Story

ಹಳ್ಳಕ್ಕೆ ಬಿದ್ದ ಆನೆ

ಕತೆಗಾರ, ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನಲ್ಲಿ ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಬರವಣಿಗೆ ಆಸಕ್ತಿ ಕ್ಷೇತ್ರವಾಗಿದ್ದು, ಪ್ರಸ್ತುತ ಅವರು ಬರೆದಿರುವ ʻಹಳ್ಳಕ್ಕೆ ಬಿದ್ದ ಆನೆ' ಕತೆ ನಿಮ್ಮ ಓದಿಗಾಗಿ...

ಒಂದಾನೊಂದು ಕಾಲದಲ್ಲಿ ಹೇಮಾವತಿ ತೀರ ಎಂಬ ಸುಂದರ ಗ್ರಾಮ. ಆ ಗ್ರಾಮದಲ್ಲಿ ರೈತನೊಬ್ಬ ಹೊಲದಲ್ಲಿ ಕೃಷಿ ಮಾಡಿಕೊಂಡು ತನ್ನ ಸಂಸಾರ ಸಾಗಿಸುತ್ತಿದ್ದನು. ಆತನಿಗೆ ಖುಷಿ ಬಿಟ್ಟರೆ ಬೇರೆ ಆಧಾರವೇ ಇಲ್ಲ. ಅವನ ಹೊಲವು ಕಾಡಿನ ಬದಿಯಲ್ಲಿ ಇತ್ತು. ಈ ಹೊಲವು ಕಾಡಿನ ಅಂಚಿನಲ್ಲಿದ್ದ ಕಾರಣ ಆನೆ, ನವಿಲು, ಮೊಲ ಸೇರಿದ ಹಾಗೆ ಅನೇಕ ಪ್ರಾಣಿ-ಪಕ್ಷಿಗಳು ಆಗಾಗ ಬಂದು ಎಲ್ಲಾ ಬೆಳೆಯನ್ನು ನಾಶ ಮಾಡುತ್ತಿದ್ದವು. ಅವನು ತನ್ನ ಹೊಲಕ್ಕೆ ಬೇಲಿ ಹಾಕಿದರು ಆನೆಗಳು ಬೇಲಿ ಮುರಿದು ಹೊಲಕ್ಕೆ ಬಂದು ಬೆಳೆಯನ್ನೆಲ್ಲ ತಿಂದು ತೇಗುತ್ತಿದ್ದವು. ಇದರಿಂದ ರೈತನಿಗೆ ಸರಿಯಾದ ಬೆಳೆ ಸಿಗುತ್ತಿರುವುದಿಲ್ಲ. ಆನೆಗಳು ಬಂದು ಬೆಳೆ ನಾಶ ಮಾಡುತ್ತಿರುವ ನೋವು ಅವನಿಗೆ ತುಂಬಾ ಕಾಡುತ್ತಿತ್ತು. 'ನನ್ನ ಬೆಳೆಯನ್ನೆಲ್ಲ ಆನೆಗಳು ತಿಂದು ಹೋದರೆ ನನಗೆ ಮತ್ತು ನನ್ನ ಸಂಸಾರಕ್ಕೆ ಯಾವುದೇ ರೀತಿಯ ಆಹಾರ ಸಿಗುವುದಿಲ್ಲ ಇದರ ಬಗ್ಗೆ ಏನಾದರೂ ಉಪಾಯ ಮಾಡಲೇಬೇಕು' ಎಂದು ತನ್ನ ಮನದಲ್ಲಿ ಯೋಚಿಸಿಕೊಂಡನು.

ಒಂದು ದಿನ ತನ್ನ ಹೊಲದ ಮಧ್ಯೆ ತುಂಬಾ ಆಳವಾದ ಹಳ್ಳವನ್ನು ಮಾಡಿದ. ಆ ಹಳ್ಳದ ಮೇಲೆ ಕಾಣದ ಹಾಗೆ ಹುಲ್ಲು ಮತ್ತು ಚಿಕ್ಕ ಪುಟ್ಟ ಗಿಡಗಳನ್ನು ನಿಲ್ಲಿಸಿದ, ಅವನು ಮಾಡಿರುವ ಹಳ್ಳಕ್ಕೆ ಆನೆಗಳು ಬೀಳುವ ಹಾಗೆ ಸಿದ್ದ ಮಾಡಿದ. 'ಆನೆಗಳೆಲ್ಲ ಹಳ್ಳಕ್ಕೆ ಬಿದ್ದರೆ ಅವುಗಳಿಂದ ಮುಕ್ತಿ ಪಡೆಯಬಹುದು ಹಾಗೂ ನನ್ನ ಸಂಸಾರವೂ ಸುಖದಿಂದ ಬಾಳಬಹುದು' ಎಂದು ಮನದಲ್ಲಿ ಯೋಚಿಸಿ ಈ ಉಪಾಯವನ್ನು ಮಾಡಿದ. ತನ್ನ ಹೊಲದಲ್ಲಿ ಎಲ್ಲಾ ಕೆಲಸವನ್ನು ಮುಗಿಸಿ ಮನೆ ಕಡೆಗೆ ಹೊರಟನು. ರೈತ ಮಾಡಿರುವ ಹಳ್ಳದ ಬಗ್ಗೆ ಮಾಹಿತಿ ಇಲ್ಲದೆ ಆನೆಯೂ ರಾತ್ರಿ ವೇಳೆ ಬೆಳೆಯನ್ನು ತಿನ್ನಲು ಬಂತು. ಹಾಗೆ ಬೆಳೆಯನ್ನು ತಿನ್ನುತ್ತಾ-ತಿನ್ನುತ್ತಾ ಹಳ್ಳದ ಸಮೀಪಕ್ಕೆ ಬಂದು ಕಾಲು ಜಾರಿ ಒಳಗೆ ಬಿತ್ತು. ಎಷ್ಟೇ ಪ್ರಯತ್ನ ಮಾಡಿದರು ಆನೆಗೆ ಮೇಲೆ ಬರಲು ಆಗುವುದಿಲ್ಲ. ರಾತ್ರಿ ಇಡೀ ಆ ಹಳ್ಳದಲ್ಲೇ ತನ್ನ ದಿನವನ್ನು ಕಳೆಯಿತು.

