Story

ಹೋಳಿ ಹುಣ್ಣಿಮೆ

“ಮುತ್ತು ಕಟ್ಯಾಳ ನಮ್ಮವ್ವ”, ‘ಹಿಡಿ ಮಣ್ಣಿನ ಬೊಗಸೆ’, ‘ಸುಮ್ಮನಿರದ ಗಜಲ್’, “ಕೆಂಪು ಹಾಳೆಯ ಹೂವು”, “ಮಾತಂಗಿ”, “ದೀಪ ಆರುವ ಹೊತ್ತು” ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡ ಪ್ರತಿಭಾನ್ವಿತ ಲೇಖಕ ಆನಂದ ಭೋವಿ. ಗ್ರಾಮೀಣ ಸೊಗಡಿನ ಕತೆಗಳಿಂದ ತಮ್ಮದೇ ಅಸ್ಮಿತೆಯೊಂದನ್ನ ಕಟ್ಟಿಕೊಂಡಿರುವ ಆನಂದ ಭೋವಿಯವರ “ಹೋಳಿ ಹುಣ್ಣಿಮೆ” ಕತೆ ನಿಮ್ಮ ಓದಿಗಾಗಿ

ವಾರಿ ಮ್ಯಾಲಿನ ಗುಡಿಯೊಳಗಿನ ಕರೆವ್ವನ ಕಲ್ಲಿನ ಮುಂದ, ಧಗ ಧಗ ಉರಿಯುತ್ತಿದ್ದ ಕೆಂಡದೊಳಗ ತನ್ನ ಅಂಗೈ ಕಾಯಿಸುತ್ತ ಕುಳುತ್ತಿದ್ದ ಮಾದೇವಿ. ಬೆಂಕಿಯ ಕೂಡ ಬೆಂಕಿಯಂಗ ಉರಿತ್ತಿದ್ದಳು. ಆಕೆಯ ಹೊಟ್ಟಿಯೊಳಗ ಪ್ರತಿಕಾರದ ಸಿಟ್ಟು ಕೊತ ಕೊತ ಕುದಿಯುತ್ತಿತ್ತು. ಆಕಿ ತನ್ನ ಕರಳು ಕಿತ್ತು ಬರುವಂಗ ಚೀರಿದಳು “ಯವ್ವಾ… ನಿನ್ನ .. ದೇವರಂತ. ನಂಬಿದ್ದಾಕಿ ನಾನು ನೀನ ಮೋಸ ಮಾಡೀದಿ., ಇನ್ನ ಆ ನರ ಮನುಷ್ಯಾ ಯಾವ ಲೆಕ್ಕ ಹೇಳು” ಅತ್ತು ಅತ್ತು ಕೆಂಪಗಾಗಿದ್ದ ಆಕೆಯ ಕಣ್ಣಿನೊಳಗ ಕರೆವ್ವನ ಕಲ್ಲಿಗೆ ಬಡಿದ ಕುಂಕುಮದ ಬಣ್ಣ ರಕ್ತದ ಛಾಯೆಯಂತೆ ಪ್ರತಿಫಲಿಸುತ್ತಿತ್ತು.

ಪರಸ್ಯಾನ ಹೆಗಲ ಮ್ಯಾಲಿನ ಸಲಕಿ ಇಲ್ಲದ ದಿನಗಳನ್ನು ಕಟಮಳ್ಳಿಯ ಮಂದಿಗೆ ಕಲ್ಪಸಿಕೊಳ್ಳಳಿಕ್ಕು ಸಾಧ್ಯವಿಲ್ಲ. ಊರ ತುಂಬ ಗಬ್ಬು ನಾರುತ್ತಿದ್ದ ಗಟಾರುಗಳನ್ನು ಸ್ವಚ್ಚಗೊಳಿಸಿ, ಅಲ್ಲಿ ಇಲ್ಲಿ ನಿಂತಿದ್ದ ಕೊಳಕು ರೊಜ್ಜುಗಳನೆಲ್ಲಾ ತಗೆದು ಗುಡಿಸಿ ಹತ್ತಿಯಂಗ ಎತ್ತಿಕೊಂಡು ಊರ ಹೊರಗಿನ ಗುಡ್ಡದೊಳಗ ಹಾಕುತ್ತಿದ್ದ. ಅವನ ಬೆವರಿನ ಲೆಕ್ಕಕ್ಕ ಯಾವ ಸಮಯದ ಮಿತಿ ಇರಲಿಲ್ಲ. ಆದರು ಊರಿನ ಮಂದಿ” ಲೇ ಪರಸ್ಯಾ ನಮ್ಮ ಓಣಿ ಗಟಾರ ಬಳದೇ ಇಲ್ಲ, ಗಬ್ಬ ನಾರಾಕತೈತಿ ನೋಡ ಬಾ ಲೇ “ ಕತ್ರಿ ಕತ್ರಿಯೊಳಗ ಇಂವ ಹೊಂಟರ ಕೂಗದೇ ಇರುವ ದಿನಗಳೆ ಇರಲಿಲ್ಲ. ಇವರ ಯಾವ ಮಾತಿಗೂ ಎದುರಾಡದ ಪರಸ್ಯಾ “ ಹೌದೇನ್ರಿ..ಗೌಡ್ರ ನಿನ್ನೇನ ತಗದಿದ್ದನ್ರೀ, ಮತ್ತ ತುಂಬೈತ್ರಿ ಬರತ್ತೀನರೀ” ಅನ್ನಕೊಂತ ಅವರ ಯಾವ ಸಿಡಕೀಗೂ ಬೆಸರಗೊಳ್ಳದೆ ತರಾವರಿ ನಗುವಿನಿಂದ ಉತ್ತರಿಸುತ್ತಿದ್ದ. ಪರಸ್ಯಾ ಅಂದ್ರ ಯಾವಾಗಲೂ ಒಂದ ಕಡೆ ಮುಖ ಮಾಡಿದ್ದ ಗುಡಿಯೊಳಗಿನ ಹನಮಂತ ಆಗಿದ್ದ. ಊರಿನೊಳಗಿನ ಮಣ್ಣಿನ ಉಸಿರನಲ್ಲಿ ಅವಿತುಕೊಂಡ ಪಳೆಯುಳಿಕೆಯಾಗಿದ್ದ.

ಈಡೀ ಊರಿನ ಮನೆಯ ಕಸ ಎತ್ತಿಹಾಕುತ್ತ ಪ್ರತಿಯೊಬ್ಬರ ಮನದ ಕಸವನ್ನು ಗೂಡಿಸುವ ಹಂತಕ್ಕೆ ಬಂದಿದ್ದ ಪರಸ್ಯಾನ ಉದ್ಯೋಗವೇನು ಕಾಯಂ ಆಗಿರಲಿಲ್ಲ. ಅವರಜ್ಜ, ಅಪ್ಪನ ಕಾಲದಿಂದಲೂ ವಂಶಪಾರಂಪರೆಯಿಂದ ದೊರೆತ ಕುಲಕಸುಬಾಗಿತ್ತು. ಗೌಡರ ಮನೆಯ ಅಂಗಳ ಕಸ ಗೂಡಿಸಿ ಅವರ ಎತ್ತು ಎಮ್ಮೆಯ ಸೆಗಣಿ ಬಳಿದು. ಅವರು ಏಳುವ ಮೊದಲೆ ಅವರ ಮನೆಯ ಸ್ವಚ್ಚಗೊಳಿಸಿ ಅವರ ಮುಂದೆ ಭಕ್ಷಿಸಗಾಗಿ ಕಾಯುತ್ತಿದ್ದ ಹಿರಿಯರು ಕೊಟ್ಟ ಬಳುವಳಿಯಾಗಿತ್ತು. ಇತ್ತಿತ್ತಲಿಗೆ ಗೌಡರ ಹಕ್ಕಿಗಳೆಲ್ಲಾ ದನ ಕರುಗಳಿಲ್ಲದೆ ಧೂಳು ಹಾರಿಸುತ್ತಿದ್ದಾಗ ಸತ್ತೋದ ಮುದಿಗೌಡ ಪಂಚಾಯತಿಯ ಚೇರ್ಮನ್ ಇದ್ದಾಗ “ ನಮ್ಮ ಮನಿ ಮುಂದ ನಿತಗೊಂಡ ಏನ ಮಾಡತೀ.. ಊರ ತುಂಬ ಗಟಾರ ತಗದಾರ. ಅವುಗಳನ್ನಾದರೂ ಬಳ್ಯಾಕ ಸೂರು ಮಾಡು . ಅಲ್ಲೇ ಪಂಚಾಯತಿಯಾಗ ಪಗಾರ ಕೋಡಸತೀನಿ” ಅಂದಾಗ ಸಲಕಿ ಎತಗೊಂಡ ಪರಸ್ಯಾ ನಿಂತೆಯಿಲ್ಲ. ಅವಾಗಿನಿಂದ ತನ್ನ ನಾಮ ಉಪನಾಮಗಳಿಗೆಲ್ಲಾ ಬದಲಾಯಿಸಿದ ಪರಸಪ್ಪ. ಹೊಸ ರೂಪಕ ಹಚ್ಚಿಕೊಂಡು ಎಲ್ಲರ ಬಾಯಲ್ಲಿ “ಗಟಾರ ಬಳಿಯುವ ಪರಸ್ಯಾ” ಆಗಿಬಿಟ್ಟ

