Story

ಕಳೆದುಕೊಂಡವರು

ಮುಂಜಾನೆಯಿಂದಲೆ ಮಳೆ ಹಿಡಿದಿತ್ತು. ಗಿರೀಶ ಕೊಡೆ ಬಿಚ್ಚಿ ರಸ್ತೇಗಿಳಿದ. ಊರ ಮೇಲೆ ಹೆಪ್ಪುಗಟ್ಟಿ ನಿಂತಿರುವ ನಿನ್ನೆಯ ಮೋಡಗಳು ಸೀನಿದಂತೆ ಆಗೊಮ್ಮೆ ಈಗೊಮ್ಮೆ ಜೋರಾಗಿ ಉದುರಿ ಮತ್ತೇ ಸುಮ್ಮನಾಗುತ್ತಿದ್ದವು. ರಸ್ತೇಯ ಇಕ್ಕೇಲದ ಗುಂಡಿಗಳು, ತೆಗ್ಗು ತೆವರುಗಳೆಲ್ಲ ತುಂಬಿ ಹರಿಯುತ್ತಿದ್ದವು. ಕಣ್ಣಿಗೆ ಕಾಣುವ ಹಸಿರೆಂಬುದೆಲ್ಲ ತೊಳೆದ ಮುತ್ತಿನಂತೆ ನಿಗಿ ನಿಗಿ ಹೊಳೆಯುತ್ತಿತ್ತು. ಊರಿಗೆ ಹೋಗಲು ಗಿರೀಶನಿಗೆ ಎಳ್ಳಷ್ಟು ಮನಸಿಲ್ಲ. ಬೋರ್ಡ್ ಮೀಟಿಂಗು, ಬಸ್ ಸ್ಟ್ರೈಕು, ಅಥವಾ ಸ್ನೇಹಿತನ ಮದುವೆ, ಹೀಗೆ ಯಾವುದಾದರೊಂದು ಕಾರಣ ಹೇಳಿ ಮರೆಮಾಚೊದಕ್ಕೆ ಯತ್ನಿಸಿದ. ಆದರೆ ಪತ್ರದ ಕೊನೆಗೆ ರತ್ನಳ ಬಗೆಗೆ ಎರಡು ಸಾಲು ಬರೆದ ಬರಹ ಅವನ್ನನ್ನು ಕಂಬಂದಂತೆ ನಿಲ್ಲಿಸಿ ಬಿಟ್ಟಿತ್ತು. ತೀವ್ರ ಆಲೋಚನೆಗೀಡು ಮಾಡಿತ್ತು. ಅಡಕತ್ತರಿಯಲ್ಲಿ ಸಿಕ್ಕ ಹಗೆ ಒದ್ದಾಡಿದ. ಶಾನುಭೋಗರಿಗೆ ಧೃಡವಾದ ನಂಬಿಕೆ ಗಿರೀಶ ಬಂದೇ ಬರುತ್ತಾನೆಂದು. ಜಗಲಿ ಮೇಲೆ ಬೆಳಗಿನಿಂದ ಕಾಯುತ್ತ ಕುಳಿತವರು ಅಲ್ಲೆ ನಿದ್ದೆ ಹೋಗಿದ್ದರು. ಗಿರೀಶ ಮನೆ ಬಂದಾಗ ಸಂಜೆ ಆರು ಗಂಟೆ ಸಮಯ. ಊರಿನ ಪಶ್ಚಿಮಕ್ಕಿರುವ ಹಿರಿ ಆಲದ ಮರದ ಎದುರಿನ ಬೇವಿನ ಮರದ ಕಂಬಗಳ ಅಗಲವಾದ ಜಗುಲಿಯ ದೆವ್ವಿನ ಮನೇಯೆ ಶಾನುಬೊಗರದು. ಅತ್ಯಾಕರ್ಷವಾಗಿ ಕೆತ್ತಿದ ಕುಸುರಿ ಕೆಲಸ ಮನೆಯ ಬಾಗಿಲು, ಕಿಟಕಿ, ಚೌಕಟ್ಟು ಕಪಾಟುಗಳ ಅಂದವನ್ನು ಹೆಚ್ಚಿಸಿತ್ತು. ಅದ್ಯಾಕೊ ಅದರ ಮೇಲೆ ಕಪ್ಪು ಧೂಳು ಮುತ್ತಿಕೊಂಡಿತ್ತು. ಸಂಜೆಯಾದಂತೆಲ್ಲ ಮಳೆ ಮತ್ತೆ ಜೋರಾಗಿಯೆ ಹಿಡಿಯಿತು. ಜಗುಲಿ ಮೇಲೆ ನಿಂತುಕೊಂಡು ಕೊಡೆ ಮುಚ್ಚಿ ನೀರು ಜಾಡಿಸಿದ. ಮಳೆಗೆ ಪ್ಯಾಂಟು ಅರ್ಧ ತೊಯ್ದು ಹೋಗಿತ್ತು. ತೇವವಾದ ಕೈಗಳಿಂದ ಶಾನುಭೋಗರ ಮುದಿ ಬುಜವನ್ನು ಅಲುಗಿಸಿ ಎಬ್ಬಿಸಿದ. ಎಂತಹ ಮಳೆ, ಗಾಳಿ ಬಿದ್ದರು ಅವರು ಮೈಮೇಲೆ ಬಟ್ಟೆ ಹಾಕೋದೆ ಇಲ್ಲ. ಶಾನುಭೋಗರು ವಿಶೇಷವಾಗಿ ಹಬ್ಬ ಹರಿದಿನಗಳಲ್ಲಿ ಮಾತ್ರ ಬಟ್ಟೆ ಹಾಕುತ್ತಿದ್ದರು.

