
ಅರ್ಧ ಶತಮಾನದಾಚೆಯ ಮಾತು
ಸಾಹಿತ್ಯ ಸಂಸ್ಕೃತಿ ಪರಿವೆ
ಇರುವೆ ಹೆಜ್ಜೆಯಲಿ
ನನ್ನೊಳಗೆ ಹರಿವ ಮುಲುಕು
ಕಿರು ಸದ್ದು
ಕೇಳಿಸುತ್ತಿರುವಾಗಲೇ
ಒದಗಿ ಬಂದಿರಿ ನನಗೆ
ಝಗ ಝಗಿಸುತ್ತ
ಪ್ರತಿಭೆ ಪ್ರಭೆ ಪಸರಿಸುತ್ತ
ಅಚಾನಕ್ಕಾಗಿ
ಅನರ್ಥ್ಯ ಗುರು ನಿಧಿ
ದೊರೆತ ವಿಸ್ಮಯದಂತೆ.
ಗುರುವೆ,
ಅನಂತ ಕೃತಜ್ಞತೆ ನಿಮಗೆ.
ನಾನೆ ನಾನಾಗಿ
ಶ್ರುತಿ ಹಿಡಿವ ಪರಿಯರಿವ
ಮುನ್ನವೇ
ಹಿರಿಯ ಕವಿ ಅಡಿಗರೆಡೆ ಕೈತೋರಿ
ಬಿಟ್ಟು ಹೊರಟಿರಿ
ನಿಮ್ಮ ದಾರಿ ಹುಡುಕಿ.
ತಿರುಗಿ ಬಂದಾಗ
ಧರ್ಮಾಂತರ ವಿವಾಹ
ಬದುಕ ಬೆಡಗಿಗುತ್ತರವ
ಹುಡುಕುವುದರಲ್ಲಿ
ಮಗ್ನವಾದಿರಿ
ಲಗ್ನವಾದಿರಿ ಕೊನೆಗು
ಧೈರ್ಯದೈತ್ಯನಾಗಿ ಕಂಡಿರಿ ನನಗೆ
ಗುರುವಿಗೆ ನಮೋ ಎಂದೆ.
-ಎರಡು-
ಷಟ್ಟಂಡ ದೊರೆ ಪರಾಕ್ರಮಿಗಳನು
ಬಾಯ್ಕಳಿಸಿ
ವೃಷಭಾಚಲದಲ್ಲಿ
ದಿಗ್ವಿಜಯ ಶಾಸನ ಬರೆಸಿ
ಮರಳಿ ಬಂದಿದ್ದೀರಿ
ಜ್ಞಾನಪೀಠ ಕಿರೀಟ
ನವರತ್ನ ಮಣಿಮಾಲೆಯಲಂಕಾರ.
ʻ...ಗರ್ವರಸಂ ಸೋರಿ'
ಎಂದಾದರೂ?
ಗೊತ್ತಾಗಲಿಲ್ಲ.
ಅರಮನೆಯ ಮಹಾದ್ವಾರದಲ್ಲಿ
ಚಕ್ರರತ್ನ ನಿಂತಿದೆ
ಒಳಪುಗುತ್ತಿಲ್ಲ.
ನೀವೂ ನಿಂತಿದ್ದೀರಿ
ಭವ, ದಿವ್ಯದಾಲೋಚನೆಯಲ್ಲಿ.
ಅಂದು, ಕಣ್ಣು ಕೋರೈಸಿದ್ದ
ಆ ಗುರು ಬೆಳಕು
ಇಂದೇಕೊ
ಕುಂದಿದಂತೆನಿಸುತಿದೆ ನನಗೆ.
-ಮೂರು-
ನಿಮ್ಮದೊ
ಅದ್ಭುತ ಪ್ರತಿಭೆ
ವಿಶ್ವ ವಿಸ್ತಾರದನುಭವ
ಸೂಕ್ಷ್ಮಾತಿಸೂಕ್ಷ್ಮಗಳನರಿವ
ವ್ಯಾಖ್ಯಾನಿಸುವ
ಸಂವೇದನೆಯ ಸೌಭಾಗ್ಯ.
ಪಂಪನ ಭರತ ನೀವಲ್ಲ
ಕೊನೆಗಾದರೂ
ಸರ್ವ ತ್ಯಾಗವಗೈದು
ತಪಕೆ,
ಪಶ್ಚಾತ್ತಾಪಕ್ಕೆ ಮನತೆರೆವ ಜನವಲ್ಲ.
'ಭರತೇಶ ವೈಭವ'ದ
ಭೋಗ ಯೋಗ ಸಮನ್ವಯದ ಭರತ
'ಮುರಿದು ಕಣ್ಣಿಟ್ಟರೆ
ಕ್ಷಣಕೆ ಮುಕ್ತಿಯ ಕಾಂಬ' ಸಿದ್ಧ.
ನಿಮಗು ಗೊತ್ತುಂಟು
ಕ್ಷಣಕೆ ಮುಕ್ತಿಯ ಕಾಂಬ
ಸದ್ಯೋಜಾತ ಅಧ್ಯಾತ್ಮ ವಿದ್ಯೆ.
ಕ್ಷಣ ಮಾತ್ರ,
ಒಂದೇ ಒಂದು ಕ್ಷಣ ಮಾತ್ರ.
ವೇದಿಕೆಯ ಭಾಷಣದ ಪಾಕ
ಕೊಚಗುಟ್ಟಿ
ಕುದಿ ಬಂದ
ಸ್ಫೂರ್ತ ರಸದರಗಳಿಗೆ ಮಾತ್ರ.