ಮೊದಮೊದಲು ಮಾದೇವಿ, ಪರಸ್ಯಾನ ಹೆಸರ ಹೇಳಿದ್ರ ಉರಿದು ಬೀಳುತ್ತಿದ್ದಳು. ಅವನ್ಯಾರ ಮಾಡಕೊತ್ತಾರ ಗಬ್ಬ ನಾರತಾನಂತ ಮೂಗಮುರಿದಿದ್ದ ಜಾಸ್ತಿ. ಸೋದರ ಮಾವನ ಮಗಳು ಮಾದೇವಿಯ ಕೂಡ ಪರಸ್ಯಾನ ಮದುವಿ ಪಿಕ್ಸ ಅಂತ ಈಡೀ ಊರಿಗೆ ಗೊತ್ತಿತ್ತು. ಮಾದೇವಿಯ ಗೆಳತಿಯರು ಈಕೆಯನ್ನು ಕನಿಕರದಿಂದ ನೋಡುವಾಗ ಕಣ್ಣೀರಾಗುತ್ತಿದ್ದ ಮಾದೇವಿ. ಪರಸ್ಯಾನ ಕೆಲಸ ನೆನಸಿಕೊಂಡು ಅತ್ತಿದ್ದೆ ಜಾಸ್ತಿ. ಯಾವಾಗ ಇವರಿಬ್ಬರಿಗೂ ಮದುವೆಯಾಯಿತೋ ಆಗ ಮಾದೇವಿಯೂ ಪರಸ್ಯಾನ ವ್ಯಕ್ತಿತ್ವದ ಮುಂದೆ ಸೋತು ಶರಣಾದಳು. ಪರಸ್ಯಾನ ದೇಹಕಂಟಿದ ಹೊಲಸು ಎಂದಿಗೂ ಕೂಡ ಮನಸ್ಸಿಗೆ ಬಡದಿರಲಿಲ್ಲ. ಬಂಗಾರದಂತ ಅವನ ಕೂಡ ನಡೆದ ಮಾದೇವಿಯ ಮನಸ್ಸಿನೊಳಗಿನ ಚಿಂತೆಯಲ್ಲ ದೂರಾಗಿತ್ತು. “ ನನ್ನ ಗಂಡ ಸರದಾರ” ಅನ್ನುವಾಗ ಅವಳ ಕಣ್ಣು ನೋಡುವದೆ ಚೆಂದ. ತಮ್ಮ ಬದುಕಿನ ದಾರಿಯೊಳಗ ಇಬ್ಬರ ಮಕ್ಕಳನ್ನು ಪಡೆದ ಇವರಿಬ್ಬರು ಪರಸ್ಪರ ಬೆಸೆದುಕೊಂಡು ಮುದ್ದಾದ ಸಂಸಾರ ಸಾಗಿಸಿದ್ದರು.

ಹತ್ತಾರು ವರುಷದಿಂದ ದುಡಿಯುತ್ತಿದ್ದರು ಅವನ ನೌಕರಿ ಖಾಯಂ ಆಗುವ ಲಕ್ಷಣ ಇರಲಿಲ್ಲ. ಪ್ರತಿದಿನ ಅವನನ್ನು ತಿವಿಯುತ್ತಿದ್ದ ಮಾದೇವಿ ಏಷ್ಟಂತ ತಲಿ ತಗ್ಗಸಕೊಂಡ ಇರತಿ ಆಕೆಯ ಯಾವ ಪ್ರಶ್ನಗೂ ಆಂವ ಉತ್ತರಿಸುತ್ತೀರಲಿಲ್ಲ. ಇತ್ತಿಚಿಗೆ ಪಂಚಾಯತಿಯ ವ್ಯವಹಾರದ ತುಂಬ ಮೋಸದ ವಾಸನೆಗಳೇ ತುಂಬಿದ್ದವು.

ಊರತುಂಬ ಕೆಂಚನಗೌಡ್ರ ಹೆಸರಿಗೆ ಬೆಲೆ ಬಂದಿತ್ತು. ಅವರ ಕರಾಮತ್ತಿನ ಆಟದೊಳಗ ಸಣ್ಣ ಸಣ್ಣ ಮಂದಿ ಬೆಂದ ಹೋಗಿದ್ದರು. ಅವರ ಸುತ್ತಲೇ ತಿರಗಾಡುತ್ತಿದ್ದ ಮರಿ ಪುಡಾರಿಗಳೆಲ್ಲಾ ಅವರು ನೀಡುವ ಪುಡಿ ಕಾಸಿಗಾಗಿ ತಮ್ಮತನ ಕಳೆದುಕೊಂಡು ಮೈತುಂಬಿಕೊಂಡ ಗೂಳಿಯಂತೆ ಅಡ್ಡಾಡುತ್ತಿದ್ದರು. ಊರತುಂಬ ಸಾಕಷ್ಟು ಆಸ್ತಿಯಿದ್ದರೂ ಗೌಡರ ಆಸೆ ತೀರಿರಲಿಲ್ಲ, ಹೆಸರಿಗೆ ಮಾತ್ರ ಪಂಚಾಯತಿ ಪ್ರಜಾಪ್ರಬುತ್ವದ ಆಡಳಿತ ಹೊಂದಿತ್ತು. ಊರಾಗಿನ ಮೆಂಬರಗಳು, ತಲಾಠಿ, ಪಿ.ಡಿ.ಓ ಸಿಬ್ಬಂದಿಯೆಲ್ಲಾ ಗೌಡರ ಹೇಳಿದ ಮಾತ ದಾಟುತ್ತಿರಲಿಲ್ಲ. ಅವರ ದರ್ಪದ ಆಡಳಿತದಾಗ ಊರು ಅಭಿವೃದ್ಧಿ ಕಾಣದ ಹಾಳ ಕೊಂಪೆಯಾಗಿತ್ತು.

ಪಂಚಾಯತಿ ಇಲೇಕ್ಷನ್ ಸಮೀಪ ಬಂದಂಗ ಕೆಂಚನಗೌಡನ ಮಾರಿ ಮ್ಯಾಲ ಬೆವರ ಹನಿ ಇಳಿಯಲಿಕ್ಕ ಆರಂಭವಾಗಿತ್ತು. ಊರ ಮಂದಿ ನಡುವಳಿಕೆ ಅವನಿಗೆ ಸಂಶಯ ತರಿಸಿತ್ತು. ಅದರಾಗ ಚೆರ್ಮನ್ ಸೀಟು ಈ ಸಾರಿ ಮಿಸಲ ಇಡತ್ತಾರು ಅನ್ನುವದ ಅವಂಗ ಚಿಂತೆಯಾಗಿತ್ತು. ಅದರಾಗ ಯಾವನ್ನಾದ್ರು ನಂಬಿಗಸ್ತ ಆಳ ಮಗನ್ನ ಹುಡಕಾಡುತ್ತಿದ್ದ. ಮೂರು ತಿಂಗಳಿಂದ ಕರ ವಸೂಲಿ ಆಗಿಲ್ಲಂತ ಪರಸ್ಯಾಗ ಪಗಾರ ಕೊಟ್ಟಿರಲಿಲ್ಲ, ದಿನವಡಿ ಊರ ಕಸ ಏತ್ತಿ ಬ್ಯಾಸರಗೊಂಡಿದ್ದ ಪರಸ್ಯಾ ನೆಟ್ಟಗ ಪಂಚಾಯತಿಗೆ ಹೋಗಿ ಪಗಾರಕ್ಕಾಗಿ ಬಾಯಿ ತಗೆದ. ಗೌಡರ ಮಾತ ಕೇಳಿ ಪಗಾರ ತಗೆಯದಿದ್ದ ಪಿ. ಡಿ. ಓ. ಗೌಡರ ಕಡೇ ಕೈ ಮಾಡಿ ಕುಳಿತುಬಿಟ್ಟ. ಕುತನೀ ಖುರ್ಚಿಮ್ಯಾಲ ಮೀಸಿ ಮ್ಯಾಲ ಕೈ ಹಾಕೊಂಡ ಕುಳುತ್ತಿದ್ದ ಕೆಂಚನಗೌಡ “ಲೇ ಪರಸ್ಯಾ ಮಗನ ಪಂಚಾಯತಿ ಏನ ನಿಮ್ಮ ಅಪ್ಪಂದನ, ಎಷ್ಟ ಧಿಮಾಕೀನ್ಯಾಗ ಕೇಳಾಕತ್ತಿ, ನಿನ್ನ ನಾವ ಇಟಗೊಂಡಿದ್ದ ದೊಡ್ಡದ, ನೀನೇನ ಖಾಯಂ ನೌಕರಲ್ಲ, ನಿನ್ನ ಅವಶ್ಯಕತೆ ಪಂಚಾಯತಿಗೆ ಇಲ್ಲ, ನಾಳಿಂದ ನೀ ಬರುವ ಜರೂರತ್ತು ಇಲ್ಲ, ನಿನ್ನ ಕೆಲಸಕ್ಕ ಹತ್ತಾರ ಮಂದಿ ಗಂಟ ಬಿದ್ದಾರ, ನಾಳೇ ಠರಾವ ಬರೀರಿ ಸಾಹೇಬ್ರ” ಕಡ್ಡಿ ತುಂಡ ಮಾಡಿದಂಗ ಕೆಂಚನಗೌಡ ಪರಸ್ಯಾನ ಮಾರಿಗೆ ಬಡಿದಂಗ ಹೇಳಿದ. ಗೌಡರ ಮಾತ ಕೇಳಿ ಖಬರಗೆಟ್ಟು ಬಿಕ್ಕಿ ಬಿಕ್ಕಿ ಅತ್ತ ಪರಸ್ಯಾ ದಿಕ್ಕು ತೋಚದವರಂಗ ಹಣೆ ಮೇಲೆ ಕೈಹೊತ್ತು ಮುಗಿಲ ನೋಡತೋಡಗಿದ.

ಮಾದೇವಿ ಪರಸ್ಯಾನನ್ನು ರಂಬಿಸಿ ರಂಬಿಸಿ ಸೋತು ಹೊಗಿದ್ದಳು. ಪರಸ್ಯಾನ ಕೆಲಸಕ್ಕೆ ಕುತ್ತು ಬಂದ ಕಾರಣ ತಾನ ಅನ್ನವದನ್ನ ನುಂಗಿಕೊಂಡು ಮಮ್ಮಲ ಮರಗಿದಳು. ಕೂಲಿಗಂತ ಗೌಡರ ಹೊಲಕ್ಕ ಹೋದಾಗ ತೋಟದ ಮನೆಗೆ ಕರೆಸಿಕೊಂಡು ಆಕೆಯ ಸೊಂಟಕ್ಕ ಕೈ ಆಕಿದ್ದ ಗೌಡನ ಮುಖಕ್ಕೆ ಉಗುಳಿ ಬಂದಿದ್ದ ಅವಳಿಗೆ ಅವನೆಂದಿದ್ದ ಸೊಕ್ಕಿನ ಮಾತು ನೆನಪಾಗಿ ಗಂಡನ ಮುಖ ನೋಡಿ ತಳಮಳಿಸಿದಳು.