ಮನೆಯಲ್ಲಿ, ಗದ್ದೆ ಕಡೆ ಹೋದಾಗ ಊರಲ್ಲಿ ಇದ್ದರು ಕೂಡ ಕೆಂಪು ದಡಿಯ ನೈಲಾನ ಧೋತರ, ಅದರ ಮೇಲೊಂದು ಕೆಂಪು ಚೌಕ ಹಾಕಿಕೊಂಡರೆ ಮುಗಿತು. ಎಚ್ಚರವಾಗಿ ನಿದ್ದೆಗಣ್ಣಿನಿಂದ ಗಿರೀಶನನ್ನು ನೋಡಿ “ಇಂತಹ ಮಳೆಯಲ್ಲಿಯೆ ಬಂದೆಯಾ ಮಾರಾಯ..ನಡಿ ಮೊದಲು ತಲೆ ಒರಿಸಿಕೊ ಶೀತವಾದಿತು..ಪಾರ್ವತಿ..ಪಾರ್ವತಿ ಗಿರೀಶ ಬಂದಿದ್ದಾನೆ ಎನ್ನುತ್ತ ತಾವೇ ಕಂಬಳಿ ಸುತ್ತಿಕೊಂಡು ತಲೆ ಒರೆಸಿಕೊಳ್ಳಲು ಚೌಕ ತರಲು ಒಳ ಹೋದರು. ಗಿರೀಶ ಕಟ್ಟಿಗೆಯ ಆರಾಮ ಕುರ್ಚಿಯ ಮೇಲೆ ಕುಳಿತು ತಲೆ ಒರೆಸಿಕೊಳ್ಳತೊಡಗಿದರೆ, ಎದುರಿಗೆ ಇನ್ನೊಂದು ಟವಲ ಹಿಡಿದು ಬಂದ ಶಾನುಭೋಗರು “ಹೇಗೆ ನಡಿತಿದೆ ನಿನ್ನ ಅಧ್ಯಾಪಕ ವೃತ್ತಿ..? ಎಂದು ಕೇಳಿದಕ್ಕೆ ಗಿರೀಶ ಅವರನ್ನು ಒಮ್ಮೇ ನೋಡಿ ಸುಮ್ಮನಾಗುವುದಕ್ಕು ಒಳಗಡೆಯಿಂದ ಪಾರ್ವತಿಯವರು ಚಹಾದ ಕಪ್ ಹಿಡಿದು ಒಳ ಬರುವುದಕ್ಕು ಸಮ ಆಯ್ತು. “ಗಿರಿ ಹೇಗಿದಿಯಪ್ಪಾ..? ಅಂತ ಕೇಳಿದರು ಪಾರ್ವತಿ. ಗಿರೀಶ ತಲೆ ಒರೆಸಿಕೊಳ್ಳುವುದನ್ನು ತಡೆದು ಎದ್ದು ನಿಂತ. “ಅಮ್ಮಾ ನಾ ಚನ್ನಾಗಿದಿನಿ..ನೀವ ಹೇಗಿದ್ದಿರಿ..? ಅಂದ ನಾಚುತ ಅವಳು ಬಿಸಿ ಚಹಾದ ಕಪ್‍ನ್ನು ಅವನ ಕೈಗಿಡುತ್ತ “ ಚಹಾ ಕುಡಿದು ಬಟ್ಟೆ ಬದಲಾಯಿಸು. ರತ್ನಾ ಅನಂತನ ಪ್ಯಾಂಟು ಶರ್ಟು ಇದ್ದರೆ ತಂದು ಕೊಡು ಗಿರಿಗೆ..ಕೂಗುತ ಅಡುಗೆ ಮನೆಯತ್ತ ಹೋದರು. ಗಿರೀಶ ತಲೆ ಒರೆಸಿಕೊಂಡು, ತನ್ನ ಬ್ಯಾಗಿನಿಂದ ನೀಲಿ ಅಂಚಿನ ಬಿಳಿ ಪಂಚೆ ಸುತ್ತಿಕೊಂಡು ಅನಂತನ ಶರ್ಟು ಧರಿಸಿಕೊಂಡು ಬಿಸಿ ಬಿಸಿ ಚಹಾ ಹೀರತೊಡಗಿದ. ಈ ಮಳೆಗೆ, ಈ ಕುಟುಂಬದ ಪ್ರೀತಿಗೆ ಚಹಾದ ಸವಿ ಇಮ್ಮಡಿಗೊಂಡಿತ್ತು. ಈ ಮನೇಲಿ ರತ್ನಳ ಜೊತೆ ಅದೆಷ್ಟು ಸಲಾ ಜಗಳಾಡಿಲ್ಲಾ. ನಾನು..? ಅವಳು ಕೋಪಿಸಿಕೊಂಡು ಚೌಕಟ್ಟಿಗೆ ಆತುಕೊಂಡು ನಿಂತ ಅದೆಷ್ಟು ನೆನಪುಗಳು ಈ ಮನೆ ಗೋಡೆ, ಬಾಗಿಲು, ಚೌಕಟ್ಟಿಗಳಲ್ಲಿ, ಸಿಕ್ಕಿಹಾಕಿಕೊಂಡಿವೆ. ಅತೀಯಾದ ಕೋಪ ಬಂದಾಗ ತಲೆಯ ಹಿಂದಿನ ಕೂದುಲು ಹಿಡಿದು ಎಳೆದಾಡಿ ರಂಪಾ ಮಾಡುತ್ತಿದ್ದುದು, ಆಟವಾಡಿದ್ದು ಒಬ್ಬರಲ್ಲಿ ಇನ್ನೊಬ್ಬರು ಅನುರಕ್ತವಾಗಿದ್ದು, ಕಣ್ಣಲ್ಲಿ ಮಾತಾಡಿ ಮುಗುಳು ನಕ್ಕಿದ್ದು, ತಬ್ಬಿಕೊಂಡು ಚುಂಬಿಸಿದ್ದು..ಮನದ ಗೋಡೆಯ ಮೇಲೆ ಎಲ್ಲ ತೆರೆ ಬಿಚ್ಚುವ ಮುನ್ನವೇ “ಚನ್ನಾಗಿದಿರಾ..? ಅಂತ ಒಳ ಬಾಗಿಲಲ್ಲಿಯೇ ನಿಂತು ರತ್ನಾ ಕೇಳಿದಳು ಎಂದು ಇಲ್ಲದ ನಾಚಿಕೆಯೊಂದಿಗೆ, ನಿಜಕ್ಕೂ ಅದು ನಾಚಿಕೆಯಲ್ಲ..ಹೂಂ...ಸಂಕೋಚವೇ ಸರಿ. ಅವಳು ನಾಚಿಕೆ ಪಟ್ಟರೇ ಮುಗುಳು ನಗುತ್ತಾಳೆ ಹೆದರಿ ಹಿಂದೆ ಸರಿಯುವದಿಲ್ಲ..ಎಷ್ಟೋ ಬಾರಿ ಅವಳ ನಾಚಿಕೆಯಲ್ಲಿ ಅಂದವಾದ ಮುಗುಳ ನಗೆ ನೋಡಿದ ಗಿರೀಶನಿಗೆ ಸದ್ಯ ಯೋಗಭಟ್ಟರ ಕಣ್ಣಿಗೆ ಬಿದ್ದಿಲ್ಲ ಎಳಕೊಂಡ ಹೋಗಿ ಸಿನೇಮಾ ಮಾಡಿರೋರು.. “ಹೂಂ ಎಂದ ಗಿರೀಶ ಚಹಾ ಕುಡಿದು ಲೋಟ ಕೆಳಗಿಟ್ಟು ಹೆಗಲ ಮೇಲಿನ ಚೌಕದಿಂದ ಮತ್ತೊಮ್ಮೆ ತಲೆ, ಮುಖ ಒರೆಸಿಕೊಂಡ. ಶಾನುಭೋಗರು ಗಿರೀಶನ ಅಧ್ಯಯನ, ಭೋಧಾನಾ ರೀತಿ, ಬಾಡಿಗೆ ಮನೆ, ಮೆಸ್ ಊಟ, ಸಂಬಳ, ಸಾಹಿತ್ಯ ಸೇವೆ ಇತ್ಯಾದಿಯಲ್ಲ ಮಾತಾಡಿದರು ಹೊರಗಡೆ ಮಳೆ ಇನ್ನು ಜೋರಾಗಿಯೆ ಹಿಡಿದಿತ್ತು. ಹಳೆ ಮನೆಯಾದ್ದರಿಂದ ಹೆಂಚುಗಳೆಲ್ಲ ಸರಿದಿದ್ದು ಮಳೆ ಹನಿಗಳು ಸೂರಿನಿಂದ ಈಚೆ ನೆಗೆದು ಬರುತ್ತಿದ್ದವು. “ಹಾಳಾದ ಮನೆ ಚಿಕ್ಕ ಮಳೆಯಾದರು ಕೂಡ ಸೋರುತ್ತೆ. ನಿನ್ನೆ ಕೋತಿಗಳ ಹಿಂಡೆ ಬಂದಿತ್ತು ನಾ ಅವುಗಳನ್ನು ಗದರಿಸದೆ ಇದ್ದರು ಹಿತ್ತಲಿನಲ್ಲಿನ ಪರಂಗಿ ಗಿಡಗಳನ್ನೆಲ್ಲ ಹಾಳ ಮಾಡಿವೆ ಕೋಪದಿಂದ ಗುಡುಗಿದರು. ಮಳೆ ಜೋರಾಗಿಯೆ ಹಿಡಿಯಿತು. “ನಿಮ್ಮ ಕಾಲೇಜಿನಲ್ಲಿ ಅದ್ಯಾರೋ ಈ ಸಲ ಯುನಿವರ್ಸಿಟಿಗೆ ರ್ಯಾಂಕ್ ಬಂದಿದಾದಾರಂತಲ್ಲ..? ಅದರಲ್ಲು ನಿನ್ನ ವಿಷಯದಲ್ಲಿ. ಪೇಪರನಲ್ಲಿ ನಿನ್ನದು ಆ ಹುಡುಗನ ಹೆಸರು ಬಂದಿತ್ತಂತೆ ಪೋಸ್ಟಮಾಟರ್ ಶಂಕರರಾವ್ ಗದ್ದೆ ಕಡೇ ಬಂದಾಗ ಹೇಳತಿದ್ದರು. ತಮ್ಮ ಸುಕ್ಕುಗಟ್ಟಿದ ಮುಖದ ತುಂಬಾ ಕೈಯಾಡಿಸಿಕೊಳ್ಳುತ್ತ ನುಡಿದರು. ಎಕ್ಚುವಲಿ ಉತ್ತರ ಕರ್ನಾಟಕದವರು ಬುದ್ದಿವಂತರೇ ಆದರೆ ಪ್ರೋತ್ಸಾಹವಿಲ್ಲ ಅವರಿಗೆ..ಭಾಷೇ ಬಿರುಸಾದರೇನಂತೆ ಬೇಂದ್ರೆ ಇರಲಿಲ್ವೇ..? ಇತ್ತೀಚೆಗೆ ನೀನು ಅದೇ ರಾಜಧಾನಿ ಭಾಷೇ ಕಲ್ತಿರಬೇಕಲ್ಲಾ..? ಹಲ್ಲು ಬಿಟ್ಟು ಕ್ಷಣ ನಕ್ಕರು. ಅವರ ಸಂತೋಷದ ನಗೆಯ ಹಿಂದೆ ರತ್ನಳಿಗೆ ಸದ್ಯ ಯಾವ ಅಪಾಯವಿಲ್ಲ ಬಿಡು ಅಂತ ಅನಿಸಿತು ಗಿರೀಶನಿಗೆ.

