Story

 ಕಾಲ ಬದಲಾಗೀತೆ ಶಿವ ಶಿವಾ…… 

ಕತೆಗಾರ್ತಿ ಜಿ.ಎಸ್. ಸುಶೀಲಾದೇವಿ ಆರ್.ರಾವ್ ಅವರು 1952 ರ ಜುಲೈ 5 ರಂದು ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಗುಂಜಿಗನೂರುನಲ್ಲಿ ಜನಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಜಿ.ಎಸ್. ಸುಶೀಲಾದೇವಿ ಆರ್.ರಾವ್ ಅವರ ‘ಕಾಲ ಬದಲಾಗೀತೆ ಶಿವ ಶಿವಾ’ ಕತೆ ನಿಮ್ಮ ಓದಿಗಾಗಿ.

ಹಾಸನದ ಹತ್ತಿರದ ಹಳ್ಳಿಯಿಂದ ಮೊಮ್ಮಕ್ಕಳಿಗಾಗಿ ಹಂಬಲಿಸಿ ಹಂಬಲಿಸಿ ಬಂದಿದ್ದಳು ಗೌರವ್ವ. ಲಗ್ನಾಗಿ 10 ವರ್ಷದ ಮೇಲೆ ಹುಟ್ಟಿದ ಒಬ್ಬನೇ ಮಗ ಚಂದಾಗಿ ಓದಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಹುಡುಗೀನೇ ಲಗ್ನಾಗಿ ಬೆಂಗಳೂರಿನಲ್ಲಿ ನೆಲಸಿದ್ದ. ಇಬ್ಬರ ದುಡಿಮೆ ಕೈತುಂಬ ಸಂಬಳ.

ಲಗ್ನಾದ ವರ್ಷಕ್ಕೇ ಸೊಸೆ ಬಸಿರಿಯಾದಳು. ತಾಯಿ ಇಲ್ಲದ ಹುಡುಗಿ. ಗೌರವ್ವನೇ ಮನೆಗೆ ಬಂದು ಬಾಣಂತನ ಮಾಡಿದ್ದಳು. ಹುಟ್ಟಿದ್ದು ಅವಳಿ ಜವಳಿ ಗಂಡುಕೂಸುಗಳು. ನೂತನ್, ಚೇತನ್. ಮಕ್ಕಳ ಆರೋಗ್ಯ ನಾಜೂಕಾಗಿತ್ತು. ಒಂದು ವರ್ಷ ಮಗನ ಮನೇಲೇ ಇದ್ದು ಮಕ್ಕಳನ್ನು ಸಾಕಿದ್ದಳು. ಮನೆಯ ಓನರ್ ಮಂಡ್ಯದವರು. ಬಾಳ ಒಳ್ಳೇರು. ಅಕ್ಕ ಪಕ್ಕದ ಮನೆಯವರೂ ಅಲ್ಲಿನ ಮಂದೀನೇ. ಬಸವನಗುಡಿ ಯಲ್ಲಿ ಮನೆ. ನೆರೆಹೊರೆ ಜನ ಹಚ್ಚಿಕೊಂಡಿದ್ದರು. ವರ್ಷ ತುಂಬಿದಮೇಲೆ ಗೌರವ್ವ ಹಳ್ಳಿಗೆ ವಾಪಸ್ ಹೋದಳು. ಇಂತ ಮಕ್ಕಳನ್ನು ತಿಂಗಳಿಗಿಷ್ಟು ದುಡ್ಡು ಇಸ್ಕೊಂಡು ಸಾಕೋ ಮನೆಗಳಿವೆಯಂತೆ. ಆಮೇಲೆ ಪ್ಲೇಗ್ರೂಪ್ ಗೆ ಹಾಕೀವಿ ಅಂದ ಮಗ.

