Story

ಕಥೆ ನೆಲೆ

ಕತೆಗಾರ್ತಿ ವಿಜಯಾ ಮೋಹನ್‍ ಅವರು ತುಮಕೂರು ಜಿಲ್ಲೆಯ ಮಧುಗರಿ ತಾಲೂಕಿನ ಸುದ್ದೇಕುಂಟೆ ಗ್ರಾಮದವರು. ಹುಟ್ಟಿನಿಂದ ದೈಹಿಕ ವಿಕಲ ಚೇತನರಾಗಿದ್ದ ಅವರಿಗೆ ಮೊದಲಿನಿಂದಲೂ ರಂಗಪ್ಪಜ್ಜ ತಾತನವರು ಹೇಳುತ್ತಿದ್ದ ವಿಸ್ಮಯಕಾರಿ ಕಥೆಗಳು ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾದವು. ಪ್ರಸ್ತುತ ಅವರ `ಕಥೆ ನೆಲೆ ' ಕತೆ ನಿಮ್ಮ ಓದಿಗಾಗಿ....

ಅವನು ಏಕಾ ಏಕಿ ಬೆಂಗಳೂರಿನಿಂದ ಊರಿಗೆ ವಾಪಾಸ್ ಬಂದುಬಿಟ್ಟಿದ್ದ.ಕತ್ತಲೆ ಆಗಿನ್ನ ಬೆಳಕಿನ ಸಾಮ್ರಾಜ್ಯವನ್ನೆಲ್ಲ. ತನ್ನ ಪಾಡಿಗೆ ತಾನು ನುಂಗುತ್ತಾ ಮಬ್ಬುಗಟ್ಟುತ್ತಿತ್ತು. ಅವರವರ ಮನೆಯ ಕರೆಂಟು ಬೆಳಕೆನ್ನುವುದು, ಕೈಗೆ ಸಿಕ್ಕಿದ ಕತ್ತೆಲೆಯತೆರೆಯನ್ನ ಪಕ್ಕಕ್ಕೆ ತಳ್ಳುತ್ತ. ಬೆಳಕಿನ ತುಪಾಕೆಯನ್ನು ಕಕ್ಕುತ್ತಿದ್ದವು. ಸಿದ್ದೇಶಿ ಇಂಗೆ ಊರಿಗೆ ಬರೋದು ಮನೇಲಿ ಯಾರಿಗು ಗೊತ್ತಿರಲಿಲ್ಲವೆಂದೇನಲ್ಲ?ಎಲ್ಲರಿಗು ಗೊತ್ತಿತ್ತು, ಅವನು ವಾಪಸ್ಸು ಬರೊದೇನೊ ಬಂದು ಬಿಟ್ಟ. ಆದರೆ ಬೆಂಗಳೂರಿನಿಂದ ಅಷ್ಟು ಸಲೀಸಾಗಿ ಬರೋಕಾಗ್‌ದೆ ಇರುವಂತ ಪರಿಸ್ಥಿತಿ ಅವನಿಗೆದುರಾಗಿ ಇನ್ನಿಲ್ಲದ ಪಾಡು ಪಟ್ಟುಕೊಂಡು, ಅವನ ಹುಟ್ಟಿದೂರಿಗೆ ಅವನು ಬರೊಹೊತ್ತಿಗೆ, ಕಣ್ಣೊಳಗಿನ ಬೆಳಕು ಕಳ್ಳ ಬೆಕ್ಕಿನಂತೆ ಮಾಯವಾಗಿತ್ತು. ಬಂದವನು ಬಂದು ಮನೆಯ ಹಜಾರದೊಳಗೆ, ಬಸ ಬಸನೆ ದೊಡ್ಡುಸಿರು ಚೆಲ್ಲುತ್ತ ನಿಂತುಬಿಟ್ಟ, ಅವನ ಮನೆಯ ತಲಬಾಗಿಲ ಎದುರಲ್ಲಿರುವ, ನಡು ಮನೆಯ ಗೋಡೆ ನಿಚ್ಚಳವಾಗಿ ಕಾಣ್‌ತಾ ಐತೆ. ಓದು ಬರಹವೆಂಬ ಯುದ್ದಕ್ಕೆ ಸಿದ್ದತೆ ಮಾಡಿಕೊಳ್ಳ ಬೇಕಿದ್ದ, ತಮ್ಮನ ಮಕ್ಕಳು ಇವತ್ತು ಬುಕ್ಕು ತೆಗೆದು ಕುಂತಿರಲಿಲ್ಲ.ಇದೇ ಸಂಜೆ ಹೊತ್ತಿಗಾಗಲೆ. ಮೂಡುಗಡೆಗೆ ಮುಖ ಮಾಡಿ ಕುಂತಿರುವ ರಾಮರ ಪೋಟೋಗೆ, ಅಪ್ಪ ಇನ್ನು ಊದಿನ ಕಡ್ಡಿಗಳನ್ನ ಅಚ್ಚಿರಲಿಲ್ಲ, ತನ್ನ ಪಾಡಿಗೆ ತಾನು ಮಾತು ಕಳಕೊಂಡು ಮೌನವಾಗಿ ನಿಂತ ಸಿದ್ದೇಶಿ, ಅಂಗೆ ನಿಗಾ ಮಾಡ್‌ತಾ ನಿಂತುಕೊಂಡ.

ಇವತ್ತು ಹೊಸ ಬದಲಾವಣೆ ಅನ್ನುವುದು. ಯಾವುದು ಕೂಡ ಅವನ ಕಣ್ಣಿಗೆ ವಿಶೇಷವಾಗಿ ಕಂಡು ಬರುತ್ತಿಲ್ಲ, ಗಾಳಿಯೇನೊ ಯಾರ ಮುಲಾಜಿಗಂಜದೆ ಅದರ ಪಾಡಿಗದು. ಸಳ ಸಳನೆಂದು ಸರಾಗ್‌ವಾಗಿ ತೀಡಿಕೊಳ್ಳುತ್ತಿತ್ತು, ಕಲ್ಲು ಬಚ್ಚಲಿನ ಪಕ್ಕದಲ್ಲಿದ್ದ ನುಗ್ಗೆಮರ, ನಿಂಗನ ಅಡುಗೆ ಮನೆಯಲ್ಲಿ ಕಮ್ಮಗೆ ಕುದಿಯುತ್ತಿರುವ. ಬಿಸಿ ಮುದ್ದೆಯ ಕಂಟು.ಆ ಕಂಟನ್ನು ಉಗುಳುತ್ತಿರುವ ಮಾಳಿಗೆ ಮೇಲಿನ ಚಿಮ್ಮಣಿ ಹೊಲೆ, ತಿಮ್ಮಯ್ಯನ ಮನೆಯ ಗೊಂತಿಗೆಯಲ್ಲಿ, ಬಸ ಬಸನೆಂದು ಅಗಾದ್‌ವಾದ ಉಸಿರು ಚೆಲ್ಲುತ್ತಿರವ ಜೀವದನಗಳು, ಅವ್ವ ಕವುಚಿರುವ ಮಂಕರಿ ಕೆಳಗಿನ, ತಾಯಿ ಕೋಳಿ, ಮತ್ತು ಮರಿಕೋಳಿಗಳು, ಒಂದಕ್ಕೊಂದು ಮುದ್ದಾಡುವ ಬಿಸಿ ರೆಕ್ಕೆಗಳ ಮುಲುಕಾಟ. ಎಲ್ಲವು ಯಾರ ಅಂಗಿಲ್ಲದೆ ಅವುಗಳ ಪಾಡಿಗವು ನಡೆಯುತ್ತಿದ್ದವು. ಇದೊಂದು ತಬ್ಬಲಿ ನನಮಗನ ಕಾಯಿಲೆ. ಬೆಂಗಳೂರಲ್ಲಿರೋವರಿಗೆ ಮತ್ತೆ ಬೆಂಗಳೂರಿನಿಂದ ಬರೋವರಿಗೆ ಮಾತ್ರಾನೆ ವಕ್ಕರ್‌ಸಿರೋದು. ಇಂತ ಬರ್‌ಬಾರದ ಬಂಗದಕಾಯಿಲೆ ಹಳ್ಳಿಯಲ್ಲಿ ಯಾರನ್ನು ಮುಟ್ಟಿರಲಿಲ್ಲ. ಇದು ಒಬ್ಬರಿಗೆ ಬಂದರೆ ಹತ್ತುಜನಕ್ಕೆ ಹರುಡುವಂತ ಕಾಯಿಲೆಯಾದ್ದರಿಂದ ಊರಿಗೆ ಯಾರನ್ನು ಹೊಸಬರನ್ನ ಬಿಟ್ಟುಕೊಳ್ಳದ ಮತ್ತು ಯಾರಾದರು ಬಂದರೆ ಯಾರು ಹೆಚ್ಚಲ್ಲ ಯಾರು ಕಮ್ಮಿಯಲ್ಲ,ಮುಲಾಜಿಲ್ಲದಂಗೆ ವಾಪಸ್ಸು ಕಳಿಸುವ ಕಾಯಕದ ಆಶಾಕಾರ್ಯಕರ್ತೆ ನಾಗಮ್ಮ ಎಂಬೋಳನ್ನ ಕಳನಾಯಕಿಯೆಂಬಂತೆ ನೋಡುತ್ತಿರುವ ಸಮೇವಿನಲ್ಲಿ, ಈ ಊರಿಗೆ ಆ ಸಿದ್ದೇಶನೆಂಬೋನು ಬೆಂಗಳೂರಿನಿಂದ ತಪ್ಪಿಸಿಕೊಂಡು ಬರೋವೊತ್ತಿಗೆ ಇನ್ನಿಲ್ಲದ ಬಂಗ ಬಿದ್ದು ಬಂದಿದ್ದಾಯಿತು.

