Poem

ಹಿಂತಿರುಗಿ ಬಾ ಕನಸೇ

ಅದೆಂದೋ ಜಾರಿಹೋದೆ ಬಾಲ್ಯದಂತೆ
ಭಾವ ಬಾಳ ಆಕ್ರಮಿಸುವ ಮೊದಲೇ
ಮುಂದೆಂದೋ ಬರುವ ಭಾಷೆಯನೀಯದೆ
ನೋವ ಉಳಿಸಿ ಕ್ರಮಿಸಿದೆ

ಹಲವು ಬಣ್ಣಗಳು ಹಾರಿ ಹಗುರದಿ ಮನಸಿಗೆ
ತೋರಣ ಕಟ್ಟುವ ಕಾಲದಿ
ಹಲವು ಬಣಗಳಾಗಿ ಒಡೆದುಹೋಗಿ
ಕಾರಣವಿಲ್ಲದೆ ಕಹಿ ಕಾರುತ್ತಿವೆ

ಸುತ್ತ ಸುಳಿಯುತ್ತಲೇ ಇದ್ದವು
ಹತ್ತು ಹಲವು ಬಯಕೆಗಳು
ಹತ್ತಿಕ್ಕುವ ಮನಸಾದರೂ, ಅಪ್ಪಿಕೊಂಡೆ
ದಾರಿಗುಂಟ ಜಾರಿದರೂ
ಕನಸೊಂದಾದರೂ ಉಳಿಯಬಹುದೇ ಎಂದು

ಸತ್ತ ಕನಸುಗಳ ಸುತ್ತ
ಬೆಂಕಿಯುಗುಳಿ ಕುಣಿಯುತ್ತಿವೆ
ಅಸ್ತಿಪಂಜರದವತಾರಗಳು
ಸಂಜೀವನಿ ತಂದು, ಒಂದು ಕನಸನ್ನಾದರೂ
ಬದುಕಿಸುವ ಒಂದು ಯತ್ನ

ಸಾಗಿರಬಹದು ಗಡಿಯಾಚೆ
ಚಿಮ್ಮಿರಬಹದು ಆಗಸಕೆ
ಸ್ಮಶಾನದ ಸಮಾಧಿ ಸೇರಿ ಸುಖಿಸುತ್ತಿರಬಹುದು
ಒಮ್ಮೆಯಾದರೂ ಹಿಂತಿರುಗಿ ಬಾ ಕನಸೆ
ಭಾವಕಾವ್ಯ ಕಟ್ಟುವ

ರಚನೆ: ಎಂ.ವಿ. ಶಶಿಭೂಷಣ ರಾಜು

ಎಂ.ವಿ. ಶಶಿಭೂಷಣ ರಾಜು

ಲೇಖಕ ಎಂ.ವಿ. ಶಶಿಭೂಷಣ ರಾಜು ಅವರು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸವಿದ್ದಾರೆ. ಬರವಣಿಗೆ ಅವರ ಆಸಕ್ತಿ. ಅವರು ಬರೆದ ಕತೆ, ಕವನಗಳು ತರಂಗ, ಕರ್ಮವೀರ, ಅವಧಿ, ಕೆಂಡಸಂಪಿಗೆ, ಕನ್ನಡಪ್ರಭ ಮತ್ತು ಪ್ರಜಾವಾಣಿಯೂ ಸೇರಿದಂತೆ ಅನೇಕ ಪತ್ರಿಕೆಗಳಲಿ ಪ್ರಕಟವಾಗಿವೆ. ಅಮೆರಿಕಾದ ಸಾಹಿತ್ಯಘೋಷ್ಠಿಗಳಲ್ಲಿಯೂ ಭಾಗಿಯಾಗುತ್ತಾರೆ.

ಕೃತಿಗಳು:  ಮೌನದ ಮೊರೆಹೊಕ್ಕಾಗ, ಕಥನ ಕವನ, ದ್ವಂದ್ವ, ಮತ್ತು ನೆನಪುಗಳೇ ಹಾಗೆ. ಐ ಸೀ ಯು ಗಾಡ್, ಲೈಫ್ ಅಂಡ್ ಡೆತ್, ಇಮಿಗ್ರೇಷನ್ ದಿ ಪೈನ್, ಲಾಸ್ಟ್ ಲೈಫ್,

More About Author