ಆಗಾಗ ರಜಾ ಬಂದಾಗ ಮೊಮ್ಮಕ್ಕಳು ಹಳ್ಳಿಗೆ ಬರ್ತಿದ್ದರು. ಅರಸೀಕೆರೆಯ ಸಮೀಪದ ಹಳ್ಳಿ ಅದು. ಗೌರವ್ವನ ಗಂಡ ಚನ್ನೇಗೌಡ, ತಮ್ಮ ಮಂಜೇಗೌಡ ಪಾಲಾಗದೆ ಒಟ್ಟಿಗೆ ಇದ್ದರು. ಆರಂಕಣದ ಮನೆ. ಹತ್ತೆಕರೆ ಹೊಲ, ಹತ್ತೆಕರೆ ತೋಟ ಇತ್ತು.ಮಂಜೇಗೌಡನ ಹೆಂಡತಿ ಚನ್ನಕ್ಕ, ಒಬ್ಬಾಕಿ ಮಗಳು, ಎರಡು ಹುಡುಗರು. ಮನೆ ಜೇನುಗೂಡಾಗಿತ್ತು

ಮೊಮ್ಮಕ್ಕಳು ರಜೆಗೆ ಬಂದಾಗ ಮನೆಯಿಡೀ ತುಂಬಿದಂಗಾಗುತ್ತಿತ್ತು. ಮನೆ ಮಂದಿಗೆ ಹಿಗ್ಗು. ಅಜ್ಜಿ ಅಜ್ಜೀ ಅಂತ ಅವಳ ಹಿಂದಿಂದೇ ಸುತ್ತುತ್ತಿದ್ವು. ರಾತ್ರಿ ಅಜ್ಜಿಯ ಅಕ್ಕ ಪಕ್ಕ ಮಲಗಿ ಅವಳ ಮೇಲೆ ಕಾಲಾಕಿ ತಬ್ಬಿಕ್ಯಂಡು ಕತೆ ಕೇಳ್ತಿದ್ದವು. ಕನ್ನಡ ಶಾಲೆಯಾಗೆ ಏಳನೇ ಕ್ಲಾಸ್ ಪಾಸಾಗಿದ್ದ ಗೌರವ್ವ ಬಾಳ ಕತೆ ಹೇಳುತ್ತಿದ್ದಳು. ಏಳು ಮಲ್ಲಿಗೆ ತೂಕದ ರಾಜಕುಮಾರಿ, ಅವಳನ್ನು ಕದ್ದೊಯ್ದ ರಾಕ್ಷಸ, ಏಳು ನದಿ, ಏಳು ಬೆಟ್ಟ ದಾಟಿ ರಾಜಕುಮಾರ ಬಂದು ಹೋರಾಡಿ ಗೆದ್ದು ಅವಳನ್ನು ಕರೆದೊಯ್ತಿದ್ದ. ಮಂತ್ರ ಚಾಪೆಯ ಮೇಲೆ ಹಾರುವ ಮಾಂತ್ರಿಕ, ಊದಿದರೆ ಕೇಳಿದ್ದು ಕೊಡುವ ಮಂತ್ರದ ಕೊಳಲು, ಮಕ್ಕಳು ಕಣ್ಣರಳಿಸಿ ಕತೆ ಕೇಳ್ತಾ ನಿದ್ದೆ ಹೋಗುತ್ತಿದ್ದವು. ಮಕ್ಕಳು ಬೆಳೆದಂತೆ ವಯಸ್ಸಿಗೆ ತಕ್ಕಂತೆ ಅಜ್ಜಿಯ ಕತೆಗಳೂ ಬೆಳೆಯುತ್ತಿದ್ದವು. ಸಿಂಡ್ರೆಲಾ ಜತೆ, ಆಲಿಬಾಬಾ ನಲವತ್ತು ಕಳ್ಳರು, ತೆನಾಲಿರಾಮ, ಬೀರಬಲ್ಲರ ಕತೆಗಳು, ಕೇಳಿ ಮಕ್ಕಳಿಗೆ ಹಿಗ್ಗೋ ಹಿಗ್ಗು. ಜೊತೆಗೆ ಅಜ್ಜನ ಜೊತೆಗೆ ತೋಟ ಸುತ್ತುತ್ತಿದ್ದವು. ಹಳ್ಳದಲ್ಲಿ ಈಜು ಕಲಿತವು.ಅಜ್ಜಿಯ ಹೋಳಿಗೆ, ಕಡಬು, ದೋಸೆಯನ್ನು ಖುಷಿಯಾಗಿ ತಿನ್ನುತ್ತಿದ್ದವು. ಅಪ್ಪನ ಜೊತೆಗೆ ವಾಪಸ್ ಹೋದರೂ ಪ್ರತಿವರ್ಷ ಬರುತ್ತಿದ್ದವು. ಮನೆತುಂಬ ಅವು ಓಡಾಡುತ್ತಿದ್ದರೆ ತಂಗಾಳಿ ಬೀಸಿದಂತಾಗುತ್ತಿತ್ತು ಗೌರವ್ವನಿಗೆ.

