Poem

 ಹಳೆ ಪುಸ್ತಕ

ತುಸು ಹಳದಿಗೆ ತಿರುಗುತ್ತಿರುವ ಹಳೆ ಪುಸ್ತಕದ
ನವಿರೆದ್ದ ಕಾಗದದ ಸ್ಪರ್ಶದಲ್ಲೆ ಇದೆ
ಇನ್ನೆಲ್ಲೂ ಸಿಗದ ಒಂದು ಅಭಯ
ಈಗಷ್ಟೆ ಪಾರ್ಲರಿಗೆ ಹೋಗಿ ಬಂದಂತಿರುವ ಇತರ
ಫಳ ಫಳ ನಾನಾ ಬಣ್ಣದ ಪುಸ್ತಕಗಳ ನಡುವೆ
ಸದ್ದಿಲ್ಲದೆ ಸೆಳೆಯುವುದು ಇದರ
ನಿರಾಭರಣ ಸೌಮ್ಯ ಸೌಜನ್ಯದ ನಿಲುವು

ಹರ್ಷ ಪ್ರಕಟಣಾಲಯ ಡಿವಿಕೆ ಮಿಂಚಿನಬಳ್ಳಿ ಮನೋಹರ
ಸುರುಚಿ ಅಕ್ಷರ ಆಕಳವಾಡಿ ಮುಂತಾದವು ಬರಿ ಹೆಸರುಗಳಲ್ಲ
ಆತ್ಮಿಕ ನೆಂಟಸ್ತನ ಕುದುರಿಸುವ ತವರು ಮನೆಗಳು
ಬರೆದಾತ ಕೇವಲ ನಿಮಿತ್ತ ಮಾತ್ರ ಎಂಬಂತೆ
ಪರವಶಗೊಳಿಸಿ ಪಾರುಮಾಡುವ ತಿರುಳು
ಠೀವಿ ಬಿಡಿ ಸಾಹಿತಿಯ ಅಂಚೆ ಚೀಟಿ ಗಾತ್ರದ ಛಾಯಾಚಿತ್ರವೂ ಇಲ್ಲ
ಅರಿಕೆಯೋ ಎರಡೇ ಸಾಲು ಅಥವಾ ಅದೂ ಇಲ್ಲ

ಏನಿದ್ದರೂ ಮ್ಯಾಟರು
ಮತ್ತದರ ಮಾನವನ್ನು ಕಾಯಲೆಂದೇ ಅಕ್ಕಪಕ್ಕ ಉದ್ದಕ್ಕೂ
ಕುಸುರಿ ಚಿತ್ತಾರಗಳ ಗದ್ದಲವಿಲ್ಲದೆ ಇರುವ
ನಿತಾಂತ ಘನ ನಸುಬಿಳುಪು
ಮನೆಯುಡುಪಿನಲ್ಲಿ ಕೂತಲ್ಲಿಂದಲೇ ಆಪ್ತರನ್ನು ಸೀದ ಒಳಗೆ
ಬರಮಾಡಿಕೊಂಡಂತೆ
ಅಕ್ಷರಗಳ ಮಂಟಪದಲ್ಲಿ ಮೌನದ ಬಳ್ಳಿ
ಹಬ್ಬಿ ಅರಳುವ ಪರಿಮಳ
ಒಂದೊಂದು ಪುಸ್ತಕಕ್ಕೂ ಅದರದೇ ಆದ ಮನೆತನ
ಕಪಾಟೇ ಗ್ರಾಮ ಗ್ರಂಥಾಲಯವೇ ಒಂದು ಪರಿಮಳದ ಪಟ್ಟಣ
ಇಂಥಲ್ಲಿ ಸುಳಿಯಲು ಗಾಳಿಯೂ ಪುಣ್ಯ ಮಾಡಿರಬೇಕು
ಪರಿಣೀತಾ ಪುರುಷೋತ್ತಮನ ಸಾಹಸ ಮುಕ್ತಿ ಗೃಹಭಂಗ ಚಿತ್ರಲೇಖಾ
ಮಾತಿನ ಮಳ್ಳರನ್ನು ಶ್‌ಶ್ ಎಂದು ಸುಮ್ಮನಾಗಿಸುವುದು
ಇಲ್ಲಿ ಕಲೆಗೊಂಡ ಶಾಂತಿ