ಬರದೆ ಇದ್ದಿದ್ದರು ಯಾವ್ ದೇವರು ಕಾಲಲ್ಲಿ ಒದಿತಿರಲಿಲ್ಲವೇನೊ? ನಾನು ಯಾಕದ್ರು ಬಂದೆನೊ? ಎಂದು ಚಿಂತಾಕ್ರಾಂತನಾದವನ ಸೈರಣೆಯೆನ್ನುವುದು. ಬೇಕೆನ್ನುವ ಬ್ಯಾಡವೆನ್ನುವವರ ಮುಂದೆ ಸಾಕು ಸಾಕೆನ್ನುವ ಪರೀಕ್ಷೆಗೊಳಗಾಯಿತು. ಸಿದ್ದೇಶಿ ಎಷ್ಟೊತ್ತು ನಿಂತುಕೊಂಡರು. ಮನೆಯ ಸದಸ್ಯರು ಮಾತ್ರ. ಅವನನ್ನು ಯಾರು ಯಾವೂರು ಅನ್ನೋರು ಇರ್‌ಲಿಲ್ಲ. ಸಿದ್ದೇಶ ಊರಿಗ್ ಬರೊಸುದ್ದಿಯನ್ನ, ಅಮ್ಮನಿಗು ಮತ್ತು ತಮ್ಮನಿಗು, ನೆನ್ನೆ ತಾನೆ ಎರೆಡೆರೆಡು ಸಲ ಫೋನಿನ ಮೂಲಕ ಹೇಳಿ ಕೊಂಡಿದ್ದ. ಅಂಗಾದರು ಯಾರು ಅಕ್ಕರೆಯಿಂದ ಮಾತಾಡಿಸುತ್ತಿಲ್ಲ,ಯಾರು ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ, ಸಿದ್ದೇಶನಿಗೆ ಇಂತ ನಿರ್ಲಕ್ಷದ ಈ ಗಳಿಗೆಯಿಂದ ಮನಸ್ಸಿಗೆ ಬಾದೆಯಾಯಿತು,ಸದ್ಯ ಬೆಂಗಳೂರಿನಿಂದ ತಪ್ಪಿಸಿಕೊಂಡು ಬಂದದ್ದೇ. ಅವನಿಗೆ ಬಹುದೊಡ್ಡ ಸಾಧನೆ ಎನ್ನುವಂತಾಗಿತ್ತೇ ವಿನಃ. ಅವನ ಸ್ವಂತ ಊರಿಗೆ ಬಂದಿರುವುದು, ಅವನಿಗೆ ಅಪರಾದವೆನ್ನುವುದು ಸರಿಯಾಗಿ ಗೊತ್ತಾಗಲೇ ಇಲ್ಲ.

ಯಾಕ್ ಬರ್‌ಬೇಕೇಳಕ? ಇದ್ಯಾವುದೊ ಅಂಟು ಖಾಯಿಲೆ ಬಂದೈತಂತೆ. ಎಲ್ಲಾರಿಗು ಬಂದು ಅಂಟುಸೋದ್ಯಾಕೆ?ಎಲ್ಲಿರೋವರು ಅಲ್ಲೆ ಇರ್‌ಬೇಕಾಗಿತ್ತು. ಎಂದು ಎದುರು ಮನೆಯ ನಿಂಗನ ಮಾತು, ಕಲ್ಲು ಬೆಂಚಿನ ಮ್ಯಾಲೆ ಕುಂತಿದ್ದವನು, ಯಾರ ಕೂಟೊ ಹೇಳುತ್ತಿದ್ದದ್ದು ಸಿದ್ದೇಶನಿಗು ಕೇಳಿಸಿತು. ನಾನು ಬಂದಿದ್ದು ನೋಡೆ ಇರ್‌ಬೇಕು, ಇವನು ನನ್ನನ್ನ ಕಂಡೆ ಈ ಕೊಂಕು ಮಾತಾಡ್‌ತ್ತಾನಲ್ಲ. ಕುಂತರೆ ಕುಂತಿರೊ ಕಡೆಯೆ ಅಲ್ಲಂಡೆ ಹೊಡೆಯುತ್ತ. ಗೆದ್ದಲಿಡಿಯೊ ಅಂಗೆ ಕಂತೆ ಇರ್‌ತ್ತಾನೆ,

ಮೂರು ಕಾಸಿಗು ಬೆಲೆಯಿಲ್ಲದವನು, ನನ್ನ ಸುದ್ದಿ ಇವನಿಗ್ಯಾಕೊ? ಸಿದ್ದೇಶನಿಗೆ ಮೈಯ್ಯೆಲ್ಲಾ ನಕಶಿಕಾಂತ ಉರುದು ಬುಡುತು.

ಮ್ಯಾಗಲಟ್ಟಿ ಗಂಗಣ್ಣನ ಮನೆಗೆ, ಎಲ್ಲೊ ಬೆಂಗಳೂರೆಂಬ ಮಾಯಾನಗರದಲ್ಲಿದ್ದ. ಈ ಸಿದ್ದೇಶನೆಂಬ ದೊಡ್ಡುಡುಗ ಬಂದಿದ್ದು ನೋಡಿ, ನಿಂಗನೆಂಬೋನು ಮಖಮೂತಿ ಉರುಕಂಡು ಮಾತಾಡುತ್ತಿದ್ದ. ಏನ್ ಮಾಡಾಕಾಗತೈತೆ ಸಂದರ್ಭ ಅಂಗೆ ಬಂದು ಬುಡುತು. ಸಿದ್ದೇಶನು ಬರ್‌ಬೇಕಂತ ಊರಿಗೆ ಬಂದವನಲ್ಲ. ಇದ್ಯಾವುದೊ ತಬ್ಬಲಿ ನನ್‌ಮಗಂದು, ಕೊರೋನವೆಂಬ ಕಾಯಿಲೆ ಹುಟ್ಟಿಕೊಂಡು. ಬೆಂಗಳೂರೆಂಬೊ ಮಾಯಾನಗರದಲ್ಲಿ, ದುಡ್ಡು ಕಾಸೆಂಬ ದುಡಿಮೆ ದುಗ್ಗಾಣಿಯಿಲ್ಲದೆ, ಜೀವನದ ರಥ ನಿಂತಲ್ಲೆ ನಿಂತಂತಾಗಿ ಪರಿತಪಿಸೋದು ಬ್ಯಾಡಂದುಕೊಂಡು, ಜನಾದ್ ಜನವೆಲ್ಲ ಒಂದೆ ದಿನದಲ್ಲಿ ಹೊರಟುನಿಂತರು. ಇಂತ ವಿಷಮ ಪರುಸ್ಥಿತಿಯಲ್ಲಿ ಕೆಲಸವಿಲ್ಲ ಕಾರ್ಯವಿಲ್ಲವೆಂದು, ಕೈಚೆಲ್ಲಿ ಕುಂತು ಮೇಲೆ ಬೆಂಗಳೂರಲ್ಲಿ ಇನ್ಯಾಕಿರ್‌ಬೇಕು? ಇದೆಂತಾದ್ದೋ ಲಾಕ್ ಡೌನೆಂಬೋದು ವಕ್ಕರಿಸಿಕೊಂಡು, ಏಸೊ ಜನಸಾಮಾನ್ಯರಿಗೆ ಗೊತ್ತಾಗೊವೊತ್ತಿಗೆ ಬೆಂಗಳೂರಿನ ನಗರದಲ್ಲಿನ ಜನವೆಲ್ಲ ರೋಡಿಗಿಳಿದು ಜಮಾಯಿಸಿ ನಿಂತುಬಿಟ್ಟಿದ್ದರು. ಒಂದು ಬಸ್ಸಿಲ್ಲ, ಒಂದು ಲಾರಿಯಿಲ್ಲ. ಅವರವರ ಊರುಗಳಿಗೆ ಅವರು ಬರ್‌ಬೇಕಾದರೆ, ರಾತ್ರಿ ಹಗಲು ನಿಂತವರು ನಿಂತೆ ಇದ್ದರು. ಗಂಟು ಮೂಟೆಗಳೊತ್ತುಕೊಂಡು, ಕಾಲು ಕಿತ್ತವರು ಲೆಕ್ಕವಿಲ್ಲದಷ್ಟು ಮೈಲಿಗಟ್ಟಲೆ ನಡೆಯತೊಡಗಿದರು. ಅಲ್ಲಿ ಯಾರಿಗು ನಿದ್ದೆ ನೀರೆಂಬೋದೆ ಇರ್‌ಲಿಲ್ಲ, ಅದರೊಳಗೆ ಸಿದ್ದೇಶಿಯೆಂಬೋನು ಅವನ ಜೊತೆಗಾರರೊಂದಿಗೆ, ನಾಯಿಗಳು ನಿಂತಂಗೆ ನಿಂತು, ಕಾದು ಕಾದು ಪಾಡು ಪಟ್ಟುಕೊಂಡು, ಊರಿಗೆ ಬಂದಿದ್ದಾಯಿತು. ಬಂದವನು ಬಂದು ಅಂಗೆ ನಿಗಾಮಾಡ್‌ತಾ ನೋಡಿದ, ಅಪ್ಪ ಅಮ್ಮನಾಗಲಿ, ತಮ್ಮ ತಮ್ಮನೆಂಡಿರಾಗಲಿ, ಸಿದ್ದು ದೊಡ್ಡಪ್ಪನೆಂದರೆ, ಕಾಲು ಕೈಗೆ ಸಿಹಿಯಾಗಿ ಸುತ್ತಿಕೊಳ್ಳುತ್ತಿದ್ದ ತಮ್ಮನ ಮಕ್ಕಳಾಗಲಿ, ಯಾರು ಯಾವೂರು ಎನ್ನುತ್ತಿಲ್ಲ, ಏನೊ ದೊಡ್ಡ ಕೊಲೆಗಡುಕ ಬಂದುಬಿಟ್ಟವನೆ ಅನ್ನಂಗಾಗಿ ಮನಸ್ಸಿಗೆ ಇನ್ನಿಲ್ಲದ ನೋವಾಯಿತು. ತನ್ನ ಪಾಡಿಗೆ ತಾನು ಬ್ಯಾಗು ಲಗೇಜುಗಳನ್ನೆಲ್ಲ ಹೊರಗಡೆ ಕಲ್ಲು ಬೆಂಚಿನ ಮ್ಯಾಲಿಟ್ಟ್ಟ. ಮನೆಯ ಪಕ್ಕದ ಸಂದಿಯಲ್ಲಿದ್ದ ಬಚ್ಚಲೊಳಕ್ಕೋಗಿ ತಣ್ಣೀರಿನಲ್ಲೆ ನೀರುಯಿಕೊಂಡ. ಮಖಾ ಮೈಯ್ಯಿ ಒರೆಸಿಕೊಂಬುತ್ತ ಒಳಗೆ ನಡುಮನೆಯತನಕ ಬಾರವಾದ ಹೆಜ್ಜೆಗಳನ್ನು ಎಳುಕೊಂಡೋದ, ಅಪ್ಪ ರಾಮರ ಪೋಟೋಗೆ ಕಡ್ಡಿ ಬೆಳಗಿದವನು. ಬೆಂಗಳೂರಿಂದ ಯಾರು ಬರಂಗಿಲ್ಲವಂತಲ್ಲೊ? ಜನಾ ಎದುರುಸ್‌ತಾ ಅವರೆ, ಇನ್ನು ಎರಡುದಿನ ಅಲ್ಲೆ ಎಲ್ಲಾದರು ಕಣ್ಣು ಮರೆಯಲ್ಲಿರ್‌ಬೇಕಾಗಿತ್ತು. ನೆಟ್ಟಗೆ ಮುಖಾ ತೋರಿಸದ ಅಪ್ಪನ ಕಣ್ಣುಗಳಲ್ಲಿ, ನಿಯತ್ತಿನ ರಾಮರು ಕುಂತಿರಲಿಲ್ಲ. ಮಾಮ ಎಂಗಿದ್ದೀಯಾ? ಎಂದು ಊರಿಗೆ ಮುಂಚೆ ಬಾಯಿತುಂಬ ಹಲ್ಲು ಬಿಟ್ಟುಕೊಂಡು, ಬಾಗಿಲಿಗೆ ಓಡಿ ಬರುತ್ತಿದ್ದ ತಮ್ಮನೆಂಡಿರು. ನಾದಿನಿ ಪದ್ದಿಯೆಂಬೋಳು ಮುಖ ಮೂತಿ ನೋಡ್‌ದಂಗೆ ಓಡಾಡ್‌ಬುಟ್ಲು. ತಮ್ಮನೆಂಬೋನು ಮನೆಯಲ್ಲಿರದೆ, ಯಾವಾಗ ನಾಪತ್ತೆಯಾಗಿದ್ದನೊ ಗೊತ್ತಾಗುತ್ತಿಲ್ಲ. ಇಡೀ ದೇಶಕ್ಕೆ ಬಂದಿರೊ ಗಂಡಾಂತರದ ಖಾಯಿಲೆ, ಇದ್ಯಾವುದೊ ಬರ್‌ಬಾರದ ಕೊರೋನವೆಂಬ ಕಾಯಿಲೆಯನ್ನ, ಇವನೊಬ್ಬನೆ ಹೊತ್ತುಕೊಂಡು ಬಂದಿರೊ ಕಳ್ಳನೆಂಬಂತಾಗ್ ಬುಡುತು.

