Story

ಕಾಯಕ

''ಕತೆಗಾರ ಶಂಭು ಮೇರವಾಡೆ ಅವರು ಮೂಲತಃ ವಿಜಯಪುರದವರು. ನಿವೃತ್ತ ಪ್ರಾಚಾರ್ಯರು. ಸಾಹಿತ್ಯ ಅವರ ಪ್ರವೃತ್ತಿಯಾಗಿರುತ್ತದೆ. ಪ್ರಸ್ತುತ ಅವರ ‘ನೂರೊಂದು ಲಘು ಕತೆಗಳು’ ಕತಾಸಂಕಲನದಿಂದ ಆಯ್ದ ‘ಕಾಯಕ’ ಕತೆ ನಿಮ್ಮ ಓದಿಗಾಗಿ.

ಮನೆಯಲ್ಲಿ ಸುಮಾರು ಇಪ್ಪತ್ತು ಇಪ್ಪತ್ತೈದು ಜನರಿದ್ದರು. ಬಸಯ್ಯ ಎಲ್ಲರಿಗೂ ಒಳ್ಳೆಯ ಮಾರ್ಗದರ್ಶನ ಮಾಡುತ್ತಾ ದೊಡ್ಡ ಕುಟುಂಬವನ್ನು ಸಾಗಿಸುತ್ತಿದ್ದರು. ಮಳೆ ಬರಲಿ, ಬರದೆ ಇರಲಿ ಹೊಲದ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಚಿಕ್ಕ ಮಕ್ಕಳನ್ನು ಶಾಲೆಗೆ ಕಳಿಸುವುದು ಕರೆದುಕೊಂಡು ಬರುವುದು. ಶಾಲೆಯ ಸಮವಸ್ತ್ರ, ಪುಸ್ತಕ ಎಲ್ಲವೂ ಬಸಯ್ಯ ಅವರ ಜವಾಬ್ದಾರಿ. ಅತಿವೃಷ್ಟಿ ಅನಾವೃಷ್ಟಿ ಯಾವುದೇ ಇರಲಿ ಮನೆಯಲ್ಲಿ ಯಾವುದೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಕುಟುಂಬದಲ್ಲಿ ಏನೇ ಇದ್ದರೂ ಅಂತಿಮ ನಿರ್ಧಾರ ಬಸಯ್ಯನದೇ. ಹೊಲದಲ್ಲಿಯ ಆಳು, ಗೊಬ್ಬರ, ಬೀಜ, ಬಿತ್ತುವುದು, ಬೆಳೆಗಳ ರಕ್ಷಣೆ, ರಾಶಿ ಮಾಡುವುದು, ಮಾರ್ಕೆಟಿಗೆ ಕಳಿಸುವುದು ಎಲ್ಲವನ್ನೂ ಅತ್ಯಂತ ಪ್ರಾಮಾಣಿಕತೆಯಿಂದ ಬಸಯ್ಯಾ ನೋಡಿಕೊಳ್ಳುತ್ತಿದ್ದನು. ಗ್ರಾಮದಲ್ಲಿ ಹಬ್ಬ-ಜಾತ್ರೆಗಳು ಇವರ ಮುಖಂಡತ್ವದಲ್ಲಿಯೇ ನಡೆಯುತ್ತಿದ್ದವು. ಮನೆಯಲ್ಲಿ ಒಂದು ದಿನ ಬಸಯ್ಯನವರ ತಮ್ಮನ ಮಗ ಶಾಂತಯ್ಯ ಪಿ.ಯು.ಸಿ. ಓದು ಮುಗಿಸಿ, ಮುಂದಿನ ವ್ಯಾಸಂಗಕ್ಕಾಗಿ ದೊಡ್ಡಪ್ಪನವರೊಂದಿಗೆ ವಿಚಾರಿಸುತ್ತಾ “ನಾನು ಮುಂದಿನ ವ್ಯಾಸಂಗಕ್ಕೆ ಶಹರಕ್ಕೆ ಹೋಗುವೆ” ಎಂದು ಹೇಳಿದನು.