ಮುಖ್ಯವಾಗಿ ಚರ್ಚೆ ಎದ್ದಿರೋದೆ ಅನಂತನಿಂದಲೇ ಎಂಬುದು ಗಿರೀಶನಿಗು ಗೊತ್ತಿದೆ. ಇಲ್ಲದಿದ್ದರೆ ಶಾನುಭೋಗರೇಕೆ ತನಗೆ ಪತ್ರ ಬರೆಯಬೇಕು..? ಅನಂತನೆ ಪತ್ರ ಬರೆಯಬಹುದಿತ್ತಲ್ಲ. ಅಥವಾ ಪೊನಿನಲ್ಲಿ ಮಾತಾಡಬಹುದಿತ್ತಲ್ಲ. ಅದು ಬೇಡ ಅವನೆ ಬೆಂಗಳೂರವರೆಗು ಬರಬಹುದಿತ್ತು. ಬೆಂಗಳೂರ ಅವನಿಗೆನು ಹೊಸದೇ..?ಎಂದು ಗಿರೀಶ ಯೋಚಿಸಿದ. ಮುಖ್ಯವಾಗಿ ರತ್ನಳ ಕುರಿತು ನಿರ್ಧರಿಸುವಾಗ ನಾನು ಪ್ರಮುಖ ಹೇಗಾಗಬಲ್ಲೆ..? ಇದರಲ್ಲಿ ನನ್ನ ಒಪ್ಪಿಗೆಯ ಮಾತು ಯಾತಕ್ಕೆ..? ಅಸಮಂಜಸವೆನಿಸಿತು. ಅನಂತನೇ ರತ್ನಳನ್ನು ಮದುವೆಯಾಗುವುದಾಗಿ ಹೇಳಿದ್ದ, ಚಿಕ್ಕಂದಿನಿಂದಲೂ ಅವರಿಬ್ಬರನ್ನು ಗಂಡ ಹೆಂಡತಿ ಎಂದು ಗೇಲಿ ಮಾಡುತ್ತಿದ್ದವರು ಇವರೇ ಹಾಗೂ ಮನೇಲಿ ಎಲ್ಲರ ಅಭಿಲಾಷೆ ಇದ್ದದ್ದು ಇದೆ ಆಗಿತ್ತು. ಇದು ಎಂದೊ ತೆಗೆದುಕೊಂಡ ನಿರ್ಧಾರ. ಆದರೆ ಈಗ ಶಾನುಭೋಗರು ಹೇಳುವ ರೀತಿ ಬೇರೆನೆ ಆಗಿತ್ತು. ಅದರಲ್ಲು ಇವರ ದ್ವಂದ್ವ ನೀತಿಯೆನೆಂದರೆ..ಅನಂತನಿಗೆ ಸರಿಯಾದ ವಧು ರತ್ನ ಅಲ್ಲ. ಅದಕ್ಕೆ ಸಂಬಂದಿಕರಲ್ಲಿ ಬೇರೆ ಹೆಣ್ಣು ನೋಡೋಣ ಅಂತ ಕಡ್ಡಿಮುರಿದಂತೆ ಹೇಳಿದ್ದು. ಅನಂತು ಈ ವರೆಸೆಗೆ ಉಗ್ರನಾದುದರಲ್ಲಿ ತಪ್ಪೇನಿಲ್ಲ. ಇದಕ್ಕಾಗಿ ತಂದೆ ಮಗನಲ್ಲಿ ವಾಗ್ವಾದ ನಡೆದಿದೆ, ಊಟ ಬಿಟ್ಟು ಸಿಟ್ಟು ಮಾಡಿಕೊಂಡು ಮುಖ ತಿರಿವಿ ತಿರುಗಾಡಿದ್ದು ಇದೆ. ಇದು ಊರ ಪ್ರಮುಖರವರೆಗು ಹೋಯ್ತು. ಇನ್ನು ವ್ಯಗ್ರನಾದ ಅನಂತ “ನನಗೆ ಮದುವೆ ಬೇಕು, ಮದುವೆ ಮಾಡಿ, ನಾನು ರತ್ನಳನ್ನು ಮದುವೆ ಆಗ್ತಿನಿ ಅಂತಪಟ್ಟು ಹಿಡಿದು ವಾದಿಸಿದ, ಶಾನುಭೋಗರಿಗೆ ಕಿಂಚತ್ತು ಗೌರವ ಕೊಡದೆ ಮನೇಯನ್ನು ಬೀದಿ ಮಾಡಿದ. ಇಷ್ಟಾದರು ಶಾನುಭೋಗರು ಒಪ್ಪಲಿಲ್ಲ. “ನೀನು ಅವಳಿಗೆ ತಕ್ಕ ವರನಲ್ಲ ಬೇಡ. ಈ ಮಾತೊಂದು ಬಿಟ್ಟು ಬೇರೆ ನುಡಿಯಲಿಲ್ಲ. ಅನಂತನಿಗೆ ಇದರಿಂದ ತಲೆ ಕೆಟ್ಟು ಹೋಯ್ತು. ಅನಂತ ಹವ್ಯಾಸಗಳ ದಾಸನಾದ. ಊರತುಂಬಾ ಸಾಲ ಮಾಡಿಕೊಂಡ. ರಾತ್ರಿ ಹನ್ನೇರಡರ ಮೇಲೆ ಮನೆಮುಂದೆ ನಿಂತು ರಂಪಾ ಮಾಡಿ ಶಾನಭೋಗರ ಮಾನ ಮೂರು ಕಾಸಿಗೆ ತಂದು ಹಚ್ಚಿದ. ಇದಕ್ಕು ಬಗ್ಗಲ್ಲ ಅಂದರೆ ಅವಳನ್ನ ಎತ್ತಿಕೊಂಡ ಹೋಗ್ತಿನಿ ರಜಿಸ್ಟ್ರಾರ್ ಮದುವೆ ಆಗ್ತಿನಿ, ಬೇರೆಮನೆ ಮಾಡ್ತಿನಿ.. ಹೊಟ್ಟಿಲಿ ಹುಟ್ಟಿದ ಮಗನಿಗಿಂತ ಸಾಕಿದ ಮಗನೆ ನಿಮಗೆ ಹೆಚ್ಚಾದನೆ..? ಹೀಗಂತ ಹಾರಾಡಿದ್ದು ಬರೀ ಆರು ತಿಂಗಳ ಹಿಂದೆಯಷ್ಟೆ ನಡೆದ ಘಟಣೆ.

ಮದುವೆ ಬೇಕಾದರೆ ಮಾಡಿಕೊಳ್ಳಲಿ ಬೇಡ ಅಂದವರ್ಯಾರು..? ಆವಾಗಲಾದರು ಸಂಸಾರದ ಅರಿವಾಗುತ್ತೆ. ಖರ್ಚು ಎನಿದೆ..? ಸಂಸಾರ ಭಾರ ಅಂದರೆ ಅರಿವಿಗೆ ಬರುತ್ತೇ..? ಎಂದು ಶಾನುಭೋಗರು ಗಿರೀಶನ ಮುಂದೆ ಒಮ್ಮೆ ನುಡಿದಿದ್ದರು. ಆದರೆ ರತ್ನಳ ಬಿಟ್ಟು ಎಂಬ ಮಾತನ್ನು ಗಿರೀಶನಿಗೂ ಅನಂತವಿಗೂ ಒಟ್ಟಿಗೆ ಕೇಳುವಂತೆ ಹೇಳಿದ್ದು ಗಿರೀಶನಿಗೆ ಇಂದಿಗೂ ನೆನಪಿದೆ. ಪಾರ್ವತಿ ಕೋಣೆಯಲ್ಲಿ ದೀಪ ತಂದಿಟ್ಟು ಹೋದಳು. ಮಳೆ ಜೋರಾಗಿಯೆ ಹಿಡಿದಿತ್ತು. ಗಾಳಿಯು ಅದಕ್ಕೆ ಸಹಾಯಕವಾಗಿ ಭರ್ರ್ರೆಂದು ಸಪೋರ್ಟ್ ಮಾಡುತ್ತಿತ್ತು. ಗಿರೀಶ ಬಂದು ಅರ್ಧ ಗಂಟೆಯ ಮೇಲಾದರು ರತ್ನ ಒಮ್ಮೇ ಬಂದು ಹೋದವಳು ಮತ್ತೇ ಈಚೇ ಬಂದಿರಲಿಲ್ಲ ಶಾನುಭೋಗರು ಗಿರೀಶನ ಮುಂದಿನ ಓದಿನ ಬಗ್ಗೆ ಕೇಳಿದರು. ಸಂಶೋಧನೆ ಮಾಡು ಎಂದರು. ಗಿರೀಶ ಯಾವೂದನ್ನು ಗಂಭೀರವಾಗಿ ಪರಿಗಣಿಸದೆ ಮೌನವಾಗಿ ಕುಳಿತಿದ್ದ. ರಾತ್ರಿ ವಿವಿಧ ಭಕ್ಷಗಳನ್ನು ಮಾಡಿದರು. ಪ್ರತಿಸಲ ಹುಣ್ಣಿಮೆಗೆ ಸಿಹಿ ಮಾಡಿದಾಗ ರತ್ನ ಎಷ್ಟು ಆಸ್ತೇಯಿಂದ ಬಡಿಸುತ್ತಿದ್ದಳು. ಒತ್ತಾಯ ಮಾಡಿ ತಿನ್ನಿಸುತ್ತಿದ್ದಳು. ಗಿರೀಶ ಒಂದು ವೇಳೆ ಅವಳು ಎಡೆಗೆ ಹಾಕಿದ್ದನ್ನು ತಿನ್ನದೆ ಹೋದರೆ..ಅವನಿಗೆ ಮನೆಯೆಲ್ಲ ಹುಡುಕಿದರು ಕಾಣುತ್ತಿರಲಿಲ್ಲ. ತಾನೂ ತಿನ್ನದೆ ಮುಖ ಬಿಗಿದುಕೊಂಡು ಜ್ವರ ಅಂತ ನೆವ ಹೇಳಿ ಮಲಗಿ ಬಿಡುತಿದ್ದಳು. ಇವತ್ತು ಊಟ ಮಾಡಿ ಗಿರೀಶ ಹಾಗೂ ಶಾನುಭೋಗರು ಒಟ್ಟಿಗೆ ಮೇಲೆದ್ದರು ರತ್ನ ಅಡಿಗೆ ಮನೆಕಡೆ ಬರಲೇ ಇಲ್ಲ ಕತ್ತಲು ಕೂಡ ಖಾಲಿ ಖಾಲಿ ಅನಿಸಿತವನಿಗೆ. ಅಟ್ಟ ಏರಿ ಮಲಗಲು ಬಂದ. ಚಿಕ್ಕ ಕೋಣೆಯಾದರು ಭದ್ರವಾಗಿತ್ತು. ಶಾನುಭೋಗರಿಗೆ ಮೊದಲಿನಿಂದಲು ಪುಸ್ತಕದ ಹುಚ್ಚು. ಈ ಹುಚ್ಚು ಅವರ ನಿಷ್ಠೆಯನ್ನು ಮುರಿದಿದೆ ಅಂದರೆ ತಪ್ಪಾಗಲ್ಲ. ಇದನ್ನು ವೃತ್ತಿಯೆಂಬಂತೆ ಬೆಳಸಿಕೊಂಡು ಬಂದಿದ್ದಾರೆ. ಅಟ್ಟದ ಮೇಲಿನ ಕೋಣೆ ತುಂಬ ಪುಸ್ತಕಗಳೆ ತುಂಬಿದ್ದವು. ಕತೆ, ಕಾದಂಬರಿ, ಕವನ ಸಂಕಲನ, ನಾಟಕಗಳು, ವಿಮರ್ಶೆ, ಇತ್ಯಾದಿ ಹೀಗೆ ಗೋಡೆಯ ಮೇಲೆ ಟ್ಯಾಗೋರ, ಅನಂತಮೂರ್ತಿ, ಭೈರಪ್ಪ, ಕಾರಂತ, ಕುವೆಂಪು ಅದೇ ಹಳೇಯ ಭಾವಚಿತ್ರಗಳು. ಗೊಡೆಗುಂಟ ಇಳಿದುಬಂದ ಮಳೆಯ ನೀರು ಚಿತ್ರಗಳ ಮೇಲೆ ದಾಟಿ ಹೋಗಿತ್ತು. ಟೇಬಲ್ ಮೇಲೆ ಬಿಳಿ ದುಪ್ಪಟ ಹೊದಿಕೆ, ಪೇಪರು ಪೆನ್ನು, ದಿನಪತ್ರಿಕೆ ಅದರ ಪಕ್ಕದಲ್ಲೆ ಮಲಗಲೆಂದು ಹಾಕಿದ ಮರದ ಹಳೇ ಮಂಚ, ಅದರ ಮೇಲೆ ಎರಡು ಹೊದಿಕೆ ಕಂಬಳಿ ಹಾಸಿತ್ತು. ತಲೆ ದಿಂಬಿನ ಗೋಡೆಗೆ ಸರಸ್ವತಿ ಚಿತ್ರ ಅದರ ಪಕ್ಕದಲ್ಲೆ ಬೇಂದ್ರೆಯವರ ಇನ್ನೊಂದು ಭಾವಚಿತ್ರ.

