Poem

ಕನಕದಾಸರು

ಕುರಿಯಮಂದೆ ದನದಹಿಂಡು ಮೇವನುಂಡು ಹಾಲುಕರೆದವು
ನೋವುಕೊಡದೆ ತಲೆಯಬಾಗಿ ಕೂಡಿಯಾಡಿ ಮುಂದೆ ನಡೆದವು

ಅಡವಿತಿರುಗಿ ಅರಿವುಮಾಗಿ ಕುರುಬನಾದನು
ದನವಕಾಯ್ದು ಎಲ್ಲಬಲ್ಲ ಗೊಲ್ಲನಾದನು
ಕುರಿಯ ಹಿಕ್ಕೆಯೊಳಗೆ ಲಿಂಗ ಅಡಗಿ ಕುಳಿತನು
ಕ್ಷೀರಕುಂಭ ಗೋವಿನೊಳಗೆ ಅಮೃತವಾದನು

ಬ್ರಹ್ಮಲಿಖಿತ ಕುರುಬ ತಿಮ್ಮ ದಾಸನಾದನು
ಧರ್ಮ ಬಲ್ಲ ಗೊಲ್ಲಕೃಷ್ಣ ದೇವನಾದನು
ಆರುಮೂರು ಅಳಿದು ಕನಕ ದಾಸನಾದನು
ದೇವದಾಸ ದೈವದಾಸ ವ್ಯಾಸದಾಸನಾದನು

ಕಟ್ಟಕಡೆಯ ಮನುಜನಾದ ಮುಕುಟ ಇಳುವಿದ
ಅರಸನೊಬ್ಬ ತಿರುಕನಾಗಿ ಡೊಂಕು ತಿದ್ದಿದ
ರಾಗಿಭತ್ತ ಮೇಲುಕೀಳು ಸಮಕೆ ಕೂಗಿದ
ಕೊಂಕು ತಿವಿತ ಕೀರ್ತನೆಗಳ ಧ್ವನಿಯನೆತ್ತಿದ

ಬಾಡರಾಜ್ಯ ಬೇಡವೆಂದು ಹೊರಟು ಬಂದನು
ಕಾಗಿನೆಲ್ಲಿ ನೆಲೆಯನಾಯ್ದು ಒಲಿದು ನಿಂದನು
ತಿಮ್ಮಗೊಂದು ಕುಮ್ಮೂರಲಿ ಗುಡಿಯ ಕಟ್ಟಿದ
ಹಂಸಪಕ್ಷಿ ರಾಜರಾಣಿ ನಳಕಾವ್ಯ ಹಾಡಿದ

ಬಿದ್ದ ಜನರು ಎದ್ದು ಬರಲು ಕೈಯ ಹಿಡಿದನು
ವೇದಶಾಸ್ತ್ರ ತತ್ವ ತರ್ಕ ಸೋಸಿ ನುಡಿದನು
ಕೆಣಕಿದವಗೆ ತಿಣುಕುವಂತ ಮರ್ಮಘಾತವು
ಅಳಿದಮೇಲು ಉಳಿದಜನಕೆ ಇವನ ಶಂಖವು

-ಜೀವರಾಜ ಹ ಛತ್ರದ

 

ಜೀವರಾಜ ಹ ಛತ್ರದ

ಲೇಖಕ ಜೀವರಾಜ ಹನುಮಂತಪ್ಪ ಛತ್ರದ ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರು. ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರು.  ಪ್ರಸ್ತುತ ಬ್ಯಾಡಗಿ ತಾಲೂಕಿನ ಮಾಸನಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

ಕೃತಿಗಳು: ಖುಷಿ ತರಲಿ ಕೃಷಿ, ಅಕ್ಕಡಿ ಕಾಳು( ವೈಚಾರಿಕ ಲೇಖನಗಳು), ಯಾಲಕ್ಕಿ ಹಾಲಕ್ಕಿ, ರಮ್ಯಗಾನ, ಅನುವಿನು, ದಾಂಪತ್ಯ ಗೀತೆಗಳು, ಜೀವಣ್ಣನ ಆಧುನಿಕ ತ್ರಿಪದಿಗಳು, ಅಸಲಿ ಮಳೆ, ಹನಿ ಹನಿ ಕಾವ್ಯಧಾರೆ, ಮಂಜೂರ್ಶಿ, ಸೂರು ಗುಡ್ಡ, ಉದಯ ರಶ್ಮಿ (ಕವನ ಸಂಕಲನಗಳು)

More About Author