Story

ಹಳೆ ಕ್ಯಾಸೆಟ್

ಕತೆಗಾರ ಶಿವರಾಜ್ ಡಿ.ಎನ್.ಎಸ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ದಾಸನಹುಂಡಿಯವರು. ಬರಹ-ಓದು-ನಟನೆ ಹಾಗೂ ಛಾಯಾಗ್ರಹಣ ಅವರ ಹವ್ಯಾಸವಾಗಿದ್ದು, ಸಾಹಿತ್ಯಕ್ಷೇತ್ರದಲ್ಲಿಯೂ ವಿಭಿನ್ನ ಬರವಣಿಗೆಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಅವರ ‘ಹಳೆ ಕ್ಯಾಸೆಟ್ ಕತೆ ನಿಮ್ಮ ಓದಿಗಾಗಿ...

ಅದು ಗಣೇಶ ಚತುರ್ಥಿಯ ನಂತರದ ಮೂರನೆಯ ದಿನ, ಸುಮಾರು ಐದು ಗಂಟೆಯ ಹೊತ್ತು, ಇನ್ನೇನೊ ಸೂರ್ಯ ಮುಳುಗುವ ಗಳಿಗೆಯಾಗಿದ್ದರೂ.. ಬೆಳ್ಳಿರಥದಲಿ ಸೂರ್ಯ ತಂದ ಕಿರಣ, ಅನ್ನುವಂತ ಹಾಡೋ ಅಥವ ಓ ಹೋ ಏನ್ ಕಲ್ಲಣ್ಣ’ ಏನ್ ಮಲ್ಲಣ್ಣ’ ಎನ್ನುವಂತ ಮಾತುಗಾರ ಮಲ್ಲಣ್ಣನ ಹಾಸ್ಯ ಚಟಾಕಿಯ ಮಾತುಗಳಾದರು ಕಂಬಕ್ಕೇರಿಸಿದ್ದ ಮೈಕ್ ಸೆಟ್ಟಿನ ಹಾರ್ನ್(ಲೌಡ್ ಸ್ಪೀಕರ್) ಗಳಲ್ಲಿ ಮೊಳಗಬೇಕಿತ್ತು, ಆದರೆ ಗರುಡನ ಪಾಳ್ಯದಲ್ಲಿ ಆ ವರ್ಷದ ಗಣೇಶ ಚತುರ್ಥಿ ಮಾಮೂಲಿ ವರ್ಷದ ಹಬ್ಬದ ದಿನಗಳಂತಿರಲಿಲ್ಲ, ಮೈಕಿನ ಸದ್ದು ಸಂಭ್ರಮವಿಲ್ಲದೆ ಹೊಸ ಗದ್ದಲವೆದ್ದಿತ್ತು, ಪಂಚಾಯ್ತಿ ಪಡಸಾಲೆಯ ಮುಂದೆ ಊರಾದ ಊರೆಲ್ಲ ಸೇರಿದ್ದರು, ಹತ್ತಾರು ಮಂದಿ ಒಮ್ಮೆಲೆಗೆ ವಾದಕ್ಕೆ ನಿಂತ ವಕೀಲರಂತೆ ಊರ ಯಜಮಾನರೆಲ್ಲ ಯಾವುದೋ ಹೈ ಕೋರ್ಟು ನ್ಯಾಯಾಧೀಶರಂತೆ ಗಂಭೀರತೆ ಕಾಯ್ದು, ಆಗಾಗ - ಏಯ್ ಒಬ್ಬೊಬ್ಬರಾಗ್ ಮಾತಾಡ್ರೆಯ್ಯ ಥೋ.’ ಎಂದು ಆರ್ಡರ್ ಮಾಡುತ್ತ ಕುಳಿತ್ತದರು.

ಇತ್ತ ಕರಡಿ, ಅಳುಮ, ಕುನ್ನಿ, ಮೂರು ಅಮಾಯಕ ಪ್ರಾಣಿಗಳು ತಲೆ ತಗ್ಗಿಸಿ ಗಳ ಗಳ ಅಳುತ್ತ ಅಪರಾಧಿಗಳಾಗಿ ನಿಂತಿದ್ದರು.