ಒಂದು ವರ್ಷ ಫಾರಿನ್ ಟೂರ್ ಅಂತ ಬರ್ಲಿಲ್ಲ. ಮರುವರ್ಷ ಅದೆಂತದೋ ಕೊರೋನಾ ರೋಗ ಬಂದು ಎರಡು ವರ್ಷ ಅವರಲ್ಲೇ, ಇವರಿಲ್ಲೇ. ಆಮೇಲೆ ಕೊರೋನಾ ತೊಲಗಿದರೂ ಹೆದರಿ ಒಂದು ವರ್ಷ ಬರಲಿಲ್ಲ. ಗಂಡನಿಗೆ ಹೇಳಿ ಗೌರವ್ವನೇ ಮಗನಿಗೆ ಫೋನ್ ಮಾಡಿದಳು.

"ರಜಕ್ಕೆ ಹುಡುಗರ್ನ ಕಳಿಸಪ್ಪಾ.."

"ಆಗಲ್ಲವ್ವ. ಅವರೀಗ ನೈಂತ್ ಪಾಸಾಗಿದ್ದಾರೆ. ನೆಕ್ಸ್ಟ್ ಇಯರ್ ಟೆನ್ತ್. ಸ್ಪೆಷಲ್ಲಾಗಿ ಟ್ಯೂಷನ್ ಕೊಡಿಸ್ತೀನಿ. ಜೊತೆಗೆ ಸಮ್ಮರ್ ಕ್ಯಾಂಪ್ ಗೆ ಹೆಸರು ಕೊಟ್ಟೀನಿ."

"ಅವರನ್ನ ನೋಡಂಗಾಗಿದೆ ಕಣೋ."

"ಸಂಡೇ ಹಾಸನ ಕ್ಕೆ ಫ್ರೆಂಡ್ ಮದುವೆಗೆ ಬರ್ತೀನಿ. ನಿನ್ನೇ ಕರ್ಕೊಂಡೋಗ್ತೀನಿ. ಹತ್ತು ದಿನ ಇರು. ಆಮೇಲೆ ಅವು ಸಮ್ಮರ್ ಕ್ಯಾಂಪ್ ಗೆ ಹೋಗ್ತಾವೆ."

ಮಗ ಬಂದು ಅವ್ವನನ್ನು ಕರ್ಕೊಂಡು ಹೋದ.

ಚನ್ನಕ್ಕನ ಮಗಳು ಹೆರಿಗೆಗೆ ಬಂದಿದ್ದಳು. ಆಗ ಮಗ ಒಂದು ಕೋಟಿ, ಹತ್ತು ಲಕ್ಷ ಕೊಟ್ಟು ಫ್ಲಾಟ್ ಕೊಂಡಿದ್ದೇನೆ ಗೃಹಪ್ರವೇಶಕ್ಜೆ ಬರ್ರಿ ಅಂತ ಕರೆದಿದ್ದ.ಚನ್ನೇಗೌಡರು, ಮಂಜೇಗೌಡರು ಹೋಗಿದ್ದರು. ಅಪಾರ್ಟ್ಮೆಂಟ್ ನಾಗೆ 18 ಅಂತಸ್ತದಾವಂತೆ. ಇವರದು 9 ನೇ ಅಂತಸ್ತಿನಾಗೆ ಐದನೇ ಮನೆಯಂತೆ. ಕೇಳಿದ್ದಳು ಗೌರವ್ವ, ಈಗ ಕಣ್ಣಾರೆ ಕಂಡಳು. ಮಗ ಕೆಳಗಡೆ ಕಾರು ನಿಲ್ಲಿಸಿ, ಲಿಫ್ಟ್ ಏರಿಸಿ ಮನೀ ಮುಂದೆ ನಿಂತು ಕಾಲಿಂಗ್ ಬೆಲ್ ಬಾರಿಸಿ ಒಳಗೆ ಕರೆದೊಯ್ದ. ಟಿವಿ ನೋಡುತ್ತಿದ್ದ ಮೊಮ್ಮಕ್ಕಳು ಮುಖ ಅರಳಿಸಿ ಹಾಯ್ ಅಜ್ಜಿ ಅಂದವು.