ಪುಟಗಳು ಚದುರದಂತೆ ಉದುರದಂತೆ ಆಗಾಗ
ರಟ್ಟು ಇಟ್ಟು ಹೊಲಿಗೆ ಹಾಕಿದವರಿದ್ದಾರೆ
ಕೊನೆಯ ಖಾಲಿ ಪುಟಕ್ಕೆ ಅಂಟಿಸಿದ ಚೀಟಿಯಲ್ಲುಂಟು
ಈ ಮುಂಚೆ ಓದಿದವರ ಸುಳಿವು
ಖರೇ ರಕ್ತ ಸಂಬಂಧಿಗಳೆಂದರೆ ಅವರೇ
ಅದೇ ಕಥನದಲ್ಲಿ ಈ ಮೊದಲೇ ಒಬ್ಬೊಬ್ಬರೇ ಹಾದು ಹೋದವರು
ಪ್ರತಿ ಆಖ್ಯಾನಕ್ಕೂ ತಮ್ಮದೇ ಜೀವ ಜಾಗ ಚಹರೆ ಕೊಟ್ಟವರು
ಒಂದೇ ಸರೋವರದ ನೀರು ಕುಡಿದವರಂತೆ
ಇದೇ ಊರಿನಲ್ಲಿ ಇರುವರು

ಎಂದೋ ಓದಿದ ಪುಸ್ತಕವನ್ನು ಈಗ ತೆರೆದರೆ
ಮಾಯೆಯಂತೆ ಆವರಿಸುವ ಸೊಗಡು
ಪುಸ್ತಕದಲ್ಲ
ಅಂದು ಅಂದಿನ ಓದಿನ ಅಂದದ ಹರೆಯದ್ದು
ಮಾಳಿಗೆ ಮೆಟ್ಟಿಲ ಮೇಲೋ ಟೆರೇಸಿನಲ್ಲೋ ಬೆಟ್ಟದಲ್ಲೋ
ಹೊಲದಲ್ಲೋ ಮರದಲ್ಲೋ ಕೂತು ಒರಗಿ ಆತು
ಬೇಶರತ್ತಾಗಿ ವಿಲೀನಗೊಂಡ ಸಮಯದ್ದು
ನನ್ನನ್ನು ಹುಡುಕಿ ತೆಗೆಯಿರಿ ನೋಡುವಾ
ಎಂದು ಜಗಕ್ಕೆ ಸವಾಲೆಸೆದು
ಪುಟಗಳ ಮರೆಯಲ್ಲಿ ಅವಿತು
ಪರ್ಯಾಯ ಜೀವನವನ್ನು ಕದ್ದು ನಡೆಸಿದ್ದು

ಹಳೆಯ ಮಾಗಿದ ಪುಸ್ತಕ
ಕಾಯುತ್ತ ಇರುತ್ತದೆ ಹೀಗೆ
ತಕ್ಕ ಸಮಯಕ್ಕೆ ಮತ್ತೆ ಬರಲು ಕೈಗೆ
ನಮ್ಮ ಶಾಪ ವಿಮೋಚನೆಗೆ

- ಜಯಂತ ಕಾಯ್ಕಿಣಿ

ಜಯಂತ ಕಾಯ್ಕಿಣಿ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ.  ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು.  ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ನೀಲಿಮಳೆ, ಒಂದು ಜಿಲೇಬಿ, ವಿಚಿತ್ರಸೇನನ ವೈಖರಿ (ಕವನ ಸಂಕಲನಗಳು), ತೆರೆದಷ್ಟೇ ಬಾಗಿಲು, ದಗಡೂ ಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯ, ಬಣ್ಣದ ಕಾಲು, ತೂಫಾನ್ ಮೇಲ್ , ಚಾರ್ ಮಿನಾರ್, ಅನಾರ್ಕಲಿಯ ಸೇಫ್ಟಿ ಪಿನ್‌ (ಕಥಾ ಸಂಕಲನಗಳು), ಸೇವಂತ ಪ್ರಸಂಗ ಜತೆಗಿರುವನು ಚಂದಿರ, ಇತಿ ನಿನ್ನ ಅಮೃತಾ (ನಾಟಕಗಳು), ಬೊಗಸೆಯಲ್ಲಿ ಮಳೆ, ಶಬ್ದತೀರ (ಅಂಕಣಗಳು). ಎಲ್ಲೋ ಮಳೆಯಾಗಿದೆ (ಚಿತ್ರಗೀತೆಗಳ ಸಂಕಲನ), ಹಲವಾರು ಕನ್ನಡ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಮತ್ತು ಗೀತೆಗಳನ್ನು ಬರೆದಿರುವ ಅವರಿಗೆ ’ಫಿಲಂಫೇರ್’ ಸೇರಿ ಅನೇಕ ಪ್ರಶಸ್ತಿಗಳು ಸಂದಿವೆ.

More About Author