Poem

ಕದತಟ್ಟುವ ಕವಿತೆ

ಸೂರ್ಯನಂತೆ ಎದ್ದು ಚಂದ್ರನಂತೆ ಬದಲುತ್ತ
ಮೊಗ್ಗಿನಂತೆ ಚಿಗುರಿ ಹಣ್ಣಿನಂತೆ ಬಲಿಯುತ್ತ

ಗೋಡೆಯಂತೆ ನಿಂತು ಬಾಗಿಲಂತೆ ತೆರೆಯುತ್ತ
ನೆರಳಿನಂತೆ ಹಿಂಬಾಲಿಸಿ ನೀರಿನಂತೆ ಹರಿಯುತ್ತ

ಕಲ್ಲಿನಂತೆ ಇದ್ದರೂ ಹುಲ್ಲಿನಂತೆ ಬಾಗುತ್ತ
ಎಲೆಗಳೆಲ್ಲ ಬಿದ್ದರೂ ಹೂಬಿಟ್ಟು ನಗುತ್ತ

ಗುಟ್ಟಿನಂತೆ ಅಡಗಿಯೂ ಬೆಳಕಿನಂತೆ ಚೆಲ್ಲುತ್ತ
ಬೆಟ್ಟದಂತೆ ಮಲಗಿಯೂ ಗರಿಕೆಯಂತೆ ನಿಲ್ಲುತ್ತ

ಶಬ್ಧದಂತೆ ತೋರುತ್ತ ಅರ್ಥದಂತೆ ಮುಳುಗುತ್ತ
ನಾಳೆಯಂತೆ ಕರೆಯುತ್ತ ನಿನ್ನೆಯಂತೆ ಮರುಗುತ್ತ

ಗಾಳಿಯಂತೆ ಅಲೆಯುತ್ತ ಗೀಳಿನಂತೆ ಉಳಿಯುತ್ತ
ನೆಂಟರಂತೆ ಮರಳುತ್ತ ನೋವಿನಂತೆ ನರಳುತ್ತ

ನಿಮ್ಮ ಕಣ್ಣ ಬಿಂಬವಾಗಿ, ನಿಮ್ಮ ಮನದ ರಾಗವಾಗಿ
ಬೀಜದಂತೆ ಸಾಂದ್ರವಾಗಿ ಕನಸಿನಂತೆ ಗೂಢವಾಗಿ

ಕವಿತೆಯಂತೆ ಕದತಟ್ಟಿ ಒಳಬರಲು ಕಾಯುವೆ
ನಿಮ್ಮ ನಾಡಿಬಡಿತಗಳಲಿ ನಗುವಾಗಿ ಅರಳುವೆ

- ಕಮಲಾಕರ ಕಡವೆ

ವಿಡಿಯೋ
ವಿಡಿಯೋ

ಕಮಲಾಕರ ಕಡವೆ

ಮೂಲತಃ ಉತ್ತರಕನ್ನಡದ ಶಿರಸಿಯ ಕಡವೆ ಗ್ರಾಮದವರಾದ  ಕಮಲಾಕರ ಕಡವೆ, ಅವರು ಸದ್ಯ ಮಹಾರಾಷ್ಟ್ರದ ಅಹಮದನಗರದಲ್ಲಿ ಕಾಲೇಜು ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ ಭಾಷೆಗಳಲ್ಲಿ ಬರೆಯುವ ಅವರು ಅನುವಾದದಲ್ಲಿಯೂ ಆಸಕ್ತರಾಗಿದ್ದಾರೆ. ಮೂರು ಕವನ ಸಂಕಲನ ಪ್ರಕಟಿಸಿದ್ದಾರೆ: ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ) ಮತ್ತು ಮುಗಿಯದ ಮಧ್ಯಾಹ್ನ (ಅಕ್ಷರ, 2010), ಜಗದ ಜತೆ ಮಾತುಕತೆ (ಅಕ್ಷರ, 2017).

More About Author