ಈಗ ಅಲ್ಲೆಲ್ಲೊ ಎರಡೂರಿನ ಆಚೆ, ಚಾಚು ತಪ್ಪದೆ ತಮ್ಮ ಗಳಿಗೆಗಳಿಗೆ ವಿನಮ್ರತೆಯಿಂದ ಅಲ್ಲಾ ಹು ಅಕ್ಬರ್ ಎನ್ನುವ ಮೌಜನ್ ಪ್ರಾರ್ಥನೆ ಆಜಾನ್ ನಿಂದ ಹಿಡಿದು, ಗುರಡನ ಪಾಳ್ಯದ ಹನುಪ್ಪಮನ ಗುಡಿಯಲ್ಲಿ ಗೋಪುರದೆತ್ತರಕ್ಕೆ ಪರ್ಮನೆಂಟಾಗಿ ಕಂಬನಿಲ್ಲಿಸಿ ಏರಿಸಿರುವ ಮೈಕ್ ಸೆಟ್ಟಿನ ಹಾರ್ನ್ಗಳಲ್ಲಿ, ಪೂಜಾರಪ್ಪ ಬೆಳಿಗ್ಯೆ ಸೂರ್ಯೋದಯಕ್ಕೂ ಮುಂಚೆ ಹಚ್ಚುವ ಸುಪ್ರಭಾತ.. ಬೆಲ್ಲತ್ತದ ಮಾದೇವ ಕೊಡುಗೆಯಾಗಿ ಕೊಟ್ಟಿರುವಂತ ಆ ಮೈಕ್ ಸೆಟ್ಟಿನಿಂದ ಹೊರ ಹೊಮ್ಮಿ, ಒಲೆ ಹಚ್ಚುತ್ತ ಪಾತ್ರೆ ತಿಕ್ಕುತಲೊ, ಕೊಟ್ಟಿಗೆಯಲ್ಲಿ ಸಗಣಿಬಾಚಿ ಕಸ ಗುಡಿಸುತ್ತಿರುವಂತ ಹೆಂಗಸರು, ಗಂಡಸರು ಹಿರಿಯರು ಕಿರಿಯರನ್ನೂ ಸೇರಿ, ಊರಾದ ಊರು ಮನೆ ಮಂದಿಯ ಶ್ರವಣವನ್ನೂ ತಲುಪಿ ಬಿಡುತ್ತದೆ. ಹಾಗೆಯೇ ಸಂಜೆಯ ಭಕ್ತಿಗೀತೆಯು ಅಷ್ಟೇ. ಆದರೆ ಗರುಡನ ಪಾಳ್ಯದ 2000ರದ ಸಾಲಿನ ದಿನಗಳು ಹೀಗಿರಲಿಲ್ಲ, ಒಂದೇಳೆಂಟು ದೊಡ್ಡ ಮನೆಗಳ ಟೇಪ್ ರೆಕಾರ್ಡರ್ ಹೊರತಾಗಿ ಊರಿಗೆಲ್ಲ ಕೇಳುವಂತೆ ಮೈಕ್ ಸೆಟ್ಟ್ ಹಾಕಿದ್ದಾರೆ ಎಂದರೆ.. ಶ್ರೀ ರಾಮನವಮಿ, ಗಣೇಶ ಚತುರ್ಥಿ ಅಥವ ಊರಲ್ಲಿ ಯಾವುದಾದರು ಶುಭಕಾರ್ಯ ಆಗಬೇಕಿತ್ತು, ಅದ್ಯಾವುದು ಅಲ್ಲದಿದ್ದರೆ.. ಕಲಾದೇವಿಯನ್ನ ಒಲಿಸಿಕೊಂಡು ತಮ್ಮ ಹೊಟ್ಟೆ ಬಟ್ಟೆಗೆ ಊರೂರು ತಿರುಗಿ ಕುಣಿಯುತ್ತ, ಅಪ್ಪ ಅವ್ವಂದಿರೆ ಅಕ್ಕ ಅಣ್ಣಂದಿರೆ ಬನ್ನಿ, ಕಲಾರಸಿಕರೆ ಬನ್ನಿ, ನಿಮ್ಮನ್ನು ರಂಜಿಸಲು ನಿಮ್ಮೂರಿಗೆ ಬಂದಿರುವ ಕಲಾಸೇವಕರನ್ನ ಪ್ರೋತ್ಸಾಹಿಸಿ ಎಂದು ಸಾರಿ ಸಾರಿ ಕರೆದು ಸರ್ವರನ್ನೂ ರಂಜಿಸುತ್ತಿದ್ದ ರೆಕಾರ್ಡ್ ಡ್ಯಾನ್ಸ್ ಅಲೆಮಾರಿಗಳಾದರೂ ಬರಲೇ ಬೇಕಿತ್ತು.

ಆ ದಿನ ಕರಡಿ ಅಲಿಯಾಸ್ ಸುನೀಲ್, ಅಳುಮ ಅಲಿಯಾಸ್ ಮಲ್ಲಿಕಾರ್ಜುನ ಮಲ್ಲಿ ಮತ್ತು ಕುನ್ನಿ ಅಲಿಯಾಸ್ ಸುನಿ, ಹದಿನಾಲ್ಕರಿಂದ ಹದಿನಾರು ವರ್ಷದವರಾದ ಈ ಮೂರು ಹುಡುಗರು ಪಾಪದ ಪ್ರಾಣಿಗಳಂತೆ ಹೆದರಿ ಬೆಬಗುಟ್ಟುತ್ತ ಅಪರಾಧಿಗಾಳಾಗಿ ನಿಂತು ಕಣ್ಣೀರಾಕಲು ಕಾರಣ., ಅನಾದಿಕಾಲದಿಂದಲೂ ಊರಿನ ಹಬ್ಬ ಹರಿದಿನಗಳಿಗೆ ತಾಲ್ಲೂಕಿನಿಂದ ಬಂದು ಮೈಕ್ ಸೆಟ್ ಹಾಕುತ್ತಿದ್ದ ಸಂಗಮ್ ಸೌಂಡ್ಸ್ ನ ಕ್ಯಾಸೆಟ್ ಪೆಟ್ಟಿಗೆ ಕಾಣೆಯಾಗಿರುವುದು.

ಮಾಮೂಲಾಗಿ ಊರಿನ ಪಂಚಾಯ್ತಿಗೆ ಅಂತಲೇ ಸೀಮಿತವಾಗಿದ್ದ ಪಟೇಲರ ಹದಿನಾಲ್ಕು ಕಂಬದ ಹಟ್ಟಿ ರಸ್ತೆ ಅಂಚಿನ ಪಡಸಾಲೆಯ ಒಂದು ಕೊನೆಯಲ್ಲಿ, ಮೈಕ್ ಸೆಟ್ಟಿನವರಿಗೆ ಪ್ರತ್ಯೇಕವಾಗಿ ಜಾಗವಿರುತ್ತಿತ್ತು, ಅಲ್ಲಿ ಅವರ ಸಾಮಗ್ರಿಗಳಾದ ಹಳೆ ವಯರ್ಗಳು, ಹಾರ್ನ್ಗಳು ಆಂಪ್ಲಿಪೇಯರ್, ಕ್ಯಾಸೆಟ್ ಪ್ಲೆಯರ್ ಎಲ್ಲವನ್ನೂ ಗುಡ್ಡೆಹಾಕಿಕೊಂಡು ಸಂಬಂದ ಪಟ್ಟಂತ ತಾಲ್ಲೂಕಿನಿಂದ ಬಂದಿರುತ್ತಿದ್ದ ಸಾಬರಗೇರಿಯ ಹುಡರು ಯಾರಾದ್ರೂ ಮೂಲೆಯಲ್ಲಿ ಮುದುರಿ ಮಲಗಿ ಆಗಾಗ ಕ್ಯಾಸೆಟ್ ಬದಲಿಸುವುದು, ಪೂಜೆಯಿದ್ದಂತ ಸಮಯದಲ್ಲಿ, ಮೈಕಲ್ಲಿ ಬೇಕಾದವರನ್ನ ಸಾರಿ ಕೂಗಲು ಮೈಕ್ ಹಾಕಿ ಕೊಡುವುದಕ್ಕೆ ಅಂತಲೇ ಇರುತ್ತಿದ್ದರು., ಹಾಗಿದ್ದರೂ ಇದ್ದಕ್ಕಿದ್ದಂತೆ ಐಸ್ಕ್ಯಾಂಡಿಯವನು ಸೈಕಲ್ ನಲ್ಲಿ ಏರಿಕೊಂಡು ಬರುತ್ತಿದ್ದ ಪೆಟ್ಟಿಗೆಗಿಂತಲೂ ಸಣ್ಣ ಸೈಜಿನ ಪೆಟ್ಟಿಗೆ, ನೂರಾರು ಹಳೆ ಕ್ಯಾಸೆಟ್ಗಳು ಮೈಕು ಇತ್ಯಾದಿ ಉಪಕರಣ ತುಂಬಿಕೊಂಡಿದ್ದ ಕ್ಯಾಸೆಟ್‌ ಖಜಾನೆ ಮಾಯವಾಗಿತ್ತು.