ಪಂಚಾಯತಿ ಇಲೆಕ್ಷನ್ ಆರಂಭವಾಗುವುದಕ್ಕೂ, ಊರಿನ ಗಟಾರುಗಳೆಲ್ಲಾ ತುಂಬಿ ಗಬ್ಬು ವಾಸನೆ ಹರಡುವದಕ್ಕೂ ಒಂದಕ್ಕೊಂದು ಸಾಟಿಯಾಗಿತ್ತು. ಪರಸ್ಯಾನ ಕೆಲಸದಿಂದ ತಗೆದ ಸುದ್ಧಿಯೂ ಹರಡಿಕೊಂಡಿತ್ತು. ಇಷ್ಟುದಿನ ತಮ್ಮ ನೋವು, ಆಕ್ರೋಶಗಳನೆಲ್ಲಾ ತಮ್ಮೊಳಗೆ ಮುಚ್ಚಿಟ್ಟುಕೊಂಡಿದ್ದ ಮಂದಿ ಪುಟದೇಳುವ ಅವಕಾಶಕ್ಕಾಗಿ ಕಾಯುತ್ತಿದ್ದರು.

ಮೂಲೆಯಿಡಿದು ಕುಳುತ್ತಿದ್ದ ಪರಸ್ಯಾನ ತಲಿಯೊಳಗ ಮಾದೇವಿ ಹೊಸ ಐಡಿಯಾ ತುಂಬಿದಳು. ಆಂವ ಇಷ್ಟು ದಿನ ತುಂಬಿಕೊಂಡಿದ್ದ ಜಿಡ್ಡು ಬಿಟ್ಟು ಮೇಳೆದ್ದ. ವ್ಯವಸ್ಥೆಯ ಭಾಗವಾಗಿದ್ದ ಆಂವ ವ್ಯವಸ್ಥೆಯ ಬದಲಾವಣೆಯ ಕನಸು ಹೊತ್ತು ಹೊರ ನಡೆದ. ಪರಸ್ಯಾ ಈ ಬಾರಿಯ ಪಂಚಾಯತಿಯ ಇಲೆಕ್ಷನದ ಉಮೇದುವಾರಿಕೆ ಅನೌನ್ಸ ಮಾಡಿದ. ಬೆರಗಾಗಿ ನೋಡಿದ ಊರಿನ ಜನ ಬಪ್ಪರೆ ಮಗನ ಅಂತೇಳಿ ಜೈ ಕಾರ ಹಾಕಿದರು. ಇಲ್ಲದ ಉಸಾಬರಿ ಮಾಡಿದ್ದ ಕೆಂಚನಗೌಡನ ಮುಕಳಿಗೆ ಹುಳ ಕಡದಂಗಾತು.” ಅಲ್ಲಿಯೇ ಗಟಾರ ಬಳಕೊತ ಇರತಿದ್ದ , ಆ ಮಾದಿ ಮ್ಯಾಲಿನ ಆಸೆಕ್ಕ, ಇಲ್ಲದ ಕಿಸಾಮತಿ ಮಾಡಕೊಂಡನೀ, ಈ ವರ್ಷ ಮೊದಲ ಚೇರ್ಮನ್ ಸೀಟು ಆ ಮಂದಿಗೆ ಬರತೈತಿ. ಪರಸ್ಯಾ ಗೆದ್ದರ ಈಡೀ ಊರ ಮಂದಿಗೆ ಅವನ ಮ್ಯಾಲ ಕನಿಕರ ಐತಿ, ಆಂವ ಚೆರ್ಮನ್ ಆದ್ರ, ಇನ್ನ ಮೊದಲ ಮೆರದಾಡತ್ತಿದ್ದ ಆಕೀ ನನ್ನ ಕೈಗೆ ಸೀಗುವುದು ಕನಸ..” ಇದ ವಿಚಾರದಾಗ ಕೆಂಚನಗೌಡ ಪರಸ್ಯಾಗ ನಾಮಪತ್ರ ಹಿಂದಕ್ಕ ತಗೋ ಅಂತೇಳಿ ಧಮಕಿನು ಹಾಕಿದ. ಗಂಡನ ಹಿಂದ ರಣಚಂಡಿಯಂಗ ನಿಂತಿದ್ದ ಮಾದೇವಿ “ ನಿನ್ನಂತ ನೂರಾರು ಬಾಡಕೋಗಳನ್ನ ನೋಡೇನಿ, ಹೆಂಗಸುರಂತವ ದಮ್ಮ ಇಲೆಕ್ಷನಕ್ಕ ಬಾ ಅಂತೇಳಿ ರಣ ವಿಳ್ಯೆ ನೀಡಿದಳು.

ಗೌಡನ ಆಡಳಿತ ನೋಡಿದ್ದ ಮಂದಿ ತಮ್ಮಷ್ಟಕ್ಕ ತಾವ ತಿರ್ಮಾನ ಮಾಡಿದ್ದರು. ಪರಸ್ಯಾನ ವಿರುದ್ಧ ನಿಂತಿದ್ದ ಅಭ್ಯರ್ಥಿಗೆ ಗೌಡರು ಸಾಕಷ್ಟು ರೊಕ್ಕ ನೀಡಿ ಹಂಚಿದರು. ಗಬಕ್ಕನ ಎಲ್ಲಾರ ಕಾಲಿಗೆ ಬೀಳುತ್ತಿದ್ದ ಪರಸ್ಯಾನ ಮುಗ್ಧತೆಯ ಮುಂದೆ ಯಾವ ಆಮಿಷಗಳು ಕೆಲಸಾ ಮಾಡಲಿಲ್ಲ. ಈಡೀ ಗೌಡರ ಪಟಾಲಂ ಠೇವಣಿ ಕಳೆದುಕೊಂಡು ಹೊಸ ತಂಡ ಕಟಮಳ್ಳಿಯ ಪಂಚಾಯತಿಯಲ್ಲಿ ಆಡಳಿತಕ್ಕೆ ಬಂದಿತು.

ಕೆಂಚನಗೌಡನ ಖುರ್ಚಿಯನ್ನು ಅನಾಯಸವಾಗಿ ಕಸಿದುಕೊಂಡ ಗಟರು ಬಳಿಯುವ ಪರಸ್ಯಾ ಉರ್ಫ ಪರಸಪ್ಪ. ಊರಿನ ಚೆರ್ಮನ್ ಆಗಿ ತಿರಗಾಡುವ ಖುರ್ಚಿ ಮ್ಯಾಲ ಕುಳುತ್ತಿದ್ದು. ಅಜಾಬ ಆಗಿತ್ತು. ಪಂಚಾಯತಿಯೊಳಗ ತನ್ನ ದಿನಾ ದೂಡಿದ್ದ ಪರಸ್ಯಾ ಅದರೊಳಗಿನ ಹಕಿಕತ್ತು ಎಲ್ಲಾ ನೀರ ಕುಡಿದಂಗ ಅರಗಿಸಿಕೊಂಡಿದ್ದ. ಕೆಂಚನಗೌಡನಂತವನ ಹೊಟ್ಯಾಗ ಕಾರ ಕಲಿಸುವಂಗ ಆಡಳಿತ ಮಾಡತೇನಂತ ಭಾಷಣ ಮಾಡಿದ.