ಸಿದ್ದೇಶಿ ಅವನ ಬುದುಕು ಬಾಳೆಂಬ ಮೆಟ್ಟಿಲುಗಳನ್ನ. ನೆಟ್ಟಗೆ ಹತ್ತದೆ ತಪ್ಪು ಮಾಡಿಕೊಂಡೆನೇನೊ? ಎಂಬ ಕಸಿವಿಸಿ ಅವನಿಗಾಗದೆ ಇರಲಿಲ್ಲಾ. ತಮ್ಮ ಮಲ್ಲೇಶಿಯಂಗೆ ಊರಾಗಿದ್ದುಕೊಂಡು.ಮನೆ ಮಡದಿಮಕ್ಕಳು ಎಂದುಕೊಂಡು, ಕೈಯ್ಯಿಗೆ ಸಿಕ್ಕಿದ್ದು ಗೈಯ್ಯಿಕೊಂಡು ತಿಂದಿದ್ದರೆ. ಇವತ್ತು ಅದ್ಯಾವುದೊ ಅಂಟು ಕಾಯಿಲೆ ತಂದವನೆಂದು. ಇವನನ್ಯಾರು ಕೊಂಕುಸುತಿರಲಿಲ್ಲ.ಈ ಊರಲ್ಲಿ ನಾಲ್ಲೋರಂತೆ ಬಾಳಿ ಬದುಕುತ್ತಿದ್ದ ಇವನಿಗೆ. ಇಂತ ಅತಂತ್ರದ ಸ್ಥಿತಿ ಬರುತ್ತಲೆ ಇರಲಿಲ್ಲ.

ನನ್ನ ಕಳ್ಳು ಬಳ್ಳಿ, ನನ್ನ ಮನೆ ಬಾಗ್‌ಲು ಅಂತ, ಊರು ಬಿಟ್ಟು ಬೆಂಗಳೂರಿಗೋಗಿದ್ದು.ತಪ್ಪಾಯಿತೇನೊ ಅಂದುಕೊಂಡ.ಅದು ಯಾಕೆಂದರೆ ಇದ್ಯಾವುದೊ ಬರಬಬಾರದ್ದೊಂದು ತಬ್ಬಲಿ ಕಾಯಿಲೆಯೊಂದು ಬಂದು. ಅದು ಜಾಸ್ತಿ ಬೆಂಗಳೂರಿನ ಕಡೆಯಿಂದ, ಬಂದವರ ಕೂಟೆ ಅರಡತಾ ಐತೆಂದು, ಅವರವರ ಮನೆಯ ಟಿ, ವಿ ವೊಳಗೆ ಬೆಳಗಾ ಸಂಜೆ. ಊದಿದ್ದೇಊದುತ್ತಾ ಅವರೆಂದು, ಊರಲ್ಲೆಲ್ಲಾ ಗುಲ್ಲು ಗುಲ್ಲಾಗಿ, ಬೆಂಗಳೂರಿನಿಂದ ಬಂದವರನ್ನ, ಅವರೆಲ್ಲೆ ಇರಲಿ ಬಿಡದಂಗೆ ಪತ್ತೆ ಮಾಡತಾ ಅವರಂತೆ. ಮುಲಾಜಿಲ್ಲದಂಗೆ ವಾಪಸ್ಸು ಕಳಸ್‌ತಾ ಅವರಂತೆ, ಅನ್ನುವ ಸುದ್ದಿ, ಸದ್ಯಕ್ಕೆ ಸಿದ್ದೇಶ ಮತ್ತೆ ಜೊತೆಗಾರರ ಕಿವಿಗೆ ಬಿತ್ತು.

ಆವತ್ತಿಗೆ ಅಂದರೆ ಈಗ್ಗೆ ಐದಾರು ವರ್ಷಗಳ ಕೆಳಗೆ. ನನ್ನ ಕುಟುಂಬದವರ ಬದುಕು ಭದ್ರವಾಗಿರಲಿ ಅನ್ನುತ್ತಾ, ಮತ್ತು ಈ ಮನೆಯ ಉದ್ದಾರಕ್ಕಾಗಿ, ಸಿದ್ದೇಶಿ ಊರು ಬಿಟ್ಟು ಬೆಂಗಳೂರಿಗೋಗಿದ್ದ, ಅವನಿಲ್ಲದಿದ್ದರೆ ಮನೆ ಈ ಮಟ್ಟಕ್ಕೆ ಬರುತ್ತಿರಲಿಲ್ಲ, ಇದು ಸಿದ್ದೇಶನೇಳುತ್ತಿರುವ ಮಾತಲ್ಲ, ಊರಿನ ಜನ ಅವನ ಸಾಧನೆಯನ್ನ ನೆನೆಸಿಕೊಂಡಾಗ್‌ಲೆಲ್ಲ ಕೊಂಡಾಡುತ್ತಿದ್ದರು. ಯಾರ ಕೊಂಡಾಟಕ್ಕು ಅವನು ತಲೆಕೆಡೆಸಿಕೊಂಡವನು ಅಲ್ಲ. ಮಳೆ ಮಾರಿಲ್ಲದೆ ಬೆಳೆಯಿಲ್ಲದೆ, ಬೆಂಗಾಡಿಗೆ ಬಿದ್ದ ದಿನಗಳಲ್ಲಿ. ಸಿದ್ದೇಶನಿಗೆ ಹೆಣ್ಣು ಕೊಡೊ ಜನ ಮಸ್ತಾಗ್ ಬರುತಿದ್ದರು,ನನಗೀಗಲೆ ಮದುವೆ ಬ್ಯಾಡಕಣಮ್ಮ ಬೆಂಗಳೂರಿಗೋಗಿ ಎರಡು ಕಾಸು ದುಡಿದರೆ, ನಮ್ಮ ಕುಟುಂಬ ಚೆನ್ನಾಗಿರತೈತೆ, ಅವರ್ ಚೆನ್ನಾಗಿದ್ದರೆ ನಾನು ಚೆನ್ನಾಗಿರ್‌ತ್ತೀನಿ, ಎಂದು ಮುತುವರ್ಜಿಲಿ ಮನಸಾರೆ ವಾದ ಮಾಡುತಿದ್ದವನನ್ನ, ಇವತ್ತು ಯಾರು ಮರೆಯಂಗೆ ಇಲ್ಲ,