ಯಾರದ್ದೆ ಬಾಲ್ಯವನ್ನ ಈಗ ನೆನದರೂ ಅದೊಂದು ಸುವರ್ಣಕಾಲ.. ಆಟ, ಪಾಠ, ಊಟ ಗೆಳೆತನ ಸಂತೋಷ ಆಶ್ಚರ್ಯ ಕುತೂಹಲದಿಂದಾಚೆಗೆ ಮತ್ತೇನೂ ಇರದು. ಅಂತದ್ದೆ ದಿನಗಳನ್ನ ಕಳೆಯುತ್ತಿದ್ದ ಈ ಹಳ್ಳಿ ಪೋರರೆಲ್ಲರ ಪುಂಡಾಟವೆಂದರೆ.. ಆರು ಮೂರೊ ತಿಂಗಳಿಗೆ ಯಾರದ್ದೊ ತೋಟದ ತೆಂಗಿನ ಮರದಲ್ಲಿ ಮಂಗಗಳಂತೆಯೆ ಸರ್ರನೆ ಏರಿ ಕಾಯಿ ಕದಿಯುವುದು, ಹಗಲೂ ರಾತ್ರಿ ಎನ್ನದೇ ಕಣ್ಣಾ ಮುಚ್ಚಾಲೆ ಆಡಲು ಹಿತ್ತಲಿಗೆ ನುಗ್ಗಿ ಹೂ ಗಿಡಗಳನ್ನ ಅರಿಯದೆ ಮುರಿಯುವುದು, ಬಾಳೆ ತೋಟದಲ್ಲಿ ಬಲಿತ ಬಾಳೆ ಕಿತ್ತು ಅಲ್ಲೆ ಮಣ್ಣುಮಾಡಿ ಹಣ್ಣಾಗಿಸಿ ತಿನ್ನುವುದು, ಅಪರೂಪಕ್ಯಾರೊ ಟೊಮೇಟೊ, ಬಾಳೆ, ಜೋಳ ನೆಲಗಡಲೆ ಬೆಳೆದಾಗ ಅವನ್ನ ಕದ್ದುತಿನ್ನುವುದು ಹೀಗೆ ಅನೇಕ ಆಟೋಗಳ ನಡುವೆ ಇಂತಹ ಸಣ್ಣಪುಟ್ಟ ಕಿತಾಪತಿಗಳು ಸರ್ವೇಸಾಮಾನ್ಯವಾಗಿದ್ದವು. ಊರಮಂದಿ ಆಗಿರುವ ಅನಾಹುತಕ್ಕೆ ಸುಳಿವು ಸಿಕ್ಕವರು ಸಿಗದವರನ್ನೂ - ಸೂಳೆ ಮಕ್ಳು ಲೌಡಿ ಮಕ್ಕಳೂ ಎಂತೆಲ್ಲ ಬೈದು, ಜಾತಿ ಜನ್ಮವನ್ನ ಜಾಲಾಡುತ್ತ, ಅಪ್ಪಿತಪ್ಪಿ ಅಂತದ್ದೇನೊ ಮಾಡುವಾಗ ತಗಲಾಕಿ ಕೊಂಡವರ ಕುಂಡಿಗೆರಡು ಬಾರಿಸುವುದಲ್ಲದೆ, ಕೆಲವೊಮ್ಮೆ ಪ್ರಕರಣಕ್ಕೆ ಸಂಬಂದಿಸಿದ ಹುಡುರ ಮನೆ ಮುಂದೆ ಹೋಗಿ ನಿಮ್ಮ ಮಗನಿಗೆ ಬುದ್ದಿಹೇಳಿ ಎಂದೆಲ್ಲ ತಾಕೀತು ಮಾಡುತ್ತಿದ್ದರು, ಆದರೇ ಅಂತ ಕ್ಷುಲ್ಲಕ ಕಾರಣಗಳಿಗೆ ಪಂಚಾಯ್ತಿ ಸೇರಿಸುವುದಾಗಲಿ ದಂಡಹಾಕಿಸುವುದಾಗಲಿ ಮಾಡುತ್ತಿರಲಿಲ್ಲ.

ಕರಡಿ ಅಳುಮ ಕುನ್ನಿಯಷ್ಟೆ ಅಲ್ಲ ಯಾರ ಬಾಲ್ಯದ ಹಳ್ಳಿ ಐಕಳ ಕುಚೇಸ್ಟೆಗಳಿಗೂ ಅಂಕೆ ಸಂಖೆಗಳಿಲ್ಲ, ಒಳಗೆ ಹಾವಿರಬಹುದು ಎಂದು ಗೊತ್ತಿದ್ದರೂ ಹುತ್ತವನ್ನ ಭಯವಿಲ್ಲದೆ ಬಗ್ಗಿ ನೋಡುವು, ಪೊದೆಗೆ ಕಲ್ಲೆಸೆಯುವುದು, ಆಳದ ಅರಿವಿಲ್ಲದಿದ್ದರೂ ನಾ ಅಪ್ರತಿಮ ಈಜುಗಾರನೆಂದು ನೀರಿಗಾರಿ ಈಜೂವುದು, ರಸ್ತೆಯುದ್ದಕ್ಕೂ ಕೈ ಗೆ ಸಿಕ್ಕ ಕಲ್ಲಿಂದ ಮುಂದೊಂದು ದೂರದ ಕಲ್ಲಿಗಿ ಹಿಂದು ಮುಂದು ನೋಡದೆ ಗುರಿಯಿಡುತ್ತ, ಹರಬಜನ್ ಸಿಂಗ್ ಸ್ಟೈಲಿನಲ್ಲಿ ಬೌಲಿಂಗ್ ಮಾಡುತ್ತಾ ಸಾಗುವಂತದ್ದು ಆಟೋಟಗಳ ನಡುವೆ ನೆಡೆಯುತ್ತಿದಂತ ವಿಶೇಷ ಸಾಮಾನ್ಯ ಚಟುವಟಿಕೆಗಳು..