ಮೊದಲಿದ್ದ ಪಿ.ಡಿ.ಓನ ವರ್ಗ ಮಾಡಿಸಿ ಬ್ಯಾರೆ ಬ್ಯಾರೆ ಆಪೀಸರ್ಸ ಗಳನ್ನ ಊರಿಗೆ ಕರೆದುಕೊಂಡು ಬಂದ. ಪಂಚಾಯತಿಯೊಳಗಿನ ನೂರಾರು ಯೋಜನೆಗಳ ಬಗ್ಗೆ ತಾಲೂಕು, ಜಿಲ್ಲೇಯ ಕಛೇರಿಗಳಿಗೆ ಅಲೆದಾಡಿ ತಿಳಿದುಕೊಂಡ. ತಾನು ಮಾಡುತ್ತಿದ್ದ ಕೆಲಸಕ್ಕ ಹೊಸ ಯಂತ್ರ ತರಿಸಿ ಮನುಷ್ಯರಿಂದ ಅಂತಹ ಕೆಲಸಗಳಿಗೆ ತಿಲಾಂಜಲಿ ಇಡಿಸೀದ. ಊರಿನ ಹಿರಿಯರ ಸಹಕಾರದಿಂದ ಊರಿನ ಅಭಿವೃದ್ಧಿಗೆ ಬೇಕಾದ ನೀಲನಕ್ಷೆ ತಯಾರಿಸಿ, ರಸ್ತೆ , ಲೈಟು, ನೀರು ಎಲ್ಲರಿಗೂ ದೊರೆಯುವಂತೆ ಕೆಲಸ ಆರಂಭಿಸಿದ. ಶಾಲೆ, ಅಂಗನವಾಡಿ, ಗೃಂಥಾಲಯಗಳಿಗೆ ಸೌಲಭ್ಯ ಒದಗಿಸಲು ಅಲೆದಾಡುತ್ತಿದ್ದ. ಊರನ್ನು ಗುಡಿಸಲು ರಹಿತವನ್ನಾಗಿಸಿ ಮನೆ ಇಲ್ಲದವರ ಕಣ್ಣಲ್ಲಿ ಹೀರೋ ಆದ. ಪರಸಪ್ಪ ಜನಪ್ರೀಯತೆ ಹೆಚ್ಚಾಗತೊಡಗಿದಂತೆ ಮಾದೇವಿಯ ಕಣ್ಣಲ್ಲಿ ಖುಷಿ ತಾಂಡವವಾಡುತ್ತಿತ್ತು. ಪರಸಪ್ಪನ ಸಂಪರ್ಕ ಹೆಚ್ಚಾಗತೊಡಗಿತು. ಶಾಸಕರು, ಮಂತ್ರಿಗಳು ಪರಸಪ್ಪನ ಕಚೇರಿಗೆ ಭೇಟಿ ನೀಡಿ ಶಹಬ್ಬಾಸ್ ಎನ್ನತೊಡಗಿದರು. ಇಂತಹ ಟೈಮಲ್ಲಿ ಇವನ ಕಣ್ಣಿಗೆ ಬಿದ್ದ ಕೆಂಚನಗೌಡರ ಅವಧಿಯ ಅವ್ಯವಹಾರ ಹುಬ್ಬೇರಿಸುವಂತೆ ಮಾಡಿತು. ಸುಮ್ಮನೆ ಬಿಟ್ಟಿದ್ರ ಮುಚ್ಚಿಹೋಗುತ್ತಿದ್ದ ಉಸಾಬರೀ ಈಡೀ ಊರಿಗೆ ಗೊತ್ತಾಗಲಂತ ಆ ವೇಳೆಯದಾಗಿನ ಅವ್ಯವಹಾರನ ತನಿಖೆ ಮಾಡ್ರಿಯಂತ ಸರ್ಕಾರಕ್ಕ ಅರ್ಜಿ ಬರದ ಬಿಟ್ಟ. ನಾಲ್ಕ ದಿವಸ ಉರದಾಡಿ ಉರದ ಬೀಳತ್ತಾನಂತ ಸುಮ್ಮನ ಇದ್ದ ಕೆಂಚನಗೌಡ, ಬುಡಕ್ಕ ಬೆಂಕಿ ಇಟ್ಟ ಪರಸ್ಯಾನ ಕೆಕ್ಕರಿಸಿ ನೋಡಿ ಚರಿತ್ರೆಯ ಪುಟಗಳನ್ನ ಹರಿದು ಹಾಕಲಿಕ್ಕ ಕಾಯತೋಡಗಿದ..

ಒಂದು ಗೋಧಿಯ ಬೀಸಿ ಒಂಬತ್ತು ಕಡಬ ಮಾಡಿ
ಬನ್ನಿಯ ಏಲೆಯಾಗ ಎಡೆಮಾಡಿ || ಪಾಂಡವರು
ಉಣ್ಣದ ಹೋಗ್ಯಾರು ವನವಾಸ.

ಕಟಮಳ್ಳಿಯ ಖತ್ರಿ ಖತ್ರಿಯೊಳಗ ಲಭೋ..ಲಭೋ.. ಸಪ್ಪಳ ಕೇಳಿಸುತ್ತಿತ್ತು. ಈ ಬಾರಿಯ ಹೋಳಿ ಹುಣ್ಣಿಮೆಯ ಸಡಗರ ದಿಕ್ಕು ದಿಕ್ಕಿನಿಂದ ಸೂಸಿ ಬರುತ್ತಿತ್ತು. ಊರಿನ ಹರೆದ ಹುಡುಗರ ಹರೆಯ ಊಕ್ಕಿ ಮೀಸಿ ತಿರುವುತ್ತ ಕಣ್ಣು ಮಿಟುಕಿಸುತ್ತಿದ್ದರು. ಕತ್ತಲು ಚಾಚಿದಂತೆ ಹೊಂಚು ಹಾಕಿ ಕಟ್ಟಿಗೆ , ಕುಳ್ಳು ಕದಿಯುತ್ತ ತಮ್ಮ ಮನಗೆದ್ದ ಬಾಲೆಯರ ಮೇಲೆ ಪದ ಕಟ್ಟಿ ಖತ್ರಿ ಖತ್ರಿಗೆ ನಿಂತು ಹಲಿಗಿ ಬಡಿಯುತ್ತಿದ್ದರು.

ತುಂಬಿದ ಹೊಳಿಯಾಗ ಕೊಂಬು ಕಾಣಿಸತಾವ
ಬಂಗಾರದ ಇನಿಯ ಬಸವಣ್ಣ|| ಬರುವಾಗ
ಗಂಗಮ್ಮ ದಾರಿ ಬಿಡತಾಳು

ಪ್ಯಾಟಿ ಕಾಮಣ್ಣನ ಅಂದಕ್ಕ ಮನಸೋಲದವರು ಯಾರು..? ಬಡಿಗ್ಯಾರು ಹುಡಗರು ಬಿದಿರು ಸೀಳಿ ಕಟ್ಟಲು ವಾರವೇ ಬೇಕಾಗುತ್ತಿತ್ತು. ದುಂಡನೆಯ ಬಣ್ಣದ ಮಾರಿಯ ಆಕಾರಕ್ಕೆ ತಕ್ಕ ಮುಂಡ ತಯಾರಿಸಿ ಅವನ ಕೈಯಿಗೆ ಬಿಲ್ಲು ಬಾಣವನಿಟ್ಟು. ಎಲ್ಲರಿಗೂ ಕಾಣುವ ಅವನ ಶಿಶ್ನಕ್ಕೆ ಬದನಿಕಾಯಿ ಕಟ್ಟಿ ನೆದರು ತಗೆದು ಕಾಯಿ ಒಡೆಯುತ್ತಿದ್ದರು. ಹೊಸ ಹಳದಿ ರುಮಾಲು, ಜರಿ ಧೋತರ, ಹೊಸ ಅಂಗಿ ತೊಟ್ಟ ಕಾಮನ ಕಣ್ಣಿನ ಹುಬ್ಬಿಗೆ ಕಾಡಿಗೆ ಬಡಿದು ದಿಟ್ಟಿಸಿ ನೋಡುತ್ತಿದ್ದರು.

ಹೋಳಿ ಹುಣ್ಣಿಮೆಯ ಹೊತ್ತಿಗೆ ಹೊಲದಲ್ಲಿನ ಬೆಳೆಗಳನೆಲ್ಲಾ ಮನೆಯ ಪಡಸಾಲೆಯಲ್ಲಿ ನಿಟ್ಟು ಒಟ್ಟಿ. ಕರಿ ಹರಿಯಲು ಕಾಯುತ್ತೀರುವ ರೈತರೆಲ್ಲಾ ಒಂದಾಗಿ ಊರ ಸೀಮೆಯ ಕರೆವ್ವನ ಗುಡಿ ಮುಂದ ಕುರಿ ಕೋಯ್ದು ಬ್ಯಾಟಿಯ ಊಟದ ಅಮಲಿನಲ್ಲಿ ರಾತ್ರಿಯಿಡಿ ಹೆಜ್ಜೆ ಕುಣಿತ, ಡೊಳ್ಳು ಕುಣಿತ ಹಾಕುತ್ತ ಸವಾಲಿನ ಪದ ಹಾಡುತ್ತಿದ್ದರು.

ತೊಗರಿಯ ಸಾಲಾಗ ಬುಗರಿ ಆಡುವನ್ಯಾರೋ
ಮದರಿ ರುಂಬಾಲದ ಕಾಮಣ್ಣ || ಆಡಿದರ
ಬಂದಂತ ಮೋಡ ಬಯಲಾಗಿ.

ನಟ್ಟ ನಡು ಊರಿನಿಂದ ಬಯಲು ಕಡೆ ಕಾಮಣ್ಣ ಹೊರಟನಂದರೆ ಊರಿನ ಮಂದಿಗೆ ಸನ್ನೆ ಮಾಡಿದಂತೆ. ಒಬ್ಬರ ಮೇಲೆ ಒಬ್ಬರು ಮುಗಿಬಿದ್ದು ಬಣ್ಣ ಎರಚಲು ಆರಂಭಿಸುತ್ತಾರೆ. ಪ್ರತಿ ಓಣಿಯಲ್ಲಿ ಮೆರವಣಿಗೆ ತಡೆದು ತಮ್ಮ ಶಕ್ತಿ ಮೀರಿ ಬಣ್ಣದ ಓಕುಳಿಯಲ್ಲಿ ಮುಳುಗಿ ಎಳುತ್ತಿದ್ದರು. ಕಾಮಣ್ಣನಿಗೆ ಆರತಿ ಎತ್ತುವ ಹುಡಗಿಯರು ತಮ್ಮ ಮನದ ಆಸೆಗಳನ್ನು ಈಡೇರಿಸುವಂತೆ ಅವನನ್ನು ಬೇಡಿಕೊಳ್ಳುತ್ತಿದ್ದರು.

ಫಲ್ಲಕ್ಕಿ ಹೊತ್ತವರು ಮೆಲ್ಲಕ್ಕ ನಡಿರೆಪ್ಪ
ಕಲ್ಲಾಗ ಕಾಲ ಅದ್ರ್ಯಾವ || ಕಾಮಣ್ಣನ
ಫಲ್ಲಕಿ ಮುತ್ತ ಉದ್ರ್ಯಾವು

ಖಡ್ಗ ಝಳಪಿಸುತ್ತ, ಹಲಗಿ ಬಡಿಯುತ್ತ ಕಾಮಣ್ಣನ ಮೆರವಣಿಗೆ ಊರ ಬಯಲ ಕಡೆ ಹೊರಟಿತ್ತು. ರಾತ್ರಿಯಿಡಿ ಓಡಾಡಿ ಹೊತ್ತು ತಂದ ಕುಳ್ಳು ಕಟ್ಟಿಗೆ ಹೊತ್ತ ಹುಡುಗರ ಗುಂಪಿನಲ್ಲಿ ಹಾರಾಡುತ್ತಿದ್ದ ಬಣ್ಣದ ಧೂಳು ಮುಗಿಲು ಬಡಿದು ಬೀಳುತ್ತಿತ್ತು. ಹಲಗೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತ, ಲಭೋ.. ಲಭೋ.. ಒಕ್ಕೋಂತ ಚೀರುತ್ತ ನಡೆಯುತ್ತಿದ್ದರು.