ಅಂತ ಗಳಿಗೆಯೊಳಗೆ ಸಿದ್ದೇಶಿ, ಅವ್ವನ ಕಾಲಿನ ಮಂಡಿಚಿಪ್ಪುಗಳ ಬಾದೆ ಜಾಸ್ತಿಯಾಗಿದ್ದು ನೋಡಿ.ಅವ್ವ ಇನ್ನೆಷ್ಟುದಿನಾ ಬದುಕು ಬಾಳೆಂದು ಸವೆದಾಳು? ಅನ್ನುವ ಚಿಂತೆಯೊಳಗೆ, ಊಟ ಬಟ್ಟೆಗೆ ನ್ಯಾರವಾದವರ ಮನೆಯಲ್ಲಿ. ತಮ್ಮನಿಗೆ ಸೊಗಸಾದ್ದೊಂದು ಹೆಣ್ಣುಡುಕಿದ್ದ. ಸಣ್ಣದ್ದು ಪುಟ್ಟದ್ದು, ಬಟ್ಟೆ ಬರೆ, ಕಾಸು ಕನ್ನಡಿ, ಎನ್ನುವ ಖರ್ಚಿನ ಯಜಮಾನನಾಗಿ ಇವನೆ ಮುಂದೆ ನಿಂತು ಮದುವೆ ಮಾಡಿಸಿದ್ದ. ಹೊತ್ತೊತ್ತಿಗೆ ಮಳೆ ಮಾರುಯ್ಯದೆ, ಇಕ್ಕುತ್ತಿದ್ದ ಬೆಳೆಯು ಕೈಗೆ ಸಿಕ್ಕಂತಾಗಿರಲಿಲ್ಲ, ತಮ್ಮನೆಂಡತಿಗೆ ಇಂದಿಂದೆಯೆ ಆದ ಎರಡು ಸಣ್ಣ ಮಕ್ಕಳು. ಅಪ್ಪ ಎದೆಯ ಗೂಡಲ್ಲಿ ಕಫದ ಗಡಿಗೆಯನ್ನು ತುಂಬಿಕೊಂಡು ಅದನ್ನು ಒಡೆಯಲಾರದೆ ಒದ್ದಾಡುತ್ತಿದ್ದನು. ತಮ್ಮನೊಬ್ಬನ ದುಡಿಮೆಯಿಂದ ಜೀವನಕ್ಕೆ, ಕಷ್ಟದ ದಿನಗಳು ದೂರವಾಗಲಾರವೆಂಬ. ಚಿಂತೆಗೆ ಬಿದ್ದ ಸಿದ್ದೇಶ, ಅವನೆ ದುಡಿಮೆಯ ಪರಿಹಾರ ಕಂಡು ಕೊಂಡಿದ್ದ.

ಮನೆಯ ಹಿಂದಲ ತಂಬೂರಿನಾಗ, ಊರಾಗಳ ದೊಡ್ಡಯ್ಯರ ಶಿವ. ಕೆಂಚಯ್ಯನ ಕಿರೆ ಮಗ ರಂಗನೆAಬೊ ಹುಡುಗರನ್ನ ಜತೆ ಮಾಡಿಕೊಂಡು. ಕಾಣದ ಬೆಂಗಳೂರಿಗೋಗಿ ದುಡಿಮೆಯೆಂಬ ದೋತರವನ್ನ ಕಟ್ಟಿಕೊಂಡಿದ್ದವನು,ಅಲ್ಲಿಗೆ ಹೋದವರು ನಾಲ್ಕು ಜನ ಒಂದೇ ಪ್ಯಾಕ್ಟ್ರೀನ ಹುಡುಕಿಕೊಂಡಿದ್ದರು, ಸಂಬಳ ಅದೆಷ್ಟು ಕೊಡುತಿದ್ರೊ ಎನೊ? ವರ್ಷದಲ್ಲಿ ಹುಟ್ಟಿಕೊಳ್ಳುತ್ತಿದ್ದ ಹಬ್ಬಬ್ಬಕ್ಕು, ಸಿದ್ದೇಶಿ ಮನೆ ಮಕ್ಕಳಿಗೆ ಬಟ್ಟೆ ಬರೆ ತರುತಿದ್ದ, ಮನೆಗಾಗುವಷ್ಟು ದಿನಸಿ, ದುಡ್ಡು ತರುತಿದ್ದ, ಹೋದ್ ಸಲ ಮುಂಗಾರಿನ ಮಳೆಯ ಹೊತ್ತಿಗೆ, ತಮ್ಮನಿಗೊಂದು ಜೊತೆ ಹೋರಿಗಳನ್ನೆ ಕೊಡಿಸಿದ. ಇದ್ದ ಹಳೆಯ ಮನೆಯನ್ನೆಲ್ಲ ಕೊಡವಿ, ಲೆಕ್ಕವಾದದ್ದೊಂದು ಹೊಸ ಮನೆ ಕಟ್ಟಿಸಿಕೊಟ್ಟಿದ್ದ. ಅಮ್ಮನ ಕಿವಿಗೊಂದು ಜೊತೆ ವಾಲೆಯು ಮಾಡಿಸಿಕೊಟಿದ್ದ. ಇವತ್ತು ಮನೆಯ ಸಾಲವಿನ್ನು ಅಂಗೆ ಸಿದ್ದೇಶಿಯ ಹೆಗಲ ಮ್ಯಾಲೆ ಮಲಿಕ್ಕೆಂಡೆ ಐತೆೆ, ನನ್ನೂರು ನನ್ನ ಮನೆಯವರು, ಅಂದುಕಂಡ ಬ್ರಮೆಯ ಕನ್ನಡಿಯನ್ನ ಹೊಡೆದಿರುವಂತ. ಈ ತಬ್ಬಲಿ ನನ್ನ ಮಗನ ಕಾಯಿಲೆ ಬಂದು, ಎಲ್ಲರಿಗೆಲ್ಲರು ಅನುಮಾನದ ಅಂಗೈಯ್ಯಲ್ಲಿ ನಿಂತಂಗಾಗೊಯಿತು.

ನಡು ಮನೆಯ ಗೋಡೆಗೆ ಆನಿಕೊಂಡು, ಶಬುದವಿಲ್ಲದಂಗೆ ಕುಂತ ಸಿದ್ದೇಶಿಯ ಮುಂದಕ್ಕೆ. ಬಿಸಿ ಮುದ್ದೆ ಕಾಳಿನೆಸರು, ತಟ್ಟೆಯನ್ನ ತಂದಿಟ್ಟ ಅವ್ವನೆಂಬೋಳು. ಸಲೀಸಾಗಿ ಬಂದೇನಪ್ಪ? ಎಂದು ಬಂಗಕ್ಕೆ ಮಾತಾಡಿಸೀಳು. ಅದು ಅವಳ ಆತುಮದಿಂದ ಬಂದ ಮಾತಾಗಿರಲಿಲ್ಲ. ಹೆತ್ತೊಡಲಿನ ಒತ್ತು ಕೊಟ್ಟ ಮಾತಲ್ಲವೆಂದು. ಅವ್ವನ ದ್ವನಿಯಲ್ಲಿ ಅಕ್ಕರೆಯ ಕಂಟಿರಲಿಲ್ಲ, ಇಂತ ಕುತ್ತಿಗೆ ಮೇಲಿಂದ ಬಂದ ಒಣ ಮಾತಲ್ಲಿ. ಅವ್ವ ಅಲ್ಲಿ ಮುಖಕ್ಕೆ ಮುಖ ಕೊಟ್ಟು ನಿಲ್ಲದಂಗೆ. ಹೋದವಳ ಬೆನ್ನು ದಿಟ್ಟಿಸಿಕೊಂಡು ಕುಂತು ಬಿಟ್ಟ.

ಊರಲ್ಲಿ ಕೊರೋನ ಎಂಗೆ ಬರುತೈತೆಂದರೆ. ಬೆಂಗಳೂರಿAದ ಬಂದವರಿಂದ ಮಾತ್ರವೆ ಅಂಟಿಕೊಳ್ಳುತ್ತದೆಯೆಂಬ. ಗುಮಾನಿಗಳು ತೇಲಾಡುತ್ತಿರುವ ಈಸಮೇವಿನೊಳಗೆ. ಹಡೆದ ತಾಯಿಯಾರೊ, ಹುಟ್ಟಿರೊ ಮಕ್ಕಳ್ಯಾರೊ? ಕಟ್ಟಿಕೊಂಡ ಗಂಡನ್ಯಾರೊ? ಯಾರು ಕೆಮ್ಮಂಗಿಲ್ಲ? ಯಾರು ಸೀನಂಗಿಲ್ಲ? ಅಲ್ಲೊಂದು ಅನುಮಾನದ ಹಾವು ಬುಸುಗರಿಯುವಂತ ಕಾಲ ಬಂತು. ಕಳ್ಳು ಬಳ್ಳಿಯೆಂಬ ಕಕ್ಕುಲಾತಿಗಳಿಗೆ ಅರ್ಥವಿಲ್ಲದೆ. ಬೆಚ್ಚಿ ಬೀಳಿಸುತ್ತಿರುವ ಈ ಕಾಯಿಲೆಯಿಂದ ಬೆಂಗಳೂರಿನಿಂದ ಬಂದಿರುವ ಒಂದೇ ಒಂದು ಕಾರಣಕ್ಕೆ ಸಿದ್ದೇಶಿ ಈಗ ತಬ್ಬಲಿಯಾದಂತಾಗಿಬಿಟ್ಟ. ನೆಟ್ಟಗೆ ಹಿಟ್ಟು ಮುರಿದು, ಏಸೊದಿನಗಳಾಗಿದ್ದ ಸಿದ್ದೇಶನ ಮುಂದೆ, ಗಂಗಳದ ತುಂಬ ಹಬೆಯಾಡುತ್ತಿದ್ದ ಹಿಟ್ಟು ಸಾರು. ಉಂಡರೆ ಇನ್ನುಂದಿಷ್ಟು ಉಂಬಾನೆಂಬ ಹಂಬಲದ ಊಟ. ಇವತ್ತಂತು ಅವನಿಗೆ ದಿನವೆಲ್ಲ ಎಲ್ಲೂ ಊಟವೆ ಸಿಕ್ಕಿರಲಿಲ್ಲ, ಇಂತಹಿಟ್ಟುಸಾರು ಎಂದು ನೋಡಿಲ್ಲವೇನೊ ಅಂಬಂಗೆ ಉಣ್ಣುತ್ತಿದ್ದ.