ಹೀಗೆ
ಅದೊಂದು ಭಾನುವಾರದ ಮುಂಜಾನೇ ನೀಲಿ ಹಳದಿ ಬಣ್ಣದ ಮಧ್ಯದಲ್ಲಿದ್ದಂತ ಸಮಯ, ಮಲ್ಲಿ.. ಹೀಗೆ ಹೊಲಮಾಳದತ್ತ ನಿತ್ಯಕರ್ಮಕ್ಕೆ ತೆರಳುವ ಸಮಯದಲ್ಲಿ ಕಲ್ಲೂ ತೂರುತ್ತ ಹೊರಟಿದ್ದ, ರಾಜಣ್ಣನ ಹಿತ್ತಲ ಹುಲ್ಲುಮೆದೆಯ ಕೆಳಗೆ ಕಲ್ಲೆಸದಾಗ ಕಟ್ಟ್ʼ ಎಂದು ಏನೋ ಸದ್ದು ಬಂದಂತಾಗಿ, ಹತ್ತಿರ ಹೋಗಿ ಬಗ್ಗಿ ನೋಡಿದ, ಅದರೊಳಗೆ ಮುರಿದು ಬಿದ್ದಿದ್ದ ಜಂಗಮ್ ಸೌಂಡ್ಸ್ ಖಾಲಿ ಕ್ಯಾಸೆಟ್ ಪೆಟ್ಟಿಗೆಯೊಳಗೆ ಹಳೆಯ ವಯರಿನ ಜೊತೆ ಮೈಕ್ ಒಂದು ತೆಕ್ಕೆ ಮಡಚಿಕೊಂಡಿದ್ದ ಹಾವಿನಂತೆ ಬಿದ್ದಿತ್ತು, ಅದನ್ನ ಕಂಡಂತ ಮಲ್ಲಿ ಮುಖ ಹರಳಿತು - ಅವ್ವೈ ಮೈಕುʼ ಎಂದುಕೊಳ್ಳುತ್ತ ಸಂತಸ ಪಟ್ಟ, ಪೆಟ್ಟಿಗೆಯೊಳಗೆ ಕೈ ಹಾಕಿ ಮೈಕನ್ನೆತ್ತಿಕೊಂಡವನೆ, ಬಂದ ಕೆಲಸವನ್ನು ಮರೆತು ಮಾಮೂಲಿಯಾಗಿ ಎಲ್ಲರೂ ಕ್ರಿಕೆಟ್ ಆಡಲು ಸೇರುತ್ತಿದ್ದ, ಶ್ಯಾನುಭೋಗನ ಮಾಳದತ್ತ ‘ಹೊಸ ಬೆಳಕು ಮೂಡುತಿದೆ ಎಂದು ರಾಜ್ಕುಮಾರಂತೆ ಮೈಕಿಡಿದು ಹಾಡುತ್ತ ಹೊರಟ, ಕಂಡಎಲ್ಲ ಗೆಳೆಯರಿಗೂ ವಿಚಾರ ತಿಳಿಸಿದ, ಎಲ್ಲರು ಎಷ್ಟೋ ವರ್ಷಗಳಿಂದ ಹತ್ತಿರದಿಂದ ನೋಡಿದ್ದರೂ ಮುಟ್ಟುವ ಸೌಭಾಗ್ಯ ದೊರತಿರಲಿಲ್ಲದ, ಅನೇಕರು ಮಲ್ಲಿ ತಂದಿದ್ದ ಮೈಕನ್ನ ಸಂತೋಷದಿಂದ ಹಿಡಿದು ಅದರ ಉದ್ದ ತೂಕ ಅಳೆದು ನೋಡುತ್ತ ಮೈಕಿನಬಗ್ಗೆ ತಮಗಿದ್ದ ಕುತುಹಲವನ್ನ ತಣಿಸಿಕೊಂಡರು, ಖಾಲಿ ಮೈಕ್ ಹಿಡಿದು ಹಲೊ ಹಲೊ ಹಲೊ ಆಲುಗಡ್ಡೆ ಪಲಾವ್' ಎಂದೆಲ್ಲಾ ಏನೇನೊ ಕೂಗಾಡುತ್ತ ತಮ್ಮೆಲ್ಲರ ಆಸೆಗಳನ್ನ ಈಡೇರಿಸಿಕೊಂಡರು. ಆಗಿನ್ನು ಊರಲ್ಲಿ ಕ್ಯಾಸೆಟ್ಟಿನ ಪೆಟ್ಟಿಗೆ ಕಾಣೆಯಾಗಿದ್ದ ವಿಚಾರ ಇವರಿಗೆ ತಿಳಿದಿರಲಿಲ್ಲ.