"ಅಜ್ಜಿ ಹತ್ತು ದಿನ ಇಲ್ಲಿರ್ತಾರೆ ನೀವು ಸಮ್ಮರ್ ಕ್ಯಾಂಪ್ ಗೆ ಹೋದ್ಮೇಲೆ ಊರಿಗೋಗ್ತಾರೆ" ಅಂದ. ಸುಸ್ತಾಗಿದ್ದ ಗೌರವ್ವ ಉಂಡು ಮಲಗಿದಳು. ಆಕೆ ಎದ್ದಾಗ ಮಗ, ಸೊಸೆ ಕೆಲಸಕ್ಕೆ ಹೊರಟಿದ್ದರು.

"ಟೊಮ್ಯಾಟೊ ಬಾತ್, ಚಪಾತಿ ಮಾಡ್ಯಾಳೆ.ನೀನು ಏನೂ ಮಾಡಬ್ಯಾಡ ಅರಾಮಾಗಿರು" ಎಂದು ಆಫೀಸ್ ಗೆ ಹೋದರು.

ಚಕ್ಲಿ, ಕೋಡ್ಬಳೆ ಕಾಯ್ಕಡಬು ಮಾಡಲೇನ್ರೋ ಅಂದಳು. ಬ್ಯಾಡಜ್ಜಿ. ಬೇಕರಿಯಾಗೆ ಎಲ್ಲಾ ಸಿಗ್ತವೆ.ಪಾರ್ಸಲ್ ಗೆ ಆರ್ಡರ್ ಕೊಟ್ಟೀವಿ.ಪಿಜ್ಜಾ, ಪಾಸ್ತಾ, ಬರ್ಗರ್, ನ್ಯೂಡಲ್ಸ್ ಏನೇನೋ ಬರ್ತವೆ. ಇವೇ ಬೆಸ್ಟ್ ಅಂದರು.

ಅಪಾರ್ಟ್ಮೆಂಟ್ ತೋರಿಸ್ತೀವಿ ಅಂತ ಲಿಫ್ಟ್ ಏರಿಸಿ ನೋಡು ಟೆರೇಸ್, ಇಲ್ಲಿ ಒಂದು ಪಾರ್ಟಿ ಹಾಲ್ ಇದೆ.. ಇದು ಎಯ್ಟೀನ್ತ್ ಫ್ಲೋರ್ ಎಂದು ಲಿಫ್ಟ್ ಇಳಿಸುತ್ತಾ ಬರೀ ಇಂಗ್ಲೀಷ್ ನಲ್ಲೇ ಮಾತಾಡ್ತಿದ್ದರು. ನೋಡು ಇದು ಅಂಡರ್ ಗ್ರೌಂಡ್. ಇಲ್ಲಿ ವೆಹಿಕಲ್ ಸ್ಟಾಂಡ್. ಇದು ಪಾರ್ಕ್. ವಾಕ್ ಮಾಡು. ನಾವು ಆನ್ ಲೈನ್ ಗೇಮ್ ಆಡ್ಬೇಕು. ಒನ್ ಅವರ್ ಬಿಟ್ಡು ಬರ್ತೀವಿ ಅಂತ ಹೇಳಿ ಹೋದರು. ಅಪರಿಚಿತ, ಜನ. ಅವರ ಮಾತು ಅರ್ಥವಾಗದೆಗೌರವ್ವ ಸುಮ್ಮನೆ ಕೂತು ಆಮೇಲೆ ಮೇಲೆ ಹೋದಳು. ಮೊಮ್ಮಕ್ಕಳು ಬರೀ ಪಟ ಪಟ ಅಂತ ಇಂಗ್ಲೀಷ್ ನಲ್ಲೇ ಮಾತಾಡ್ತಿದ್ದವು. ಕನ್ನಡ ಮಾತಾಡ್ರೋಅಂದ್ರೆ ಕನ್ನಡನೂ ಸೇರ್ಸಿ ಮಾತಾಡ್ತೀವಿ ಅಂತ ನಕ್ಕರು.