ಕಾಮಣ್ಣನ ಹೆಂಡತಿ ಕಾಡಗಣ್ಣಿನವಳ
ನೀರ ಕಂಡಲ್ಲಿ ನಗುವವಳೋ|| ಕಾಮಣ್ಣನ
ಬೂದಿ ಕಂಡಲ್ಲಿ ಅಳವವಳೋ

ಈ ಹಬ್ಬದ ಸಡಗರದಲ್ಲಿ ಊರ ಹಿರಿಯರ ಸಾಲಿನಲ್ಲಿ ಪರಸಪ್ಪನಿಗೂ ಸ್ಥಾನವಿತ್ತು. ಗೌಡರ, ತಳವಾರರ ಸಾಲಿನಲ್ಲಿ ಪರಸಪ್ಪನು ಗಂಭೀರ ಹೆಜ್ಜೆ ಇಡುತ್ತಿದ್ದ. ಊರಿನ ಓಣಿ ಓಣಿಯಲ್ಲೂ ನಿಲ್ಲುತ್ತಿದ್ದ ಕಾಮಣ್ಣನಿಗೆ ಕರಗಡಬಿನ ಎಡೆ ಇಡಿಯುತ್ತಿದ್ದ ಸುಮಂಗಲೆಯರು, ಪರಸಪ್ಪನ ಮುಖದ ನಗೆ ಕಂಡು ಕಾಮಣ್ಣನ ಜೊತೆಗೆ ಅವನಿಗೂ ಕುಂಕಮ ಬಡಿದು ಕಳುಹಿಸುತ್ತಿದ್ದರು. ಊರಿನ ಜನರ ಆಶಿರ್ವಾದ ಪರಸಪ್ಪನ ಕಳೆಯನ್ನೆ ಬೇರೆ ಕಡೆ ತಿರಿಗಿಸಿತ್ತು.

ಕಾಮ ಕಲ್ಲಿಗೆ ಸೋತ ಭೀಮ ಬಿಲ್ಲಿಗೆ ಸೋತ
ರಾವಣ ಸೋತ ರಣದಾಗ || ತಮ್ಮ
ನೀ ಸೋತೆ ಮನದಾಗ

ಹುಡಗರ ಕೂಡ ಹುಡಗನಂಗ ಲಭೋ ಲಭೋ ಅನ್ನುತ್ತ ನಡೆಯುತ್ತಿದ್ದ ಪರಸಪ್ಪನ ಸುತ್ತಲು ಒಬ್ಬೊಬ್ಬರಾಗಿ ಕೆಂಚನಗೌಡನ ಹಿಂಬಾಲಕರು ಸೇರತೋಡಗಿದರು. ಇವನ ಮ್ಯಾಲೆ ಅವರು ಅವರ ಮೇಲೆ ಇವನು ಸುರಿಯುತ್ತಿದ್ದ ನೀರು ಕೆಂಪು ಕೆಂಪಾಗಿ ಹರಿಯತೊಡಗಿತು.

ಬಯಲಿನ ಕಾಮಣ್ಣನ ಕಟ್ಟೆಗೆ ಕಾಮಣ್ಣ ಬಂದ ಕುಳಿತ ಮ್ಯಾಲ ಅವನ ಕೊನೆಯ ಪೂಜೆ ಮಾಡಲಾಕ ಮುಗಿಬಿದ್ದ ಜನ, ಕಾಮಣ್ಣನನ್ನ ಮುಟ್ಟಿ ಮುಟ್ಟಿ ನಮಿಸಿದರು. ನಂತರ ತಾವೆಲ್ಲರೂ ತಂದಿದ್ದ ಕಟ್ಟಿಗೆಯನ್ನು ಅವನ ಮೇಲೆ ಅತ್ಯಂತ ಭಕ್ತಿಯಿಂದ ಒಟ್ಟಿದರು. ಕಾಮಣ್ಣ ಚೆಂಡು ಬೀಳುವ ದಿಕ್ಕಿನಲ್ಲಿ ಮಳಿಬೆಳಿ ಈ ವರ್ಷ ಬಾಳೆಂದು ತರ್ಕಿಸಿ ಆ ದಿಕ್ಕಿನ ಕಡೆ ನೋಡುತ್ತ ನಿಂತರು. ಕಾಮಣ್ಣನನ್ನು ಸುಡಲು ಊರ ವಾರಿಯ ಮ್ಯಾಲಿನ ಕರೆವ್ವನ ಗುಡಿ ಮುಂದಿನ ಕುಂಡದಿಂದ ಬೆಂಕಿ ತರುವ ಸಂಪ್ರದಾಯವಿತ್ತು. ಕಾಮಣ್ಣನ ಅಂತಿಮ ಕಾರ್ಯಕ್ಕ ಸಿದ್ಧಗೊಂಡ ನಂತರ ಹೊಕ್ಕುಳುತ್ತ ವಾರಿಯ ಕಡೆ ಓಡುವ ಹುಡುಗರು. ಹಲಗಿ ಬಡಿದು ಉದ್ಧನೇಯ ಸಿವುಡು ಕಟ್ಟಿ, ಸಿವುಡಿನ ತುದಿಗೆ ಕೆಂಡದ ಬೆಂಕಿ ಹಚ್ಚಿಕೊಂಡು ಕಾಮಣ್ಣನ ಸುಡುವ ಜಾಗಕ್ಕೆ ಓಡಿ ಬಂದರು.

ಹಸರಂಗಿ ತೊಟ್ಟಾನ, ಬಿಸಲಾಗ ನಿಂತಾನ
ಶಶಿ ಮುಖದವನೊ ನಮ್ಮ ಕಾಮ|| ನರಳುತ
ಚಂದ್ರ ಸಾಲ್ಯಾಗ ಸತ್ತಾನೊ

ಪ್ರತಿ ವರ್ಷ ಗೌಡರು ಕಾಮಣ್ಣನಿಗೆ ಬೆಂಕಿ ಕೊಡುತ್ತಿದ್ದರು. ಐದು ಬಾರಿ ಕರೆವ್ವನ ಕೆಂಡದ ಬೆಂಕಿಯ ಸಿವುಡು ಹಿಡಿದು ಕಾಮಣ್ಣನ ಸುತ್ತಿ. ಜೋರಾಗಿ ಕೂಗಿ” ಈ ವರ್ಷ ನಮ್ಮೂರ ಕಾಯೋ ಕಾಮಣ್ಣ ,ಮಳಿ ಬೆಳಿ ಚಲೋ ಕೊಡು, ಜನರ ಕಷ್ಟ ಬಗೆ ಹರಿಸು “ ಅಂತೇಳಿ ಬೆಂಕಿ ಇಟ್ಟು ಲಭೋ , ಲಭೋ ಒಕೊಂಡು ಹೊಳ್ಳಿ ನೋಡದಂಗ ಹೋಗತ್ತಿದ್ದರು. ಈ ಹೋಳಿ ಹುಣ್ಣಿವ್ಯಾಗ ಕೆಂಚನಗೌಡ ಹೆಣೆದಿದ್ದ ಮಸಲತ್ತು ಯಾರಿಗೂ ಗೊತ್ತಾಗಲೇ ಇಲ್ಲ. ಊರ ಚೇರ್ಮನ್ನರ ಬೆಂಕಿ ಹಚ್ಚಲಿಯಂತ ದೂರ ಸರಿದುನಿಂತಿದ್ದ. ಪರಸ್ಯಾ ತಡವರಿಸುತ್ತ “ ಹೇಂಗ ಅಕೈತ್ರಿ ಗೌಡರ. ನೆಮಾ ಮುರಿದು ಬ್ಯಾಡರೀ, “ ಅಂದರು. ಕೆಂಚನಗೌಡ ಒಪ್ಪದಿದ್ದಕ್ಕ ಊರ ಮಂದಿ ಒತ್ತಾಯಕ ಮನಿದು ಧಗ ಧಗ ಉರಿಯುತ್ತಿದ್ದ ಬೆಂಕಿಯ ಸಿವಡನ್ನು ಹೆಗಲ ಮ್ಯಾಲ ತಗೊಂಡು ಕಾಮಣ್ಣನ ಸುತ್ತ ಐದು ಸುತ್ತು ಸುತ್ತ ತೊಡಗಿದ.

ಊರಿಗಣ್ಣಿನಿಂದ ಸುಟ್ಟಾನೊ ಕಾಮ
ಧರಿಸಿದ ಧವಳಂಗ ತಾಳಿದ ಪ್ರೇಮ|| ಹರನಿಗೆ
ಬಂತಾಗ ಮಾರಾಹರ ನಾಮ

ಶಿವನ ತಪಸ್ಸು ಭಗ್ನಗೊಳಿಸಲು ಹೋಗಿ ಬೂದಿಯಾಗಿ ಸುಟ್ಟ ಕಾಮಣ್ಣನ ಗುಣಗಾನದ ಹಾಡುಗಳು ಸವಾಲಿನ ರೀತಿಯಲ್ಲಿ ಬೀಳುತ್ತಿದ್ದವು. ಎಲ್ಲರ ಕೈ ಬಾಯಿಯ ಮೇಲಿತ್ತು ಅವರು ಹೋಕುಳ್ಳುವ ಸೌಂಡಿಗೆ ನೆಲವು ಅದರಿದಂತೆ ತೋರುತ್ತಿತ್ತು.