ಯಾಕ್ ಬರ್‌ಬೇಕಿತ್ತು ಮಲ್ಲಮ್ಮ? ಅದು ಬೆಂಗಳೂರಿನಿಂದ ಬಂದವನೆ. ಮನೇಲಿ ಸಣ್ಣ ಮಕ್ಕಳವರಲ್ಲ, ಕಾಯಿಲೆ ಏನಾರ ಅಂಟಿಕೊಂಡರೆ? ಗುಂಡಿಯೊಳಕ್ಕೆ ಇವನೊಬ್ಬನು ಹೋಗಾದಲ್ಲದೆ. ನಾವೆಲ್ಲ ಹೋಗ್‌ಬೇಕಾ? ತಮ್ಮನೆಂಡತಿ ಪದ್ದಮ್ಮನೆಂಬೊಳ ಚುಚ್ಚು ಮಾತಲ್ಲಿ, ಪಕ್ಕದ ಮನೆಯವಳತ್ತಿರ ಇವಳ ದಿಮಾಕುಗಳನ್ನ ಅವಳಾಗವಳೆ ನಿರ್ದಾಕ್ಷಿಣ್ಯಾವಾಗಿ ಉಗಿಯುತ್ತಿದ್ದಳು. ಸಿದ್ದೇಶಿಗೆ ತಟ್ಟೆಯೊಳಗೆ ಬಿಡಿಸಿಕೊಂಡು ಉಣ್ಣಬೇಕಿದ್ದ ತುತ್ತು. ಇವತ್ತು ಗಂಟಲಲ್ಲಿ ಇಳಿಯದಂಗಾಯಿತು.

ಂಇದು ಒಬ್ಬರಿಂದ ಒಬ್ಬರಿಗೆ ಹರಡುವ ತಬ್ಬಲಿ ನನ್ ಮಗನ ಕಾಯಿಲೆ, ಈ ಕಾಯಿಲೆ ಹುಟ್ಟಿಕೊಂಡು, ಇಡೀ ಬೆಂಗಳೂರಲ್ಲೆ ಕೂಲಿಗಳು, ಕೆಲಸಗಳು, ಪ್ಯಾಕ್ಟ್ರಿಗಳೆಲ್ಲ ಸ್ವರ ಕಳುಕೊಂಡ ಸಾವಾಗಿ ಬಿದ್ದುಕೊಂಡವು. ಇಂತಾ ಮಾಯಾನಗರವೆಂಬ ಬೆಂಗಳೂರು, ಲೆಕ್ಕವಿಲ್ಲದ ಕಾರ್ಮಿಕರನ್ನು ಹಿಂದುಮುಂದು ನೋಡ್‌ದಂಗೆ ನಿರ್ದಾಕ್ಷಿಣ್ಯವಾಗಿ ಬೀದಿಗೆ ನೂಕಿಬಿಡತು, ಸಿದ್ದೇಶ ಹೋಗುತ್ತಿದ್ದ ಪ್ಯಾಕ್ಟ್ರೀಯು ಮುಚ್ಚಿಬಿಡುತು, ಹೊಟ್ಟೆ ಬಟ್ಟೆಗೆಂದು ಬೆಂಗಳೂರಿಗೆ ಬಂದಿದ್ದಂತ ಎಣಿಸಲಸಾದ್ಯವಾದ ಜನ, ರಾತ್ರಿ ಬೆಳಗ ಅನ್ನದಂಗೆ, ಪಡಬಾರದ ಪಾಡಿನೊಳಗೆ, ಬೆಂಗಳೂರನ್ನೆ ಕಾಲಿ ಮಾಡಲು ಒದ್ದಾಡುತ್ತಿದ್ದರು, ನಾವು ಅಂದುಕೊಂಡಿದ್ದು ಏನೂ ನಡಿಯಲ್ಲ. ಇದ್ಯಾವುದೊ ಕಣ್ಣಿಗೆ ಕಾಣ್‌ದಿರೊ, ಗಂಡಾಂತರದ ಕಾಯಿಲೆಯೊಂದು ವಕ್ಕರಿಸಿಕೊಂಡು. ಇಡೀ ದೇಶಕ್ಕೆ ರಾಜ್ಯಗಳಿಗೆ ನಿರ್ಭಂದವೇರಿ. ಜೀವವಿರುವ ಜನರಿಗೆಲ್ಲ ರಾವು ಬಡದಂಗಾಯಿತು. ಬದುಕು ಬಾಳು, ನನ್ನವರು ತಮ್ಮವರೆಂಬ, ಕನಸು ಕಟ್ಟಿಕೊಂಡಿದ್ದ ಸಿದ್ದೇಶನಿಗೆ, ಸದ್ಯ ಇರಾಕ್ ಜಾಗ ಸಿಕ್ಕೀರೆ ಸಾಕೆಂಬ ಪಾಡು ಪಾಡೆ ಎದುರಾಯಿತು.

ಇವನೋಗುತ್ತಿದ್ದ ಪ್ಯಾಕ್ಟ್ರೀಯವರು, ಇನ್ನು ಮೇಲೆ ಕೆಲಸಕ್ ಬರ್‌ಬ್ಯಾಡಿ? ಎಂದು ಸಾರಾಸಗಟಾಗಿ ಹೇಳ್ ಬುಟ್ಟ. ಇವತ್ತೆ ಲಾಕ್‌ಡೌನ್ ಮಾಡ್‌ತಿರೋದ್ರಿಂದ. ನಾವು ಪ್ಯಾಕ್ಟ್ರೀ ಬಾಗಿಲು ಮುಚ್ಚತ್ತೀವಿ. ಅಂತ ಅನೌನ್ಸು ಮಾಡ್ ಬುಟ್ಟಿದ್ದ. ಇಂಗೆ ಇದ್ದಕ್ಕಿದ್ದಂಗೆ ಸಾವಿರಾರು ಜನರ. ಬದುಕಿನ ಭದ್ರತೆಯ ಕೊಂಡಿ ದುತ್ತನೆ ಕಳಚಿ ಬಿದ್ದಿತ್ತು. ಸೋತ ಕಾಲೆಳೆದುಕೊಂಡು ದೊಡ್ಡಯ್ಯರ ಶಿವ, ತಂಬೂರಿ ನಾಗ, ಕೆಂಚಯ್ಯನ ಮಗರಂಗನ ಕೂಟೆ, ರೂಮಿಗೆ ವಾಪಸ್ಸು ಬಂದ್ರೆ, ಇವತ್ತೆ ರೂಮು ಖಾಲಿ ಮಾಡ್ರೊ. ಇನ್ನು ಕೆಲಸಾನೆ ಇಲ್ಲ ಅಂದ್‌ಮ್ಯಾಲೆ. ಬಾಡಿಗೆ ಎಲ್ಲಿಂದ ಕೊಡತ್ತೀರಾ? ಎಂದು ಅಲ್ಲಿದ್ದ ರೂಮಿನ ಓನರ್ ಕೂಡ. ಹಿಂದು ಮುಂದು ನೋಡ್‌ದಂಗೆ ಹೇಳ್‌ಬುಟ್ಟ. ಪಾತ್ರೆ ಪಡಗಗಳನ್ನ ಬಟ್ಟೆ ಬರೆಗಳನ್ನ ಗಂಟು ಕೊಂಡು ಹೊರಡುವಾಗ. ಬಸ್ಸು ಲಾರಿ ಏಮಿ ಲೇದಂಟ ಊರ್‌ಕೆಟ್ಲ ಪೋಯೇದಿ? ಎಂಬ ನಾಗನ ಮಾತಿನ ಜೊತೆಯಲ್ಲೆ ಈಡೆ ಉಂಟೆ ಕೂಡೆವರ್ ಪೆಟ್ಟತ್ತಾರೊ? ಎಂದು ಆ ನಾಲ್ಕು ಜನರ ಕಾಲಿನ ಪಾದಗಳು. ಊರಿಗೋಗಲು ರಸ್ತೆಗಿಳಿದು ಬಿಟ್ಟಿದ್ದವು. ರಾತ್ರಿ ಸರುವೊತ್ತಾದರು ಒಂದು ಬಸ್ಸಾಗಲಿ, ಒಂದು ಆಟೊ ಆಗಲಿ, ಏನೊಂದು ದಿಕ್ಕಿಲ್ಲದಂಗಾಯಿತು. ಕಣ್ಣ ಮುಂದೆಯೆ ಲೆಕ್ಕವಿಲ್ಲದಷ್ಟು ಜನ, ಊಟವಿಲ್ಲದೆ ನೀರಿಲ್ಲದೆ, ನಿಂತು ನಿಂತು ನಿತ್ರಾಣವಾಗಿ, ದಿಕ್ಕು ದಿವಾಳಿಯಿಲ್ಲದೆ ದಣಿವು ಗಟ್ಟುತ್ತಿದ್ದರು. ಅಲ್ಲಿ ನಿಂತಿದ್ದವರ ಎದೆಯಲ್ಲಿ ಏನಾದರು ಸರಿ. ಎಂಗಾದರು ಸರಿ, ಊರು ಸೇರೆ ತೀರಬೇಕೆನ್ನುವ ಯುದ್ದಸಾರಿಕೊಂಡಿದ್ದರು. ನಿಂತ ಕಾಲುಗಳು ನಿತ್ರಾಣಕ್ಕೆ ಶರಣಾಗಿದ್ದರು ಸಹ. ಹಿರಿಯೂರಿನ ಕಡೆಯ ಆರುಜನ ಬಳ್ಳಾರಿಯ ಮೂಲದವರುಎಂಟುಜನ. ಗಂಟು ಮೂಟೆ ಹೊತ್ತುಕೊಂಡು, ಊರು ಸೇರಲು ಕಾಲು ನಡಿಗೆಯಲ್ಲೆ ಹೊರಟುಬಿಟ್ಟರು.ಜಗತ್ತಿನೊಳಗೆ ಮನಸ್ಸಿಗಿಂತ ದೊಡ್ಡದ್ಯಾವುದು ಇಲ್ಲ. ಅನ್ನೋದು ಇದೇ ಛಲವಿರಬೇಕು, ಕಾದು ಕಾದು ಸಾಕಾಗಿದ್ದ ಸಿದ್ದೇಶಿಯ ಜೊತೆಗಾರರಿಗೆ ಒಂದು ಹಗಲು ಒಂದು ರಾತ್ರಿ ಉರುಳಿದರು.ಊರಿಗೆ ಹೊರಡಲು ಏನೊಂದು ದಿಕ್ಕಿರಲಿಲ್ಲ.ನೋಡಾತನಕ ನೋಡುತ್ತ ಸೋತು ಸುಣ್ಣವಾಗಿ. ಪುನಃ ಅವರು ಬಾಡಿಗೆಯಿದ್ದ ರೂಮಿಗೆ ವಾಪಸ್ಸು ಬಂದಿದ್ದರು. ಸಾರ್ ನಾವೆಷ್ಟುದಿನ ಇದ್ರೆ, ಅಷ್ಟು ದಿನದ್ದು ಬಾಡಿಗೆ ಕೊಡತೀವಿ ಸಾರ್. ಊರಿನ ಕಡೆ ಹೋಗಾಕೆ ಬಸ್ಸಿಲ್ಲ ಬಂಕವಿಲ್ಲ. ಎಂದು ಬೇಡಿಕೆಯ ಬಂಗಕ್ಕೆ ಆ ಮನೆಯ ಓರ‍್ರು ಒಗ್ಗಿಕೊಂಡಿದ್ದ.