ಮುಂಜಾನೆ ಸೂರ್ಯ ಹುಟ್ಟುವ ಮುಂಚೆಯೇ ಹಳ್ಳದಲ್ಲಿ ಆನೆ ಬಿದ್ದಿರಬಹುದು ಎಂದು ಯೋಚಿಸಿ ತನ್ನ ಹೊಲದ ಕಡೆಗೆ ಬಂದನು. ಆನೆಯ ನೋಡಿ 'ಏ... ಆನೆ ನನ್ನ ಬೆಳೆಯನ್ನೆಲ್ಲ ನಾಶ ಮಾಡುತ್ತಿದ್ದೆ ಈಗ ನೋಡು ನೀನೇ ಹಳ್ಳದಲ್ಲಿ ಇರುವೆ ಈಗ ಹೇಗೆ ಬೆಳೆ ನಾಶ ಮಾಡುವೆ' ಎಂದು ಹೇಳಿದ. ರೈತನ ಮಾತುಗಳನ್ನು ಕೇಳಿ ಆನೆಗೆ ಕಣ್ಣೀರು ಬಂತು. ಮೆಲ್ಲ ಧ್ವನಿಯಲ್ಲಿ 'ರೈತ... ರೈತ... ದಯಮಾಡಿ ನನ್ನ ಮಾತು ಕೇಳು, ನನಗೆ ಸಹಾಯ ಮಾಡು ಇನ್ನು ಮುಂದೆ ಯಾವುದೇ ಕಾರಣಕ್ಕೂ ನಿನ್ನ ಬೆಳೆ ತಿನ್ನುವುದಿಲ್ಲ, ನಾನು ಈ ಹೊಲಕ್ಕೆ ಮತ್ತೆ ಕಾಲು ಇಡುವುದಿಲ್ಲ' ಎಂದಿತು. 'ನಿಜವಾಗಿಯೂ ನೀನು ಮತ್ತೆ ನನ್ನ ಹೊಲದ ಕಡೆ ಬರುವುದಿಲ್ಲವೇ' ಎಂದನು. 'ನಿಜವಾಗಲೂ ನಾ ಮತ್ತೆ ನಿನ್ನ ಹೊಲದ ಕಡೆ ಬರುವುದಿಲ್ಲ ಯಾವುದೇ ಕಾರಣಕ್ಕೂ ಬೆಳೆ ನಾಶ ಮಾಡುವುದಿಲ್ಲ' ಎಂದು ವಿನಂತಿಸಿಕೊಂಡಿತು. ಆನೆಯ ಮನವಿಯನ್ನು ಸ್ವೀಕರಿಸಿದ ರೈತನು ತನ್ನ ಟ್ರಾಕ್ಟರ್ ನ ಸಹಾಯದಿಂದ ಆನೆಯನ್ನು ಮೇಲಕ್ಕೆ ಎತ್ತಿದನು. ಮೇಲೆ ಬಂದ ಆನೆಯು ರೈತನಿಗೆ ಕೃತಜ್ಞತೆ ತಿಳಿಸಿ ಬಾಲ ಆಡಿಸಿಕೊಂಡು ಕಾಡಿನ ಒಳಗೆ ಓಡಿತು. ಆನೆ ಕಾಟದಿಂದ ಮುಕ್ತಿ ಸಿಕ್ಕಿತು ಎಂದು ರೈತ ಖುಷಿ-ಖುಷಿಯಲ್ಲಿ ಕುಣಿದು ಕುಪ್ಪಳಿಸಿದನು.

- ಮೊಹಮ್ಮದ್ ಅಜರುದ್ದೀನ್

ಮೊಹಮ್ಮದ್ ಅಜರುದ್ದೀನ್

ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ  ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ,  ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.

ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು.

ಪ್ರಶಸ್ತಿ-ಪುರಸ್ಕಾರಗಳು:  ಕಾವ್ಯಶ್ರೀ ಪ್ರಶಸ್ತಿ

More About Author