ಕಾಮಣ್ಣ ನಿಮ್ಮವ್ವ ಏನಂತ ಕರದಾಳೋ
ಬಾರೋ ನನ್ನ ಮಗನ ಪರದೇಸಿ|| ಶಿವರಾಯನ
ಸಿಟ್ಟಿಗೆ ಶಿರವ ಕೊಡಬಾರೊ

ಲಭೋ.. ಲಭೋ.. ಲಬೋ… ಲಬೋ.. ಲಭೋ… ಲಭೋ… ಲಭೋ.. ಲಭೋ…
ಕಾಮ ಸತ್ತಾನಂತ ಭೀಮ ಬೋರ್ಯಾಡತಾನು
ಮನಿಗೈದು ಕುಳ್ಳ ಕೊಡರೆವ್ವ || ಕಾಮಣ್ಣನ
ಮನ ಮೆಚ್ಚಿ ಕಿಚ್ಚ ಕೊಡತೇನು.

ಕಾಮಣ್ಣನಿಗೆ ಕಿಚ್ಚ ಹಚ್ಚುವ ಸಾಲಿನಲ್ಲಿ ಪರಸ್ಯಾನೇ ಮುಂದಿದ್ದ. ಸುತ್ತಲು ನೆರೆದ ಜನರು ಗೊಜ್ಜುತ್ತಿದ್ದ ಬಣ್ಣದ ನೀರು ಇವನ ತಲೆಯ ಮೇಲೆ ಧಳ ಧಳ ಹರಿಯುತ್ತಿತ್ತು. ಕೆಂಪು, ಹಸಿರು , ಹಳದಿ , ಕರಿ ಬಣ್ಣದ ವಾಸನೆಯನ್ನು ಕುಡಿದು ಕುಡಿದು ಮೂಗು ಕೆಟ್ಟು ವಾಸನೆಯ ಬರದಂತೆ ಆಗಿತ್ತು. ಮೊದಲೆ ಮೋಸದ ದಾಳ ಹಾಕಿದ್ದ ಕೆಂಚನಗೌಡನ ಪುಡಾರಿಗಳೆಲ್ಲಾ ಇವನ ಮೇಲೆ ಬಣ್ಣ ಎರುಚತ್ತಲೆ ಇದ್ದರು. ಇವರ ಗದ್ದಲ, ಹಲಗಿಯ ನಾದ, ಓಕೊಳ್ಳುವ ಹುಡಗರ ಹುರುಪು ಸವಾಲಿನ ಪದ ನೆತ್ತಿಯ ಮೇಲೆ ಸುರಿಯುತ್ತಲೇ ಇದ್ದ ಕೆಂಪು ಬಣ್ಣವನ್ನು ಒರೆಸಿಕೊಳ್ಳುತ್ತ ಕಾಮಣ್ಣನಿಗೆ ಕೈ ಮುಗಿದ ಪರಸ್ಯಾ ಕಾಮಣ್ಣನಿಗೆ ಬೆಂಕಿ ಇಟ್ಟ.

ಬಿದ್ದಾನೋ ಕಾಮಣ್ಣ ಬಿಳಿ ಅಂಗಿ ಮೇಲಾಗಿ
ಒದ್ದಾಡತಾನೋ ಶಿವನೆದರು|| ಕಾಮಣ್ಣ
ಬಿದ್ದಲ್ಲೆ ಬೂದಿ ಆದಾನೋ

ಧಗ ಧಗ ಬಗ್ಗನೆ ಹತ್ತಿದ ಬೆಂಕಿ ಭರ ಭರ ಉರಿಯತೊಡಗಿತು. ಕೆಂಪು ಧೂಳು ಮುಗಿಲಿಗೆ ಬಡಿಯತೊಡಗಿತು. ಕೆಂಗಂಗ ಗುಡುಗುಡು.. ಕೆಂಗೆಂಗ ಗುಡುಗುಡು ಒಂದೆ ಸವನೆ ಬಡಿಯುತ್ತಿದ್ದ ದಪ್ಪಿನ ನಾದದಲ್ಲಿ, ಲಬೋ ಲಭೋ, ಚೀರಾಟದ ಸದ್ದಿನಲ್ಲಿ ಉರಿದು ಉರಿದು ಬೀಳುತ್ತಿದ್ದ ಕಾಮಣ್ಣನ ಕಟ್ಟಿಗೆಯಲ್ಲಿ ಬೇಯುತ್ತಿದ್ದ ಪರಸ್ಯಾನ ಅಯ್ಯೋ.. ಅಯ್ಯೋ.. ಕಾಪಾಡಿ.. ಕಾಪಾಡಿ.. ಕಿರು ದನಿ ಕೇಳಿಸಲೆ ಇಲ್ಲ.

ಕೆಂಚನಗೌಡನ ಮುಖದ ಮ್ಯಾಲೆ ವ್ಯಂಗ್ಯ ತುಂಬಿ ತುಳುಕುತ್ತಿತ್ತು. ಬಣ್ಣಗೊಜ್ಜುವ ನೆಪದಲ್ಲಿ ಪರಸ್ಯಾನ ನೆತ್ತಿಗೆ ಸುರುವಿದ್ದ ಪೆಟ್ರೋಲ್ ಕೆಲಸ ಮಾಡಿತ್ತು . ಈ ಗದ್ದಲದ ನಡುವೆ ಯಾವದನ್ನು ಗಮನಿಸದೆ ಕಾಮಣ್ಣನಿಗೆ ಕಿಚ್ಚು ಹೊತ್ತಿಸಲು ಹೋದ ಪರಸ್ಯಾನ ಮುಗ್ಧತೆ ಕಾಮಣ್ಣನ ಕೂಡ ಬಗ್ ಬಗ್ ಉರಿಯುತ್ತಿತ್ತು.

ಸಿಟ್ಟಮಾರಿಯ ಶಿವನ ದಿಟ್ಟಿಸಿ ನೋಡ್ಯಾನು
ಕಾಮ ಬಿಟ್ಟಾನ ಬೆವರ ಎದಿಮ್ಯಾಗ|| ಪಾರ್ವತಿಯ
ದಟ್ಟಿ ಸೆರಗಿಡದು ನಡೆದಾನೊ

ಪರಸ್ಯಾನ ದೇಹ ಉರಿದು ಉರಿದು ಬೀಳುವ ಸನ್ನಿವೇಶ ನೋಡಿ. ಹಲಗಿ, ಕುಣಿತ, ಲಭೋ ಲಭೋ ಸೌಂಡು, ಹಾಡಿನ ದನಿ ಒಮ್ಮಲೇ ನಿಂತವು. ಹೌಹಾರಿದ ಜನ ದಿಕ್ಕು ತೋಚದೆ ಬೋರಾಡಿ ಚೀರತೋಡಗಿದರು ಅವರು ನೀರು ಗೊಜ್ಜುವ ಹೊತ್ತಿಗೆ ಕಾಮಣ್ಣನ ಚೆಂಡು, ಪರಸ್ಯಾನ ದೇಹ ಎರಡು ಬೂದಿಯಾಗಿದ್ದವು.

ಅತ್ತಾಳೋ. ಕರೆದಾಳೋ.. ಮತ್ತೇನ ಕೇಳ್ಯಾಳೊ
ಮುತ್ತಿನ ಮೂಗುತಿ ಮಣಿಸರ|| ಮ್ಯಾಲೊಂದು
ಕುತ್ತಿಗೆ ಬೀಳುವ ಕಂದನ

ಪರಸ್ಯಾ ಕಾಮಣ್ಣನ ಬೆಂಕಿ ಕೂಡ ಬೆಂಕಿಯಾದ ಸುದ್ದಿ ಮಾದೇವಿಯ ಕಿವಿಗೆ ಬೀಳುವದು ತಡವಾಗಲಿಲ್ಲ. ಹೌಹಾರಿ ಓಡಿಬಂದಳು. ಕೆಂಡದ ಕಿಚ್ಚಿನಲ್ಲಿ ಹಾರಲು ಹಂಬಲಿಸಿದಳು. ಸುಡುತ್ತಿದ್ದ ಬೂದಿಯ ತೂರಿ ತೂರಿ ಬೋರಾಡಿ ಅತ್ತಳು. ಕಾಮಣ್ಣನ ಶಪಿಸಿ. ಊರಳಾಡಿ ಊರಳಾಡಿ ಚೀರಾಡಿ ಚೀರಾಡಿ ಬಿಕ್ಕಿ ಬಿಕ್ಕಿ ಬಾಯಿಬಿದ್ದು ಕಂಪಿಸಿದಳು.

ಕಟಮಳ್ಳಿಯ ಜನರಿಗೆ ಈ ವರ್ಷದ ಹೋಳಿ ಹುಣ್ಣಿಮೆ ಕರಾಳ ದಿನವಾಗಿತ್ತು. ಕರಿ ಹರಿದ ಜನರ ಸಂತಸವೆಲ್ಲಾ ಮಾಯವಾಗಿತ್ತು. ಅವರ ದುಃಖದ ಕಟ್ಟೆ ಒಡೆದು ಹೋಗಿತ್ತು. ಇದು ಹೇಂಗಾತು, ಯಾರ ಏನ ಮಾಡಿದರು. ಆಂವ ಹೇಂಗ ಅಷ್ಟ ಮೈಮರೆತ ಯಾವ ಪ್ರಶ್ನೆಗಳಿಗೂ ಉತ್ತರ ಇರಲಿಲ್ಲ. ಈ ದರುಂತ ಮರೆಯಲು ಅವರಿಗೆ ವರ್ಷಗಳೇ ಬೇಕಾಗಿತ್ತು. ಪರಸ್ಯಾನಂತ ಪುಣ್ಯಾತ್ಮ ಆತ್ಮ ಮರಗಿ ಮರಗಿ ಸತ್ತ ನೋವು ಈಡೀ ಊರ ಮ್ಯಾಲ ನೆರಳಾಗಿ ಬಿದ್ದಿತ್ತು.