“ಶಹರಕ್ಕೆ ಹೋಗಿ ಹಾಸ್ಟೇಲಿನಲ್ಲಿ ಇರುವುದು ಬೇಡ, ಸಮೀಪದ ಪಟ್ಟಣದಲ್ಲಿ ಸರ್ಕಾರಿ ಕಾಲೇಜು ಇದೆ. ಸಾಕಷ್ಟು ಸಾರಿಗೆಯ ಎಂದರು ಬಸಯ್ಯ ವ್ಯವಸ್ಥೆ ಇದೆ”

“ನನಗೆ ಇಂಗ್ಲಿಷ ಮತ್ತು ಕಂಪ್ಯೂಟರ ಕಲಿಯಬೇಕಾಗಿದೆ. ಸರ್ಕಾರಿ ಕಾಲೇಜಿನಲ್ಲಿ ಸರಿಯಾಗಿ ವ್ಯವಸ್ಥೆ ಇಲ್ಲ” ಎಂದನು.

“ನೀ ಯಾವುದಕ್ಕೂ ಚಿಂತಿಸಬೇಡಾ ಇಂದು ನಾನೇ ಪ್ರಿನ್ಸಿಪಾಲರಿಗೆ ಭೇಟಿಯಾಗಿ ವಿಚಾರಿಸಿ ಕೊಂಡು ಬರುವೆ” ಎಂದ ಹೇಳುತ್ತಾ ಸರ್ಕಾರಿ ಕಾಲೇಜಿಗೆ ಹೋದನು. ಅಲ್ಲಿ ಪ್ರಿನ್ಸಿಪಾಲರೊಂದಿಗೆ ಚರ್ಚಿಸಿ ಎಲ್ಲವನ್ನೂ ನೋಡಿಕೊಂಡು ಸಾಯಂಕಾಲ ಮನೆಗೆ ಬಂದರು. ಮರುದಿನ ಶಾಂತಯ್ಯನಿಗೆ ಹೇಳಿದ “ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರಗಳು ಇವೆ. ಕಂಪ್ಯೂಟರ ಪ್ರಾಧ್ಯಾಪಕರಿದ್ದಾರೆ. ಈ ವರ್ಷ ಇಂಗ್ಲಿಷ್ ಹಾಗೂ ಕನ್ನಡ ಪ್ರಾಧ್ಯಾಪಕರು ವರ್ಗಾವಣೆಗೊಂಡು ಬಂದಿದ್ದಾರೆ. ಕಾಲೇಜಿನ ವಾತಾವರಣ ಚೆನ್ನಾಗಿದೆ. ಪಿನ್ಸಿಪಾಲರೂ ಚೆನ್ನಾಗಿದ್ದಾರೆ. ನಿನ್ನ ಪ್ರವೇಶ ಇಲ್ಲಿಯೇ ಮಾಡಿಸೋಣ”

“ಈ ಕಾಲೇಜಿನಲ್ಲಿ ಓದುವ ಮನಸ್ಸಿಲ್ಲ ನನಗೆ. ನಾನು ಶಹರದ ಕಾಲೇಜಿಗೆ ಪ್ರವೇಶ ಪಡೆದು ಹಾಸ್ಟೇಲಿನಲ್ಲಿ ಇದ್ದು ಓದುವೆ” ಎಂದ. ಅವನ ಮಾತು ಬಸಯ್ಯ ಒಪ್ಪಲಿಲ್ಲ. ಶಾಂತಯ್ಯ ತಮ್ಮ ತಂದೆ ಶರಣಯ್ಯನಿಗೆ ತನ್ನ ಅಭಿಪ್ರಾಯ ತಿಳಿಸಿ, ಆತನನ್ನು ಒಪ್ಪಿಸಿದ.

“ಶಾಂತಯ್ಯ ಪಿಯುಸಿ ಒಳ್ಳೆಯ ಅಂಕಗಳನ್ನು ಪಡೆದು ಪಾಸಾಗಿದ್ದಾನೆ. ಅವನು ಶಹರದ ಕಾಲೇಜಿಗೆ ಹೋಗುವದಾಗಿ ನಿರ್ಧರಿಸಿದ್ದಾನೆ. ಆತನೊಂದಿಗೆ ನೀವು??? ಹೋಗಿ ಪ್ರವೇಶ ತಗೆದು ಕೊಂಡು, ಹಾಸ್ಟೇಲಿಗೆ ಅರ್ಜಿಕೊಟ್ಟು ಬರುವುದಾಗಿ” ಬಸಯ್ಯನಿಗೆ ಶರಣಯ್ಯ ಹೇಳಿದನು.