ಸಂಜೆ ಹೊತ್ತಿಗೆ ಸಂಗಮ್‌ ಸೌಂಡ್ಸ್‌ ಮಾಲಿಕ ತನ್ನ ಕ್ಯಾಸೆಟ್‌ ಪೆಟ್ಟಿಗೆ ಕಾಣೆಯಾಗಿದ್ದ ವಿಚಾರದ ಕುರಿತು ಪಂಚಾಯ್ತಿಗೆ ತಿಳಿಸಿ ತನ್ನ ನಷ್ಟ ತೋಡಿಕೊಂಡಿದ್ದ. ವಿಚಾರ ಊರಿಗೆಲ್ಲ ಹಬ್ಬಿ ನಾಲ್ಕಾರು ಮಂದಿ ಇದೂ ಯಾವರೀತಿ ಕಳ್ಳರ ಕರಾಮತ್ತು ಎನ್ನುವುದನ್ನ ಮಾತಿನಲ್ಲೆ ವಿವಿಧ ರೀತಿಯ ಮಾಜಾರು ಮಾಡುತ್ತಿದ್ದರು, ಸಾರಾಯಿ ಗಡಾಂಗಿನಿಂದಿಡಿದು ನಾಗಣ್ಣನ ಚಿಲ್ಲರೆ ಗೂಡಂಗಡಿಯ ವರೆಗೂ ಆ ದಿನ ಅದೇ ಮಾತಾಗಿತ್ತು. ಊರಿನ ಸಣ್ಣ ಹುಡುಗರೆಲ್ಲ ಮಲ್ಕಾಜ , ದೊಡ್ಡ ಮಂದಿ ಅಳುಮ ಎಂದು ಕರೆಯುತ್ತಿದ್ದ ಆ ಮಲ್ಲಿಕಾರ್ಜುನ ಮೈಕಿಡಿದು ಓಡಾಡಿದ್ದನ್ನ ಕಂಡ ಹುಡುಗರು ಅಲ್ಲಲ್ಲಿ ಮಾತಾಡಿಕೊಳ್ಳುತ್ತಿದ್ದರು, ವಿಷಯ ಊರಿನ ಹಿರಿಯ ಕಿರಿಯ ಮಂದಿಯ ಕಿವಿಗೆ ಬಿದ್ದು, ಸೊಂಬೇರಿಗಳ ಡಿಟಕ್ಟೀವ್ ಆಫೀಸ್' ಇಸ್ಪಿಟ್ ಕ್ಲಬ್, ಬೆಳಿಗಿನ ಸಮಯದಲ್ಲಿ ಚಾ ಅಂಗಡಿ, ಸಂಜೆ ಮೇಲೆ ಸರಾಯಿ ಕೇಂದ್ರ ಹೀಗೆ ಸಂದರ್ಭಕ್ಕೆ ತಕ್ಕಹಾಗೆ ಮಾರ್ಪಾಡಾಗುತ್ತಿದ್ದ, ನಾಗಣ್ಣನ ಟೀ ಅಂಗಡಿಯಲ್ಲಿ ಮಾತನಾಡುವ ಮಹಾಂಮದಿಗೆ ಆ ಕ್ಯಾಸೆಟ್ ಪೆಟ್ಟಿಗೆ ಮಿಸ್ಟರ್ ಮಲ್ಲಿಯೇ ಕದ್ದಿರ ಬಹುದೆನ್ನುವ ಅನುಮಾನವು ನಿಜವಾಗಲು ಕಾರಣವಾಯ್ತು .

ಈ ಹಿಂದೆ ನೆಡೆಯುತ್ತಿದ್ದ ಪುಂಡಾಟಗಳಿಗೆ ಮುಂದಾಳಾಗುತ್ತಿದ್ದ ಮಲ್ಲಿಕಾರ್ಜುನನೆ ಇದನ್ನ ಕದ್ದವ ಅಂದರೆ ಯಾರಾದರೂ ನಂಬುವಂತದ್ದೆ, ಆದರೆ ಆ ಮೈಕು ಅವನ ಬಳಿ ಇರುವುದೊರತಾಗಿ ಕೃತ್ಯಕ್ಕೆ ಸಾಕ್ಷಿಯಾಗಿ ಬೇರೆ ಯಾವುದೇ ಆಧಾರಗಳಿರಲಿಲ್ಲ, ಅಷ್ಟಕ್ಕೂ ಆ ಕ್ಯಾಸೆಟ್ಟು ಹೊತ್ತೊಯ್ದು ಆ ಹುಡುಗ ಏನುತಾನೆ ಮಾಡುವನು ಎನ್ನುವ ಒಂದು ಸಣ್ಣ ಪ್ರಶ್ನೆಯೂ ಯಾರಲ್ಲೂ ಮೂಡಲಿಲ್ಲ. ಒಟ್ಟಾಗಿ ಊರಿನ ಹತ್ತಾರೂ ಮಂದಿಗೆ ಈ ಪ್ರಕರಣ ಗಂಭೀರವಾಗಿ ಪಂಚಾಯ್ತಿಗೆ ಸೇರಿರುವುದಂತು ಖುಷಿ ವಿಚಾರವಾಗಿತ್ತು.

ಗುಡ್ಡದಂಚಿನಿಂದ ಊರಿನ ತುದಿಯತ್ತ ತೂರಿ ಬರುತ್ತಿದ್ದ ತಂಗಾಳಿ ಜೊತೆಯಾಗಲೂ.. ತಾಮುಂದು ನೀಮುಂದು ಎಂಬಂತೆ ಉದುರುತ್ತಿದ್ದ ಹಣ್ಣೆಲೆಯ ಹಲಸಿನ ಮರದ ಪಕ್ಕದಲ್ಲಿದ್ದ ಹುಣಸೆ ಮಾರವೇರಿ ತಮ್ಮ ಪಾಡಿಗೆ ದೋ.. ಎಂದು ಕೂಗಾಡಿ ಎಗರಿ ಹಾರಿ ಮರಕೋತಿ ಆಡುತ್ತಿರುವ ಸನ್ನಿವೇಶದಲ್ಲಿ, ದೂರದಿಂದ ಯಾರೊ ಬರುತ್ತಿರುವುದು ಹತ್ತಿರವಾಗುತ್ತಿದ್ದಂತೆ, ಅದೂ ಊರ ಹತ್ತರಾಳು ಶಂಬಲಿಂಗನೆಂಬುದು ಅರಿವಾಯ್ತು, ಆಟ ವಾಡುತ್ತಿದ್ದ ಹುಡುಗರಿಗೆಲ್ಲಾ ಊರಿನ ಭೂತ ಭವಿಷ್ಯ ವರ್ತಮಾನವನೆಲ್ಲ ತಿಳಿಸಿ, ಪಂಚಾಯ್ತಿ ಕಟ್ಟೆಗೆ ಕರೆದು ತಂದ.

