Poem

ಹೆಸರಾಯಿತು ಕರ್ನಾಟಕ

ಹೆಸರಾಯಿತು ಕರ್ನಾಟಕ
ಉಸಿರಾಗಲಿ ಕನ್ನಡ
ಹಸಿಗೋಡೆಯ ಹರಳಿನಂತೆ
ಹುಸಿಹೋಗದ ಕನ್ನಡ

ಹೊಸೆದ ಹಾಗೆ ಹುರಿಗೊಳ್ಳುವ
ಗುರಿ ತಾಗುವ ಕನ್ನಡ;
ಕುರಿತೋದದ ಪರಿಣತಮತಿ -
ಅರಿತವರಿಗೆ ಹೂಗೊಂಡ

ಪಡುಗಡಲಿನ ತೆರೆಗಳಂತೆ
ಹೆಡೆ ಬಿಚ್ಚುತ ಮೊರೆಯುವ
ಸಹ್ಯಾದ್ರಿಯ ಶಿಖರದಂತೆ
ಬಾನೆತ್ತರ ಕರೆಯುವ

ಗುಡಿ - ಗೋಪುರ ಹೊಂಗಳಸಕೆ
ಚೆಂಬೆಳಕಿನ ಕನ್ನಡ;
ನಮ್ಮೆಲ್ಲರ ಮೈಮನಸಿನ
ಹೊಂಗನಸಿನ ಕನ್ನಡ

ತ್ರಿಪದಿಯಿಂದ ಸಾಸಿರಪದಿ
ಸ್ವಚ್ಛಂದದ ಉಲ್ಲಾಸ
ಭಾವಗೀತೆ, ಮಹಾಕಾವ್ಯ -
ವೀರ - ವಿನಯ ಸಮರಸ

ಹಳ್ಳಿ - ಊರು, ನಗರ - ಜಿಲ್ಲೆ
ಮೊಗದ ಹೊಗರು ಕನ್ನಡಿ;
ಎಲ್ಲ ದಿಸೆಗು ಚೆಲ್ಲುವರಿದ
ಚೈತನ್ಯದ ದಾಂಗುಡಿ

- ಚೆನ್ನವೀರ ಕಣವಿ

ವಿಡಿಯೋ
ವಿಡಿಯೋ

ಚೆನ್ನವೀರ ಕಣವಿ

‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು.

ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು.

ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ಸಾಧನೆಗಾಗಿ ಬಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1981), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1985), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1989), ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಸಂಸ್ಕೃತಿ ವಿಭಾಗದ ಎಮರಿಟಿಸ್ ಫೆಲೋಷಿಪ್ (1996-98), ಪಂಪ ಪ್ರಶಸ್ತಿ (1999), ಇತ್ಯಾದಿ. 65ನೇ ಕನ್ನಡ ಸಾಹಿತ್ಯ ಸಮ್ಮೇಳನ (1996) ಹಾಸನದಲ್ಲಿ ಜರುಗಿದಾಗ ಕಣವಿ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು.

ಕಣವಿ ಅವರು ಕವಿತೆ, ವಿಮರ್ಶೆ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕನ್ನಡ ನಾಡಿನ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. ಕಣವಿ ಅವರ ಕಾವ್ಯಸಂಕಲನಗಳಲ್ಲಿ ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ದೀಪಧಾರಿ, ಮೆರವಣಿಗೆ, ಜೀವಧ್ವನಿ, ನಗರದಲ್ಲಿ ನೆರಳು, ಚಿರಂತನದಾಸ ಪ್ರಸಿದ್ಧವಾಗಿವೆ. ಸಾಹಿತ್ಯ ಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಸಮತೋಲನ ಇತ್ಯಾದಿ ವಿಮರ್ಶಾ ಗ್ರಂಥಗಳು ಜನಪ್ರಿಯವಾಗಿವೆ.

ಧಾರವಾಡದ ಕಲ್ಯಾಣ ನಗರದ ಚೆಂಬೆಳಕು ನಿವಾಸದಲ್ಲಿ ಕಣವಿ ಅವರು ನಿವೃತ್ತಜೀವನ ನಡೆಸುತ್ತಿದ್ದಾರೆ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

 

More About Author