Poem

ಇಹಪರದ ಕೊಳ  

 

ಸಂಭ್ರಮಿಸಿ ತೆರೆಗಳನ್ನು ಎಬ್ಬಿಸಿದೆ ಆ ಕೊಳ
ದಡದಿಂದ ಕೆಳಗಿಳಿದಾಗ ಬಾತುಗಳು
ಕೊಳದಲ್ಲಿ ಅರಳಿದ್ದ ಕಮಲಗಳಿಗೆ ಕನಸು
ಬಾತುಗಳೊಂದಿಗೆ ಏರಬಹುದು ತಾವೂ ದಡವನ್ನು


ಬಾತುಗಳು ಯಾವುವು ಕಮಲಗಳು ಯಾವುವು
ತಿಳಿಯದ ಮೌನವಾಯಿತು ಕೊಳ ಒಂದು ಕ್ಷಣ
ಮರುಗಳಿಗೆಯಲ್ಲಿ ಬಿಂಬ ಪ್ರತಿಬಿಂಬವಾಗಿ ಒಂದು ಇನ್ನೊಂದಕ್ಕೆ
ಬೆಳದಿಂಗಳೇ ಇಳಿದು ಮಿಂದಂತೆ ಕೋಳದಗಲ


ಕತ್ತಲಾದೊಡನೆ ಬಾಡಿದುವು ಎಲ್ಲ ಕಮಲಗಳು
ಬಾತುಗಳ ಕನಸುಗಳು ಕಮಲಗಳ ಜೊತೆಗೆ
ಕೊಳದ ಬೆಳದಿಂಗಳಲಿ ಪ್ರತಿಫಲಿಸಿದಂತೆ ದಡ
ಚಂದ್ರನ ಮುಖವ ನೇವರಿಸುತ್ತಿದ ನೆಲದ ಗರಿಕೆ

ಕಲೆ : ಡಿ. ಎಸ್‌. ಚೌಗಲೆ

ನಾ. ಮೊಗಸಾಲೆ

ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ  ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ.

ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ಮಕ್ಕಳು, ಅನಂತ, ಕನಸಿನ ಬಳ್ಳಿ, ನನ್ನದಲ್ಲದ್ದು, ಪಲ್ಲಟ, ಹದು. ಪ್ರಕೃತಿ, ನೆಲಮುಗಿಲುಗಳ ಮಧ್ಯೆ, ದಿಗಂತ, ದೃಷ್ಟಿ, ಉಪ್ಪು, ತೊಟ್ಟಿ, ಪಂಥ, ಅರ್ಥ, ಉಲ್ಲಂಘನೆ. ಮುಖಾಂತರ, ಧಾತು (ಕಾದಂಬರಿಗಳು), ಆಶಾಂಕುರ, ಹಸಿರುಬಿಸಿಲು, ಸುಂದರಿಯ ಎರಡನೇ ಅವತಾರ. ಸೀತಾಪುರದ ಕಥೆಗಳು, ಸನ್ನಿಧಿಯಲ್ಲಿ ಸೀತಾಪುರ (ಕಥಾ ಸಂಕಲನಗಳು), ಸೀತಾಪುರದಲ್ಲಿ ಕತೆಗಳೇ ಇಲ್ಲ (ಸಮಗ್ರ ಕಥಾ ಸಂಕಲನ) ಬಿಸಿಲಕೋಲು (ವ್ಯಕ್ತಿಚಿತ್ರಗಳ ಸಂಗ್ರಹ) ಪ್ರಕಟಿತ ಕೃತಿಗಳು.

More About Author