ಊರಮಂದಿಯಲ್ಲ ಗುಂಪಾಗಿದ್ದರು, ಗೌಡರು ಮಲ್ಲಿಯನ್ನ ಕರೆದು.. - ನೋಡಯ್ಯ ನಿನ್ಗ ಇಲ್ಯಾರು ಹೊಡಿಯಲ್ಲ ಬಡಿಯಲ್ಲ, ಅದೆಲ್ಮಡ್ಗಿದೈ ಯತ್ಕಂಬಂದ್ ಕೊಟ್ಬುಡು. ಅಲ್ಲಿಂದ ಯೋಚಿಸುತ್ತಲೇ ಬಂದಿದ್ದ ಮಲ್ಲಿಕಾರ್ಜುನನಿಗೆ ಇವರು ನನಗೆ ಸಿಕ್ಕುರುವಂತ ಮೈಕ್ ಕೇಳುತ್ತಿದ್ದಾರೆ ಎಂದು ತಿಳಿದವನೆ ಓಡಿ ಮನೆ ಹಿತ್ತಲಿನ ಹುಲ್ಲುಮೆದೆಯಲಿ ಇಟ್ಟಿದ್ದ ಮೈಕನ್ನ ತಂದು ಕೊಟ್ಟ. - ಪೆಟ್ಟಿ, ಕ್ಯಾಸೆಟು ಮಿಕ್ಕಿದ್ದೆಲ್ಲ ಎಲ್ಲೆಯಾ,? ಎಂದದ್ದೆ ಮಲ್ಲಿಕಾರ್ಜೂನ ತನಗೆ ಬೆಳಿಗ್ಯೆ ಅದು ಹೇಗೆ ಸಿಕ್ಕಿತು ಎಂಬುದನ್ನ ತಿಳಿಸಿದ, ಎಲ್ಲರೂ ಹೋ… ಎಂದು ನಕ್ಕರು, ಊರಗೌಡರಲ್ಲಿ ಒಬ್ಬನಾದ ಬಸಣ್ಣ - ನೋಡು ನೀ ಈ ಕೆಲ್ಸಮಾಡಿರದು ಈಗ ಗೊತ್ತಾಗದಾ, ತಿಕ್ವ ಮುಚ್ಕಂದು ಅದೆಲ್ಲನೂ ತಂದ್ಕೊಟ್ಟ ಸರೀ, ಇಲ್ಲ ಇನ್ನೊನ್ ಗಳಗ ಪೋಲೀಸ್ನೋರ್ ಬತ್ತರ ಜೀಪತ್ತಕ್ ರಡಿಯಾಗಿರಿ, ಯಾರ್ಯಾರೆಲ್ಲ ಸೇರ್ಕ ಮಾಡಿದ್ರಿ ಇದ್ನೆಲ್ಲ,? ಎಂದದ್ದೆ ಮಲ್ಲಿ ನಿಂತಲ್ಲೆ ನಡುಗಿ ಹೋದ - ಇಲ್ಲ ಕಪ್ಪೊಯ್ ನಮ್ಮೌನಾಣುವ ನಾ ಕದ್ದಿಲ್ಲ ಕಣ್ರಪ್ಪೊಯ್ಯ್ ನಂಗ ಅದು ಸಿಕ್ಕುದ್ದು ಅಷ್ಟೆ, ಒತ್ನಂತೆನೆ ಇವ್ರೆಗೆಲ್ಲ ತೋರ್ಸುದೀ, ಬೇಕರ ಕುನ್ನಿನೂ ಕರ್ಡಿನೂ ಕ್ಯೋಳಿ ನಾ ದೇವ್ರಾಣುವ ಕದ್ದಿಲ್ಲ ಕಪ್ಪೊಯ್ಯ್ ಎಂದು ಗಳ ಗಳನೆ ಕಣ್ಣಿರಾಕಿದ, ಬುಲ್ಲೆ ಮಲ್ಲೇಶ - ಣೈ ಬಸಣ ಇವ್ನ್ ನೀವ್ ಇಷ್ಟು ನಾಜೂಕಾಗ್ ಕ್ಯೋಳುದ್ರ ಯೋಳ ಕ್ಯೋಳ ಜಾತಿ ಮಙ್ನ, ಎಂದು ಮಲ್ಲಿಯ ಕುತ್ತಿಗೆ ಪಟ್ಟಿ ಎಳೆದು ಹಿಡಿದು ಮುಂದೆ ನಿಲ್ಲಿಸಿಕೊಂಡು ಕಿವಿತಿರಿಗಿಸುತ್ತ.. ಡೌ ಬಲ್ಗೊರ್ಮಾ, ನೀ ನೆಂತಾ ಕೇಡಿ ಮಲ್ಲ ಅನ್ನದ್ನ ಇಲ್ಲಿರ ಯಾರ್ಕೋಳುದ್ರೂ ಯೋಳ್ತರಾ, ನೀ ಮಾಡ ಕಿತಾಪತಿನ ನಾನೆ ಕಣ್ಣಾರ ಕಂಡಿನಿ ಸುಮ್ನ ನಿಜ ಒಪ್ಕ ಇಲ್ಲಾ ಲೌಡಿ ಮಗ್ನ ನಿನ್ನ ಒದ್ದು ಒಳಗಾಕ್ಸುತಿವಿ ಕ್ಯೋಳು, ಎಂದ. ಮಲ್ಲಿ ಅವ್ವ ನಾಗಕ್ಕ ಓಡಿ ಬಂದವಳೆ, ಅಪ್ಪೋಯ್ಯ ನಮ್ಮ ಗಂಡು ಕದಿಯ ಅಂತವ್ನಲ್ಲ ಕಪ್ಪೊಯ್ ಅವತ್ತೊಂದಿನ ಪ್ರಮಿಳಕ್ಕನ್ ತಾಳಿ ಸರ ರೋಡಲ್ ಸಿಕ್ಕಿತ್ತು ಅದ್ನ ರೋಡ್ಲೆ ನಿಂತ್ಕಂದು ಕೂಗಿ ಯಾರ್ದ ಅಂತ ಕ್ವೋಳಿ ಕೊಟ್ಟವ ಅಳಿ, ಅಟ್ಲೂ ಕಾಸ್ಬೇಕು ಅಂದ್ರ ಗುದ್ದಾಡಿ ಇಸ್ಕತನ ಬುಟ್ಟ್ರ ಒಂದ್ರುಪಾಯ್ನೂ ಮುಟ್ಟಿಲ್ಲ ಕಪ್ಪೋಯ್ಯ್ ಪೋಲಿಸ್ ಗೀಲಿಸು ಅನ್ಬೇಡಿ ನನ್ನ ಮಗುನ್ ಬುಟ್ಬುಡೆಪ್ಪೊಯ್ಯ್ ಅಂತಾ, ಬುದ್ದಿ ಅಳಿ ಅಪ್ಪೊ ಎಂದೆಲ್ಲ ಸೋಕಾಡಿದಳು. ಬಸಣ್ಣ- ಏ ನಾಗಿ ನೀ ಸುಮುನ್ ನಿಂತ್ಕೊ. ಮಲ್ಲೇಶಣ್ಣನು ಬಾಯ್ ಮುಚ್ಕಂದಿರು ಮೊದ್ಲು ನಿಮ್ಗೊಳ್ಬೇಕು, ನಿನ್ನಮಗ ಎಂತೆಂಥಾ ಗನ್ಕಾರ್ಯಮಾಡನ ಅದೆಲ್ಲ ನಿಂಗ್ ಗೊತ್ತ, ಅವತ್ತು ಚಿಂಚಕೋಳಿ ಗದ್ದಲ್ಲಿ ಒಂದೆರ್ಡ್ ಮೂರ್ ಕೇಜಿಯಷ್ಟ್ ತೂಕ ಬರಾ ಬಲ್ತಿರ ಬಾಳಕಾಯ್ನ್ ಚಿಪ್ನ, ಕಿತ್ತು ಊತಕ್ತಿದ್ನ ನಾನೆ ನೋಡಿನಿ. ಹೋದೋರ ಈ ಬಸಣ್ಣನ್ ತ್ವಾಟದಲ್ಲೆ ಮರ ಅತ್ತಿದ್ದು ನನ್ನ ಕಂಡ್ಬುಟ್ಟು ಓಡೋದ, ಏಯ್ ಪೆಟಿ ಎಲ್ಮಡ್ಗಿದೈ ಯಾರ್ಯಾರ್ ಇದ್ರೆಡ ಬೊಗ್ಳು, ಎಂದು ಮುಖದ ಮುಂದೆ ಹೋಗಿ ಚೀರಿದ, ಹೆದರಿದ್ದ ಮಲ್ಲಿ ಕುನ್ನಿ ಕರಡಿ ಇಬ್ಬರು ಇದ್ರೂ ಅಂದದ್ದೆ..! ಪಂಚಾಯ್ತಿ ಸಂತೆಯಂತಾಯ್ತು.

