Poem

ಜೀವನ ಮೀಮಾಂಸೆ

ಯಾರ ಆಸೆ ಆಮಿಷಗಳಿಗೂ ಸೊಪ್ಪು ಹಾಕದೆ
ಎಷ್ಟು ಓಲೈಸಿದರೂ ಎಲ್ಲೂ ನಿಲ್ಲಲೊಲ್ಲದ
ಹಕ್ಕಿಯೊಂದು ಹಾರಿ ಬಂದು
ಅಂಗಳದ ಮುಂದಿನ ಮರದ ಗೆಲ್ಲಿನಲಿ ಕೂತು
ಗುಸುಗುಸು ಪಿಸಪಿಸೆಂದು ನುಲಿಯುತ್ತಿತ್ತು.

ಹಕ್ಕಿ ಬಂದಾಗಲೆಲ್ಲ ನನ್ನದೊಂದೇ ರಾಗ
‘ನಿನ್ನೆಯ ಸುಖ ಮತ್ತೆ ಮರಳೀತೇ?
ಇಂದಿನ ದುಃಖ ಎಂದು ಮುಗಿದೀತು
ನಾಳೆಯ ನನ್ನ ದಿನ ಚಿನ್ನವಾದೀತೇ?’

ನನ್ನೆಣಿಕೆಗೆ ತಕ್ಕಂತೆ ಉತ್ತರ ನೀಡದ ಹಕ್ಕಿ
ನಿನ್ನೆಯ ಕಥೆಗಳಿಗೆ ಬಣ್ಣ ಹಚ್ಚಿ,
ನಾಳೆಯ ಅಕ್ಷರಗಳನು ಇನ್ನಷ್ಟು ಬಿಗಿದು
ಕೊರಳು ಕೊಂಕಿಸಿ ನುಡಿಯುತಿತ್ತು

ನಾನೂ ಹಿಡಿದ ಪಟ್ಟು ಬಿಡದೆ
ನಿನ್ನೆ, ಇಂದು, ನಾಳೆ ಏಕೆ ಬೇರೆ ಬೇರೆ!
ಹುಟ್ಟು ಸಾವಿನಲೂ...
ಕಷ್ಟ ಸುಖ, ಆಸೆ ನಿರಾಸೆ, ಸರಸ ವಿರಸ...!
ನವರಸ ಭಾವಗಳ ಆಳ ಅಂತರಾಳ ತಿಳಿಯಲು
ಜೀವನ ಮೀಮಾಂಸೆಯನ್ನೇ ತೆರೆದಿಟ್ಟೆ

ಹಾಗಂದಾಗಲೆಲ್ಲ ಆ ಹಕ್ಕಿ
ಚಿಗುರು, ಹೂವು, ಕಾಯಿ, ಹಣ್ಣು
ಉದುರಿದ ಎಲೆ, ಮುರಿದ ಗೆಲ್ಲು, ಚದುರಿದ ಮಣ್ಣು
ಇವೆಲ್ಲವುಗಳ ಪಾತ್ರವನು ಹದವಾಗಿ ಬೆರೆಸಿ
ಹಕ್ಕಿ ಹೇಳಿದ ಕತೆಯಲಿ...
ಮಳೆ ಬಿಸಿಲು ಚಳಿ ಗಾಳಿಯ ಆದ್ರತೆ...!
ಉಲ್ಲಾಸದ ಹೊನಲಲಿ ತೇಲಿ ಎತ್ತರಕ್ಕೇರಿ
ಹಕ್ಕಿ ಹಾಡಿದ ಸಾಲಿನಲಿ ಮುನ್ನಡೆವ ಒಲವಿತ್ತು

ಈಗೀಗ ಹಕ್ಕಿ ಬಂದರೆ
ಅದೇ ಹಳೆಯ ರಾಗವನುಸುರುವುದಿಲ್ಲ
ಕಪಾಟಿನಲ್ಲಿ ಎತ್ತಿಟ್ಟ ಹಳೆಯ ಸವಾಲುಗಳೂ
ಅನುಭವದ ಮೂಸೆಯೊಳು ಹದವಾಗಿವೆ

-ಅನಿತಾ ಪಿ. ತಾಕೊಡೆ

ಅನಿತಾ ಪಿ. ತಾಕೊಡೆ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ತಾಕೊಡೆಯವರಾದ ಅನಿತಾ ಪೂಜಾರಿ ಅವರು ಸದ್ಯ ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಕವಿ, ಕತೆಗಾರರಾಗಿರುವ ಅನಿತಾ ಅವರು ಅಂಕಣಕಾರರೂ ಆಗಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪದವೀಧರರಾಗಿರುವ ಅವರು ಮುಂಬೈ ವಿ.ವಿ.ಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕವನ ಸಂಕಲನ), ಮರಿಯಲದ ಮದಿಮಾಲ್‌ (ತುಳು ಕವನ ಸಂಕಲನ), ಸವ್ಯಸಾಚಿ ಸಾಹಿತಿ, ಮೋಹನ ತರಂಗ -ಇವರ ಕೃತಿಗಳು. ಸುಶೀಲ ಎಸ್. ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, ಅಲ್ಲಮ ಸಾಹಿತ್ಯ ಪ್ರಶಸ್ತಿ, ಕವಿರತ್ನ ಪುರಸ್ಕಾರ, ಡಿ.ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ, ಡೊಂಬಿವಲಿ ತುಳುಕೂಟದ ತುಳುಸಿರಿ ಪ್ರಶಸ್ತಿ, ಕಾವ್ಯಸಿರಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 

More About Author