಸಾಣ್ದು ಮಾಡಿ, ನೆಲಕ್ಕ ಅಡ್ಡಾದ್ಲು. ಆರು ತಿಂಗ್ಳು ಕೂಸು ಬಗಲಾಗ ಮಕ್ಕಂಡಿತ್ತು. ಏಟೊತ್ತಾದ್ರು ಸಾಬವ್ವಗ ನಿದ್ದಿನ ಬರ್ಲಿಲ್ಲ, ಗಂಡ ಮನ್ಯಾಗ ಇಲ್ಲದ್ದಕ್ಕ ಸೊಲುಪು ಒಬ್ಬೇಕೆ ಅದೀನಿ ಅನ್ನಾ ಕಸಿವಿಸಿನು ಇತ್ತು. ಎಡಕ್ಕ ತಿರಿಗಿ ಬಗಲಾಗ ಇರಾ ಕೂಸುನ್ನ, ಬಲಗೈಲಿಂದ ಗಟ್ಯಾಗಿ ತಬ್ಬಿಕೆಂಡ್ಲು. ಕೂಸು ಅರಾಮಾಗಿ ನಿದ್ದಿ ಮಾಡಾಕತ್ತಿತ್ತು. ಸಾಬವ್ವಗ ಸೊಲುಪು ಜಂಪು ಅತ್ತತಿದ್ದಂಗ, ಏನಾ ಕೆಟ್ಟ ಕನಸು ಬಿತ್ತು. ಕನುಸು ಬಿದ್ದದಕ ದಿಗ್ಗನ ಎದ್ದು ಕುಂತ್ಲು. ಎದ್ದು ಕುಂತಾಕಿನ ಗಾಬ್ರಿಲೆ ಅತ್ತಾಗಿತ್ತಾಗ ನೋಡಿ, ಮಕ್ಕಂಡ ಕೂಸುನ್ನ ದಿಟ್ಟಿಸಿ ನೋಡಿದ್ಲು ‘ಕೋಡಿನ್ನ ತಂದು, ಎಂತಾ ಕನ್ಸು ಬಿತ್ತವ ಇವನೌನ್, ದ್ವಾಡದು ಗುಡ್ಡನ ಎದಿಮ್ಯಾಲೆ ಬಿದ್ದಂಗಾತು, ನನ್ನ ವಟ್ಟಿನ ಬುಗುಲ್ ಅಂತು, ಅನಕಂತ, ಯಪ್ಪಾ ಗುಡ್ಡದ ಮಲ್ಲಯ್ಯ ನೀನಾ ಕಾಪಾಡು’ ಅಂತಂದು ಕೈಮುಗುದು ‘ಏಟೊತ್ತಿಗೆ ಬೆಳಕರಿತ್ತನು’ ಅನಕಂತ ಕಣ್ಣು ಬುಟಗಂಡು ಮೆಲ್ಲಕ ಅಡ್ಡಾದ್ಲು. ಅಕಿಗೆ ಗೊತ್ತಾ ಇಲ್ದಂಗ ಕಣ್ಣಿಗೆ ಜಂಪು ಅತ್ತಿತು.