ಕುನ್ನಿಯ ಮಾವ, ಕರಡಿಯ ಅಪ್ಪ ಅವ್ವ ಎಲ್ಲೂ ತಮ್ಮ ಮಕ್ಕಳದ್ದೂ ಯಾವುದೇ ತಪ್ಪಿಲ್ಲ ಎಂಬುದರ ಅರಿವಿಲ್ಲದಿದ್ದರೂ, ಅವರು ನಿರಾಫರಾದಿಗಳು ಅನ್ನೊದ್ದಕ್ಕೊಂದಷ್ಟು ಸಮಜಾಯಿಷಿ ಹೇಳುತ್ತ, - ಏ ನನ್ನ ಮಗ ಇವತ್ತ್ ಬಂದಾ ಅವ್ರಮ್ಮುನ್ ಊರಿಗೊಗಿದ್ದ ಅಂತ ಒಬ್ಬರು, ಯೋ ನಮ್ ಗಂಡು ನೆನ್ನ ರಾತ್ರಿ ಗದ್ದಲಿ ನನ್ನ ಜೊತ್ಗೆ ನೀರ್ಕಟ್ತಿದ್ದ, ಎಂದೆಲ್ಲಾ ಗದ್ದಲ್ಲದಲ್ಲಿ ಮಾತನಾಡುತ್ತಿದರು. ನಿಂಗೇಗೌಡ ಬಸೆಗೌಡ ಜವ್ರೆಗೌಡರು ಮೂವರು - ಏಯ್ ಒಬ್ಬೊಬ್ಬರಾಗ್ ಮಾತಾಡ್ರೆಯ್ಯ ಥೋ. ಶಂಭಲಿಂಗ - ಏಯ್ ಸಾಕು ನಿಲ್ಸ್ರೆಯ್ಯ, ಗೌಡ್ಗೊಳ್ ಯಾನ ಯೋಳ್ತರ ಕೋಳಿ, ಎಂದ, ಮಲ್ಲೇಶ ಮಧ್ಯೆ ಬಾಯ್ ಹಾಕಿ ಣೈ ಇವ್ರ್ ಪುಂಡಾಟ ಒಂದಲ್ಲ ಎರಡಲ್ಲ ಸುಮ್ನ ಪೋಲಿಸ್ನೋರ್ಗೊಪ್ಸಿ ಎರಡ್ ಬಿಗ್ದು ಬುದ್ದಿ ಕಲ್ಸ್ತರ ನಾವ್ ಎಷ್ಟ್ ದಿನ ನೋಡವ್ ಇವ್ರ ಆಟ್ಗೊಳ, ಬಸಣ್ಣಗೌಡ - ಏ ಬುಲ್ಲ ಮಲ್ಲೇಶ ಒಸಿ ಬಾಯ ಮುಚ್ಕಂದವ ನಿಂತ್ಕ, ಐಕ ಅದ್ಮೆಲ್ಲಾ ಇಂತ ಪುಂಡಾಟ್ವೆಲ್ಲ ಇದ್ದುದ್ದೆ, ನೀ ಇಷ್ಟೆಲ್ಲ ಮಾತಾಡ್ತಿದೈಯಲ್ಲ, ನಿಂಗಿನ್ನೂ ಮೀಸ ಉಡಕೂ ಮಂಚೆ ಮಾಡಿದ್ ಕಿತಪತಿಯೇನು ಕಮ್ಮಿ ಇಲ್ಲ ನಾ ಯೋಳ್ಯಾ..? ಅದೆಲ್ಲ ಬುಡಿ ಎನ್ನುತ್ತಾ..ಉಪಸ್ಥಿತ ಗೌಡರೆಲ್ಲ ಗುಸುಗುಟ್ಟುತ್ತ ಏನೊ ಮೂರು ನಿಮಿಷಗಳ ಕಾಲ ಮಾತಾಡಿ, ನೋಡ್ಯಪ ಆಗದಾಯ್ತು, ಆ ಮೈಕ್ಸೆಟ್ನವ ಬುದ್ದೆ ಪೆಟ್ಟಿ ಅದ್ನೈದ್ ಅದ್ನೋಳ್ ಸಾವ್ರಾಯ್ತಾ, ಅದ್ಯಾನ ಮೈಕಂತಲ ಅದ್ಕೆ ಎಂಟತ್ತ್ ಸಾವ್ರ ಆಯ್ತ ಅಂತಿದ್ದ, ಈಗ ಆ ಮೈಕು ಸಿಕ್ಕದ, ಆ ಹಳ ಕ್ಯಾಸೆಟ್ಗೊಳ ತನ್ಕೊಟ್ರ ಇವ್ರುಗೆಲ್ಲರುಗು ತಲಾ ನೂರೊಂದ್ ರುಪಾಯಿ ತಪ್ಪು, ಆ ಕ್ಯಾಸೆಟ್ ಸಿಕ್ನಿಲ್ಲ ಅಂದ್ರ ತಲಾ ಸಾವರ್ದೊಂದು ರೂಪಾಯ್ನಂತ ಗಣೇಶನ್ ಮುಳುಗ್ಸಾ ದಿನದೊಳಗ ಒಪ್ಪುಸ್ಬೇಕು ಅಂತ ಪಂಚಾಯ್ತಿ ತೀರ್ಮಾನ ಆಗದ, ನೋಡಪ ಮೈಕ್ಸಟ್ಟು ನಿನ್ನ ಮೈಕ್ ಸಿಕ್ಕದ ಪಂಚಾಯ್ತಿ ಕಡೆಯಿಂದ ಎರಡ್ಸಾವ್ರ ಅದೊಂದ್ ಮೂರ್ಸಾವ್ರ ಒಟ್ಟು ಐದ್ಸಾವ್ರಾ ಆಯ್ತು ಅದೇನೊ ನಮ್ಮೂರಿಂದಾ ಇಂಗಾಯ್ತು ಅನ್ನ ಆಪಾದ್ನ ಬ್ಯಾಡ ಆಯ್ತಾ ಎಂದರು. ಮೈಕ್ ಸೆಟ್ಟಿನವ - ಆಯ್ತು ಬುದ್ದೆ, ಎನ್ನುವ ಮಾತು ಕೇಳುತ್ತಿದ್ದಂತೆ ಊರ ಜನರೆಲ್ಲ ಯಾವುದೊ ಸಿನಿಮಾ ನೋಡಿ ಹೊರಬರುವ ಜನರಂತೆ ಗೊಣಗಾಡಿಕೊಂಡು ತಮ್ಮ ಅಭಿಪ್ರಾಯಗಳನ್ನ ತಾವು ತಾವೇ ವ್ಯಕ್ತಪಡಿಸಿಕೊಳ್ಳುತ್ತ ಹೊರಟರು.