ಶಾನಭೋಗರಿಗೆ ಬೇಂದ್ರೆಯವರ ಬಗ್ಗೆ ಹುಚ್ಚು ಅಭಿಮಾನ. ಅವರ ಗರಿ ಕವನ ಸಂಕಲನವನ್ನಂತೂ ಹತ್ತು ಹನ್ನೇರಡು ಬಾರಿ ಓದಿದ್ದಾರೆ. ಅವರ ಕಾವ್ಯ ವಾಚನ ರೀತಿ, ರಚನಾಕ್ರಮ ಕವನಗಳ ವಿಷಯ ಇತ್ಯಾದಿ ಶಾನುಭೋಗರ ವ್ಯಕ್ತಿತ್ವವನ್ನೆ ಬದಲಾಯಿಸಿತ್ತು. ಬೆಳಗು, ಜೋಗಿ ಮುಂತಾದ ಕವನಗಳು ಅವರೆದೆಯಲ್ಲಿ ಮನೆಮಾಡಿದ್ದವು. ಬೇಂದ್ರೆಯವರ ಸಾಹಿತ್ಯವನ್ನು ತಮ್ಮ ಜೀವನದ ರೀತಿ ನೀತಿಗಳಿಗಣುಗುಣವಾಗಿ ತೋಗಿಸಿ ನೋಡುವ ವಿಚಿತ್ರ ಗುಣವುಳ್ಳವರಾಗಿದ್ದರು. ಸ್ವತಃ ಅವರ ಕವನಗಳಿಗೆ ತಾವೇ ರಾಗ ಸಂಯೋಜನೆ ಮಾಡಿ ಹಾಡುತ್ತಿದ್ದರು. ಹಾಡಿನ ಮರ್ಮವನ್ನು ಅವರೇ ವಿವರಿಸುತ್ತಿದ್ದರು. ಅವರ ಜೋಗಿ ಕವನವನ್ನು ವಿಮರ್ಶೆ ಮಾಡತೊಡಗಿದರೆ ಒಂದು ದಿನ ಪೂರ್ತಿ ಮುಗಿಯುತ್ತಿರಲಿಲ್ಲ. ಗಿರೀಶ ಇದರಲ್ಲಿ ಸದಾ ತನ್ಮಯನಾಗಿರುತ್ತಿದ್ದ. ಬೇಂದ್ರೆಯವರ ಅಪ್ಪಟ ಪರಿಚಯ ಸಾಹಿತ್ಯ ವಿವಿಧ ಮಜಲುಗಳನ್ನು ಗಿರೀಶನಿಗೆ ಚಿಕ್ಕವನಿಂದಲು ತಿಳಿಸಿದವರು ಶಾನಭೋಗರೆ. ಗಿರೀಶನ ತಂದೆ ಹೋದಾಗ ಅವನಿಗೆ 5 ವರ್ಷ. ತಾಯಿ ಜಯಲಕ್ಷ್ಮೀ ಪ್ರೈಮರಿ ಸ್ಕೂಲ್ ಟೀಚರಾಗಿದ್ದರು. ಅಂಕೋಲೆಗೆ ಬಂದು ಮನೆ ಮಾಡಿದಾಗ 10 ವರ್ಷ. ಒಂದು ಸಲ ಜೂನ್ ತಿಂಗಳನಲ್ಲಿ ಅದೇ ತಾನೇ ಸ್ಕೂಲಗಳು ಆರಂಭವಾಗಿದ್ದವು. ರೋಹಿಣಿ ಮಳೆ ಭರ್ಜರಿಯಾಗಿಯೆ ಹಿಡಿದಿತ್ತು. ನದಿ, ಹಳ್ಳ, ಕೆರೆಗಳು ತುಂಬಿ ಹರಿಯುತ್ತಿದ್ದವು. ಎಲ್ಲೆಡೆ ನೆರೆ ಬಂದಿತ್ತು. ಪಕ್ಕದೂರಿನಿಂದ ಶಾಲೆ ಮುಗಿಸಿ ಮನೆಗೆ ಬರುವಾಗ ದಾರಿ ಮಧ್ಯೆ ಬಸ್ಸು ಆಯತಪ್ಪಿ ನೀರಿಗಿಳಿಯಿತು. ಬಸ್ಸಿನಲ್ಲಿದ್ದ ಮೂವತ್ತು ಜನರ ಪೈಕಿ ಜಯಲಕ್ಷ್ಮೀ ಕೂಡ ಒಬ್ಬಳಾಗಿದ್ದಳು. ಸಂಜೆ ಊರ ಹೊರಗಡೆ ತಾಯಿಯ ದಾರಿ ಓಡುತ್ತ ಅಳುತ್ತ ನಿಂತಿದ್ದ ಗಿರೀಶನನ್ನು ಓಡಿ ಪಾರ್ವತಿಯೇ ಎತ್ತಿಕೊಂಡು ಮನೆಗೆ ಕರೆ ತಂದಿದ್ದಳು. ರಾತ್ರಿ ಊಟ ಕೊಟ್ಟು ಉಪಚರಿಸಿ ಸಮಾಧಾನ ಪಡಿಸಿದರು ತಾಯಿಯ ದುಃಖ ಗಿರೀಶನನ್ನು ಕಾಡುತ್ತಲೆ ಇತ್ತು. ವಿಷಯ ತಿಳಿದ ಮೇಲಂತೂ ಶಾನಭೋಗರಿಗೂ ಪಾರ್ವತಿಗು ತಲೆ ಮೇಲೆ ಸಿಡಿಲೆ ಬಿದ್ದಂತಾಯಿತು ಪಾಪ ಕೂಸು. ಅಂತ ಕಣ್ಣೀರಿಟ್ಟರು. ಶಾನುಭೋಗರಿಗೆ ತಾನೇ ವಿಷಯ ತಿಳಿಸಿ “ ರೀ ಮಗು ಅನಾಥವಾಗುತ್ತೆ ನಾವೇ ಸಾಕಿಕೊಂಡ ಬಿಡೋಣವೇ..? ನಮ್ಮ ಅನಂತನ ಜೊತೆಗೆ ಆಡಿಕೊಂಡಿರಲಿ ಪಾಪ.. ಅಂತ ಅತೀ ಕಕ್ಕುಲಾತಿಯಿಂದ ಬೇಡಿಕೊಂಡಾಗ ಶಾನುಬೋಗರಿಗೆ ಬೇರೆ ದಾರಿಯಿಲ್ಲದೆ ಒಪ್ಪಿಕೊಂಡಿದ್ದರು. ಅಂದಿನಿಂದ ಶಾನುಭೋಗರಿಗೆ ಇಬ್ಬರು ಗಂಡು ಮಕ್ಕಳು ಎಂಬ ಹುಂಬುತನ ಬಂದುಬಿಟ್ಟಿತು. ಸೂಕ್ಷ್ಮಸ್ವಭಾವವನ್ನು ತಕ್ಷಣ ಅರ್ಥೈಯಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದ ಶಾನುಭೋಗರಿಗೆ ಅನಂತ ಮತ್ತು ಗಿರೀಶನ ನಡುವೆ ಇರುವಿನ ಅಂತರ ತಿಳಿಯಲು ಬಹಳ ಕಾಲವೇನು ಹಿಡಿಯಲಿಲ್ಲ. ಅದನ್ನು ಗಿರೀಶನ ಮುಂದೊಮ್ಮೆ ವಿವರಿಸಿದ್ದರು ಸಹ. ಆದರೆ ಅನಂತನ ಮುಂದೆ ಬಾಯಿಬಿಟ್ಟಿರಲಿಲ್ಲ. ಚಿಕ್ಕಂದಿನಿಂದಲೂ ಬೆಳೆದು ಬಂದಿದ್ದ ರತ್ನಳ ಒಡನಾಟ, ದೊಡ್ಡವರಾದಂತೆ ಸ್ನೇಹಕ್ಕೆ ತಿರುಗಿ ನಿಕಟ ಸಂಪರ್ಕದೊಂದಿಗೆ ಒಬ್ಬರನ್ನೊಬ್ಬರು ಆಕರ್ಷಿಸುವಂತೆ ಮಾಡಿತ್ತು. ಇದಕ್ಕೆ ಗಿರೀಶನ ಮುಗುಳುನಗೆ, ಮೌನ, ಬುದ್ದಿವಂತಿಕೆಯೇ ಕಾರಣ. ಅನಂತ ಸದಾ ಸಿಡುಕು ಸ್ವಭಾವದವ. ಒರಟು ಮಾತು, ಕೋಪತಾಪಗಳಿಂದ ಹುಡುಹುಡು ಅನುತ್ತಿದ್ದ. ರತ್ನ ಅನಂತನಿಗೆ ಹತ್ತಿರವಾಗಲು ಹೋದಂತೆಲ್ಲ ಮುಖಕ್ಕೆ ಹೊಡೆದಂತೆ ಹಳಿಯುತ್ತಿದ್ದ. ಹೀಗಾಗಿ ರತ್ನ ಅವನಿಂದ ಕ್ರಮೇಣ ಅಷ್ಟಷ್ಟೇ ಹಿಂಜೆರೆಯುತ್ತಲೆ ಬಂದಳು. ಗಿರೀಶ ಮತ್ತು ಅನಂತು ಒಂದು ತರಗತಿಯಲ್ಲಿ ಓದುತ್ತಿದ್ದರೆ ರತ್ನ ಇವರಿಬ್ಬರಿಗಿಂತಲೂ ಎರಡು ಕ್ಲಾಸು ಹಿಂದೆ ಇದ್ದಳು. ಅದ್ಯಾಕೋ ಎನೋ ಇತ್ತೀಚೆಗೆ ಗಿರೀಶನೆಂದರೆ ಶಾನೊಭೋಗರಿಗೆ ವಿಚಿತ್ರ ಒಲವು.

