Poem

ಆ ದಿನ ಭಾನುವಾರ

ಆ ದಿನ ಭಾನುವಾರ!
ಕಟುಕನೆಡೆಯಿಂದ
ಅಂಗಳು ತುಂಬಿ
ಹರಿವ ರಕ್ತದ ಕೋಡಿ
ಕಿನಾಲು ಸೇರುತ್ತಿತ್ತು

ಭೀಕರ ಪ್ರಶಾಂತ ಬೀದಿಯಲಿ ದಾರಿಹೋಕರು
ಗಮನಿಸದೆ ನಡೆದರು
ಹರಿವ ರಕ್ತದ ಕೋಡಿಯ

ಏನೂ ಅರಿಯದ
ನಾಯಿಗಳೆರಡು
ಬಾಲ ಮುದುರಿಕೊಂಡು
ನೆಕ್ಕುತ್ತಿದ್ದವು
ಸೂತಕದ ಆ ನೆತ್ತರನು

ಬಿಡುವಿರದ ಜನರ ಮುಖಗಳೆಲ್ಲ
ತಲೆಬುರುಡೆಯಂತೆ ಖಾಲಿ ಖಾಲಿ

ಸಾವಿನ ಕುಣಿಯಿಂದೇಳುವ ಅವನ ಕಿರುಚಾಟ ಮಾತ್ರ
ಟೆಲಿಫೋನ್ ವಯರಿನ
ಮೇಲೂ ಕೆಳಗೂ ಹುಯ್ದಾಡುತಿತ್ತು
ಅದೇ ವಯರಿನ ಮೇಲೆ
ಗುಬ್ಬಿಗಳೆರಡು ಹಾಯಾಗಿ ಕುಳಿತಿದ್ದವು

ಆ ದಿನ ಭಾನುವಾರ!
ಮಾರುಕಟ್ಟೆ
ಕಿತ್ತಳೆಯಿಂದ ತುಂಬಿ ತುಳುಕುತ್ತಿತ್ತು
ವ್ಯಾಪಾರ ಮುಗಿವ ಮೊದಲೇ ಆರಂಭಗೊಂಡಿತು
ಮತ್ತೊಂದು ಭಾನುವಾರ

ಮೂಲ:ನೀಲಮನಿ ಫೂಕನ್
ಅನುವಾದ: ಭುವನಾ ಹಿರೇಮಠ

ಭುವನಾ ಹಿರೇಮಠ

ಭುವನಾ ಹಿರೇಮಠ ಅವರ ಪೂರ್ಣ ಹೆಸರು ಭುವನೇಶ್ವರಿ ರಾಚಯ್ಯ ಹಿರೇಮಠ. ಹುಟ್ಟೂರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಎಂಬ ಪುಟ್ಟ ಹಳ್ಳಿ. ತಂದೆ- ರಾಚಯ್ಯ (ಪ್ರವಚನಕಾರರು), ತಾಯಿ - ಶಿವಗಂಗಾ. ಸದ್ಯ ಬೆಳಗಾವಿ ಜಿಲ್ಲೆಯ ಹಿರೇನಂದಿಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆಯ ಹವ್ಯಾಸವಿರುವ ಭುವನಾ ಹಿರೇಮಠರ ಮೊದಲ ಕವನ ಸಂಕಲನ ಟ್ರಯಲ್ ರೂಮಿನ ಅಪ್ಸರೆಯರು ಕೃತಿ ಪ್ರಕಟಣೆಗೊಂಡಿದೆ. 2020ರಲ್ಲಿ  ಅವರ 'ಹಸಿರು ಪೈಠಣ ಸೀರಿ' ಕಥೆಗೆ ವಿಜಯ ಕರ್ನಾಟಕ ಯುಗಾದಿ ಕತಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ದೊರೆತಿದೆ. 


 

More About Author