ಸಾಬವ್ವಂದು ಊರಾಗಿನ ಮನಿ ಬಿದ್ದೋಗಿತ್ತು. ಮನಿ ಕಟ್ಟಸಾಕ ಆಗಲಾರ್ದ ಸಾಬವ್ವನ ಗಂಡ ಶಿವಪ್ಪ ಊರು ಮುಂದಳ ವಲದಾಗ ಗುಡಸ್ಲಿ ಮಾಡಿಕೆಂಡು ಗಂಡ ಏಣ್ತಿ ಇದ್ರು. ‘ವಲದಾಗ ಯಾಕಿರ್ತಿರಿ, ಬಡದಾಕಿದ್ರ ಕೇಳೋರಿಲ್ಲ ಏನಿಲ್ಲ ಅಲ್ಲಿ, ಊರಾಗ ಬ್ಯಾರೆ ಮನಿ ಬಾಡಿಗಿ ಇಡಕಂಡುಕಾಸಿ ಇರ್ರಿ, ಅಂತ ಊರು ಮಂದಿ ಅಂತಿದ್ರು. ಅದಕ್ಕ ಶಿವಪ್ಪ ಸಾಬವ್ವ ತಲಿನ ಕೆಡಿಸಿಕೆಳ್ಳಲಿಲ್ಲ. ವಲದಾಗಿದ್ದು ಮೂರ್ನಾಕು ತಿಂಗ್ಳಾಗಿತ್ತು ಯಾವುದು ಚಿಂತಿ ಇಲ್ಲದಂಗ ಇದ್ರು. ಅಗಲೊತ್ತು ಕೂಲಿ ಆಳುಗುಳು ಬರ್ತಿದ್ವು, ಓತಿದ್ವು. ಒಂದಿನ ತನ್ನ ಸಣಪ್ಪಗ ಅರಾಮಿಲ್ಲ ಅಂತ ತೋರ್ಸಾಕ ರೈಚೂರಿಗೆ ಶಿವಪ್ಪ ಓಗಿದ್ದ. ರಾತ್ರಿ ಬರಾಕ ಆಗುತ್ತ ಇಲ್ಲಾ ಗೊತ್ತಿಲ್ಲ, ಬರಲಿಲ್ಲ ಅಂದ್ರ ಉಶಾರಾಗಿರು ಅಂತ ಸಾಬವ್ವಗೇಳಿ ಊರಿಗೋಗಿದ್ದ. ಇಂಗಾಗಿ ಅವತ್ತ ಮನ್ಯಾಗ ಸಾಬವ್ವ ಒಬ್ಬಾಕೆ ಆಗಿದ್ಲು.

ಸಾಬವ್ವಗ ಅದಾ ಜಂಪತ್ತಿತ್ತು, ಸರ್ ಸರ್ ಅಂತ ಸದ್ದಾತು, ಕೂಸು ಚಿಟ್ ಅಂತ ಚೀರಿ ಅಳಾಕತ್ತಿ, ನಿದ್ದಿಗಣ್ಣಾಗ ಇದ್ಲು, ಕಣ್ಣು ಬುಡಲಾರ್ದ ಕೂಸುನ್ನ ಎಳಕಬೇಕು ಅಂತ ಬಲಗಯ್ಯಿನ್ನ ಚಾಚಿದ್ಲು. ಕೆಳಾಕತ, ಮ್ಯಾಕತ ಕಯ್ಯಾಡ್ಸಿದ್ಲು, ಕೂಸು ಕಯ್ಯಿಗತ್ತಲಿಲ್ಲ. ಮೆಲ್ಲಕ ಕಣ್ತೆರುದು ನೋಡಾಟಿಗೆ ಕೂಸಿನ ಕಯ್ಯಿ ಅದರ ಬಾಯಾಗಿತ್ತು. ಅದನ್ನ ನೋಡಿದಾಕಿನ ಏ,ಏ, ನಿನ್ನ ಮುಂಡಾಮುಚ್ಲಿ, ಬಿಡಾ, ಬಿಡಾ, ಅಂತ ಚೀರಿದ್ಲು. ಅಕಿ ದನಿಗೆ ಅದು ಕೂಸನ್ನ ಎಳಕಂಡುಕಾಸಿ ಗುಡಸ್ಲ್ಯಾಲಿಂದ ವರಾಕ ಬಂದುಬಿಡ್ತಿ. ಸಾಬವ್ವ ಅದರಿಂದನಾ ಓದ್ಲು, ಆ ಕತ್ತಲದಾಗ ಅದು ನಾಯಿನೊ, ನರಿನೊ, ಚಿರ್ತಾನೊ, ಏನು ಅಂತನಾ ಅಕಿಗೆ ಗೊತ್ತಾಗ್ಲಿಲ್ಲ. ಕೂಸನ್ನ ಬುಡ್ಸಿಗೆಬೇಕು ಅಂಬಾದಷ್ಟ ಅಕಿಗೆ. ಕಲ್ಲುಮುಳ್ಳು ತುಳಕಂತ, ಕಬರಿಲ್ಲದಂಗ ಅದರ ಇಂದಿಂದ ಒಡ್ಡೆ ಓದ್ಲು.