ಕೆಳಗಿಳಿದು ಬಂದ ಮರುಕ್ಷಣದಲ್ಲೆ
ಕುದಿಯುಕ್ಕು ಇಳಿದಂತೆ
ಲೌಕಿಕ ಬದ್ಧ ಸಿದ್ಧಾಂತದ
ನಿಷ್ಠಾವಂತ ಅನುಷ್ಠಾನ.
ಮನಂಬುಗುವಂತೆ
ಸುರೋಚಕ ಸಮರ್ಥನೆ.
-ನಾಲ್ಕು-
ಚಕಮಕಿ ಕಲ್ಲನುಜ್ಜುತ್ತ
ಸ್ಫೋಟಕ್ಕೆ ಕಾದು
ಕಿವಿ ಕಂಪಿಸುತ್ತ
ಕೂತು
'ಹುತ್ತಗಟ್ಟದೆ ಮತ್ತೆ ಚಿತ್ತ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪ-ರೇಖೆ'?
ಎಂದ,
ನೋನುತ್ತ ಸಂದ
ಆ ಗುರುಕವಿಯ
ಮರೆತಿರೇ?
ಸುಪ್ತ ಸುಷುಪ್ತಿಯಾಳದಲ್ಲಿ
ಧ್ಯಾನಸ್ಥವಾಗಿರುವ
ಆದಿದೇವ ಕವಿವಾಣಿ
ಸರಸ್ವತಿಯ
ನಿತ್ಯ
ಪ್ರಜ್ಞಾ ವಿವೇಕಕ್ಕೆ
ಆಹ್ವಾನಿಸುವ
ಕವಿಗುರು ಚಿರಪರಂಪರೆಯ
ಮರೆವಿರೇ?
ಆ ಅವರುಗಳ
ನಿಮ್ಮೊಳಕ್ಕೆ ಕರದುಕೊಳ್ಳಿರೇ
ಮತ್ತೆ
ಋಜುನಿಷ್ಠೆಯಿಂದ?
ಜಿ. ಎಚ್. ನಾಯಕ
’ಜಿ.ಎಚ್. ನಾಯಕ’ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಿರುವ ವಿಮರ್ಶಕ ಗೋವಿಂದರಾಯ ಹಮ್ಮಣ್ಣ ನಾಯಕ ಅವರು ಜನಿಸಿದ್ದು 1935ರ ಸೆಪ್ಟೆಂಬರ್ 18ರಂದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದವರು. ಮೈಸೂರಿನ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ (1994-95) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠ (1996-97)ಗಳ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು.
ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷ (1984), ನಿಜದನಿ (1988), ಸಕಾಲಿಕ (1995), ಗುಣಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ದಲಿತ ಹೋರಾಟ: ಗಂಭೀರ ಸವಾಲುಗಳು (2004), ಸ್ಥಿತಿಪ್ರಜ್ಞೆ (2007), ಮತ್ತೆ ಮತ್ತೆ ಪಂಪ (2008), ಸಾಹಿತ್ಯ ಸಮೀಕ್ಷೆ (2009). ಉತ್ತರಾರ್ಧ (2011) ಅವರ ವಿಮರ್ಶಾ ಕೃತಿಗಳು.
ಕನ್ನಡ ಸಣ್ಣ ಕಥೆಗಳು (1978), ಹೊಸಗನ್ನಡ ಕವಿತೆ (1985), ಶತಮಾನದ ಕನ್ನಡ ಸಾಹಿತ್ಯ ಸಂ. 2 (2000) ಶತಮಾನದ ಕನ್ನಡ ಸಾಹಿತ್ಯ ಸಂ. 2 (2009) ಕೃತಿಗಳನ್ನು ಸಂಪಾದಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಸಾಹಿತ್ಯ ವಿಮರ್ಶೆ ಪ್ರಶಸ್ತಿಯು 'ನಿರಪೇಕ್ಷ' (1985), ವಿ. ಎಂ. ಇನಾಂದರ್ ವಿಮರ್ಶೆ ಪ್ರಶಸ್ತಿ 'ನಿಜದನಿ' (1989)ಗೆ ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (19990), ಕರ್ನಾಟಕ ರಾಜ್ಯ ಪ್ರಶಸ್ತಿ (2000), ಜಿ. ಎಸ್. ಶಿವರುದ್ರಪ್ಪ ವಿಮರ್ಶೆ ಪ್ರಶಸ್ತಿ (2004), ಶಿವರಾಮ ಕಾರಂತ ಪ್ರಶಸ್ತಿ (20009), ಪಂಪ ಪ್ರಶಸ್ತಿ (2010), ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಡಿ. ಲಿಟ್ ಪದವಿ (2014), ತೀನಂಶ್ರೀ ವಿಮರ್ಶೆ ಪ್ರಶಸ್ತಿ (2014) ಅವರಿಗೆ ದೊರೆತ ಗೌರವಗಳು.
ಅಮೆರಿಕದ ಮ್ಯಾಡಿಸನ್ ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯ (1983) ಹಾಗೂ ಅಮೆರಿಕ ಸರ್ಕಾರದದ ಅತಿಥಿಯಾಗಿ ಅಮೆರಿಕ (2000) ಪ್ರವಾಸ ಮಾಡಿದ್ದ ಅವರು ಇಂಗ್ಲೆಂಡ್ (2000) ಮತ್ತು ಚೀನಾ (2006)ಗಳಿಗೂ ಭೇಟಿ ನೀಡಿದ್ದಾರೆ.
ಜಿ.ಎಚ್. ನಾಯಕರು 2023 ಮೇ 26ರಂದು ನಿಧನರಾದರು
More About Author