** ** ** ** ** ** ** ** ** ** **
ರಂಡಿಮುಂಡಿಯಾದ ಮಾದೇವಿಯ ಮನೆಯ ಹೊಸ್ತಿಲ ಮ್ಯಾಲ ಬೀಳುತ್ತಿದ್ದ ಸೂರ್ಯನ ಕಿರಣಗಳಿಗೆ ಆಯುಷ್ಯ ಕಡಿಮೆಯಾಗುತ್ತ ಬರುತ್ತಿತ್ತು. ಕಾಲ ಕಳೆದಂತೆ ಪರಸ್ಯಾ ಊರಿನ ಜನರ ಬಾಯಲ್ಲಿ ದಂತಕಥೆಯಾಗಿ ಮರೆತುಹೋದ. ಹೋಳಿ ಹುಣ್ಣಿಮೆಯ ಆ ಬಣ್ಣದ ಧೂಳು ಮಾತ್ರ ಆಕೆಯ ಕಣ್ಣಲ್ಲಿ ಕಣ್ಣೀರಾಗಿ ಹರಿಯುತ್ತಲೆ ಇತ್ತು. ದಿನ ಕಳೆದಂತೆ ಮಾದೇವಿಯ ಕಿವಿಗೆ ಬಿದ್ದ ಸುದ್ಧಿ ಆಕೆಯ ಎದೆಯ ಓಟವನ್ನೆ ನಿಲ್ಲಿಸದಂತಾಗಿತ್ತು. ಪರಸ್ಯಾನ ಸಾವು ಆಕಸ್ಮಿಕವಲ್ಲ, ಕೆಂಚನಗೌಡನ ಮೋಸದ ಬಲಿಯೆಂದು ಖಾತ್ರಿಯಾದ ಮ್ಯಾಲ ಆಕೆಯ ದ್ವೇಷದ ಜ್ವಾಲೆ ಸುಡುತ್ತಿತ್ತು.

ಪರಸ್ಯಾ ಸತ್ತ ಮ್ಯಾಲ ಈಕೀಯ ಮ್ಯಾಲ ಕಣ್ಣಿಟ್ಟಿದ್ದ ಕೆಂಚನಗೌಡನ ಆಸೆ ಇನ್ನೂ ಕಡಿಮೆಯಾಗಿರಲಿಲ್ಲ, ಅವಾಗೀವಾಗ ಮಾದೇವಿ ಎದುರಬದುರಾದಾಗ “ ಸತ್ತ ಹೆಣಕ್ಕ, ಮುಗಿಯುವ ಹರೆಕ್ಕ ಎಷ್ಟಸಿಂಗಾರ ಮಾಡಿದರೇನು, ಇದ್ದಾಗ ಇಲ್ಲದ್ದು ಮುಂದ ತಗೊಂಡ ಏನ ಮಾಡತಿ, ವಿಚಾರ ಮಾಡು ಕುಲು ಕುಲು ನಗುವಂತ ನೆನಪ ಕೊಡತೇನಿ” ದುರುಗುಟ್ಟಿ ನೋಡುತ್ತಿದ್ದ ಆಕೆಯ ಕಣ್ಣು ಇತ್ತಿಚಿಗೆ ಹೊಂಚು ಕಾಣುವ ಕನಸು ಕಾಣುತ್ತಿತ್ತು. ಜೇಡ ಬಲಿ ಹೆಣದಂಗ ಅಕಲ ಹಾಕೊತ್ತ ಕುಳಿತಳು.

ಗೌಡ ಕೇಣಕಿದಾಗೊಮ್ಮ ದುರುಗುಟ್ಟತ್ತಿದ್ದ ಮಾದೇವಿ ಇತ್ತಿಚಿಗೆ ತನ್ನ ವಾಂಛೆ ಬದಲಿಸಿಕೊಂಡಿದ್ದಳು. ಕೆಂಪಗಿದ್ದ ಕಣ್ಣಲ್ಲಿ ನಾಚಿಕೆ ಸುಳಿದಾಡುತ್ತಿತ್ತು. ಗಲ್ಲದ ಬಣ್ಣ ಕೆಂಪಗಾಗುತ್ತಿತ್ತು. ತುಟಿಕಚ್ಚಿ ಹುಬ್ಬುಹಾರಿಸುವದನ್ನು ಕಲಿತಿದ್ದಳು. ಒಂದೆರಡು ಸಾರಿ ಗೌಡ ಕೈಹಿಡಿದು ಜಗ್ಗಿದರು ಪ್ರತಿಭಟಿಸದೆ ನಲಿಯುತ್ತಾ ಬಂದಿದ್ದಳು. ಮಾದೇವಿ ತನ್ನ ಹದಕ್ಕ ಬಂದಿದ್ದ ತಿಳಿದು ಗೌಡ ಕುಲು ಕುಲು ನಗುತ್ತಿದ್ದ.

ಮತ್ತ ಕಟಮಳ್ಳಿ ಊರು ಸುಗ್ಗಿ ಮುಗಿಸಿ ಹೋಳಿ ಹುಣ್ಣಿಮೆಯ ತಯಾರಿ ನಡೆಸಿತ್ತು. ಆದರ ಕೆಂಚನಗೌಡನ ಕಣ್ಣ ತುಂಬ ಮಾದೇವಿಯ ರೂಪದ ಹುಚ್ಚು ಕುಣಿತ್ತಿತ್ತು.

ಅಡಕಿ ಬಣ್ಣದ ಸೀರಿ ಅವರಿ ಹೂವಿನ ಕುಬಸ
ಹೆಡಕಿನ ಮ್ಯಾಲ ಮುಗಿದುರುಬ || ಕಟಗೊಂಡು
ಖಡಕೀಲೆ ನೀರು ತರತಾಳು.

ಹೋಳಿ ಹುಣ್ಣಿಮೆಯ ಪದಗಳು ಮೋಹ ಬೆಳಸಿಕೊಂಡಿದ್ದ ಗೌಡ್ರು ಧಾರು ನೆತ್ತಿಗೇರಿದಾಗೆಲ್ಲಾ ಮಾದೇವಿಯನ್ನು ನೆನಸಿಕೊಂಡು ಹಾಡುವುದು ಜಾಸ್ತಿಯಾಗಿತ್ತು. ಅವನ ಹರೆ ಮತ್ತೆ ಮರಳಿ ಕ್ಯಾಕಿ ಹಾಕುತ್ತಿತ್ತು.

ಊರತುಂಬ ಹುಣ್ಣಿಮೆ ಚಂದ್ರನ ಬೆಳಕಿತ್ತು. ದುರ್ಗ್ಯಾ ಬಡಿಯುತ್ತಿದ್ದ ಹಲಗಿಯ ಸಪ್ಪಳ ಊರತುಂಬ ಕೇಳಿಸುತ್ತಿತ್ತು. ಕರಿ ಹರಿದು ಕಾಮ ಸುಡುವ ಹಿಂದಿನ ರಾತ್ರಿ ಒಳ್ಳ ತುಂಬ ಪುಡಿ ಕುಟ್ಟಿ ತಗೆಯುತ್ತಿದ್ದ ಮಾದೇವಿ. ಕರಿ ಕಂಬಳಿ ಬೀಸಿ ಬಲಿ ಹೊಗೆದಳು. “ ಯಾರಿಲ್ಲ ಮನೆಯಾಗ ಬಂದ ಹೋಗಂತ “ಗೌಡರಿಗೆ ಹೇಳಿ ಕಳುಹಿಸಿದಳು

ಕತ್ತಲ ಮನಿಯಾಗ ಬತ್ತಲೆ ನಿಂತಾಳೊ
ಕತ್ತಿವರಿಯಂತ ಕರಿ ಹುಡುಗಿ|| ಕಾಲಾಗ
ಬತ್ತಿ ಬಿದ್ದಾವೊ ಹೊಲಮನಿ

ಹಬ್ಬದ ಖುಷಿಯಲ್ಲಿ ರಾತ್ರಿಯ ನಿಶೆಯಲ್ಲಿ ತೇಲುತ್ತಿದ್ದ ಕೆಂಚನಗೌಡ ಈ ಮಾತು ಕೇಳಿ ಇನ್ನಷ್ಟು ಮದಗೊಂಡ ರೊಟ್ಟಿ ಜಾರಿ ತುಪ್ಪದಾಗ ಬಿದ್ದ ಖುಷಿಯಲ್ಲಿ ತೇಲಿಹೋದ. ತನ್ನ ಜರಕಿ ಚಪ್ಪಲಿಯ ಸಪ್ಪಳ ಯಾರಿಗೂ ಕೇಳದಂತೆ ಅವುಗಳನ್ನು ಬಗಲಲ್ಲಿ ಇಟಗೊಂಡು ಮಾದೇವಿ ಹಿತ್ತಲ ಬಾಗಿಲು ತಟ್ಟಿದ. ಅವಳು ಅಗಳಿಯ ಸರಿಸಿ ಬಾಗಿಲು ತೆರೆದಳು. ಗೌಡನ ಕಪಿ ಮುಷ್ಟಿಯಲ್ಲಿ ಮಾದೇವಿಯ ದೇಹ ನರಳುತ್ತಿತ್ತು.