“ಹುಡುಗರನ್ನು ದೂರ ಕಳಿಸುವುದು ಬೇಡಾ, ಸಮೀಪದ ಕಾಲೇಜಿಗೆ ಹೋಗಿ ನಾನು ಎಲ್ಲವೂ ವಿಚಾರಿಸಿಕೊಂಡು ಬಂದಿದ್ದೇನೆ” ಎಂದ ಬಸಯ್ಯ ಶರಣಯ್ಯ ಇಬ್ಬರಲ್ಲಿ ವಾದ-ವಿವಾದಗಳಾದವು. ಮನೆ ಎರಡು ಭಾಗಗಳಾದವು. ಜಮೀನಿನಲ್ಲಿಯೂ ಭಾಗಗಳಾದವು. ಶರಣಯ್ಯ ಮಗನಿಗೆ ಶಹರದ ಕಾಲೇಜಿಗೆ ಕಳಿಸಿದನು. ಶಾಂತಯ್ಯ ಮೂರು ವರ್ಷ ಗೆಳೆಯರೊಂದಿಗೆ ಎಲ್ಲವೂ ಅನುಭವಿಸಿ ಪರೀಕ್ಷೆಯಲ್ಲಿ ಪಾಸಾಗದೆ ಮನೆಗೆ ಹಿಂದಿರುಗಿದ. ಶರಣಯ್ಯಾ ಒಬ್ಬನೆ ಹೊಲದಲ್ಲಿ ಕೆಲಸ ಮಾಡಲಿಲ್ಲ. ಸರಿಯಾಗಿ ಬೆಳೆ ಬರಲಿಲ್ಲ. ಅತಿವೃಷ್ಟಿಯಿಂದ ಜಮೀನ ಹಾಳಾಗಿತ್ತು. ಮಗನಿಗೆ ನೌಕರಿ ಸಿಗುವುದು ಆವಾಗ ಎಲ್ಲವೂ ಸರಿಪಡಿಸೋಣ ಅಂದುಕೊಂಡಿದ್ದನು. ಬೀಜ ಗೊಬ್ಬರದ ಹಣ ಕೊಡಲು ಆಗದೆ ಚಿಂತಿಯಲ್ಲಿ ಇದ್ದಾಗ ಮಗ ಶಾಂತಯ್ಯ ಕೈಯಲ್ಲಿ ಸೂಟಕೇಸ ತಗೆದುಕೊಂಡು ಮನೆಗೆ ಬಂದನು. ಶರಣಯ್ಯ ಅವನ ಹತ್ತಿರ ಹೋಗುತ್ತಿದ್ದಂತೆಯೇ ಸಿಗರೇಟ್ ಹಾಗೂ ಮದ್ಯದ ವಾಸನೆ ಬಂತು. ಮೂರು ವರ್ಷದ ಸಾಲ ಹಾಗೂ ಮಗನ ಚರಿತ್ರೆ ಹಾಳಾಗಿದ್ದು ಮನಸ್ಸಿನ ಮೇಲೆ ಬಹಳಷ್ಟು ಪ್ರಭಾವವಾಗಿ ಶರಣಯ್ಯ ಹಾಸಿಗೆ ಹಿಡಿದನು. ಬಸಯ್ಯ ತನ್ನ ಕಾಯಕ ಮುಂದುವರೆಸಿದ್ದನು.

ಶಂಭು ಮೇರವಾಡೆ

ಶಂಭು ಮೇರವಾಡೆ ಅವರು ಮೂಲತಃ ವಿಜಯಪುರದವರು. ನಿವೃತ್ತ ಪ್ರಾಚಾರ್ಯರು. ಸಾಹಿತ್ಯ ಅವರ ಪ್ರವೃತ್ತಿಯಾಗಿರುತ್ತದೆ.

ಕೃತಿಗಳು: ನೂರೊಂದು ಲಘು ಕತೆಗಳು

More About Author