ಬೆಳಕರದ ಮ್ಯಾಲೆ ಗಂಡ ಬಂದು ನೋಡತಾನ ಸಾಬವ್ವನ ಕಯ್ಯಿತುಂಬ, ಮೈತುಂಬ ರಾಣಂಬ ರಗುತ, ಕೂಸಿಗೆ ಮಲಿ ಕೊಟಗಂತ ಗುಡಸ್ಲಿ ಮುಂದನ ಕುಂತಿದ್ಲು. ಮಾರಿಮ್ಯಾಗ ರವುಸು ತುಂಬಿತ್ತು, ಕಣ್ಣ ಅಂಬಾವು ಬೆಂಕಿ ಕೆಂಡ ಆಗಿದ್ವು. ಕೂದ್ಲಾ ಕೆದರಿದ್ವು. ಕಾಲೆಲ್ಲ ರಾಡ್ಯಾಗಿದ್ವು. ಕಣ್ಣನ್ನ ಅಕ್ಕಡೆ ಇಕ್ಕಡೆ ಕದಲಸದಂಗ ಒಂದಾ ಕಡೆ ನೋಡಾಕತ್ತಿದ್ಲು. ಗಂಡ ಬರಾ ಸದ್ದಾದ್ರೂ ಅಕಿ ಗಮನ ಕದಲ್ಲಿಲ್ಲ. ಸಾಬವ್ವನ ಅವತಾರನ್ನ ನೋಡಿ, ಗಂಡ ಶಿವಪ್ಪ ಗಾಬ್ರಿಯಾಗಿ ಸಾಬೀ,ಸಾಬೀ,ಏನಾತು,ಏನಾತು,ಯಾಕೀಟು ರಗತ ಆಗೇತಿ ಅಂತ ಕೇಳಿದ. ಗಂಡನ ಕಡೆ ತಿರುಗಿದಾಕಿನ, ಏನೊಂದು ಮಾತಾಡ್ಲಾರ್ದಾ ತಾನು ನೋಡಾಕತ್ತಿರ ಜಾಗದ ಕಡೆ, ತನ್ನ ಬಲಗಯ್ಯಿಂದ ಗಂಡಗ ತೋರ್ಸಿದ್ಲು. ಶಿವಪ್ಪ ಓಡೋಗಿ ನೋಡಿದ ಅಲ್ಲಿ ಒಂದು ದೆವ್ವನಂತ ಬಬ್ಬರ್ಸಿ ಸತ್ತು ಬಿದ್ದಿತ್ತು. ವಳ್ಳಿ ಏಣ್ತಿ ಕಡೆ ತಿರಿಗ್ದಾ, ಕೂಸಿನ ಕಯ್ಯಿಗೆ ಬಟ್ಟಿ ಸುತ್ತಿತ್ತು, ರಗುತ ಆಗಿತ್ತು. ಸಾಬಿ ಏನಾತು, ಅಂತ ಕುಸುದ ದನಿಯಾಗ ಕೇಳಿದ. ‘ಯಪ್ಪೋ, ನಮ್ ಬಾಳೇವಿಗೆ ಬೆಂಕಿ ಇಡಾಕ ಬಂದಿತ್ತ ಆ ಕೋಡಿ, ದಾಳೇವಡಿಲಿ ಕೂಸಿನ ಎಡಗೈ ಇಡಕಂಡಿತ್ತು’ ಅಂದ್ಲು. ಶಿವಪ್ಪ ಮತ್ತೀಟು ಗಾಬ್ರ್ಯಾಗಿ, ಎಲಾ ಇವನೌನ್, ಏನ್ ಮಾಡ್ದಿ ಸಾಬಿ, ಎಂಗ ಮಾಡ್ದಿ ಅಂದ. ಸಾಬಿ, ಕತಕತ ಕುದಿತಿದ್ಲು, ಗೊತ್ತಿಲ್ಲ ಏನ್ ಮಾಡಿದ್ನೆ ಎನೊ ದೇವರಿಗೆ ಗೊತ್ತು, ಆ ಎಲ್ಲವ್ನ ಮಯ್ಯಾಗ ಬಂದ್ಲಾ ಏನ ಗೊತ್ತಿಲ್ಲ, ನನಗಾ ಕಬರಾ ಇದ್ದಿಲ್ಲ, ಪರವಶಾಗಿಬುಟ್ಟಿದ್ದೆ. ಎಚ್ಚರಾದಾಗ ಮಯ್ಯೆಲ್ಲ ರಗುತ, ಕಂಕುಳದಾಗ ಕೂಸಿತ್ತು, ಬಲಗಯ್ಯಾಗ ಈ ಇಳಿಗಿ ಇತ್ತು. ಅಂತ ಅಲ್ಲಿದ್ದ ಇಳಿಗಿನ್ನ ತೋರ್ಸಿದ್ಲು. ಶಿವಪ್ಪಗ ಮಾತಿಲ್ಲದಂಗಾಗಿತ್ತು, ಕಟ್ಟೆಲ್ಲ ರಗುತ ಆಗಿತ್ತು. ಮಳುದ್ದದ ಈಳಿಗಿ ನೋಡಿಕೆಂತ ‘ಸಾಬೀ ನೀನಾ ಸಾಯ್ಸಿದ್ಯಾ’ ಅನಕಂತ ಏಣ್ತಿ ಮಾರಿ ನೋಡ್ತಿದ್ದಂಗ ಅಕಿ ಮಾರ್ಯಾಗ ಎಲ್ಲವ್ವನ ರವುಸು ತುಂಬಿಕೆಂಡಿತ್ತು, ಜೀವನ ಜಲ್ ಅಂದುಬುಡ್ತಿ.

