Poem

ಜೀವಪರರು

ಹುಡಿ ಹಾಕಿ ನೊರೆ ಬರುವ ನೀರಿನಲ್ಲಿ ಮೈಲಿಗೆಯ ಬಟ್ಟೆ
ಹರಿವ ಕ್ಷೀರವನ್ನು ತಡೆಯಲಾಗದ ಮಂದಿರದ ಕಟ್ಟೆ
ಮರುದಿನ ಸೂರ್ಯಾಸ್ತದ ಮುನ್ನ ನಿಂತ ನೀರಲ್ಲಿ ಆಚಾರ ವಿಚಾರ
ಸಂಜೆಗೆ ವಂದನೆ
ದಿನ ಕಳೆದರೂ ಮನದ ಕೊಳಕು ಕಳೆಯಲಿಲ್ಲ
ಕೊನೆಗೆ ಕೊಳಕು ತೆಗೆಯಲೂ ನಾವೇ ಬರಬೇಕಾಯಿತಲ್ಲ
ನಾವು, ನೋಡಿ ಮಾತ್ರ ನೊಂದವರು
ಸ್ಪರ್ಶಿಸಲು ಆಗದವರು....

ಕಪ್ಪು ಕತ್ತಲಲ್ಲ
ಕತ್ತಲೂ ಕಪ್ಪಲ್ಲ
ಸುಟ್ಟ ಸೌದೆಯ ಕಪ್ಪು
ಹಣೆಗೆ ಮಂಗಳ
ಇದ್ದಿಲಿನ ಮಾರುಕಟ್ಟೆ
ಜಗತ್ತಿಗೆ ಬೇಕು
ಡಾಂಬರಿಗೆ ಇರುವ ಬೆಲೆ
ನಮಗೇಕಿಲ್ಲ?
ದೃಷ್ಟಿ ತೆಗೆಯಲು ಕಪ್ಪು ನೂಲು ಬೇಕಾದಾಗ, ನಾವೇಕೆ ಬೇಡ?
ಮನಸು ನೀರಾಗಬೇಕಿದೆ
ನಾವು ನೋಡಿ ಮಾತ್ರ ನೊಂದವರು.

ಬಣ್ಣಗಳು ಬೆಳಕಾಗಬೇಕು
ಅಂಧಕಾರ ತೊಡೆಯುವಂತೆ
ಕಹಿ ನೋಟದ ಗೋಡೆ ಒಡೆದು
ಸಿಹಿ ದೃಷ್ಟಿಯ ಸೃಷ್ಟಿಸುವಂತೆ
ಭೇದ ತುಂಬಿದ ಕೊಡ ಉಕ್ಕಿ
ಸಮಾನತೆಯು ನದಿಯಾಗಿ ಹರಿಯುವಂತೆ
ಮೇಲೆರುವ ನೆಪವೊಡ್ಡಿ
ಕೀಳುತನಕ್ಕೆ ಹೆಗಲು ಕೊಡದೆ
ಮನುಜನಾಗುವಂತೆ
ನಮ್ಮನ್ನು ಸ್ಪರ್ಶಿಸಲು ಪ್ರಯತ್ನಿಸುವಂತೆ
ನಾವು, ನೋಡಿ ಮಾತ್ರ ನೊಂದವರು
ನೋಡುತ್ತಲೇ ನಿಂತವರು.

- ಪುನೀತ ವಾಣಿ

ಪುನೀತ್ ವಾಣಿ

ಪುವಾ ಎಂಬ ಕಾವ್ಯನಾಮದ ಪುನೀತ್ ವಾಣಿ ಮೂಲತಃ ಬೆಂಗಳೂರಿನವರು. ಸಾಹಿತ್ಯ, ರಂಗಭೂಮಿ, ಜಾನಪದ ಕಲೆಗಳು, ಸಿನೆಮಾ ಹಾಗೂ ಸಮಕಾಲೀನ ವಿದ್ಯಾಮಾನಗಳ ಬಗ್ಗೆ ಅತ್ಯಂತ ಆಸಕ್ತಿವುಳ್ಳ ಇವರು ಉತ್ತಮ ಚರ್ಚಾಪಟುವೂ ಕೂಡಾ ಹೌದು. ವೀರಗಾಸೆ ಜಾನಪದ ಕಲಾಪ್ರಕಾರದಲ್ಲಿ ಕಲಾ ಪ್ರದರ್ಶನ ನೀಡುವ ಇವರು ಹಲವು ನಾಟಕಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ. ಕಾಲೇಜು ದಿನಗಳಲ್ಲಿಯೇ ಕಲೆಗೆ ತೆರೆದುಕೊಂಡಿರುವ ಪುನೀತ್ ಅವರು ಫೀನಿಕ್ಸ್ ಎನ್ನುವ ಕಿರು ಚಿತ್ರವನ್ನು ನಿರ್ದೇಶನ ಮಾಡಿರುತ್ತಾರೆ. ಪುನೀತ್ ಅವರು ತನ್ನ ತಾಯಿಯ ಹೆಸರಾದ ವಾಣಿ ಯನ್ನು ತನ್ನ ಹೆಸರಿನ ಜೊತೆ ಸೇರಿಸಿಕೊಂಡು ಅಭಿವ್ಯಕ್ತಿ ಮಾಡುತ್ತಾರೆ. ಹಾಗೂ ಕಾಲೇಜು ರಂಗಭೂಮಿಯಲ್ಲಿ ಮೂರು ವರ್ಷಗಳ ಕಾಲ ಸಕ್ರಿಯವಾಗಿ ಸರ್ಟಿಫಿಕೇಟ್ ಕೋರ್ಸ್ ಹಾಗೂ ಡಿಪ್ಲೋಮಾ ಕೋರ್ಸ್ ಅನ್ನು ರಂಗಚಿರಂತನದಿಂದ ಪೂರೈಸಿರುತ್ತಾರೆ. 

More About Author