Poem

ಇಂಡಿಯಾ ಮತ್ತು ಈರುಳ್ಳಿ

ಈರುಳ್ಳಿ ಸುಲಿಯುತ್ತಿದ್ದೆ
ಗೆಳೆಯ ಹೇಳುತ್ತಿದ್ದ;
ಮುಸ್ಲಿಮರನ್ನು ಮುಗಿಸಬೇಕು
ಒಂದು ಸಿಪ್ಪೆಯೆ ತೆಗೆದೆ
ಕ್ರೈಸ್ತರನು ಕಳಿಸಬೇಕು
ಇನ್ನೊಂದು ತೆರೆದೆ
ಹಿಂದುಳಿದವರನ್ನೂ ಹಿಮ್ಮೆಟ್ಟಿಸಬೇಕು
ಮತ್ತೊಂದು ತೆರೆದೆ
ದಲಿತರನ್ನು ದಮನಿಸಬೇಕು
ಮತ್ತೂ ತೆರೆದೆ
ಹೆಂಗಸರ ಹೆಡೆಮುರಿ ಕಟ್ಟಬೇಕು
ಇನ್ನೊಂದು ಸುಲಿದೆ
ಹೀಗೇ ನಾ ತೆರೆಯುತ್ತ ಹೋದ
ಕೊನೆಗೆ ಉಳಿದಿದ್ದು
ನನ್ನ ಅವನ ಕಣ್ಣುಗಳಲ್ಲಿ
ನೀರು ಮಾತ್ರ.

- ರಾಜು ಹೆಗಡೆ

ರಾಜು ಹೆಗಡೆ

ರಾಜು ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದವರು. 1964 ರ ಜುಲೈ  17ರಂದು ಜನಿಸಿದರು.  ಶಿರಸಿಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ರಾಜು ಹೆಗಡೆ, ಮನುಷ್ಯ ಸಂಬಂಧಗಳ ಬದಲಾಗುವ ಭಾವಗಳನ್ನು ಕುರಿತು ಕಥೆ ಕವನ ಬರೆಯುವುದರಲ್ಲಿ ವಿಶೇಷ ಆಸಕ್ತಿ ವಹಿಸುತ್ತಾರೆ.

ಪ್ರಕಟಿತ ಕೃತಿಗಳು- ಪಾಯಸದ ಗಿಡ, ಅಂಗಳದಲ್ಲಿ ಆಕಾಶ, ಟೊಂಗೆಯಲ್ಲಿ ಸಿಕ್ಕ ನಕ್ಷತ್ರ (ಕವನ ಸಂಕಲನಗಳು), ಅಪ್ಪಚ್ಚಿ (ಕಥಾ ಸಂಕಲನ), ಹಳವಂಡ (ಲಘು ಬರಹಗಳ ಸಂಕಲನ), ಗಿರೀಶ್ ಕಾರ್ನಾಡರ ಸಮಗ್ರ ನಾಟಕಗಳ ಸಮೀಕ್ಷೆ (ವಿಮರ್ಶೆ), ಜಿ.ಎಸ್. ಅವಧಾನಿ ಕವಿತೆಗಳು (ಸಂಪಾದನೆ).

 

More About Author