ಗಿರೀಶ ಮತ್ತು ಅನಂತು ಕಾಲೇಜು ಸೇರಿದಾಗಲೂ ಅವರವರ ಆಯ್ಕೆಗಳು ಕೂಡ ಭಿನ್ನವಾಗಿದ್ದವು. ಅನಂತು ಹೇಗೆಲ್ಲ ಹೆಣಗಾಡಿದರು ಡಿಗ್ರಿ ಮುಗಿಸುವಲ್ಲಿ ವಿಫಲನಾದ ಎರಡು ಮೂರು ವಿಷಯಗಳು ಪಾಸಾಗಲೆ ಇಲ್ಲ. ಮುಂದೆ ಓದುವ ಹರಸಾಹಸವ ಕೈ ಬಿಟ್ಟು ಪೋಲಿ ಹುಡುಗರ ಸ್ನೇಹ ಇತ್ತೀಚೆಗೆ ಜಾಸ್ತಿಯಾಗಿಯೆ ಹಚ್ಚಿಕೊಂಡಿದ್ದ. ಶಾನುಭೋಗರು ಒಮ್ಮೆ ಗದರಿ ಹೇಳಿದರು, ಒಮ್ಮೇ ಬೈದರು, ಇನ್ನೊಮ್ಮೆ ಮಧ್ಯರಾತ್ರಿಯವರೆಗು ಕಾದು ಕುಳಿತರು. ಒಂದು ದಿನ ಇವನ ಸ್ನೇಹಿತರನ್ನು ಹುಡುಕಿಕೊಂಡು ಹೋಗಿ ಚನ್ನಾಗಿ ಬೈದು ಬಂದರು ಇದರಿಂದ ಇನ್ನಷ್ಟು ಕುಪಿತನಾದ ಅನಂತು ಅದನ್ನು ಹೆಚ್ಚು ಮಾಡತೊಡಗಿದ. ಯಾಕೋ ಏನೋ ಮಗ ಮತ್ತು ತಂದೆಯ ನಡುವೆ ಕಂದಕ ದೊಡ್ಡದಾಗುತ್ತಲೆ ಹೊರಟಿತು. ಗಿರೀಶ ಧಾರವಾಡಕ್ಕೆ ಬಂದು ವಿಶ್ವವಿದ್ಯಾಲಯದಲ್ಲಿ ಎಂ.ಎ. ಮಾಡಿ ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗಿ ಕೆಲಸಕ್ಕೂ ಸೇರಿಕೊಂಡ. ತಿಂಗಳಿಗೊಮ್ಮೆ ಶಾನುಭೋಗರನ್ನು, ರತ್ನಳನ್ನು ನೋಡಲು ಯೋಗಕ್ಷೇಮ ವಿಚಾರಿಸಿಕೊಳಂಡು ಬರುತ್ತಿದ್ದ. ಅನಂತು ದಿನದಿಂದ ದಿನಕ್ಕೆ ಪೋಲಿ ಹುಡುಗರ ಸಹವಾಸದಿಂದ ಕೆಡುತ್ತಲೆ ಇದ್ದ. ಈ ಪರಿವೆ ಅವನಿಗೆ ಏಕೇ ಬರುತಿಲ್ಲವೋ ಗೊತ್ತಾಗಲಿಲ್ಲ. ಡಿಗ್ರಿನಲ್ಲಿ ಉಳಿದ ವಿಷಯಗಳನ್ನು ಪಾಸು ಮಾಡಿಕೊಳ್ಳಲೆ ಇಲ್ಲ. ಒಂದೊಮ್ಮೆ ಸೀಗರೇಟು ಸೇದುವಾಗ ಶಾನುಭೋಗರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕುಬಿದ್ದಿದ್ದ. ಶಾನುಭೋಗರು ಅಲ್ಲೇ ಛೀಮಾರಿ ಹಾಕಿದ್ದರು ಆದರು ಆ ಪ್ರಪಾತದಿಂದ ಆತ ಮೇಲೇಳುವ ಸಾಹಸ ಮಾಡಲಿಲ್ಲ. ಅಂದಿನಿಂದ ಶಾನುಭೋಗರು ಅವನ ಮೇಲಿನ ಮನಸ್ಸನು ತೆಗೆದು ಬಿಟ್ಟರು. ಸದಾ ಗಿರೀಶನೆ ಅವರಿಗೆ ಆಪ್ತವಾಗುತ ಹೋದ. ಅವನದೆ ಕನವರಿಕೆ, ನೆನಪು, ಮಾತು. ರತ್ನಳಿಗೂ ಅನಂತು ತುಂಬ ದೂರವಾಗುತ್ತಾ ಹೊರಟವನ ಅಸಭ್ಯತನ ಹೇಸಿಗೆಯನಿಸಿತು. ರಾತ್ರಿ ಮತ್ತೇರಿಸಿಕೊಂಡು ಬಂದು ಬಾಗಿಲ ಬಳಿ, ಹಿತ್ತಲಿನಲ್ಲಿ, ಅಥವಾ ಅಂಗಳದಲ್ಲಿ ಹೀಗೆ ಎಲ್ಲೇಂದರಲ್ಲಿ ಕುಡಿದು ಬೀಳುತ್ತಿದ್ದ. ಚಿಕ್ಕವರು ದೊಡ್ಡವರು ಅನ್ನುವ ಮರ್ಯಾದೆ ಮೊದಲೆ ಇರಲಿಲ್ಲ, ಬಾಯಿಗೆ ಬಂದದ್ದನ್ನು ಹೊರಳಿಸುತ್ತಲಿರಲಿಲ್ಲ. ಊರ ಪಂಚಾಯ್ತಿಗೆ, ನ್ಯಾಯ ತೀರ್ಮಾನಕ್ಕೆ, ದೇವಸ್ಥಾನಕ್ಕೆ, ಮದುವೆಗೆ ಹೀಗೆ ಅನೇಕ ಕಾರ್ಯಕ್ರಮಗಳಿಗೆ ಹೋಗುವುದನ್ನು ಶಾನುಭೋಗರು ನಿಲ್ಲಿಸಿ ತುಂಬಾ ದಿನಗಳೆ ಆಗಿದ್ದವು. ತಂದೆ ಮಗನ ಮಧ್ಯೆ ಮಾತು ನಿಂತು ವರ್ಷಗಳೆ ಕಳೆದಿದ್ದವು. ಇವರಿಬ್ಬರಿಗೂ ಕೊಂಡಿಯಾಗಿ ರತ್ನ ಇಲ್ಲ ಪಾರ್ವತಿಯೇ ಆಗಬೇಕಿತ್ತು. ಈ ವಿಷಯ ಗಿರೀಶನಿಗೆ ಊರಿಗೆ ಬಂದಾಗೆಲ್ಲ ತಿಳಿಯುತ್ತಿದ್ದಾರೆ ಬಾಯಿ ಬಿಟ್ಟು ಹೇಳುವ ಸಾಹಸ ಮಾಡಿರಲಿಲ್ಲ. ಶಾನುಭೋಗರಿಗೆ ರತ್ನಳಬದುಕು ನೆನೆಪಿಸಿಕೊಂಡು ಕರುಳು ಚುರ್ರ್ ಅನ್ನುತ್ತಿತ್ತು.