ಈ ಪ್ರಕರಣಗಳ ಸತ್ಯ ಅಸತ್ಯತೆಯ ತಾರ್ಕಿಕ ತೀರ್ಪಾಂಕಿತ ಚರ್ಚೆಗಳೊಂದಿಗೆ ಹನ್ನೆರಡು ದಿನಗಳ ಗಣೇಶನ ಪೂಜೆಯೊಂದಿಗೆ ದಿನಗಳು ಕಳೆದು ಹೋದವು, ಹನ್ನೆರಡನೇ ದಿನದ ರಾತ್ರಿ ಊರೆಲ್ಲ ಕುಣಿದು ಕುಪ್ಪಳಿಸಿ, ಪ್ರತಿ ವರ್ಷದಂತೆ ಬಹಳ ವಿಜೃಂಭಣೆಯಿಂದ ಮಾಡಿದ ಮೆರವಣಿಗೆ ಡ್ಯಾನ್ಸು ಎಲ್ಲವನ್ನು ಕಂಡಂತ ಗಣೇಶ ಈ ಪ್ರಕರಣವನ್ನೂ ಕಂಡು ಕಬಿನಾಲೆಯಲ್ಲಿ ಮುಳುಗಿ ತನ್ನ ಲೋಕಕ್ಕೆ ಹಿಂದಿರುಗಿದ, ದಂಡೆಮೇಲೆ ಕರಡಿ ಅಳುಮ ಕುನ್ನಿ ಗುಂಪಿನಲ್ಲಿ ಗೋವಿಂದನು ಸೇರಿದಂತೆ ಊರಿನ ಸರ್ವಜನಾಂಗವು ಗಣಪತಿ ಬಪ್ಪ ಮೋರೆಯಾ, ಗಣ್ಪತಪ್ಪ ಐಸಾ.. ಎಂದು ಕೂಗುತ್ತ ಚಪ್ಪಾಳೆ ತಟ್ಟುತ್ತ ರೋಮಂಚನಗೊಂಡರು.

ಶಿವರಾಜ್ ಡಿ.ಎನ್.ಎಸ್

ಶಿವರಾಜ್ ಡಿ.ಎನ್.ಎಸ್ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ದಾಸನಹುಂಡಿಯವರು. ಬರಹ-ಓದು-ನಟನೆ ಹಾಗೂ ಛಾಯಾಗ್ರಹಣ ಅವರ ಹವ್ಯಾಸ. ಕಲರ್‍ಸ್ ಕನ್ನಡದ ‘ಕಾಮಿಡಿ ಕಂಪನಿ’ಶೋ ನಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ಅವರ ಆಸಕ್ತಿ ಕ್ಷೇತ್ರ.

More About Author