ಕತೆ ಹೇಳಲೇನ್ರೋ..ಧೃವ, ಚಂದ್ರಹಾಸ, ಪ್ರಹ್ಲಾದ ಕತೆ ಹೇಳ್ಲಾ ಅಂದ್ರೆ ಬೇಡ" ಕಿಂಗ್, ಕ್ವೀನ್ ಪ್ರಿನ್ಸೆಸ್ ಕತೆ ಬೋರ್, ಹೃತಿಕ್ ರೋಷನ್ ನ ಕ್ರಿಶ್, ಅಮೀರ್ ಖಾನ್ ನ ತಾರೇ ಜಮೀನ್ ಪರ್, ವಂಡರ್ಕಾರ್ ನಂತ ಫಿಲಂ ಇಷ್ಟ ಅಂದವು.

"ಅಜ್ಜಿ, ಬೋರಾ? ಟಿವಿ ಆನ್ ಮಾಡಿ ಹಾರರ್ ಫಿಲಂ, ಗಾಡ್ ಫಿಲಂ ಹಾಕ್ಲಾ?" ಅಂದರೆ ಅರ್ಥವಾಗದೆ ಬೇಡ ಅಂದಳು. ನೆರೆಹೊರೆ ಮಾತೇ ಇಲ್ಲ. ಅಜ್ಜಿ ಕನ್ನಡದೋರಿಲ್ಲ, ತಮಿಳಿಯನ್ಸ್, ಆಂಧ್ರ ಪೀಪಲ್ಸ್, ನಾರ್ತ್ ಇಂಡಿಯನ್ಸ್ ನಮ್ಮ ನೇಬರ್ಸ್. ಇಂಗ್ಲೀಷ್ ಬಂದ್ರೆ ಪ್ರಾಬ್ಲಂ ಇಲ್ಲ ಅಂದ್ರು.

ಯಾವಾಗ ನೋಡಿದರೂ ಕೈಲಿ ಮೊಬೈಲ್ ನೋಡಿದ್ದೂ ನೋಡಿದ್ದೇ… ಜೊತೆಗೆ ಫೋನ್ ಬಹಳ. ಟಿವಿಮುಂದೆ ಕ್ರಿಕೆಟ್‌ ನೋಡಿ ಸಿಕ್ಸರ್, ಬೌಂಡರಿ, ಸೆಂಚುರಿ ಬಾರಿಸ್ದ, ಔಟ್ ಅಂತ ಕೂಗೋದು….ಗೌರವ್ವ ಮಂಕಾಗಿ ಕೂತಿರ್ತಿದ್ದಳು. ಮಗ, ಸೊಸೆ ಬಂದಾಗ ಒಂದಿಷ್ಟು ಮಾತು ಊಟ, ನಂತರ ಅವರು ಲ್ಯಾಪ್ಟಾಪ್ ಮುಂದೆ ಕೂತರೆ ಮೊಮ್ಮಕ್ಕಳು ಮೊಬೈಲ್ ಹಿಡಿದು ಕೂರ್ತಿದ್ದವು. ಮಗ, ಸೊಸೆ ಪ್ರಾಜೆಕ್ಟ್ ವರ್ಕ್ ಇದೆಯಂತೆ. ಬಾಳ ಕೆಲಸ ಪೆಂಡಿಂಗ್ ಉಳಿದಿದಂತೆ.