ಬೆಳಿಗ್ಗೆ ಹಲ್ಲು ಉಜ್ಜುತ ಜಗುಲಿಯ ಮೇಲೆ ನಿಂತಿದ್ದ ಗಿರೀಶನಿಗೆ ಅಂಗಳದಲ್ಲಿ ಭಟ್ಟರ ಮಕ್ಕಳಿಬ್ಬರು ನೀರಿನ ಬಿಂದಿಗೆಯೊಂದನ್ನು ಸಮಶಕ್ತಿ ಪ್ರಯೋಗಿಸಿ ಎತ್ತಿ ಒಯ್ಯುತ್ತಿರುವದನ್ನು ನೋಡಿ ನಿಬ್ಬೆರಗಾದನು. ಚಿಕ್ಕವನಿದ್ದಾಗ ಆ ಬಾವಿಯಿಂದ ಅನಂತು ತಾನೂ ಹೀಗೆ ಬಟ್ಟೇಗಳನ್ನೆಲ್ಲ ಒದ್ದೇ ಮಾಡಿಕೊಂಡು ನೀರು ತರುತ್ತಿದ್ದದ್ದು ನೆನಪಿಗೆ ಬಂತು. ಹೆಗಡೆಯವರ ಮನೆ ಮುಂದೆ ಖಾಲಿ ಬಿಂದಿಗೆ ಹಿಡಿದು ಯಕ್ಷಗಾನದ ತಾಲೀಮು ನೋಡುವಾಗ ಹಿಂದಿನಿಂದ ಬೆನ್ನಟ್ಟಿ ಹೊಡೆಯಲು ಬರುತ್ತಿದ್ದ ಅವರ ಮಗನ ಕೈಗೆ ಸಿಗದೆ ಓಡಿ ಹೋಗುವಾಗೊಮ್ಮೆ ಬಳೆಗಾರ ರಾಚಯ್ಯನಿಗೆ ಹಾಯ್ದು, ಅವನ ಕೈಯಲ್ಲಿದ್ದ ಮೂರು ಬಳೆ ಮಲಾರಗಳನ್ನು ಕೆಡವಿ ಒಡೆದದ್ದು ಆತ ಶಾನೊಭೋಗರ ಬಳಿ ವರದಿ ಹೇಳುವಾಗ ಹೆದರಿ ಹಿತ್ತಲಲ್ಲಿಯೆ ಸೀಬೆ ಮರ ಹತ್ತಿ ಕುಳಿತದ್ದು ಎಲ್ಲ ನೆನಪಾಯ್ತು. ಒಂದು ಸಲ ಶಾನುಭೋಗರು ಪಕ್ಕದ ಹಳ್ಳಿಗೆ ಹೋಗಿದ್ದಾಗ ಅನಂತ ತಾನೂ ಸೇರಿಕೊಂಡು ಶಾಲೆಗೆ ಚಕ್ಕರ ಹೊಡೆದುಗೆಳೆಯ ಮೂರ್ತಿಗಳ ತೋಟದಲ್ಲಿ ಹಲಸಿನ ಕಾಯಿ ಕೀಳಲು ಹೋಗಿ ಇರುವೆ ಗೂಡಿಗೆ ಕೈಹಾಕಿ ಕಚ್ಚಿಸಿಕೊಂಡಿದ್ದು ಅಲ್ಲಿಂದ ಕೈಬಿಟ್ಟು ಕೆಳಗೆ ಬಿದ್ದು ಸೊಂಟ ಹಿಡಿದುಕೊಂಡಿದ್ದು ಒಂದು ನೆನಪು ಬಂದುಹೋಯಿತವನಿಗೆ. ಶಾನುಭೋಗರು ಸ್ನಾನ, ತಿಂಡಿ ಮುಗಿಸಿ ಗಿರೀಶನನ್ನು ಕರೆದುಕೊಂಡು ಕೆರೆ ಕಡೆಗೆ ಹೊರಡಲು ಸಿದ್ದರಾದರು. ಒಳಗಿನಿಂದ ಮುಖ ಒರೆಸಿಕೊಳ್ಳುತ ಬಂದ ಗಿರೀಶ ಅವರನ್ನು ಕೂಡಿಕೊಂಡ. ಕೆರೆಯ ಆ ದಂಡೆಯ ಮೇಲೆ ಹಸನಾದ ಕಲ್ಲು ನೋಡಿ ಕುಳಿತರು. ಗಿರೀಶ ಆಚೆ ದಡದ ಗಿಡಮರಗಳನ್ನೆ ನೋಡುತ್ತಿದ್ದ. “ರತ್ನಳನ್ನ ನಿನಗೆ ಕೊಟ್ಟು ಮದುವೆ ಮಾಡಬೇಕು ಅಂತ ನಿರ್ಧಾರ ಮಾಡಿದಿನಿ ಎಂದರು ಶಾಂತವಾಗಿ. ಗಿರೀಶ ಆ ಮಾತುಗಳ ಕೇಳಿ ತಕ್ಷಣ ವಿಚಿಲಿತನಾದ.

ಶಾನುಭೋಗರಿಗೆ ವಯಸ್ಸು ಸರಿದಂತೆ ಬುದ್ದಿಯಲ್ಲಿಯು ಏರುಪೇರಾಗುತ್ತಿದೆ ಅನಿಸಿತು.. ಅವರು ಮುಂದುವರೆಸಿ,.” ಅವಳಿಗೆ ನೀನೆ ಸರಿಯಾದ ವರ, ಕೈಯಲ್ಲಿ ಬೆಣ್ಣೆ ಹಿಡಿದು ತುಪ್ಪಕ್ಕೆ ಯಾಕೆ ಅಲೆಯಬೇಕು..? ನೀವಿಬ್ಬರೂ ಚನ್ನಾಗಿ ಬಾಳ್ತೀರಿ ಅಂತ ನನಗೆ ನಂಬಿಕೆ ಇದೆ. ತಾಯಿ ಇಲ್ಲದ ಇಬ್ಬರೂ ನೀವುಗಳು ನಡುವೆ ಹೊಂದಾಣಿಕೆ ಹೇಳಿಕೊಡಬೇಕಾಗಿಲ್ಲ. ನೀನು ಒಳ್ಳೆ ಹುದ್ದೆಯಲ್ಲಿರುವೆ ಕೈತುಂಬ ಸಂಬಳ ರತ್ನಾ ಒಳ್ಳೇ ಹುಡುಗಿ, ಗುಣವಂತೆ ಜೊತೆಗೆ ಜಾಣೆ ಕೂಡ. ನೀವಿಬ್ಬರು ಮದ್ವೆಯಾದರೆ ನಾನು ನೀವಿದ್ದಲ್ಲಿಗೆ ಬಂದು ಇದ್ದುಬಿಡ್ತಿನಿ. ಇರೊಂದೊಂದು ಮನೆ ಅದಷ್ಟು ಗದ್ದೆ ಅವನಿಗೆ ಇರುತ್ತೆ ಬೇಕಾದರೆ ಇಟ್ಟಕೊಳ್ಳಲಿ. ಸಾಕಾದ್ರೆ ಅದನ್ನು ಕುಡಿದು ಹಾಳ ಮಾಡಿಕೊಳ್ಳಲಿ. ಅಂತ ಗದ್ಗಗದಿತರಾಗಿ ನುಡಿದರು. ಅರವತ್ತೇಳು ವಸಂತಗಳನ್ನು ತುಂಬ ನಿಷ್ಠೆ ಹಾಗೂ ಬಹುತ್ವದಿಂದ ಕಳೆದಿದ್ದ ಶಾನುಭೋಗರಿಗೆ ಇದೆ ಮೊದಲ ಬಾರಿ ಕಣ್ಣಲ್ಲಿ ನೋವಿನಿಂದ ಕಣ್ಣೀರು ಬಂದಿತ್ತು. ಅವರು ತಮ್ಮ ಮುದಿ ಕೈಗಳಿಂದ ಗಿರೀಶನ ಕೈಗಳನ್ನು ಹಿಡಿದು ಕೇಳಿಕೊಂಡರು. ಶಾನುಭೋಗರ ಪ್ರೀತಿಗೆ ಹುಚ್ಚನಾದ ಗಿರೀಶ ದುಃಖದಿಂದ ಅಸ್ತವ್ಯಸ್ತನಾದ. “ರತ್ನಾ ಅನಂತನಿಗೆ ಸೇರಬೇಕಾದವಳು ಬಾಲ್ಯದಿಂದಲೂ ಅವರಲ್ಲಿ ಗಂಡ-ಹೆಂಡತಿ ಅಂತ ಹೇಳಿ ಕರೆದು ಆಸೆ ಮೂಡಿಸಿದ್ದಿರಿ ಈಗ ಸಂಬಂದ ಮುರಿಯೋದು ತಪ್ಪಲ್ವೇ ..? ಶಾನುಭೋಗರು ತಡೆ ಎಂಬಂತೆ ಕೈಮಾಡಿ ಗಿರೀಶನ ಮಾತನ್ನು ಅರ್ಧಕ್ಕೆ ನಿಲ್ಲಿಸಿ

“ರತ್ನ ನಾ ಬೆಳಿಸಿದ ಹುಡುಗಿ ಚಿಕ್ಕಂದಿನಿಂದಲೂ ಅನಂತನಿಗೆ ಕೊಟ್ಟು ಮದುವೆ ಮಾಡಬೇಕೆಂದು ಆಡಿಕೊಂಡಿದ್ವಿ..ಆದರೆ ಅವನು ಹಾಗೇ ಉಳಕೊಂಡಿದಾನಾ..? ಈಗವನು ಚಿಕ್ಕವನಲ್ಲ. ಬೆಳೆದು ನಿಂತಿದ್ದಾನೆ ಮನೆ ಮನೆತನದ ಬಗೆಗೆ ಅವನ ಕಾಳಜಿ, ತಂದೆ ತಾಯಿಯ ಕುರಿತಾದ ಅವನ ಪ್ರೀತಿ ಭಕ್ತಿ ದಿನನಿತ್ಯ ನೋಡುತ್ತಿದ್ದಿನಲ್ಲಪ್ಪಾ..? ಸಾಲದೇ..ಮೊದಲಿನ ಅನಂತ ಈಗ ಅನಂತದೊಳಗೆ ಮಾಯವಾಗಿದ್ದಾನೆ. ನೋಡು ರತ್ನ ನಾ ಬೆಳಿಸಿದ ಹುಡುಗಿ ಅವಳನ್ನು ಸರಿಯಾದವನಿಗೆ ಕೊಟ್ಟು ಮದುವೆ ಮಾಡುವುದು ನನ್ನ ಜವಾಬ್ದಾರಿ. ಇನ್ನಾರದೋ ಒತ್ತಾಯಕ್ಕೋ ಬಲವಂತಕ್ಕೋ ಅಲ್ಲ..

