Poem

ಕಳೆದುಕೊಂಡ ಕವಿತೆಯ ತುಣುಕು

ನಿನ್ನೆ ನಸುಕಿನ ಜಾವದಲಿ
ಆಕಳಿಸುತ್ತ ಎದ್ದ ಕವಿತೆಯೊಂದು
ಕಿಲಕಿಲನೆ ನಗುತ್ತಲೇ ಅಡುತ್ತಿತ್ತು
ಮಧ್ಯಾಹ್ನ ರಸ್ತೆಬದಿ ಆರ್ಭಟಿಸುತ್ತಿತ್ತು
ಸಂಜೆ ಮುದುಡಿ ಮನೆಯಂಗಳದಲಿ
ಉಪದೇಶ ನೀಡುತ್ತಿತ್ತು
ಮಧ್ಯ ರಾತ್ರಿ ಇದ್ದಕ್ಕಿದ್ದ ಹಾಗೆ
ಮಾಯವಾಯಿತು
ಅಥವಾ
ನಾಪತ್ತೆವಾಯಿತು

ನೊಂದವರ ಹಾಡಗಿತ್ತು
ಬೆಂದವರ ನೋವಾಗಿತ್ತು
ಹಾಡುವವರ ದಾಟಿಯಾಗಿತ್ತು
ಅರಚುವವರ ಕಂಡು ಅವಿತು ಕುಳಿತುಬಿಡುತ್ತಿತ್ತು
ದುರ್ಗದಬೈಲ್ ರೋಡಿನಲ್ಲಿ ಕೈಹಿಡಿದು
ನಡೆಯುತ್ತಿತ್ತು
ಮಂದಿರ ಮಸೀದಿ ಚರ್ಚುಗಳಲ್ಲಿ
ಪ್ರಾರ್ಥನೆಗೀತೆಯಾಗಿತ್ತು
ಪಾಠಶಾಲೆಯ ಬೋರ್ಡಿನಲಿ ಮಿನುಗುತ್ತಿತ್ತು
ಸಭೆ ಸಮಾರಂಭಗಳಲ್ಲಿ ಆಮಂತ್ರಿತವಾಗುತ್ತಿತ್ತು
ಅಂಜುತ್ತಿತ್ತು,ಅದುರುತ್ತಿತ್ತು ಹೇಳುವದನ್ನು ಹೇಳುತ್ತಿತ್ತು
ಇದ್ದಕ್ಕಿದ್ದ ಹಾಗೆ ಮಾಯವಾಯಿತು
ಅಥವಾ
ನಾಪತ್ತೆವಾಯಿತು

ಅಂದು ಮಾಯವಾದ ಕವಿತೆ ಇಂದು
ಬೆತ್ತಲಾಗಿ ನಿಂತಿದೆ,
ಮೈಯಲ್ಲಿ ರಕ್ತ ಜಿನುಗುತ್ತಿದೆ
ಕಾಲುಗಳು ತರಗುಟ್ಟುತ್ತಿವೆ
ಕೂದಲುಗಳು ಹರಡಿಕೊಂಡು
ಆಕೃತಿಯನ್ನು ಬದಲಿಸಿ,
ಸಾಂತ್ವಾನಕ್ಕಾಗಿ
ಕೈಗಳನ್ನು ಅಗುಲಿಸಿ ಕರೆಯುತ್ತಿದೆ

ಮಡಿವಂತರ ಕೈಗಳು ಮುಟ್ಟಿ
ಮೈಲಿಗೆಯಾಯಿತು
ಬಲಿತವರ ಮೈಗಳು ತಾಕಿ ದಲಿತವಾಯಿತು
ನೆಮ್ಮದಿ ವಿಷಯವೇನು ಗೊತ್ತಾ...?
ಅದು ಇನ್ನೂ ಉಸಿರಿಸುತ್ತಿದೆ
ತನ್ನ ಹೆಬ್ಬೆರಳ ಉರಿ ನಿಂತಿದೆ

ರಾಯಸಾಬ ಎನ್ ದರ್ಗಾದವರ

ರಾಯಸಾಬ ಎನ್ ದರ್ಗಾದವರ ಅವರು ಮೂಲತಃ ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾಮದವರು. ವೃತ್ತಿಯಿಂದ ಹುಬ್ಬಳ್ಳಿ ಶಹರದ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಪೇದೆಯಾಗಿ 2012 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿ ನೆಹರು ಕಾಲೇಜಿನಿಂದ ಪದವೀಧರರು. ಕತೆ, ಕವಿತೆ ಬರೆಯುವ ಮೂಲಕ ಸಾಹಿತ್ಯಿಕವಾಗಿ ತಮ್ಮನ್ನುಗುರುತಿಸಿಕೊಂಡಿದ್ದಾರೆ. ದಿನಪತ್ರಿಕೆ, ವೆಬ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಅವರ ಕವಿತೆಗಳು "ಕಾವ್ಯದ ಹುಳು"ತಂಡದವರು ನಡೆಸಿಕೊಡುವ 'ಚಿತ್ರ ನೋಡಿ ಕವಿತೆ ಬರೆಯಿರಿ' ಸ್ಪರ್ಧೆಯಲ್ಲಿ ದ್ವಿತೀಯ ಮತ್ತು ಕನ್ನಡ ಕಲರವ ಮತ್ತು ಅವ್ವ ಪುಸ್ತಕಾಲಯದವರು ನಡೆಸಿದ ಕಾವ್ಯ ಸ್ಪರ್ಧೆಯಲ್ಲಿ ಟಾಪ್ 5 ಸರಣಿಯಲ್ಲಿ ಬಹುಮಾನ ಪಡೆದಿವೆ.

More About Author