ಹತ್ತುದಿನ ಕಳೆದೇಹೋಯ್ತು.

"ಅವ್ವ, ಇನ್ನು ಹುಡುಗರಿಗೆ ಸಮ್ಮರ್ ಕ್ಯಾಂಪ್ ಸ್ಟಾರ್ಟ್ ಆಗ್ತದೆ. ನಿನಗೆ ಒಬ್ಳೇ ಇರಕ್ಕಾಗಲ್ಲ. ನಾಳೆ ನಿನ್ನ ಟ್ರೈನ್ ಗೆ ಹತ್ತಸ್ತೀನಿ. ಅರಸೀಕೆರೆಯಾಗೆ ಇಳಿ. ಫೋನ್ ಮಾಡೀನಿ. ಅಪ್ಪನೋ, ಚಿಕ್ಕಪ್ಪ ನೋ ಬಂದು ಕರ್ಕೊಂಡು ಹೋಗ್ತಾರಂತೆ."

ಗೌರವ್ವನಿಗೆ ಬಿಡುಗಡೆಯಾದಂತೆನಿಸಿತು. ಮೊಮ್ಮಕ್ಕಳಿಗೆ ರಜಾ ಬಂದಾಗ ಹಳ್ಳಿಗೆ ಬರ್ರಪ್ಪಾ. ನಾನು, ಅಜ್ಜ ಕಾಯ್ತಿರ್ತೀವಿ. ನೀವೇ ಬರ್ರಿ"ಅಂದಳು

ಮಗ ರೈಲ್ ಹತ್ತಿಸಿ ಕೈ ಬೀಸಿದ. ರೈಲು ಚಲಿಸಿದಾಗ ಕಿಡಿಕಿಯಲ್ಲಿ ನೋಡುತ್ತಾ ಗೌರವ್ವ ಅಂದಳು.

"ಕಾಲ ಬದಲಾಗೀತೆ ಶಿವ… ಶಿವಾ…" ಕಣ್ಣಗಳು ನೀರಿನಿಂದ ತುಂಬಿದ್ದವು.

ಜಿ.ಎಸ್. ಸುಶೀಲಾದೇವಿ ಆರ್.ರಾವ್

ಕತೆಗಾರ್ತಿ ಜಿ.ಎಸ್. ಸುಶೀಲಾದೇವಿ ಆರ್.ರಾವ್ ಅವರು 1952 ರ ಜುಲೈ 5 ರಂದು  ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ  ಗುಂಜಿಗನೂರುನಲ್ಲಿ ಜನಿಸಿದರು. ತಂದೆ ಜಿ. ಶ್ರೀನಿವಾಸಯ್ಯ, ತಾಯಿ ಜಾನಕಮ್ಮ.’ಸ್ವಾಭಿಮಾನಿ, ಮನ ಮಂದಿರ, ಬೆಂಕಿಯ ಒಡಲಲ್ಲಿ, ಸಂಬಂಧದ ಸಂಕೋಲೆಗಳು, ಸೇಡು, ನಿನ್ನ ದಾರಿಯಲ್ಲೀಗ ನನ್ನ ಹೆಜ್ಜೆ’ ಅವರ ಕಾದಂಬರಿಗಳು. ’ಷೋಕೇಸಿನ ಗೊಂಬೆ, ಬದುಕ ಮನ್ನಿಸು ಪ್ರಭುವೆ, ಅಪರಿಮಿತ’ ಕಥಾಸಂಕಲನ ರಚಿಸಿದ್ದಾರೆ. ’ಕಂಪ್ಲಿ ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಸ್ಮಾರಕ ಪ್ರಶಸ್ತಿ, ದಾವಣಗೆರೆ ಜಿಲ್ಲಾ 'ವನಿತಾ ಸಾಹಿತ್ಯಶ್ರೀ' ಪ್ರಶಸ್ತಿ’ ಲಭಿಸಿವೆ. 

More About Author