“ ಅದೇ ಮನಸನ್ನು ಅನಂತನ ಮೇಲೆ ಮಾಡಬಹುದಲ್ವಾ..? ನಾನು ಯಾವ ಮುಖವಿಟ್ಟು ಈ ವಿಷಯವನ್ನು ಅನಂತನಿಗೆ ಹೇಳಲಿ..? ಹಾಗೇ ನಾ ನಡೆದುಕೊಂಡರೆ ಅನಂತನಿಗೆ ನನ್ನ ಮೇಲೆ ಅದೆಷ್ಟು ಕೆಟ್ಟ್ ಸೇಡು ಬೆಳೆಯಬಹುದು ಅಂತ ನಿಮಗನಿಸದೆ..? ಇಲ್ಲಿಯವರೆಗೆ ಅನಂತನ ಹೆಂಡತಿ ಅಂತ ಮಾನಸಿಕವಾಗಿ ಸಿದ್ದಗೊಂಡವಳಿಗೆ ಇಂದಿನಿಂದ ನನ್ನ ಹೆಂಡತಿ ಅಂದರೆ ಅವಳ ಮಾನಸಿಕ ಸ್ಥಿತಿ ಹೇಗಿರಬಹುದು..? ಅನಂತ ಈಗ ಕುಡಿಯುತ್ತಿರಬಹುದು..ಆದರೆ ರತ್ನಾ ಇದಕ್ಕಿಂತ ಮೊದಲಿನಿಂದಲೂ ಅನಂತನ್ನ ಮೆಚ್ಚಿಕೊಂಡಿರಲಿಲ್ವೇ..? ಮದುವೆ ಆದ ಮೇಲಾದರು ಅನಂತ ಸರಿ ದಾರಿಗೆ ಬರಬಹುದಲ್ವಾ..? ಏನೆ ಆದರು ಈ ಕುಟುಂಬದ ಎಲ್ಲ ಹಂತದಲ್ಲೂ ನಾನು ಜೊತೆಗೆ ಇರತಿನಿ..ನೀವು ಧೈರ್ಯ ಕಳೆದುಕೊಳ್ಳಬೇಡಿ. ನನಗೆ ಮದುವೆ ಮಾಡುವ ಇಚ್ಚೇಗೆ ನಾನು ವಿರೋದಿಸುತ್ತಿಲ್ಲ ನೀವು ಒಂದು ಕಲ್ಲು ಗುಂಡನ್ನು ತೋರಿಸಿದರು ನಾನು ಒಪ್ಪುವೆ. ಅಂದ ಶಾನುಭೋಗರು ತಲೆ ಕೊಡವಿ ನಿರಾಸೆಯಿಂದ ನುಡಿದರು “ನೀನೆಂತ ಗಂಡು ಮಾರಾಯ ಹುಡುಗಿ ಪರವಾಗಿ ತಂದೆ ಸ್ಥಾನದಲ್ಲಿ ನಿಂತು ನಾನೇ ಎಲ್ಲ ಹೇಳುತ್ತಿರುವಾಗ ಮತ್ತೇಕೆ ಒಣ ಜಂಭ ನಿನಗೆ..? ಮೊದಲು ದೊಡ್ಡವರು ಹೇಳಿದ್ದನ್ನು ಕೇಳಿ ಪಾಲಿಸೊದನ್ನು ಕಲ್ತುಕೋ.. ತುಸು ಗಂಭೀರವಾಗಿ ಒರಟಾಗಿಯೆ ನುಡಿದರು. ಗಿರೀಶ ನಿರುತ್ತರನಾದ. ಬಿಸಿಲು ಬಲಿಯುತ್ತಿತ್ತು. ಹೊಂಡದಲ್ಲಿ ಬಂಡೆಗಲ್ಲೊಂದು ಬಿದ್ದಂತೆ ಇಬ್ಬರ ಮನಸ್ಸುಗಳು ಹೊಯ್ದಾಡುತ್ತಿದ್ದವು.

ಮಧ್ಯಾಹ್ನ ಇಬ್ಬರು ಮೌನವಾಗಿ ಮನೆಗೆ ಬಂದಾಗ ಸಮಯ ಎರಡು ಗಂಟೆ ಆಗಿತ್ತು. ಅನಂತನಿಗೆ ಊರಿಗೆ ಹೋಗಿ ಪತ್ರ ಬರೆಯಬೇಕೆಂದು ನಿರ್ಧರಿಸಿದ. ಎದುರಿಗೆ ಸಿಕ್ಕಿದ್ದರೆ ಮಾತಾಡಿ ಎಲ್ಲ ಹೇಳಬೇಕೆಂದುಕೊಂಡಿದ್ದ ಆದರೆ ಅದಾಗಲಿಲ್ಲ. ಮಧ್ಯಾಹ್ನ ಊಟ ಮುಗಿಸಿ ಮಲಗಲೆಂದು ಅಟ್ಟದ ಕೋಣೆ ಸೇರಿದ. ಅನಂತು ಈಗ ಎಲ್ಲಿರಬಹುದು..? ಅವನ್ನನ್ನು ಹುಡುಕಿಕೊಂಡ ಹೋಗಲೇ..? ಭಟ್ಟರ ಅಡಿಕೆ ತೋಪುನಲ್ಲೊ..? ಊರ ಹೊರಗಿನ ಹಾಳ ಮಂಟಪದಲ್ಲೋ..ಇಸ್ಪಿಟು ಆಡುತಾ ಗೆಳೆಯರೊಡನೆ ಎಲ್ಲಿ ಅಲೆಯುತ್ತಿದ್ದಾನೆ..? ಅನಂತು ಯಾಕೆ ಹೀಗೆ ಬದಲಾದ..? ತಂದೆಯೆಂಬ ಗೌರವ ಕೊಡದಷ್ಟು ಅಸಹಿಷ್ಣುನಾದುದು..ಯಾಕೆ.. ಚಿಂತಿಸುತ ಒರಗಿದವನಿಗೆ ನಿದ್ದೆ ಯಾವಾಗ ಬಂತೊ ಗೊತ್ತಿಲ್ಲ ಅಲ್ಲೇ ಒರಗಿದ. ಎಚ್ಚರವಾದಾಗ ಕೆಳಗಡೆ ಬಾಯಿ ಕೇಳಿಸುತ್ತಿತ್ತು. “ನೀ ನನ್ನ ಮಗನೇ ಅಲ್ಲ ಹಾಳಾದವನೇ ಬೆಂಕಿ ಹೊಟ್ಟೇಲಿ ಬೂದಿ ಹುಟ್ಟಿದಂತೆ ಹುಟ್ಟಿದಿಯಾ ಯಾವ ಜನ್ಮದ ಪಾಪವೋ ರಾಘವೇಂದ್ರಾ.. ಕೃಷ್ಣಾ.. ನನ್ನ ಪಾಲಿಗೆ ಎಂದೋ ಸತ್ತೋದೆ ನೀ ನಾನು ಬದುಕಿರೋದು ನನ್ನ ಸಾಕು ಮಗನಿಗಾಗಿ ನಿನಗಾಗಿ ಅಲ್ಲ ತಿಳ್ಕೊ..ಹಾಗಂತ ಊರೆಲ್ಲ ಸಾರಿ ಬಂದಿದಿನಿ. ಈ ಮೈಯಲ್ಲಿ ಜೀವ ಇರೋಗಂಟ ರತ್ಮಳನ್ನ ನಿನಗೆ ಕೊಡಲ್ಲ ಈ ಮಾತನ್ನ ಎದೇಲಿ ಬರೆದಿಟ್ಟುಕೊಂಡ ಬಿಡು. ಶಾನುಭೋಗರು ಕೂಗಾಡುತ್ತಿದ್ದರು. ಈ ಮಾತಿಗೆ ಅನಂತ “ಅದ್ಹೆಂಗ ಕೊಡಿದಿಲ್ಲ ನಾನು ನೋಡತಿನಿ.. ಅಷ್ಟೇ ಯಾಕೆ ಅದ್ಯಾವನು ಅವಳನ್ನು ಮದಿವಿಯಾಗ್ತಾನೇ ಅದನ್ನು ನೋಡತಿನಿ.. ಅಂತ ಕೂಗಾಡುತ್ತ ತೂರಾಡುತ್ತ ಹೊರಗೆ ಹೋದ. ಈ ಜಗಳಮುಗಿಯುವವರೆಗಾದರು ನಿದ್ದೆ ಉಳಿಯಬಾರದಿತ್ತೆ ಅನಿಸಿತು. ಶಾನುಭೋಗರು ನನಗಾಗಿ ಮಗನೊಂದಿಗೆ ವೈರತ್ವ ಕಟ್ಟಿಕೊಳ್ಳುತ್ತಿದ್ದಾರೆ ನಾನು ಊರಿಗೆ ಬರಬಾರದಿತ್ತು ಅಂತ ಅನಿಸತೊಡಗಿತು ಗಿರೀಶನಿಗೆ. ಇಲ್ಲಿ ಇದ್ದಷ್ಟು ಹೊತ್ತು ತಂದೆ ಮಗನ ನಡುವೆ ವಾಗ್ವಾದ ನಡೆಯುತ್ತಲೆ ಇರುತ್ತದೆ. ಅಷ್ಟೇ ಅಲ್ಲದೆ ಅನಂತು ನನ್ನ ಮೇಲೆ ವೃತಾ ಹಗೇ ಸಾಧಿಸುತ್ತಾನೆ. ಇಂದು ರಾತ್ರಿಯೇ ಹೊರಡಬೇಕೆಂದು ನಿರ್ಧರಿಸಿದ. ಹಾಸಿಗೆ ಬಿಟ್ಟು ಮೇಲೆದ್ದ. ಒಂದು ವೇಳೆ ಶಾನುಭೋಗರು ಇದ್ಯಾಕೆ ದಿಢೀರನೆ ಹೊರಟೆ ಅಂತ ಕೇಳಿದರೆ ಮೈಸೂರಿಗೆ ಟ್ರೈನಿಂಗ್ ಇದೆ, ನಾಳೆ ಅದಕ್ಕೆ ಹೊರಡಲೆಬೇಕು ಕಾಲೇಜಿನಿಂದ ನಾನೆ ಪ್ರತಿನಿಧಿಸಬೇಕಾಗಿದೆ ಅಂತ ಹೇಳಬೇಕು ಎಂದುಕೊಂಡ. ಅಟ್ಟ ಇಳಿದು ಬಂದಾಗ ಶಾನುಭೋಗರು ಮೊಳಕಾಲ ಮೇಲೆ ಮುಖವಿಟ್ಟುಕೊಂಡು ಕುಳಿತಿದ್ದರು. ಮಯಸ್ಸಾದ ಮುಖದಲ್ಲಿ ಇದೀಗಷ್ಟೇ ತಂದೆ ಮಗನ ನಡುವೆ ನಡೆದ ವಾಗ್ವಾದದ ದಟ್ಟಛಾಯೆ ಎದ್ದು ಕಾಣುತಿತ್ತು. ರಾತ್ರಿ ಊಟಮಾಡಿ ಗಿರೀಶ ಹೊರಡಲು ಸಿದ್ದನಾದ ಈಗ ಶಾನುಭೋಗರಿಗೆ ಮಾತನಾಡಲು ಅವಕಾಶ ಕೊಡಬಾರದು ತಾನೇ ಮಾತಾಡಬೇಕು ಅಂದುಕೊಂಡ.