ಹೊರಗಡೆ ಓಡಾಡಿರೆ ಪೋಲೀಸಿನೋರ ಕಾಟ, ಒಳಗೆ ಇರಾನ ಅಂದ್ರೆ, ಒಬ್ಬರುಸಿರು ಒಬ್ಬರಿಗೆ ದಪ್ಪವಾಗುತ್ತ. ಯಾರನ್ನು ಸಲೀಸಾಗಿ ಇರಗೊಡಿಸದ ಬೆಂಗಳೂರಲ್ಲಿ. ಹೊತ್ತು ಕಳೆಯೊವೊತ್ತಿಗೆ ಸಾಕು ಸಾಕಾಗಿ. ಆವತ್ತು ಮಧ್ಯಾನ ಮೂರುಗಂಟೆಯ ಹೊತ್ತಿಗೆ, ತಿರುಗಿ ಈ ನಾಲಕು ಜನ, ಇದ್ದ ಕ್ಕಿದ್ದಂಗೆ ರೋಡಿಗಿಳಿದೆ ಬುಟ್ಟರು.ಆವತ್ತು ಅಂಗೆ ನಾಯಿ ಕಾದಂಗೆ ಕಾದು ಕಾದು. ನಿಂತಿದ್ದವರು, ಶಿರಾ ಕಡೆಗೋಗುವ ಒಂದು ಲಾರಿಯನ್ನ ಜನ ತಡೆದು ನಿಲ್ಲಿಸಿದರು. ಇದ್ದ ಬದ್ದವರೆಲ್ಲ ಆ ಲಾರಿಯೊಳಕ್ಕೆ ಹತ್ತುವ ದಾವಂತದಲ್ಲಿ, ಒಬ್ಬರ ಮ್ಯಾಲೊಬ್ಬರು ಪೈಪೋಟೀಲಿ ಹತ್ತುತ್ತಿದ್ದರು. ಸಿದ್ದೇಶನು ಲಾರಿ ಹತ್ತುವ ತರಾತುರಿಯಲ್ಲಿ,ಅವನ ಬಲಗಾಲಿನ ಮಂಡಿ ಚಿಪ್ಪೊಂದು, ಲಾರಿಯ ಕಂಟಿಗೆ ತಗುಲಿ. ರಕುತ ಜಲ್ಲನೆ ಚಿಮ್ಮಿತ್ತು, ಅಂತದ್ದರೊಳಗೆ ಎಂಗೊ ಪಾಡು ಪಟ್ಟು ಹತ್ತಿ ದಡಾ ಸೇರ್‌ದಂಗಾಯಿತು.

ಇನ್ನು ಈ ಬೆಂಗಳೂರು ಸವಾಸ ಸಾಕು ಕಣಪ್ಪ, ಅಲ್ಲೇ ಊರಲ್ಲೆ ಏನಾದ್ರು ನೆಲ ಕೆರೆದು ತಿನ್ನಬೇಕು. ಸಿದ್ದೇಶನ ಮಾತಿನ ಜೊತೆ. ಉಸಿರು ಬಸ ಬಸನೆ ಗಾಳಿಯಲ್ಲಿ ತೇಲ ತೊಡಗಿತು. ಲೇ ಈಗ್ ಸಟ್ಟಾಗಿರೊ ಹುಡುಗಿ ಕೂಟೆ. ನೆಟ್ಟಗೊಂದು ಮದುವೆಯಾಗಲ, ಆಮೇಲೇನಾದರು ಮಾಡೀವಂತೆ. ಹಿಂದೆಯೆ ನಾಗನು ಮಾತು ಜಾಡಿಸಿದ,

ಅಲ್ಲೆ ಪಕ್ಕದೂರಿನಲ್ಲಿ ರಮ್ಯ ಎಂಬೋ ಚಂದದ ಹುಡುಗಿಯ ಜೊತೆ. ಎಂಗೇಜ್‌ಮೆಂಟು ಮಾಡಿಕೊಂಡಿದ್ದ ಸಿದ್ದೇಶಿಯನ್ನು ಪರುಸೊತ್ತಿಲ್ಲದೆ ಮಾತನಾಡಿಸುವ ಹುಡುಗಿ ಗೆಪುತಿಯಾಗಿ, ಕಣ್ಣು ಮುಚ್ಚಿದ್ದವನ ಮುಂದೆ, ಬಣ್ಣದ ಸೀರೆ ಹುಟ್ಟುಕೊಂಡು, ತೇಲಿ ತೇಲಿ ಬಂದು ಇವನ ಹೊಡೆದ ಮಂಡಿ ಚಿಪ್ಪಿಗೆ. ಬಗ್ಗಿ ಬಗ್ಗಿ ಮುತ್ತನಿಕ್ಕುವ, ಅದು ಮುದವಾಗಿ ನೋಯುವ, ವಾವ್ ಇಂತಾ ನೋವಿಗು ಹುಡುಗಿಯರಲ್ಲಿ ಮುಲಾಮೈತೆನ್ನುವುದಾಗಿದ್ದರೆ. ನಾನು ಇನ್ನೊಂದು ಮಂಡಿಯನ್ನು ಕುಟ್ಟಿಕೊಂಡು ಹತ್ತುತ್ತ್ತಿದ್ದೆನೆಂದು. ಅವಳನ್ನು ತಬ್ಬಿಕೊಂಡು ತೇಲುತ್ತಿರುವ ಗಾಳಿಯಲ್ಲಿ, ವಾಲುತ್ತ ವಾಲುತ್ತ ಕಣ್ಣು ಮುಚ್ಚಿದ್ದವನನ್ನು, ಲೇ ಈಡೆ ದಿಗಲ್ಲಂಟ್ರಾ, ಎಂದು ತಲೆಯ ಮೇಲೆ ಮೋಟಿದ ತಂಬೂರಿ ನಾಗನ ಮಾತಿಗೆ, ಮೆಲ್ಲಗೆ ಲಾರಿಯಿಂದ ಇಳಿದು ನೋಡುತ್ತಾನೆ. ಇನ್ನು ಐದಾರು ಮೈಲಿಯಿದ್ದಂಗೆ, ಲಾರಿಯವನು ಇಳಿಸಿ ಹೋಗಿದ್ದ. ಅಂತ ಊದಿಕೊಂಡಿದ್ದ ಮಂಡಿಯಲ್ಲೆ ಕುಂಟುತ್ತ ಊರು ಸೇರಿದ್ದ ಸಿದ್ದೇಶಿ. ನಿಗಾಮಾಡ್‌ತಾ ಅವನೆ. ಮನೆಯಲ್ಲಿ ಅಪ್ಪನು ಮೌನ, ಅವ್ವನೆಂಬೋಳು ಹೆಚ್ಚಾಗಿ ಮಾತನಾಡುತ್ತಿಲ್ಲ.