ಊರ ಮುಂದಿನ ತ್ವಾಟ ನೀ ಮಾಡೊ ನನ್ನ ಗೆಣೆಯ
ನೀರ ತರಲಾಕ ಬರತೀನಿ || ನೀನಗೂಡ
ಯಾರಿಲ್ಲದಾಗ ಇರತೇನಿ

ಕೆಂಚನಗೌಡನ ಉನ್ಮಾದದ ಬಿಗಿಹಿಡಿತ ಜೋರಾದಂತೆ ಮಾದೇವಿ ಆತನನ್ನು ರಮಿಸುತ್ತ ಅವನನ್ನು ತನ್ನ ತೊಳ ತೆಕ್ಕೆಯಲ್ಲಿ ತಗೆದುಕೊಂಡು ಆವರಿಸಿಕೊಂಡಳು.
ಹಸರ ಕುಬಸದ ಮ್ಯಾಲ ಎಳಸ ಕೂದಲ ಬಿಟ್ಟು
ಕುಸ ಮೋಜಿನ ನಗಿಯ ನಗತಾಳೋ|| ನಿನ್ನಂಥ
ಕಸಬರಿಗೆಗೆ ಹೇಂಗ ಒಲಿತಾಳೊ

ಹಂಡೇದ ತುಂಬ ಬಿಸಿನೀರು ಕಾಯಿಸಿದ ಮಾದೇವಿ. ನಾಳೆ ಪ್ಯಾಟಿ ಕಾಮನ್ನ ಬರುವಾಗತೇಟ ಹುಣ್ಣೀಮಿ ಚಂದ್ರನಂಗ ನೀ ಕಾಣಬೇಕು. ಗೌಡನ ನೆತ್ತಿಯ ಮ್ಯಾಲ ಕೈಯಿಟ್ಟು ಎಣ್ಣೆಯ ಸುರುವಿದಳು. ಆಕೆಯ ಸ್ಪರ್ಶದ ಮೋಹದಲ್ಲಿ ಮುಳುಗೆದ್ದ ಕೆಂಚನಗೌಡ .ಬಟ್ಟೆ ಕಳೆದು ಬರಿಮೈಲ್ಲಿ ಅವಳ ಮುಂದೆ ಕುಳಿತ. ಆತನ ಕೈ, ಮುಖ, ಕಾಲು, ನೆತ್ತಿ ಮತ್ತು ಬೆರಳಗಳನೆಲ್ಲಾ ತಿಕ್ಕಿ ತಿಕ್ಕಿ ಮಸಾಜು ಮಾಡುತ್ತಿದ್ದ ಮಾದೇವಿಯ ಕಸುವಿನ ಕಡತಕ್ಕ ಗೌಡನ ಗತ್ತು ತಕ ತಕ ತೊಳೆದು ಹೋಗುತ್ತಿತ್ತು. ಏಲೆ ಅಡಕಿಗೆ ಸುಣ್ಣ ಬೆರಿಸಿ ಆತನ ಬಾಯಿಗಿಟ್ಟ ಮಾದೇವಿ. ಗೌಡನ ಉದ್ರೇಕಗೊಳಿಸಿ ಆತನ ದೇಹಕೆಲ್ಲಾ ಅರಿಸಿಣದ ಲೇಪ ಬಡಿಯುವ ನೆಪದಲ್ಲಿ ಅರಿದು ಅರಿದು ಇಟ್ಟಿದ್ದ ರಾಸಾಯನಿಕಗಳನ್ನು ಬೆರಸಿ ಬಡಿದಳು

ಎರಿಯ ಹೊಲದಾಗಿನ ಎಳೆಯ ಸವತಿಕಾಯಿ
ಹರಿಯಂದರ ಹೆಂಗ ಹರಿಯಲಿ || ನನ್ನ ಗೆಣೆಯಾ
ಮುರಿಯಂದರ ಹೆಂಗ ಮುರಿಯಲಿ

ತನ್ನ ಆಸೆ ತೀರುವವರೆಗೆ ಮಾದೇವಿಯ ಮಾದೇವಿಯ ತೆಕ್ಕೆಯಲ್ಲಿ ಉಸಿರು ಹಾಕಿದ. ತನ್ನ ಆಯಾಸ ಕಡಿಮೆ ಮಾಡಿಕೊಳ್ಳಲು ಏಣ್ಣೆ ಸ್ಥಾನ ಮಾಡಿಸಿವಂತೆ ಹಂಬಲಿಸಿದ ಮತ್ತೆ ಮತ್ತೆ ಅವನ ತಲೆಗೆ ಎಣ್ಣೆ ಹಚ್ಚಿ ತಿಕ್ಕಿದ ಮಾದೇವಿ. ತಾನು ಅರಿದು ಇಟ್ಟಿದ್ದ ಗ್ಲಿಸರಿನಿನ ರಾಸಾಯನಿಕಗಳನ್ನು ಅತ್ತರಿನ ಎಣ್ಣೆಯೆಂದು ಅವನ ತಲೆಗೆ ಹಚ್ಚಿ ಅವನ ಎರೆದಳು.

ನಾಯಿಯ ಕೊರಳಾಗ ನಾಲ್ಕೇಳಿ ಸರಪಳಿ
ನಾಳಿಗಿ ಕಾಮಣ್ಣನ ಹುಲಿಬ್ಯಾಟಿ|| ಆಡುವಾಗ
ನಾನೂರ ನವಿಲು ಕುಣಿದಾವು.

ನಸುಕಿನ ಮಂದ ಬೆಳಕಿನಲ್ಲಿ ಯಾರಿಗೂ ಕಾಣದಂತೆ ಮಾದೇವಿಯ ಮನೆಬಿಟ್ಟ ಕೆಂಚನಗೌಡನ ಮನದ ತುಂಬ ಖುಷಿ ತುಂಬಿ ತುಳುಕುತ್ತಿತ್ತು. ತನ್ನ ಆಸೆ ಈಡೇರಿದ ಗುಂಗಿನಲ್ಲಿ ತೇಲಾಡುತ್ತ ಬಂದ. ಕಾಮಣ್ಣನ ಮೆರವಣಿಗೆಯು ಪ್ರತಿವರ್ಷದಂತೆ ಈ ವರ್ಷವೂ ಊರ ಬಯಲಿಗೆ ಬಂದಿತ್ತು. ಬಣ್ಣದ ನೀರು, ದಪ್ಪಿನ ಸಪ್ಪಳ, ಜನರ ಕೂಗಾಟ. ಸವಾಲಿನ ಹಾಡಿನ ನಡುವೆ ತುಂಬಾ ಖುಷಿ ಖುಷಿಯಾಗಿ ಕುಣಿಯುತ್ತಿದ್ದ ಕೆಂಚನಗೌಡ ತನ್ನ ಗೌಡಕಿಯ ದರ್ಪದಲ್ಲಿ ಕಾಮಣ್ಣನ ಸುಡುವ ದಂಟಿನ ಸಿವುಡು ಹೊತ್ತು, ಕಾಮಣ್ಣನ ಸುತ್ತಲು ಐದು ಸುತ್ತು ತಿರಗುತ್ತಿದ್ದ. ಲಭೋ…ಲಭೋ.. ಲಭೋ.. ಕೂಗು ಕೇಳಿಸುತ್ತಲೆ ಇತ್ತು. ಕಾಮಣ್ಣನ ಕಣ್ಣಿಂದ ಸಿಡಿದ ಕಿಡಿ ಕೆಂಚನಗೌಡನ ತಲೆಯ ಮೇಲೆ ಸಿಡಿಯಿತು. ಮಾದೇವಿ ತವರಿದ್ದ ರಾಸಾಯನಿಕಗಳು ಕೆಲಸ ಆರಂಭಿಸಿದವು. ಗೌಡನ ತಲೆ ಸಿಡಿಯತೊಡಗಿತು ಬಗ್ ಬಗ್ ಬೆಂಕಿಯ ಕಿಡಿ ಆತನ ದೇಹವನ್ನು ಆವರಿಸಿ ಸುಡತೊಡಗಿತು. ಆತನ ಕೂಗು ಕೇಳಿಸದಂತೆ ದುರ್ಗ್ಯಾ ಹಲಗಿ ಬಡಿಯುತ್ತಲೆ ಇದ್ದ. ಬಣ್ಣದ ಧೂಳು ಹಾರಾಡುತ್ತಲೆ ಇತ್ತು. ಇಮಾಮನ ದೊಡ್ಡ ದನಿ ಪದ ಹಾಡುತ್ತಿತ್ತು ಕಾಮಣ್ಣನ ಚೆಂಡು ನಗುತ್ತ ಬೀಳುತ್ತಿತ್ತು.

ಹಂಡ ಬಂಡದ ಕೌದಿ ಹಾಸಂದರ ಹಾಸ್ಯಾಳ
ದುಂಡ ಮಲ್ಲಿಗೆ ಮುಡಿದಾಳ || ಎದಿಮ್ಯಾಲ
ಚೆಂಡ ಆಡಿದಂಗ ಆಡ್ಯಾಳು

ಆನಂದ ಭೋವಿ

ಸವದತ್ತಿ ತಾಲೂಕಿನ ಉಗರಗೋಳದ ಆನಂದ ಭೋವಿಯವರು ಸದ್ಯ ನರಗುಂದ ತಾಲೂಕಿನ ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಪ್ಪತ್ತು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಾಗಿ ಹಾಗೂ ಪ್ರೌಢಶಾಲಾ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ.

“ಮುತ್ತು ಕಟ್ಯಾಳ ನಮ್ಮವ್ವ”  2014ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪುರಸ್ಕೃತಗೊಂಡ ಕಥಾಸಂಕಲನ. ‘ಹಿಡಿ ಮಣ್ಣಿನ ಬೊಗಸೆ’ ಕಥಾಸಂಕಲನ, ‘ಸುಮ್ಮನಿರದ ಗಜಲ್’ ಕವನ ಸಂಕಲನ ಪ್ರಕಟಗೊಂಡಿವೆ. 2015ರಲ್ಲಿ ಬೇಂದ್ರೆ ಗ್ರಂಥ ಬಹುಮಾನ ದೊರಕಿದೆ. ಹಲವಾರು ಕತೆ ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಹಲವು ಕತೆಗಳು ಬಹುಮಾನ ಪಡೆದಿವೆ. ಚಿಕ್ಕುಂಬಿ ಮಠದಿಂದ ಅಜಾತಶ್ರೀ ಪ್ರಶಸ್ತಿ ಸಮ್ಮಾನ. ಸವದತ್ತಿಯ ರಂಗ ಆರಾಧನಾ ತಂಡದಿಂದ ಇವರ ‘ಬಿಳುಪಿನ ಹೆಣ’    ‘ಕಲ್ಲೂರು ವಾಡೆದಾಗ’ ‘ಮಣ್ಣು’ ‘ಬಿರವ್ವನ ಬಾಳೆಹಣ್ಣು’ ಕತೆಗಳು ನಾಟಕಗಳಾಗಿ ಪ್ರದರ್ಶನಗೊಂಡಿವೆ.

More About Author