“ಬೇರೆ ಮನೆ ಮಾಡತಿದಿನಿ ನೀವು ಬಂದು ಹೋಗಿ ಈ ಬಾರಿಯ ಮೈಸೂರ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟಿಗೆ ಹೋಗೊಣ. ನಿಮಗು ಸ್ಥಳ ಬದಲಾವಣೆ ಆಗುತ್ತೆ ಇಲ್ಲಿನ ಗದ್ದೆ ಮನೆ ಇದ್ದು ಇರುತ್ತೆ ಬಂದು ಹೋಗಿ ಅಂದ. ಶಾನುಭೋಗರು ಗಾಡವಾಗಿ ಒಮ್ಮೇ ನಿಟ್ಟುಸಿರ ಬಿಟ್ಟರು. “ನಾನು ಬಂದು ಏನು ಮಾಡಲಿ..? ಬಿದ್ದು ಹೋಗುವ ಮರ ರತ್ನಳನ್ನ ಕರಕೊಂಡು ಹೋಗು ಅವಳು ಬಂದರೆ ನಾನು ಬಂದಿರತಿನಿ. ಅವಳಿಗೆ ಹೊಸ ಜಗತ್ತು ನೋಡುವ ತವಕ. ನನಗೊ ಕಾಡಿಗೆ ಹೋಗುವ ಆಸೆ. ಜೀವನದಲ್ಲಿ ಆಸೆ ಅಂತ ಉಳದಿರೋದೊಳೆ ಈ ರತ್ನ. ಎಂದು ಹೇಳುತ್ತ ಮಧ್ಯದಲ್ಲಿಯೆ ಮೌನವಾಗಿ ತಲೆ ಕೆಳಹಾಕಿದರು. ಗಿರೀಶನಿಗೆ ಅವರ ಸ್ಥಿತಿ, ತನ್ನ ಅಸಹಾಯಕತೆ ಹಾಗೂ ಬಾಗಿಲಿನಿಂದಾಚೆ ನೋಡುತ್ತಿರುವ ರತ್ನಳ ಮುಗ್ದ ಹಾಗು ಆಸೆಯ ಕಂಗಳು ಅವನಿಗೆ ಹೊಟ್ಟಿಗೆ ತಿವಿದಂತಾದವು. ಅವರ ಮೌನ ನರಕಯಾತನೆ, ಅರ್ಥವಾದರೂ ನಡೆಸಿಕೊಡಲಾಗದ ಅಸಹಾಯಕನಾಗಿದ್ದ.

“ಇದೆಲ್ಲ ಆಗದ ಮಾತು. ನಾನು ಹಾಗೇ ಮಾಡಿದರೆ ಅನಂತನ ಮೇಲೆ ಹಗೆ ಸಾಧಿಸಿದಂತಾಗುತ್ತದೆ. ಅವನು ಇನ್ನಷ್ಟು ಕುಪಿತನಾಗಿ ನಿಮಗು ಅಮ್ಮನಿಗು ಏನೆಲ್ಲ ಮಾಡೊದಕ್ಕು ಹೆದರಲ್ಲ. ಜೊತೆಗೆ ಇನ್ನು ಹಾಳಾಗುತ್ತಾನೆ. ಹೀಗೆ ಹೊಂದಿಸಿ ಹೊಂದಿಸಿ ಹೇಳಲು ಪ್ರಯತ್ನಿಸಿದ ಗಿರೀಶ. ಶಾನುಭೋಗರು ತಲೆಕೊಡವಿ ಮೇಲೆದ್ದು “ದೊಡ್ಡವರ ಮಾತಿಗೆ ಬೆಲೆ ಕೊಡದ ನೀನೆಂತ ಅಧ್ಯಾಪಕನೋ..ನೀ ಇನ್ನೇನು ಕಲಿಸಬಲ್ಲೇ..? ನಿನ್ನ ಕೈಯಲ್ಲಿ ಕಲಿತ ಹುಡುಗರು ಅದೇನ ಉದ್ದಾರಾಗ್ತಾರೋ ಎಲ್ಲ ಹಾಳಾಗಿ ಹೋಗ್ತಿರಿ ಹೋಗಿ..ಹೋಗಿ...ಎಂದರು ಗಿರೀಶನಿಗೆ ಮಾತಾಡಲಾಗಲಿಲ್ಲ. ಕೊನೆಗೆ “ ನಾನು ಹೊರಡತಿನಿ ಎಂದ್ಹೇಳಿ ಕಾಲು ಮುಗಿಯಲು ಬಾಗಿದ. ಶಾನುಭೋಗರು ಎದ್ದು ಒಳ ಹೋದರು ಸುಮ್ಮನೆ.

ಒಳಗಡೆ ರತ್ನ ಲಾಟೀನು ದೀಪ ಎತ್ತರಿಸಿ ಇಡುತ್ತಿದ್ದಳು. ಬ್ಯಾಗ ಹೆಗಲಿಗೇರಿಸಿಕೊಂಡು ಅಂಗಳಕ್ಕೆ ಕಾಲಿಟ್ಟಾಗ ಸಣ್ಣದಾಗಿ ಮಳೆ ಹಿಡಿದಿತ್ತು. ಹೆಗಡೆಯವರ ಮನೆಯಿಂದ ಯಕ್ಷಗಾನದ ತಾಲೀಮು ಕೇಳಿಬರುತ್ತಿತ್ತು.. ಶಾಸ್ತ್ರೀಯವರ ಮನೇಲಿ ಅತ್ತೆ ಸೊಸೆಯರ ವಾಗ್ವಾದ ಹಾಗೆ ರಸ್ತೇಗೆ ಬಂದಿತ್ತು. ಅಂಗಳದಲ್ಲಿ ಏಕಾಂತವಾಗಿ ಬಿದ್ದುಕೊಂಡಿದ್ದ ರಸ್ತೇಯ ಗುಂಡಿಗಳಲ್ಲಿ ನೀರು ತುಂಬಿ ನಿಂತಿದ್ದವು. ಗಿರೀಶ ರತ್ನಳನ್ನು ಶಾನುಭೋಗರನ್ನು ಅನಂತನನ್ನು ನೆನಪಿಸಿಕೊಂಡು ಸುಮ್ಮನೆ ಹಿಂತಿರುಗಿ ನೋಡಿದ. ಜಗುಲಿಯ ಮೇಲೆ ರತ್ನ ಲಾಟೀನು ಹಿಡಿದು ಕಣ್ಣೀರು ಸುರಿಸುತ್ತ ನಿಂತಿದ್ದಳು. ಎದೆಗೆ ಕಲ್ಲು ಹೊಡೆದಂತಾಯ್ತು. ಕಣ್ಣು ಮುಚ್ಚಿ ಬರುವ ದುಃಖವ ನಿಗ್ರಹಿಸುತ್ತಾ ಬಿರಬಿರನೆ ಹೆಜ್ಜೆ ಹಾಕಿದ. ಮೇಲೆ ಮೋಡಗಳ ದಾಂಗುಡಿ ಜೋರಾಗಿತ್ತು. ಮನಸ್ಸಿನಲ್ಲಿಯೂ ಕೂಡ....

ಬಸವಣ್ಣೆಪ್ಪಾ ಕಂಬಾರ

ಬೆಳಗಾವಿ ಜಿಲ್ಲೆಯ ಘೋಡಗೇರಿಯವರಾದ ಬಸವಣ್ಣೆಪ್ಪ ಕಂಬಾರ ಅವರು ಕನ್ನಡದ ಭರವಸೆಯ ಕತೆಗಾರರಲ್ಲಿ ಒಬ್ಬರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಸವಣ್ಣೆಪ್ಪಾ ಅವರು ’ಆಟಿಕೆ’, ’ಗಾಂಧಿ ಪ್ರಸಂಗ’ ಮತ್ತು ಗರ್ದಿ ಗಮ್ಮತ್ ಎಂಬ ಮೂರು ಕತಾ ಸಂಕಲನ ಪ್ರಕಟಿಸಿದ್ದಾರೆ. ಅವರ ಆಟಿಕೆ’ ಸಂಕಲನಕ್ಕೆ ಛಂದ ಪುಸ್ತಕ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್‌. ಅನಂತಮೂರ್ತಿ ಕತಾ ಪ್ರಶಸ್ತಿ, ಧಾರವಾಡದ ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ಬೇಂದ್ರೆ ಪುಸ್ತಕ ಬಹುಮಾನ ಸಂದಿವೆ.

More About Author