ತಮ್ಮನೆಂಬೋನು ಇವನು ಬಂದಿದ್ದು ನೋಡಿಯೆ ಮನೆಕಡೆ ಬರಲೆ ಇಲ್ಲ. ಲೇ ಬೆಂಗಳೂರಿನಿಂದ ಬಂದಿರೋರನೆಲ್ಲ ಊರಿನ ಆಶಕಾರ್ಯಕರ್ತೆಯರೆ ಓಡುಸ್‌ತ್ತಾರಂತೆ, ತಂಬೂರಿ ನಾಗನೆಂಬೋನು ಇನ್ನೊಂದ್ ಸಲ ಫೋನ್ ಮಾಡ್‌ದ. ಕೆಲಸ ಕಾರ್ಯ ಇಲ್ಲದೆ ಅಲ್ಲು ಇರಂಗಿಲ್ಲ, ಹುಟ್ಟಿದೂರು ಅನುತ ಇಲ್ಲು ಆಶ್ರಯಿಸಿಕೊಂಡು ಬರಂಗಿಲ್ಲ? ಯಾರಿಂದ ವಕ್ಕರಸ್‌ತೊ? ಈ ದರ್‌ಬೇಶಿ ಕಾಯಿಲೆ. ನಾವು ಪಾಪುದ್ ನನ್ ಮಕ್ಕಳು, ನಮಗು ನೆಲೆಯಿಲ್ಲ. ಇರೊವರು ಅರ್ಥ ಮಾಡ್‌ಕಳತಿಲ್ಲ. ಸಿದ್ದೇಶಿಯ ಎದೆ ಕುದಿಯಲಾರಂಬಿಸಿತ್ತು. ನೀನೆಲ್ಲಿದ್ದೊ ಅಲ್ಲೆ ಇದ್ದಿದ್ದರೆ ಸಮವಾಗ್ತಿತ್ತಲ್ಲೊ? ಇಲ್ಲಿ ಬಂದು ಇವರಿಗೆ ಉತ್ತರ ಹೇಳಾಕಾಗ್‌ದಿರೊ ಪರುಸ್ಥಿತಿ ತಂದು ಬಿಟ್ಟೆ. ಇದ್ಯಾವುದೊ ದೊಡ್ರೋಗ ಅಂಬೋದು ವಕ್ಕರಿಸಿ. ಹೊಸಬರು ಎಂತೋರ್ ಬಂದ್ರು ಊರಲ್ಲಿರ್‌ದಂಗಾಗಿ. ಕಳ್ಳು ಬಳ್ಳಿಯೆಂಬ ಅರ್ಥವೆಇಲ್ಲದಂಗಾಗೈತೆ. ಕಣೊ ಅವನ ಅಮ್ಮನು ಬಾಯಿಗೆ ಸೆರಗು ಗಿಡಗಿಕೊಂಡು, ಗದ್ಗ ಗದಿತವಾಗಿ ಅತ್ತಳು. ಸಿದ್ದೇಶನಿಗೆ ದಿಕ್ಕು ತೋಚದಂಗಾಗಿ, ಕುಂತು ಮಕನಾಗಿ ಸುಮ್ಮನೆ ಕುಂತುಬುಟ್ಟ. ಅವನ ಅಮ್ಮ ಅಪ್ಪ, ತಮ್ಮ ತಮ್ಮನೆಂಡ್ರು, ಗೊಂತಿಗೇಲಿದ್ದ ಜೋಡಿ ಎತ್ತುಗಳು, ಅವನೆ ಮುಂದೆ ನಿಂತು ಕಟ್ಟಿಸಿದಮನೆ, ಎಲ್ಲರು ಎಲ್ಲವು ಗಹ ಗಹಿಸಿ ನಕ್ಕಂತಾಯಿತು.

ಶ್ರಾವಣ ಮಾಸಕ್ಕೆ ಮಧುವೆ ಸಟ್ಟಾಗಿದ್ದ. ರಮ್ಯ ಎಂಬ ಆ ಹುಡುಗಿ. ಮೂವತ್ತು ಮೂರು ಗಳಿಗೇಲು, ಎಡಬಿಡದಂಗೆ ಫೋನ್ ಮಾಡಿ ಗಲ ಗಲನೆ ಮಾತಾಡುತ್ತಿದ್ಲು. ಅವಳ ಮಾತಿಗೆ ಅವನೆದೆಯ ಸಾಮ್ರಾಜ್ಯ ವಿಸ್ತಾರವಾಗಿ ನೀನೆ ನಾನೆಂಬ ಮೋಹದ ಮೂಟೆಗಳನ್ನ ಪೇರಿಸಿಕೊಂಡಿದ್ದ. ಇಂಗೆ ಮದುವೆಯಾಗ ಬೇಕಿದ್ದ ರಮ್ಯ ಎಂಬ ಮೋಹದ ಹುಡುಗಿಗೆ. ಅಮ್ಮಿ ಈಗ್ ಊರಿಗ್ ಬಂದಿದ್ದೀನ್ ಕಣಮ್ಮಿ. ನಮ್ಮೂರಲ್ಲಿ ಯಾರು ಹೊಸಬರು ಇರಂಗಿಲ್ಲವಂತೆ. ಬರಂಗು ಇಲ್ಲವಂತೆ, ಈ ಕೊರೋನ ಮುಗಿಯಾಗಂಟ ನಿಮ್ಮೂರಿಗಾದ್ರು ಬರ್‌ತ್ತೀನಿ ಕಣಮ್ಮಿ. ನಿಮ್ಮಮ್ಮ ನಿಮ್ಮಪ್ಪುನ್ನ ಒಂದು ಮಾತು ಕೇಳಮ್ಮಯ್ಯ ಎಂದು ಅಂಗಲಾಚಿಕೊಂಡಿದ್ದ, ಆ ಹುಡುಗೀನು ಅಷ್ಟೆ, ಇವನು ಅಂಗಲಾಚಿ ಬೇಡೋದನ್ನ ಕೇಳೊ ತನಕ ಕೇಳಿ ನೆಟ್ಟಗೆ ಪೋನ್ ಮಾಡೋದೆ ಬುಟ್ಟುಬುಟ್ಲು, ಇನ್ನು ನಮ್ಮೂರಿಗೆಲ್ಲಿ ಬಂದು ಸೇರ್‌ಕಂಡ್ ಬಿಡತ್ತಾನೊ? ಎಂದು ಅವಳ ಅಪ್ಪ ಅಮ್ಮ ಎದಾರಿಗಿಟ್ಟುಕೊಂಡರ.

ಬೆಳಗ್ಗೆ ಹಟ್ಟಿಬಯಲ ತುಂಬ, ಕಾವು ಉಗುಳಿಕೊಂಡು ಉರುಳಾಡಬೇಕಿದ್ದ ಸೂರ್ಯ. ನೆಟ್ಟಗಿನ್ನು ಬಲಿಯದೆ ಚಿಂತೆ ಮಾಡುತ್ತಿದ್ದ. ಅಂತೊದ್ದೊಂದು ಗಳಿಗೆಯಲ್ಲಿ ಆ ಕೇರಿ ತುಂಬ ಸೆಲೆಗುಡುತ್ತಿದ್ದ ಸಿದ್ದಮ್ಮನ ಸವಾಲಿನ ಕೀರಾಟ ಇವನ ಕಿವಿಗು ಬಿತ್ತು. ಬೆಂಗಳೂರಿನಿಂದ ನಮ್ಮನೆಗ್ ಬಂದಿದ್ದ ಹಡುಗನ್ನ ನಿಸೂರಾಗಿ ಓಡ್ಸೀಳು ತಾನೆ. ಈಗ ಇನ್ನಿರೊವರನ್ನು ಅಂಗೆ ಓಡಸ್‌ಲಿ ಬೋಸೋಡಿ. ಒಬ್ಬರಿಗೆ ಸುಣ್ಣ, ಇನ್ನೊಬ್ಬರಿಗೆ ಬೆಣ್ಣೆ, ಅಂಬೊ ನ್ಯಾಯ ಮಾಡ್‌ಲಿ ನೋಡಾನ. ಅವಳಗೈತೆ ನನಗೈತೆ. ಊರಿನ ಆಶಾ ಕಾರ್ಯಕರ್ತೆಯನ್ನು ಸಂದಿ ಮನೆ ಸಿದ್ದಮ್ಮ. ಬೀದಿ ಬೀದಿಗಳಲ್ಲಿ ಬೈದುಕೊಂಡು ಓಡಾಡ್ ಬಿಟ್ಲು.