ಶಿವಪ್ಪ ಏಣ್ತಿಗೆ ಸಮಾದಾನ ಮಾಡಿದ, ಕೂಸನ್ನ ಕರಕಂಡು, ದವಾಕಾನಿಗೆ ಓಗಾಮ ನಡಿ ಅಂತ ಬಂಡಿ ಕಟ್ಟಿದ, ಸರ್ರಂತ ಶಿವಶಾಣಪ್ಪನ ದವಾಕಾನಿಗೆ ಬಂದ. ಕೂಸಿಗೆ ಬ್ಯಾಂಡೇಜು ಆಕಿ, ಸಾಬವ್ವಗ ಅರಾಮ ತಗಳವ ಅಂತೇಳಿ, ಡಾಕ್ಟ್ರು ಏನಾಗೇತಿ ಅಂತ ಕೇಳಿದ. ಶಿವಪ್ಪ ನಡದ ಕತಿ ಏಳಿದ. ಇದನ್ನ ಕೇಳಿ ಡಾಕ್ಟ್ರು ಗಾಬ್ರ್ಯಾಗಿ, ಆ ಸತ್ತಬಿದ್ದಿರ ಬಬ್ಬರ್ಸಿನ್ನ ತಗಂಡ್ ಬರ್ರಿ ಅಂತ ಕೆಲಸದೋರಿಗೆ ಏಳಿಕಳಿವಿ, ಸಾಬವ್ವನ್ನ, ಶಿವಪ್ಪನ್ನ ದವಾಕಾನ್ಯಾಗ ಕೂಡ್ಸಿ ಪೋಲಿಸರಿಗೆ, ಪೇಪರ್ದೋರಿಗೆ ತಿಳಿಸಿದ. ಸಾಬವ್ವನ ಸಾಸಕ್ಕ ಮೆಚ್ಚಿ ಎಲ್ಲಾ ಪೇಪರ್‍ದೋರು ಅಕಿ ಪೋಟನ್ನ ಪೇಪರ್ದಾಗ ಆಕಿದ್ರು, ಸತ್ತೋದ ಬಬ್ಬರ್ಸಿನ ದೈವದಕಟ್ಟಿಗೆ ಬೇನಿಗಿಡಕ್ಕ ಕಟ್ಟಿ ಆಕಿ, ಊರೋಳೋರೆಲ್ಲ ಬಂದು ನೋಡ್ರೆಪ ಅಂತ ಡಂಗ್ರ ಸಾರಿದ್ರು. ಸತ್ ಬಬ್ಬರ್ಸಿ ನೋಡಾಕ ಮಂದಿ ಜಾತ್ರಿ ಬಂದಂಗ ಬಂತು. ಗಟಿವಾಣಿ ಸಾಬವ್ವ ಊರಾಗ ಮಾತಾದ್ಲು, ಸರಕಾರದೋರು ಅಕಿಗೆ ಸನುಮಾನ ಮಾಡಿದ್ರು.

