Poem

ಇಣುಕು

ನೋಡ್ತಾ ಇದ್ವಿ ನಾನು, ನನ್ನಾಕೆ
ಮಹಡಿಯ ಕಿಟಕಿಯ ಮೂಲಕ
ಕೆಳಗಡೆ ಮೇಸ್ತ್ರಿಯ ಮನೆ ಮುಂದೆ
ನಡೀತಿತ್ತು ಒಂದು ನಾಟಕ

ಸಂಜೆ ಹೊತ್ತು, ಅವ ಬಂದಿದ್ದಾನೆ
ಎಂದಿನಂತೆ ತೂರಾಡುತ್ತ
ಅವನ ಕೈಯಲ್ಲಿ ಪುಟ್ಟ ಚೀಲವಿದೆ,
ಏನೇನೋ ತುಂಬಿ ತುಳುಕುತ್ತ.

ಬಾಗಿಲಲ್ಲಿ ರಣಚಂಡಿಯ ಹಾಗೆ
ನಿಂತಿದ್ದಾಳೆ ಹೆಂಡತಿ
ಅವಳ ತೊಡೆಯನ್ನು ಅವಚಿ ನಿಂತಿದೆ
ಒಂದು ಪುಟ್ಟ ಹುಡುಗಿ.

ಒಳಗೆ ಬರದಂತೆ ತಡೆಯುತ್ತಿದ್ದಾಳೆ
ಅವನ ಹಿಂದಕ್ಕೆ ತಳ್ಳಿ;
ಅವನು ಏನೋ ಅಂಗಲಾಚುತ್ತಿದ್ದಾನೆ
ಚೀಲವ ಮುಂದಕ್ಕೆ ಚಾಚಿ.

ಅಂದಳು ನನ್ನಾಕೆ, “ಇನ್ನು ನಡೆಯದು
ಅವನ ಇಂಥ ಕಳ್ಳಾಟ;
ರೋಸಿಹೋಗಿದ್ದಾಳೆ ಸಹಿಸೀ ಸಹಿಸೀ
ದಿನನಿತ್ಯದ ಕಾಟ”

ನಾನೆಂದೆ, “ಅವ ಕುಡುಕನಿರಬಹುದು,
ಆದರೆ ಕೆಡುಕನಲ್ಲ;
ಹೆಂಡತಿ, ಮಗಳಿಗೆ ಅಕ್ಕರೆಯಿಂದ
ಏನೋ ತಂದಿರುವನಲ್ಲ?”

ಅಂದಳು ನನ್ನಾಕೆ, ತುಟಿಯ ಕೊಂಕಿಸಿ,
“ಯಾರಪ್ಪನ ಮನೆ ಗಂಟು?
ಅವನು ದುಡಿದದ್ದೆ? ಅವಳ ಪರ್ಸಿಂದ
ಕದ್ದು ಎಗರಿಸಿದ್ದು.

ಹೊರಗಟ್ಟಬೇಕು ಅವನನ್ನು ಅವಳು
ಇನ್ನಾದರೂ ಸೋಲದೆ;
ದುಡಿಯುವ ಹೆಣ್ಣು, ಅವನ ಹಂಗೇಕೆ?
ಏಗಿದ್ದು ಸಾಲದೆ?”

ಅಷ್ಟರಲ್ಲಿ ಅವ ಚೀಲವ ಚಾಚಿ
ಮಗಳ ಬಳಿಗೆ ಕರೆದ;
ಅವಳು ಬಂದೊಡನೆ ಬಾಚಿ ತಬ್ಬಿದ,
ಲೊಚಲೊಚ ಮುತ್ತಿಟ್ಟ.

“ಅಲ್ಲಿಗೆ ಮುಗಿಯಿತು” ನಾನೆಂದೆ,
“All`s well that ends well''
``No, no'' ಎಂದಳು ನನ್ನಾಕೆ,
“ಅದು emotional blackmail.

ಕರಗಲ್ಲ ಅವಳು, ನನಗೆ ಖಾತ್ರಿಯಿದೆ,
ಇದೇನು ಅವಳಿಗೆ ಹೊಸದೆ?”
ಎಂದಳು ನನ್ನಾಕೆ, ಕಿಟಕಿಯಿಂದಿಣುಕಿ,
ಇನ್ನಷ್ಟು ಸರಿಸುತ ಪರದೆ.

ಸೆರಗಿನಿಂದ ಕಣ್ಣೊರಸಿಕೊಳ್ಳುತ್ತ
ಮೇಸ್ತ್ರಿಪತ್ನಿ ಒಳ ನಡೆದಳು;
ಮಗಳೊಡನೆ ಮೇಸ್ತ್ರಿ ಹಿಂಬಾಲಿಸಿದ,
ಮುಚ್ಚಿತು ಮನೆ ಬಾಗಿಲು.

“ಸಂತೋಷವಾಯ್ತಾ?” ಚೀರಿದಳು ನನ್ನಾಕೆ,
ದುರದುರ ಕಣ್‌ಬಿಟ್ಟು;
“ಅರೇ, ಇದೊಳ್ಳೇ ಕತೆಯಾಯ್ತಲ್ಲ!
ನನ್ನ ಮೇಲ್ಯಾಕೆ ಸಿಟ್ಟು?”

“ಗಂಡುಜಾತಿ ನೀವೆಲ್ಲಾ ಒಂದೇ”
ತೂರಿ ಹೋದಳು ಕಟಕಿ;
ಪೆಚ್ಚಾಗಿ ನಿಂತೆ, ಇಣುಕುತ್ತಿರಬಹುದೆ
ನಮ್ಮನ್ನು ಬೇರೊಂದು ಕಿಟಕಿ?

- ಬಿ.ಆರ್.ಲಕ್ಷ್ಮಣರಾವ್

ವಿಡಿಯೋ
ವಿಡಿಯೋ

ಬಿ.ಆರ್. ಲಕ್ಷ್ಮಣರಾವ್

ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್‌. ಲಕ್ಷ್ಮಣರಾವ್‌ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ಗಾಂಡಲೀನ, ಟುವಿಟಾರ, ಎಡೆ ಮತ್ತು ಇವಳು ನದಿಯಲ್ಲ(ಕವನ ಸಂಕಲನಗಳು), ಕ್ಯಾಮರಾ ಕಣ್ಣು (ಸಮಗ್ರ ಕಾವ್ಯ), ಗೆಸ್ಟರ್‌ ಕಥಾ ಸಂಕಲನ, ಮುಂತಾದವು. 

ಲಕ್ಷ್ಮಣ್‌ರಾವ್‌ ಅವರ  'ಲಿಲ್ಲಿ ಪುಟ್ಟಿಯ ಹಂಬಲ' ಕವನ ಸಂಗ್ರಹಕ್ಕೆ 1981ರ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಡಾ.ಪು.ತಿ.ನ. ಕಾವ್ಯ ಪುರಸ್ಕಾರ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೋಲಾರ ಜಿಲ್ಲೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

More About Author