ಅಪ್ಪಿ ಸಿದ್ದೇಶಿ ನೀವು ಬೆಂಗಳೂರಿನಿಂದ. ಇಂಗೆಲ್ಲ ಊರಿಗ್ ಬರಂಗಿಲ್ಲ ಕಣಪ್ಪಿ. ಇರಂಗು ಇಲ್ಲ ಕಣ್ರೋ. ನೀವು ಎಂಗ್ ಬಂದಿದ್ದೀರೊ ಅಂಗೆ ವಾಪಸ್ಸು ಹೋಗ್ರಪ್ಪಿ. ಇಲ್ಲಾ ಅಂದ್ರೆ ಊರಲ್ಲಿ ಜಾಸ್ತಿ ಗಲಾಟೆ ಮಾಡೊವರವರೆ. ಮತ್ತೆ ನೀವುಳುಕೊಂಡ್ರೆ, ನಮ್ಮುನ್ನು ಬೈಯ್ಯತಾಅವರೆ.ಎಂದ ಆಶ ಕಾರ್ಯಕರ್ತೆ ನಾಗಮ್ಮನ ಮಾತು. ಕೇರಿಯೊಳಗಿನ ಕಿವಿಗಳಿಗೆಲ್ಲ ನೆಟ್ಟಗೆ ಅಪ್ಪಳಿಸಿದಂತಾಯಿತು. ಸಿದ್ದೇಶನಿಗೆ ಆವತ್ತು ಇದ್ದರು ಇಲ್ಲದವನಂತೆ ಒದ್ದಾಡುತ್ತ ಕಾಲವೆನ್ನುವುದನ್ನ.ಕಣ್ಣು ಮುಚ್ಚಿಕೊಂಡು ಸವೆಸಿಬುಟ್ಟ, ತಿರುಗಿ ಬೆಳಗಿನ ಜಾವದಹೊತ್ತಿಗೆ. ವಿಧಿಯಿಲ್ಲದೆ ಊರಿನಾಚೆ ನಿಂತಿದ್ದ. ಬೆಂಗಳೂರಿನ ಕಡೆ ಹೊರಟಿದ್ದ. ಒಂದು ಲಗೇಜು ಟೆಂಪೊ ಹತ್ತಿಕುಂತುವನ ಮುಂದೆ. ಅವನ ಜೊತೇಲಿ ಬಂದಿದ್ದ ನಾಗ, ಶಿವ, ರಂಗ, ಎಲ್ಲರು ಅವನ ಸಮ ಸಮವೆ ಹತ್ತಿ ಕುಂತುಕೊಂಡರು. ತೋ ಎಂತಾ ದೊಡ್‌ರೋಗಬಂತಲ್ಲೋ? ಅಲ್ಲಿರಾನ ಅಂದ್ರೆ ಕೆಲಸಿಲ್ಲ? ಇಲ್ಲಿರಾನ ಅಂದ್ರೆ ಸ್ವತಂತ್ರವಿಲ್ಲ? ಈ ಪಾಡು ಎಂತ ನಾಯಿಗು ಬ್ಯಾಡ ಕಣ್ರಲ? ಸಿದ್ದೇಶಿಯ ದೊಡ್ಡುಸಿರು ಬಸ ಬಸನೆಂದಿದ್ದು, ಟೆಂಪೋದಲ್ಲಿದ್ದವರಿಗೆಲ್ಲ ಕೇಳಿಸಿತು. ನನ್ನೂರು ನನ್ನವರು ಅನ್ನೊವರನ್ನೆಲ್ಲಾ, ದಬ್ಬಿ ನೂಕುವ ಕಾಲ ನಮ್ಮ ಕಣ್ಣು ಮುಂದೇನೆ ಬಂದು ಬಿಡುತು. ಮುಂದೆ ಯಾರಿಗೇನೈತೊ ಏನೊ? ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೆ ಎಂದು ಅವರ ನಡುವೆ ಕುಂತು ಲೊಚಗುಟ್ಟುತ್ತಿದ್ದ. ಹೂವಿನ ಗಂಗಜ್ಜನ ಮಾತು. ಸತ್ಯ ಉಂಬುವ ಜನರಿಗೆ ನೂರಕ್ಕೆ ನೂರರಷ್ಟು ಸರಸವಾಡಿದಂತಿತ್ತು. ಆವಜ್ಜನ ಮಾತು ಯಾರಿಗೆ ಅದೆಷ್ಟು ಅರ್ಥವಾಯಿತೊ ಬಿಡತೊ? ಸಿದ್ದೇಶನ ಕಣ್ಣಲ್ಲಿ ಮಾತ್ರ ನೀರು ಪಳ್ಳೆಂದು ಉದುರಿದವು. ಲಗೇಜು ಟೆಂಪೊ ತನ್ನ ಮುಂದಿದ್ದ ಮಸುಕನ್ನ ಹಿಂಚಿಂಚೆ ಸೀಳುತ್ತ ಮುಂದೆ ಸಾಗಿತು.**********

 

ವಿಜಯಾ ಮೋಹನ

ವಿಜಯಾ ಮೋಹನ್‍ ತುಮಕೂರು ಜಿಲ್ಲೆಯ ಮಧುಗರಿ ತಾಲೂಕಿನ  ಸುದ್ದೇಕುಂಟೆ (ಜನನ: 01-07-1968) ಗ್ರಾಮದವರು. ತಂದೆ ರಾಮಯ್ಯ, ತಾಯಿ ಸುಮಾನಮ್ಮ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಮಧುಗಿರಿಯಲ್ಲಿ ಪ್ರೌಢಶಿಕ್ಷಣ, ನಂತರ ಶ್ರೀ ಸಿದ್ಧಗಂಗಾ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಶಿಕ್ಷಕ ತರಬೇತಿ ಪಡೆದು, 1992ರಲ್ಲಿ ಗುಬ್ಬಿ ತಾಲೂಕು ಕಡಬಾ ಹೋಬಳಿ. ಮಾದಾಪಟ್ಟಣದ ಶಾಲೆಗೆ ಶಿಕ್ಷಕಿಯಾದರು. ಸದ್ಯಕ್ಕೆ ಮುಖ್ಯ ಶಿಕ್ಷಕಿ. 

ಹುಟ್ಟಿನಿಂದ ದೈಹಿಕ ವಿಕಲ ಚೇತನರಾಗಿದ್ದ ಅವರಿಗೆ ಮೊದಲಿನಿಂದಲೂ ರಂಗಪ್ಪಜ್ಜ ತಾತನವರು ಹೇಳುತ್ತಿದ್ದ ವಿಸ್ಮಯಕಾರಿ ಕಥೆಗಳು ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾದವು. 1998ರಲ್ಲಿ ಬರೆದ ‘ನೇಣು’ ಕಥೆಗೆ (998) ದಿ’’ ಮೀನಾಕುಮಾರಿ ದತ್ತಿನಿದಿ ಕಥಾ ಸ್ಪರ್ಧೆಯಲ್ಲಿ.ಪ್ರಥಮ ಬಹುಮಾನ ಬಂದಿದೆ. 

2009 ರಲ್ಲಿ ‘ತಬ್ಬಲಿ ಸಾರು’ ಕಥಾಸಂಕಲನ ಪ್ರಕಟವಾಗಿದೆ. ತರಂಗದಲ್ಲಿ (2011), ದಿ. ಎಂ ವ್ಯಾಸ ಅವರ ನೆನಪಿನಲ್ಲಿ ನಡೆದ. ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ `ನಂಜು ' ಕಥೆಗೆ ತೃತೀಯ ಬಹುಮಾನ ಹಾಗೂ ವರದಕ್ಷಿಣೆ ವಿರೋಧಿ ವೇದಿಕೆ ಕಥಾಸ್ಪರ್ಧೆಯಲ್ಲಿ. `ಕಣ್ಣಿ' ಕಥೆಗೆ ಪ್ರಥಮ ಬಹುಮಾನ ಮತ್ತು, ಜಿಲ್ಲಾ ಲೇಖಕಿಯರ ಸಂಘ ಏರ್ಪಡಿಸಿದ್ದ ಕಥಾ ಸ್ಪರ್ದೆಯಲ್ಲಿ. ‘ಹುಟ್ಟಿದಬ್ಬ’  ಕಥೆಗೆ ಪ್ರಥಮ ಬಹುಮಾನ ಲಭಿಸಿದೆ.

 ಕಣ್ಣಿ’ ಕಥಾಸಂಕಲನಕ್ಕೆ (2011) ಕಾದಂಬರಿಕಾರ್ತಿ ದಿ.. ತ್ರಿವೇಣಿ ದತ್ತಿ ನಿಧಿ ಪ್ರಶಸ್ತಿ, ಯಾದಗಿರಿ ತಾಲೂಕು ಗುರುಮಿಠಕಲ್ ನಲ್ಲಿ ‘ಅಕ್ಷರಲೋಕದ ನಕ್ಷತ್ರ ’  ಪ್ರಶಸ್ತಿ,  2012,ರಲ್ಲಿ `ನೀರು' ಸಣ್ಣ ಕಥೆಗೆ. ಸಂಕ್ರಮಣ ಸಾಹಿತ್ಯ ಪುರಸ್ಕಾರ,  2013 ರಲ್ಲಿ, ತರಂಗ ನಡೆಸಿದ ರಾಜ್ಯ ಮಟ್ಟದ ಮಿನಿ ಕಾದಂಬರಿ ಸ್ಪರ್ಧೆಯೊಳಗೆ ‘ನೀರು’ ಕಾದಂಬರಿ ಪ್ರಥಮ ಬಹುಮಾನ

‘ ಜಾತಿ’ ಕಥಾಸಂಕಲನಕ್ಕೆ, 2013 ನೇ ಸಾಲಿನ ಡಾ, ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ , 2014ರಲ್ಲಿ ದಿ. ಗೌರಮ್ಮ, ಕೆ ಮಂಜಪ್ಪ ದತ್ತಿನಿಧಿ ಪ್ರಶಸ್ತಿ ಲಭಿಸಿದೆ, 2014ರಲ್ಲೆ ‘ಮಳ್ಳು’  ಸಣ್ಣ ಕಥೆ ಆಕಾಶವಾಣಿಯಲ್ಲಿ ಬಿತ್ತರಗೊಂಡಿದೆ. 2011 ರ ನವೆಂಬರ್ ನಲ್ಲಿ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2010ರಲ್ಲಿ ವೀರಾಂಜನೇಯ ಸೇವಾ ಸಮಿತಿ ಮಧುಗಿರಿಯಲ್ಲಿ. ಗೆಳೆಯರ ಬಳಗದ ಆಶ್ರಯದಿಂದ `ಸಾಹಿತ್ಯ ಚಂದನ' ಬಿರುದು, 2016ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2016 ರಲ್ಲಿ, ವಾಸವಿ ಮಹಿಳಾ ಸಂಘದಿಂದ, ‘ವಾಸವಿ ಸಾಹಿತ್ಯ ಸಿರಿ’ ಬಿರುದು , 2017ರಲ್ಲಿ ಜಿಲ್ಲಾ ಕನಕ ಪ್ರಶಸ್ತಿ ಲಭಿಸಿದೆ.

2017ರಲ್ಲಿ ‘ಓಟು’ ಕಥಾ ಸಂಕಲನ ಬಿಡುಗಡೆಯಾಗಿದೆ. ಪ್ರಗತಿ ಟಿ.ವಿ.ಯು ನಮ್ಮೂರ ಸಾಧಕರು ಮಾಲಿಕೆಯಡಿ  ಇವರನ್ನು ಸಂದರ್ಶಿಸಿದೆ. ಜಿಲ್ಲಾ ಲೇಖಕಿಯ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಇವರ ಐದು ಕೃತಿಗಳ ಬಗ್ಗೆ ಒಂದು ಅನುಸಂಧಾನ ಕಾರ್ಯಕ್ರಮ ಆಯೋಜಿಸಿದ್ದರು.  

More About Author