ಪದಗಳ ಅರ್ಥ

ಸಾಣ್ದು - ಸಣ್ಣದು
ಅಡ್ಡಾದ್ಲು – ನೆಲಕ್ಕೆ ಹೊರಗಿದಳು
ವಟ್ಟಿ - ಹೊಟ್ಟೆ
ಅಗಲೊತ್ತು - ಹಗಲಿನ ಹೊತ್ತು
ಕಟ್ಟೆಲ - ಕಟ್ಟಿ ತುಂಬ
ಮಳುದ್ದದ – ಮೊಳ ಉದ್ದದ
ರಗುತ - ರಕ್ತ
ಏಳಿಕಳಿವಿ - ಹೇಳಿ ಕಳುಹಿಸಿ
ಸಾಸಕ್ಕ - ಸಾಹಸಕ್ಕೆ
ಕನ್ಸು – ಕನಸು
ಸನುಮಾನ - ಸನ್ಮಾನ


ರೇಣುಕಾ ಕೋಡಗುಂಟಿ

ರೇಣುಕಾ ಕೋಡಗುಂಟಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ಅಯ್ಯಪ್ಪ ಕೋಡಗುಂಟಿ, ತಾಯಿ ಶಾಂತಮ್ಮ ಕೋಡಗುಂಟಿ, ರೇಣುಕಾ ಕೋಡಗುಂಟಿಯವರು ವಿದ್ಯಾಭ್ಯಾಸ ಎಂ.ಎ, ಎಂ.ಫಿಲ್, ಗೃಹಿಣಿ. ಸಾಹಿತ್ಯ, ಸಂಶೋಧನೆಯಲ್ಲಿ ಅಪಾರ ಆಸಕ್ತಿ. ‘ಕೃತಿ ದೀವಿಗೆ ಟ್ರಸ್ಟ್, ನಡೆಸುತ್ತಿದ್ದಾರೆ. ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ಕೆಲಸ ಮಾಡುತ್ತಿದ್ದಾರೆ.

ಕೃತಿಗಳು: ಬಳಪದ ಚೂರು(ಕವನ ಸಂಕಲನ-2011), ‘ನಮ್ಮ ಕನ್ನಾಡ ಪ್ರೇಮದ ಜೋತಿ (2011-ರಾಯಚೂರು ಜಿಲ್ಲೆಯ ಕಸಬಾ ಲಿಂಗಸೂಗೂರಿನ ಅಂಪವ್ವ ಪೂಜಾರಿ ಅವರು ಹಾಡಿರುವ ಜನಪದ ಹಾಡುಗಳ ಸಂಗ್ರಹ), ಅದೇ ಗಾಯಕರು ಹಾಡಿರುವ ‘ಇಜಬೂಪನ ಪದ’ (2019- ಎನ್ನುವ ಜನಪದ ಖಂಡಕಾವ್ಯ),  ‘ಭಾಷಾವಿಜ್ಞಾನ ಸಂಶೋಧನೆ ಇಂದು’ (ಸಂಶೋಧನಾ ಪ್ರಬಂಧಗಳ ಸಂಪಾದನೆ-2011), ಕರ್ನಾಟಕದಲ್ಲಿ ಶವಸಂಸ್ಕಾರ (ಸಂಶೋಧನಾತ್ಮಕ ಲೇಖನಗಳ ಸಂಗ್ರಹ-2009), ಕರ್ನಾಟಕದ ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಶವಂಸ್ಕಾರ (2020- ಸಂಶೋಧನಾತ್ಮಕ ಲೇಖನಗಳ ಸಂಗ್ರಹ) ಪ್ರಸ್ತುತ ಜಾನಪದ ಒಗಟುಗಳನ್ನು ಮತ್ತು ಡೊಳ್ಳಿನ ಪದಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮಸ್ಕಿ ಕನ್ನಡ ನಿಘಂಟು’ ರಚನೆಯತ್ತ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಸೊಗಡಿನ ಶೈಲಿಯಲ್ಲಿ ಹಲವಾರು ಕಥೆಗಳನ್ನು ಬರೆದಿದ್ದಾರೆ. ಬುಕ್ ಬ್ರಹ್ಮದಲ್ಲಿ ಹಲವಾರು ಅಂಕಣ ಬರಹಗಳನ್ನು ಬರೆಯುತ್ತಿದ್ದಾರೆ.


 

More About Author